ADVERTISEMENT

ಇದು ಗೂಡು ಕಟ್ಟುವ ಸಮಯ...

ಎಂ.ಆರ್.ಮಂಜುನಾಥ
Published 18 ಫೆಬ್ರುವರಿ 2019, 12:18 IST
Last Updated 18 ಫೆಬ್ರುವರಿ 2019, 12:18 IST
ಹಕ್ಕಿ
ಹಕ್ಕಿ   

ಕೊಕ್ಕಿನಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಎರಡೂ ರೆಕ್ಕೆಗಳನ್ನು ಬಡಿಯತ್ತಾ, ಗಾಳಿ ಸೀಳಿಕೊಂಡು ಹಾರಿದ ಪಕ್ಷಿ ಹೋಗಿ ಸೇರಿದ್ದು, ನಡುಗಡ್ಡೆಯಲ್ಲಿದ್ದ ಮರದಲ್ಲಿ. ಅದರದ್ದೇ ಹಾದಿ ಹಿಡಿದವು ಮತ್ತಷ್ಟು ಪಕ್ಷಿಗಳು. ಕಾವೇರಿ ನದಿಯಲ್ಲಿ ಮೀಯುತ್ತಾ, ರೆಕ್ಕೆಗಳನ್ನು ಬಡಿಯುತ್ತಾ ನೀರು ಚಿಮ್ಮಿಸುತ್ತಾ ಹಾರುತ್ತಿದ್ದ ಆ ಪಕ್ಷಿಗಳ ಕೊಕ್ಕಿನಲ್ಲಿ ಹುಲ್ಲಿನ ಗರಿಕೆಯಿತ್ತು. ಎಲ್ಲವೂ ಸೇರಿ ಮರದ ಮೇಲೆ ಕುಳಿತವು. ಕೆಲವು ಗೂಡು ಕಟ್ಟಲು ಕಡ್ಡಿ, ಹುಲ್ಲು ಸಿದ್ಧಮಾಡಿಕೊಳ್ಳುತ್ತಿದ್ದವು..!

ಇವು ರಂಗನತಿಟ್ಟು ಪಕ್ಷಿಧಾಮದಲ್ಲಿ ದಿನಪೂರ್ತಿ ಕಂಡು ಬಂದ ಪಕ್ಷಿಗಳ ಚಟುವಟಿಕೆ. ಚಳಿಗಾಲವೆಂದರೆ, ಈ ಪಕ್ಷಿಧಾಮ ಪಕ್ಷಿಗಳಿಗೆ ‘ಹನಿಮೂನ್‌ ಸ್ಪಾಟ್‌’. ದೂರದ ದೇಶದ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ವಲಸೆ ಬರುತ್ತವೆ. ಬಂದಂಥ ಪಕ್ಷಿಗಳು ಸಂಗಾತಿ ಹುಡುಕಿಕೊಂಡು, ಗೂಡು ಕಟ್ಟಿ, ಸಂಸಾರ ಮಾಡಿ, ಮರಿಗಳನ್ನು ಬೆಳೆಸಿ, ಪುನಃ ತಮ್ಮ ಸ್ವಸ್ಥಾನಕ್ಕೆ ಹಿಂದಿರುತ್ತವೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮ ಒಂದು ರೀತಿ ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಾಗಿರುತ್ತದೆ.

ಚಳಿಗಾಲದಲ್ಲಿ ಸುಮಾರು 170ಕ್ಕೂ ಹೆಚ್ಚಿನ ವಿವಿಧ ಜಾತಿಯ ಪಕ್ಷಿಗಳು ಪಕ್ಷಿಧಾಮಕ್ಕೆ ಬರುತ್ತವೆ. ಸುಮಾರು 10,000ಕ್ಕಿಂತ ಹೆಚ್ಚು ಮರಿಗಳು ಇಲ್ಲಿ ಜನ್ಮತಳೆಯುತ್ತವೆ. ಇವುಗಳಲ್ಲಿ ಹೆಜ್ಜಾರ್ಲೆ, ಬಣ್ಣದ ಕೊಕ್ಕರೆ, ಚಮಚದ ಕೊಕ್ಕು, ಕರಿ ಕಂಬರಲು, ಕೊಕ್ಕಿನ ನೀರುಕಾಗೆ, ಮಿಂಚುಳ್ಳಿ, ಬೆಳ್ಳಕ್ಕಿ, ಹಾವಕ್ಕಿ, ಬಕಪಕ್ಷಿ, ಕತ್ತಲ ಗುಪ್ಪಿ ಪ್ರಮುಖವಾದವು.

