ADVERTISEMENT

ಶ್ವಾನ ಬಣ್ಣವೂ.... ವಾಸ್ತು ನಂಬಿಕೆಯೂ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 12:52 IST
Last Updated 16 ಜುಲೈ 2018, 12:52 IST
   

ಪ್ರತಿದಿನ ಬೆಳಗಿನ ವಾಯುವಿಹಾರವನ್ನು ಹೆಚ್ಚಾಗಿ ಒಬ್ಬನೆ ಮುಗಿಸಿದ ನಂತರ ವಿರಾಮವಾಗಿ ಅಂದರೆ ಮಾತಿನಲ್ಲೇ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದವರೆಗೂ ತಲುಪಿ ನಂತರ ‘ಸಂಘ್‌ ವಿಸರ್ಜನ್’ ಅನ್ನೋಥರಾ ಎಲ್ಲರೂ ಅವರವರ ಮನೆಯ ಕಡೆ ಹೆಜ್ಜೆ ಹಾಕುವುದು ವಾಡಿಕೆ.

ಈ ಸಾರಿಯಂತೂ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿಯೇ ಯಾವಾಗೆಂದರೆ ಆವಾಗ ಎಂಟ್ರಿ ಕೊಡುತ್ತಿರುವ ಈ ದಿನಗಳಲ್ಲಿ ಆಗಾಗ ವಾಕಿಂಗ್‌ ಮೊಟಕುಗೊಳಿಸಿ ಅಡ್ಡದಾರಿ (ಬೇರೆ ಅರ್ಥದಲ್ಲಿ ಅಲ್ಲ) ಹಿಡಿಯುವುದು ಅಂದರೆ ಸಮೀಪದ ದಾರಿ ಹಿಡಿಯುವುದು ಅನಿವಾರ್ಯವೂ ಆಗುವುದುಂಟು. ಮೊನ್ನೆ ಹೀಗೆಯೇ ಆಯಿತು. ಬೆಳಿಗ್ಗೆ ಹೊರಡುವಾಗ ಇಲ್ಲದ ಮಳೆ ಒಂದರ್ಧ ಗಂಟೆಯ ಬಳಿಕ ಜಿಟಿ–ಜಿಟಿ ಹನಿಯತೊಡಗಿದಾಗ, ಹತ್ತಿರದಲ್ಲೇ ಇದ್ದ, ಇನ್ನೂ ಬಾಗಿಲೂ ತೆರೆಯದ ಒಂದು ಅಂಗಡಿಯ ಜಗುಲಿಯನ್ನು ನಾನು ಆಶ್ರಯಿಸಬೇಕಾಯಿತು. ಅದೇ ಹೊತ್ತಿಗೆ, ಅದೇ ಜಾಗಕ್ಕೆ ಮಾಲಿಕರ ಜೊತೆ ನಾಯಿಯ ಎಂಟ್ರಿಯಾಗಿತ್ತು. ಅವರು ನಾಯಿಯನ್ನು ಎಳೆದುಕೊಂಡು ಬಂದರೋ ಅಥವಾ ನಾಯಿಯೇ ಅವರನ್ನು ಎಳೆದುಕೊಂಡು ಬಂದಿತ್ತೋ ಎಂಬುದನ್ನು ನಾನು ನೋಡಲಿಲ್ಲ. ಏಕೆಂದರೆ ನಾನು ಆ ಹೊತ್ತಿಗೆ ಮುಖದ ಮೇಲಿದ್ದ ತುಂತುರು ಹನಿಗಳನ್ನು ಒರೆಸುವು ದರಲ್ಲಿ ನಿರತನಾಗಿದ್ದೆ.

