ADVERTISEMENT

ಅಪರೂಪದ ಹದ್ದು ‘ರೆಡ್‌ ಕೈಟ್’

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 10:41 IST
Last Updated 30 ಜೂನ್ 2019, 10:41 IST
ರೆಡ್ ಕೈಟ್
ರೆಡ್ ಕೈಟ್   

ಚುರುಕಾಗಿ ಬೇಟೆಯಾಡುವ ಹಕ್ಕಿಗಳಲ್ಲಿ ಹದ್ದುಗಳೇ ಮೊದಲ ಸ್ಥಾನದಲ್ಲಿವೆ. ಇವುಗಳ ಸಂತತಿ ವಿಶ್ವದಾದ್ಯಂತ ಹರಡಿದೆ. ಗಾತ್ರ ಮತ್ತು ದೇಹಾಕೃತಿಗೆ ಅನುಗುಣವಾಗಿ ಇವುಗಳಲ್ಲಿ 237 ತಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 33 ಕೈಟ್‌ ಹಕ್ಕಿಗಳಿವೆ.

ಈ ಕೈಟ್ ಹಕ್ಕಿಗಳ ಪೈಕಿ ರೆಡ್ ಕೈಟ್ (RED KITE) ಕೂಡ ಒಂದು. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಹಕ್ಕಿಯ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಮಿಲ್ವಸ್‌ ಮಿಲ್ವಸ್ (Milvus milvus). ಇದು ಕೂಡ ಹದ್ದುಗಳ ಅಸಿಪಿಟ್ರಿಡೆ (Accipitridae) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?
ಕಂದು, ಕಪ್ಪು ಮತ್ತು ಬಿಳಿ ಬಣ್ಣದ ಅಕರ್ಷಕ ತುಪ್ಪಳ ಮತ್ತು ಗರಿಗಳಿಂದ ದೇಹ ಆವರಿಸಿರುತ್ತದೆ. ಉದರ, ಬೆನ್ನು, ರೆಕ್ಕೆಗಳ ಮೇಲ್ಭಾಗ ಮತ್ತು ಒಳಭಾಗದ ಅಂಚುಗಳು ಮತ್ತು ಬಾಲ ಕಂದು ಬಣ್ಣದ ಗರಿಗಳಿಂದ ಕೂಡಿದ್ದರೆ, ಕತ್ತು ಮತ್ತು ಕುತ್ತಿಗೆ ಬಳಿ ಕಪ್ಪು ಮಿಶ್ರಿತ ಗರಿಗಳಿಂದ ಕೂಡಿರುತ್ತವೆ. ಹಾರುವಾಗ ಇದರ ಬಾಲ ‘V’ ಆಕಾರದಲ್ಲಿರುವುದು ವಿಶೇಷ. ತಲೆ ಪುಟ್ಟದಾಗಿದ್ದು, ದುಂಡಗಿರುತ್ತದೆ. ಕೊಕ್ಕು ಚಿಕ್ಕದಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣದಲ್ಲಿರುತ್ತದೆ. ಮಾಂಸ ಹೆಕ್ಕಿ ತಿನ್ನುವುದಕ್ಕೆ ನೆರವಾಗುವಂತೆ ದೃಢವಾಗಿರುತ್ತದೆ. ಕಾಲುಗಳು ಹಳದಿ ಬಣ್ಣದಲ್ಲಿದ್ದು, ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ. ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ.

