ADVERTISEMENT

ಬಂಡೀಪುರ: ಕೆಸರಿನಲ್ಲಿ ಸಿಲುಕಿದ ಆನೆ, ಜೆಸಿಬಿ ಮೂಲಕ ರಕ್ಷಣೆ

ಬಂಡೀಪುರ ಹುಲಿ ರಕ್ಷಿತಾರಣ್ಯದ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮೊಳೆಯೂರಿನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2021, 11:41 IST
Last Updated 16 ಮೇ 2021, 11:41 IST
ಬಂಡೀಪುರ ಹುಲಿ ರಕ್ಷಿತಾರಣ್ಯದ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮೊಳೆಯೂರು ವಲಯದಲ್ಲಿ ಕೆಸರಿನಲ್ಲಿ ಸಿಲುಕಿದ್ದ ಹೆಣ್ಣಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ರಕ್ಷಿಸಿದ್ದಾರೆ
ಬಂಡೀಪುರ ಹುಲಿ ರಕ್ಷಿತಾರಣ್ಯದ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮೊಳೆಯೂರು ವಲಯದಲ್ಲಿ ಕೆಸರಿನಲ್ಲಿ ಸಿಲುಕಿದ್ದ ಹೆಣ್ಣಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ರಕ್ಷಿಸಿದ್ದಾರೆ   

ಚಾಮರಾಜನಗರ: ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ವಲಯದ ಮೀನಕಟ್ಟೆಯ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.

ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆರೆಯಲ್ಲಿ ಭಾರಿ ಪ್ರಮಾಣದ ಕೆಸರು ಇತ್ತು. ಇಲ್ಲಿಗೆ ಬಂದ ಆನೆಯು ಕೆಸರಿನಲ್ಲಿ ಸಿಲುಕಿ, ಮೇಲೇಳಲು ಪ್ರಯಾಸ ಪಡುತ್ತಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಕೆಸರಿನೊಳಗೆ ಧಾವಿಸಿ, ನಿಧಾನವಾಗಿ ಆನೆಯನ್ನು ಮೇಲೆತ್ತಿದರು.

ಈ ಕುರಿತ ವಿಡಿಯೊವನ್ನು ಬಂಡೀಪುರ ಹುಲಿ ರಕ್ಷಿತಾರಣ್ಯದ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೇವಲ 4 ಗಂಟೆ ಅವಧಿಯಲ್ಲಿ 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ, ‘ಘಟನೆ ಶನಿವಾರ ಮಧ್ಯಾಹ್ನ 1 ಗಂಟೆಯಲ್ಲಿ ನಡೆದಿದೆ. ಕೆಸರಿನಲ್ಲಿ ತನ್ನ ಮರಿಯೊಂದಿಗೆ ಆಟವಾಡುತ್ತಿದ್ದ ಹೆಣ್ಣಾನೆಯು ಸಿಲುಕಿದೆ. ಮರಿಯು ದಡದಲ್ಲಿ ನಿಂತು ವೀಕ್ಷಿಸುತ್ತಿತ್ತು. ಆನೆಗೆ ಎದ್ದು ನಿಲ್ಲುವುದಕ್ಕೆ ಒಂದಿಷ್ಟು ಸಹಾಯ ಬೇಕಿತ್ತು. ಅದಕ್ಕಾಗಿ ಜೆಸಿಬಿ ಸಹಾಯದಿಂದ ಮೇಲೆತ್ತಲಾಯಿತು. ನಂತರ, ಆನೆಯು ತನ್ನ ಮರಿಯೊಂದಿಗೆ ಸುರಕ್ಷಿತವಾಗಿ ಕಾಡಿನೊಳಗೆ ಹೋಯಿತು’ ಎಂದು ತಿಳಿಸಿದರು.

ಎಸಿಎಫ್ ರವಿಕುಮಾರ್ ಹಾಗೂ ವಲಯ ಅರಣ್ಯಾಧಿಕಾರಿ ಪುಟ್ಟರಾಜು ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.