ಒಂದೆರಡು ನಿಮಿಷಗಳು ಕಳೆದಿರಬಹುದು. ನಾಯಿ ಆಚೀಚೆ ನೋಡುತ್ತಾ ಕುಂಯಿ ಎಂದು ಕೂಗತೊಡಗಿತು. ಮಳೆ ಹನಿಯುತ್ತಲೇ ಇತ್ತು. ಆಗ ನಾಯಿ ಮಾಲೀಕರು ‘ಏ ಜಾನಿ ಡೊಂಟ್ ಮೇಕ್ ನಾಯ್ಸ್. ಇಟ್ ಈಸ್ ರೈನಿಂಗ್‌’ ಎಂದರು. (ನಾಯಿಗೆ ಕನ್ನಡ ಅರ್ಥ ಆಗುವುದಿಲ್ಲವೇ..! ಮಾಲೀಕರನ್ನೇ ಕೇಳಬೇಕು) ನನಗೆ ಅವರನ್ನು ಮಾತಾಡಿಸಬೇಕೆಂಬ ಕುತೂಹಲ ಉಂಟಾಗಿ (ನಾಯಿಯನ್ನೇ ಕೇಳಿದ್ದರೆ ಆಗುತ್ತಿತ್ತೇನೋ...!) ‘ಏನಂತೆ ಅದಕ್ಕೆ?’ ಎಂದೆ. ಅದಕ್ಕವರು ‘ಅದರ ಬೆಳಗಿನ ಕೆಲಸ ಇನ್ನೂ ಮುಗಿದಿಲ್ಲ. ನಾನು ಮಾಮೂಲಿ ಡಾಂಬರು ರಸ್ತೆಯಲ್ಲಿ ಹೋಗುವ ಬದಲು ಮಳೆಯ ಕಾರಣ ಈ ಸಣ್ಣ ರಸ್ತೆಗೆ ಬಂದು ಬಿಟ್ಟೆ. ಹಾಗಾಗಿ ಇದಕ್ಕೆ ಇರುಸು–ಮುರುಸಾಗಿದೆ’ ಎಂದರು. ಅಬ್ಬಾ.! ಇದೆಂಥ ನಾಯಿ ಸೈಕಾಲಜಿ? ಎಂದು ಮನಸ್ಸಲ್ಲಿಯೇ ಅದುಕೊಂಡು ‘ಅದರಲ್ಲೇನು ಈ ರಸ್ತೆಯ ಆಚೆ ಬಿಡಿ’ ಎಂದು ಸಲಹೆ ನೀಡಿದೆ. ಅದಕ್ಕವರು ‘‘ಊಹುಂ ಇದಕ್ಕೆ ಸ್ವಚ್ಛ ಜಾಗವೇ ಬೇಕು. ಚೆನ್ನಾಗಿರುವ ಡಾಂಬರು ರಸ್ತೆಯಲ್ಲಿ ಬಿಟ್ಟರೇನೇ ಇದಕ್ಕೆ ನಿರಾಳ.

ADVERTISEMENT

ಈ ಪಾರ್ಥೇನಿಯಂ ಗಿಡಗಳ ಮಧ್ಯೆ ನುಗ್ಗಿದರೆ ಒಂದು ವೇಳೆ ಅಲರ್ಜಿಯಾಗಿ ಹೇರ್‌ ಕಲ್ಲರ್ ಡ್ಯಾಮೆಜ್‌ ಆಗಿ ಬಿಟ್ಟರೆ! ಎಂಬ ಭಯ ನಮಗೆ’ ಎಂದರು. ‘ನಿಮ್ಮ ಮಾತು ನನಗೆ ಅರ್ಥವಾಗಲಿಲ್ಲ’ ಎಂದೆ ‘ನೋಡಿ, ನಾವು ಕಲರ್ ವಾಸ್ತುವನ್ನು ನಂಬುವವರು ನಮ್ಮ ಮನೆಯ ಬಣ್ಣ, ಲವ್‌ಬರ್ಡ್‌ ಹಾಗೂ ನಮ್ಮ ಜಾನಿಯ ಬಣ್ಣ ಎಲ್ಲವೂ ಒಂದೇ ಥರ. ಇದು ಚಿಕ್ಕ ಮರಿಯಾಗಿದ್ದಾಗಲೇ ಹುಡುಕಿ ತಂದಿದ್ದೇವೆ. ಯಾರು ಏನು ಬೇಕಾದರೂ ಅನ್ನಲಿ. ನಮ್ಮ ನಂಬಿಕೆ ನಮಗೆ’ ಎಂದು ವಿವರಿಸಿದರು. ಅಷ್ಟರಲ್ಲಿ ಮಳೆ ಹನಿಯುವುದು ಕಡಿಮೆಯಾಯಿತು. ನಾಯಿ ಎಳೆದೆಡೆ ಅವರು ಅದನ್ನು ಹಿಂಬಾಲಿಸಿದರು.

ಯಾವುದೇ ವಾಕಿಗರನ್ನು ನೋಡಿ, ನಾಯಿಯೇ ಅವರನ್ನು ಎಳೆದೊಯ್ಯುತ್ತಿರುತ್ತದೆ. ಆದ್ದರಿಂದ ‘ನಾಯಿ ವಾಕಿಂಗ್‌ ಎನ್ನಬಹುದೇ..! ‘ನಾಯಿ ಸಾಹೇಬ ಎಳೆದೊಯ್ದೆಡೆ ಸಾಗು ನೀ ಮಾಲೀಕನೆ’ ಎನ್ನಬಹುದೇ.! ಏನೆ ಇದ್ದರೂ ಕುತ್ತಿಗೆ ಸೂತ್ರದ ಬಲದಿಂದ ಮಾಲೀಕರನ್ನೇ ಹೆಚ್ಚಿನ ಸಂದರ್ಭದಲ್ಲಿ ತನಗಿಷ್ಟವಾದ ಡೈರೆಕ್ಷನ್‌ ಕಡೆಗೆ ಎಳೆದೊಯ್ಯುವುದಂತೂ ನಾವು–ನೀವು ನಿತ್ಯ ನೋಡುವ ದೃಶ್ಯ.