ADVERTISEMENT

ಎಲ್ಲಿದೆ?
ಯುರೋಪ್ ಖಂಡದ ಇಂಗ್ಲೆಂಡ್, ಐರ್ಲೆಂಡ್, ಲಂಡನ್, ಇಟಲಿ, ಫ್ರಾನ್ಸ್‌, ಉತ್ತರ ಆಫ್ರಿಕಾದ ಭಾಗದ ಕೆಲವು ಭಾಗಗಳು ಈ ಹಕ್ಕಿಯ ಮೂಲ. ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲೂ ಈ ಹಕ್ಕಿಯನ್ನು ಕಾಣಬಹುದು. ಅತಿ ಎತ್ತರದ ಮತ್ತು ವಿಶಾಲವಾದ ರೆಂಬೆಗಳಲ್ಲಿ ಇದು ಗೂಡು ಕಟ್ಟಿಕೊಳ್ಳುತ್ತದೆ. ಕೃಷಿಭೂಮಿ, ಜೌಗು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ
ಸದಾ ಒಂಟಿಯಾಗಿರಲು ಇಷ್ಟಪಡುತ್ತದೆ. ಆಹಾರ ಅರಸುತ್ತಾ ದಿನವಿಡೀ ಸುತ್ತುತ್ತದೆ. ದಿನದಲ್ಲಿ ಗರಿಷ್ಠ 15 ಕಿ.ಮೀ ಸುತ್ತುತ್ತದೆ. ನಗರ ಪ್ರದೇಶಗಳಿಗೂ ವಲಸೆ ಬರುತ್ತದೆ. ಚಳಿಗಾಲದಲ್ಲಿ ಮೆಡಿಟರೇನಿಯನ್ ಪ್ರದೇಶಕ್ಕೆ ವಲಸೆ ಹೋಗುತ್ತದೆ. ವಲಸೆ ಹೋಗುವಾಗ ಮಾತ್ರ ಪುಟ್ಟ ಗುಂಪುಗಳಾಗಿರುತ್ತವೆ. ಕೆಲವು ಮಾತ್ರ ಒಂದೇ ಪ್ರದೇಶದಲ್ಲಿ ಜೀವನ ಕಳೆಯುತ್ತವೆ. ಗೂಡಿನ ಸುತ್ತಮುತ್ತಲಿನ ಪ್ರದೇಶದಲ್ಲೇ ಗಡಿ ಗುರುತಿಸಿಕೊಂಡಿರುತ್ತದೆ. ಜೋರಾಗಿ ಶಬ್ದ ಮಾಡುವ ಮೂಲಕ ಸಂವಹನ ನಡೆಸುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಇನ್ನೂ ಜೋರಾಗಿ ಸದ್ದು ಮಾಡುತ್ತದೆ.

ಆಹಾರ
ವಿವಿಧ ಬಗೆಯ ದಂಶಕಗಳೇ ಇದರ ನೆಚ್ಚಿನ ಆಹಾರ. ನಗರ ಪ್ರದೇಶಗಳಲ್ಲಿನ ಕಸವನ್ನೂ ಹೆಕ್ಕಿ ತಿನ್ನುತ್ತದೆ. ಇದು ಸರ್ವಭಕ್ಷಕ ಹಕ್ಕಿ. ಕಣ್ಣಿಗೆ ಕಂಡ ಆಹಾರವನ್ನೆಲ್ಲಾ ಭಕ್ಷಿಸುತ್ತದೆ. ಸರೀಸೃಪಗಳು, ಪುಟ್ಟ ಸಸ್ತನಗಳು ಮತ್ತು ಕೆಲವು ಬಗೆಯ ಹಕ್ಕಿಗಳನ್ನೂ ಇದು ಬೇಟೆಯಾಡುತ್ತದೆ.

ಸಂತಾನೋತ್ಪತ್ತಿ
ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಸಂದರ್ಭದಲ್ಲಿ ಗಡಿ ಗುರುತಿಸಿಕೊಳ್ಳುವುದಕ್ಕಾಗಿ ರೆಡ್‌ಕೈಟ್‌ಗಳು ವಿವಿಧ ಬಗೆಯ ಕಸರತ್ತಗಳನ್ನು ಮಾಡುತ್ತವೆ. ಇಷ್ಟವಾದ ಹಕ್ಕಿಯೊಂದಿಗೆ ಜೊತೆಯಾದ ನಂತರ 1ರಿಂದ 3 ಮೊಟ್ಟೆಗಳನ್ನು ಇಡುತ್ತದೆ. ಎರಡು ತಿಂಗಳ ವರೆಗೆ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳಿಗೆ ಏಳು ವಾರಗಳ ನಂತರ ಗರಿಗಳು ಮೂಡುತ್ತವೆ. ಸಂಪೂರ್ಣವಾಗಿ ರೆಕ್ಕೆಗಳು ರಚನೆಯಾದ ನಂತರ 9ನೇ ತಿಂಗಳ ಹೊತ್ತಿಗೆ ಹಾರಲು ಆರಂಭಿಸುತ್ತವೆ.

ಸ್ವಾರಸ್ಯಕರ ಸಂಗತಿಗಳು
* ರೆಡ್ ಕೈಟ್‌ಗಳು ನರಿಗಳ ಮೇಲೂ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ.
* ಕಾಡಿನ ಪ್ರದೇಶಗಳಿಗಿಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲೇ ಇದು ಹೆಚ್ಚಾಗಿ ವಾಸಿಸುತ್ತದೆ.
* ಬ್ರಿಟನ್‌ನಲ್ಲಿ ಸುಮಾರು 1 ಲಕ್ಷ ರೆಡ್‌ಕೈಟ್ ಹದ್ದುಗಳಿವೆ ಎಂದು ಅಂದಾಜಿಸಲಾಗಿದೆ.
* ಇತರೆ ಹದ್ದುಗಳಿಗೆ ಹೋಲಿಸಿದರೆ, ಇದರ ದೇಹ ಹಗುರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.