ಇದಕ್ಕಿಂತಲೂ ನನ್ನನ್ನು ತೀವ್ರತರವಾಗಿ ಕಾಡಿದ್ದು ಅವರು ಹೇಳಿದ ನಾಯಿ ಬಣ್ಣ ಮತ್ತು ವಾಸ್ತು ನಂಬಿಕೆ. ‘ವಾಸ್ತು’ ಎಂಬುದು ಇತ್ತೀಚಿನ ಕೆಲವು ದಶಕಗಳಿಂದ (ನನ್ನ ಅಂದಾಜಿನ ಪ್ರಕಾರ) ಹೆಚ್ಚೂ ಕಡಿಮೆ ಎಲ್ಲರನ್ನೂ ಆವರಿಸುವ ನಂಬಿಕೆ. ಅಂದರೆ ಹಿಂದೆ ಇದರ ಕಲ್ಪನೆ ಇರಲಿಲ್ಲವೇ..! ಇರಲಿಲ್ಲವೆಂದೇನಿಲ್ಲಾ. ನಮ್ಮ ಹೀರಿಕರು, ಪೂರ್ವಿಕರು ಪ್ರಧಾನವಾಗಿ ಪೂರ್ವದಿಕ್ಕನ್ನು ಅನುಸರಿಸಿ ಮನೆ ಇತ್ಯಾದಿ ನಿರ್ಮಾಣ ಮಾಡುತ್ತಿದ್ದರು ಎಂದು ಕೇಳಿದ್ದೇನೆ. ಇದು ನಿಜವೂ ಹೌದು. ಅದಕ್ಕೆ ವೈಜ್ಞಾನಿಕ ಅಂಶವೇ ಆಧಾರವಾಗಿತ್ತು. ಬಣ್ಣ ಇತ್ಯಾದಿಗಳ ಗೊಡವೆ ಇಲ್ಲವೇ ಇಲ್ಲ ಎನ್ನಬಹುದಿತ್ತು. ಮನೆಗೆ ಬಣ್ಣ ಹಚ್ಚೋಣ. ಮನಸ್ಸಿಗೆ ಯಾವ ಬಣ್ಣ.?.

ಈ ಹಿಂದೆ ನಾನು ನೌಕರಿಯಲ್ಲಿದ್ದ ಊರಿನಲ್ಲಿ ಮನೆಯೊಂದನ್ನು ಕಟ್ಟಿಸಿದ್ದೆ. ಯಾವ ವಾಸ್ತು ತಜ್ಞರನ್ನು ಕೇಳಿರಲಿಲ್ಲ. ಮನೆ ಒ‌ಕ್ಕಿಲು ಆದನಂತರ ವಾಸ್ತು ಪರಿಚಯ ಇರುವ ಒಬ್ಬರು ಬಂದು ‘ನಿಮ್ಮ ಮನೆಯಲ್ಲಿ ವಾಸ್ತು ದೋಷ ಕಾಣುತ್ತದೆ. ನೀರಿನ ಆಸರೆ ದಿಕ್ಕು ಸರಿಯಿಲ್ಲ’ ಎಂದರು. ನಾನು ‘ಪರವಾಗಿಲ್ಲ ಬಿಡಿ ಇದು ನನ್ನದೇ ವಾಸ್ತು’ ಎಂದೆ.

ನಂತರ ನಮ್ಮ ಎದುರಿಗೆ ಸ್ವಲ್ಪ ಕೆಳಗೆ ಇನ್ನೊಬ್ಬರು ಮನೆ ಕಟ್ಟಿಸಿ ಅವರಿಗೆ ಬೇಕಾದ ಹಾಗೇ ನೀರಿನ ಟ್ಯಾಂಕ್ ಮಾಡಿಸಿದರು. ಮತ್ತೆ ಕೆಲವು ಸಮಯ ಕಳೆದ ಬಳಿಕ ಮೊದಲು ಬಂದಿದ್ದವರೇ ಮತ್ತೆ ನಮ್ಮ ನನೆಗೆ ಬಂದು ಆಚೆ ಈಚೆ ನೋಡಿ ‘ಈಗ ನಿಮ್ಮ ಮನೆಯ ವಾಸ್ತು ದೋಷ ಬಹಳಷ್ಟು ಕಡಿಮೆಯಾಗಿದೆ’ ಎಂದರು. ನಾನು ಅವರ ಮುಖವನ್ನೇ ನೋಡಿದೆ. ಅದಕ್ಕವರು ‘ನೋಡಿ ನಿಮ್ಮ ಕೆಳಗಿನ ಮನೆಯವರು ನಿಮ್ಮ ಮನೆ ಕಾಂಪೌಂಡ್‌ ಬಳಿಯಲ್ಲಿಯೇ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅದರ ಪರಿಣಾಮ ನಿಮಗೂ ದೊರೆಯುತ್ತದೆ’ ಎಂದಾಗ ನಾನೂ ಒಳಗೊಳಗೆ ‘ನನಗೂ ಪುಕ್ಕಟೆ ವಾಸ್ತು ಪ್ರಯೋಜನ ದೊರೆಯಿತು’ ಎಂದು ನಕ್ಕಿದ್ದೆ.

‘ವಾಸ್ತು ನಂಬಿಕೆ’ ಎಂಬುದು ನಮ್ಮಲ್ಲಿ ಎಷ್ಟು ಆಳವಾಗಿ ನಮ್ಮ ಮನದಲ್ಲಿ ನೆಲೆಯೂರಿಬಿಡುತ್ತದೆ. ಎಂಬುದಕ್ಕೆ ಈ ಉದಾಹರಣೆ ನೋಡಿ. ಕಷ್ಟಪಟ್ಟು ದುಡಿದು ಸಂಪಾದಿಸುವ ಕೆಳ, ಮಧ್ಯಮ ವರ್ಗದ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಎತ್ತರದ ಜಾಗದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಸಿ ನೀರಿಗಾಗಿ ಪಕ್ಕದಲ್ಲೇ ಬಾವಿಯೊಂದನ್ನು ತೋಡಿಸಿದ್ದರು.

ನೀರು ಚೆನ್ನಾಗಿಯೇ ಸಿಕ್ಕಿತ್ತು, ಕ್ರಮೇಣ ಅವರ ಪತ್ನಿಗೆ ಅನಾರೋಗ್ಯ ಕಾಡಲು ಪ್ರಾರಂಭಿಸಿದಾಗ ವಾಸ್ತು ತಜ್ಞರೊಬ್ಬರ ಸಲಹೆ ಮೇರೆಗೆ ಆತ ಬಾವಿಯನ್ನು ಮುಚ್ಚಿಸಿ ನೀರಿಗಾಗಿ ಒದ್ದಾಡತೊಡಗಿದ. ಆದರೆ ಪತ್ನಿಯು ಗುಣಮುಖರಾಗತೊಡಗಿದ್ದು ಕಾಕತಾಳೀಯವಲ್ಲವೇ! ಬಾವಿಯಂತೂ ನೆಲಸಮವಾಯಿತು.

ನಾಯಿಯ ಬಣ್ಣಕ್ಕೂ ವಾಸ್ತು ನಂಬಿಕೆಗೂ ‘ಎತ್ತಣಿಂದೆತ್ತ ಸಂಬಂಧವಯ್ಯ’ ಎಂದು ನನ್ನಂಥವರು ಮೂಗು ಮುರಿದರೆ ನಂಬುವವರು ‘ನಂಬಿಕೆಟ್ಟವರಿಲ್ಲ ಹರಿಯೇ’ ಎಂಬಂತೆ ನಂಬುತ್ತಲೇ ಇರುತ್ತಾರೆ.

ವಾಸ್ತು ಪ್ರವೀಣರ ಜೇಬು ತುಂಬುತ್ತಲೇ ಇರುತ್ತದೆ. ಮನಸ್ಸಿನ ಶುಭ್ರ ಬಣ್ಣಕ್ಕಿಂತಲೂ ಮಹತ್ವ ಶ್ವಾನದ ಮೈಬಣ್ಣಕ್ಕೆ ಬೆಲೆ ಇರಬಹುದೆಂದಾದರೆ ಮುಂದೆ ಇನ್ನೂ ಯಾವುದ್ಯಾವುದರ ಕಲರ್‌ಗೆ ಡಿಮ್ಯಾಂಡ್‌ ಬರಬಹುದೋ ಏನು ಎಂದು ಯೋಚಿಸುತ್ತ ಮನೆ ತಲುಪಿದ್ದು ಗೊತ್ತಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.