ADVERTISEMENT

ನವೆಂಬರ್ ತಿಂಗಳೆಂದರೆ ಪ‍ಕ್ಷಿಧಾಮದಲ್ಲಿ ಹಕ್ಕಿಗಳ ಗೂಡುಕಟ್ಟುವ ಸಂಭ್ರಮ. ಅದರಲ್ಲೂ ಹೆಜ್ಜಾರ್ಲೆಗಳು ಸುಯ್ಯೆಂದು ಹಾರುತ್ತಾ, ಕಾಲಿನಲ್ಲಿ ಕಡ್ಡಿಗಳನ್ನು ಸಿಕ್ಕಿಸಿಕೊಂಡು ಹೋಗುವ ದೃಶ್ಯವಂತೂ ನಯನ ಮನೋಹರ. ನಾನಾ ಭಂಗಿಯಲ್ಲಿ ನೀರಿನಲ್ಲಿ ಮುಳುಗಿ ಗಿಡದ ರೆಂಬೆಗಳನ್ನು ನೀರಿನಲ್ಲಿ ಅದ್ದಿ ತೆಗೆದು ಕೊಂಡು ಹೋಗುವುದು, ಬೇರೆ ಪಕ್ಷಿಗಳ ಜತೆಗೆ ಒಡನಾಡುವ ದೃಶ್ಯ ಕಣ್ಣಿಗೆ ಹಬ್ಬವೋ ಹಬ್ಬ.

ವಿದೇಶಿ ಪಕ್ಷಿಗಳ ಕಲರವ

ಇಲ್ಲಿ ಒಂದೊಂದು ಋತುಗಳಿಗೆ ಒಂದೊಂದು ರೀತಿಯ ಪಕ್ಷಿಗಳು ಬರುತ್ತವೆ. ಅದರಲ್ಲಿ ನವೆಂಬರ್ – ಡಿಸೆಂಬರ್ ಚಳಿಗಾಲದಲ್ಲಿ ಬರುವ ಪಕ್ಷಿಗಳ ಸಂಖ್ಯೆ ಅಧಿಕ. ಕೆಲವೊಂದು ಕಾಲದಲ್ಲಿ ಸೈಬೀರಿಯಾ, ಲ್ಯಾಟಿನ್ ಅಮೇರಿಕಾ, ಮತ್ತು ಉತ್ತರ ಭಾರತದ ಕೆಲವು ಭಾಗಗಳಿಂದ 25 ರಿಂದ 30 ಸಾವಿರ ಪಕ್ಷಿಗಳು ಗುಂಪು ಗುಂಪುಗಳಾಗಿ ಬಂದು ಹೋಗುತ್ತವೆ ಎನ್ನುತ್ತಾರೆ ಫಾರೆಸ್ಟರ್‌ ಮಂಜುನಾಥ್.

ಪಕ್ಷಿಗಳು ಬೆದೆಗೆ ಬಂದಾಗ ಅವುಗಳ ಚಟುವಟಿಕೆಯೇ ವಿಶಿಷ್ಟವಾಗಿರುತ್ತದೆ. ಚಳಿಗಾಲದಲ್ಲಿ ಪಕ್ಷಿಧಾಮಕ್ಕೆ ಬಂದರೆ ಸಂಗಾತಿಯನ್ನು ಹುಡುಕುವುದು, ಪ್ರೀತಿ–ಪ್ರಣಯ, ಜಗಳದಂತಹ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ಈ ಪಕ್ಷಿಧಾಮ ಸುಮಾರು 66 ಎಕರೆ ವಿಸ್ತೀರ್ಣವಿದೆ. ಇದು ರಾಜ್ಯದ ಅತಿದೊಡ್ಡ ಪಕ್ಷಿಧಾಮ. ಇದರ ಸುತ್ತ ಕಾವೇರಿ ನದಿಯ 24 ನಡುಗಡ್ಡೆಗಳಿವೆ. ಸುತ್ತಾ 17 ಎಕರೆಯಷ್ಟು ಕೃಷಿ ಭೂಮಿ ಇದೆ. ಈ ಪಕ್ಷಿಧಾಮದಲ್ಲಿ ಪಕ್ಷಿಗಳು ಗೂಡು ಕಟ್ಟಲು ಸುತ್ತಲಿನ ಗದ್ದೆಗಳಿಂದ ಹುಲ್ಲಿನ ಕಡ್ಡಿ, ಬೇರುಗಳನ್ನು ಸಂಗ್ರಹಿಸಿ ತರುತ್ತವೆ. ಗೂಡುಕಟ್ಟಲು ಬೇಕಾದ ಎಲ್ಲ ಪರಿಕರಗಳು ಈ ತಾಣದ ಸುತ್ತ ಲಭ್ಯವಾಗುತ್ತದೆ. ಮಾತ್ರವಲ್ಲ, ಪಕ್ಷಿಗಳಿಗೆ ಕಾಲಕ್ಕೆ ತಕ್ಕ ಹಾಗೆ ಹವಾಗುಣ ಆಧಾರಿತ ಆಹಾರವೂ ದೊರಕುತ್ತದೆ.

ಗೂಡುಕಟ್ಟುವ ಸೊಬಗು

ಪಕ್ಷಿಗಳು ಸಂತಾನೋತ್ಪತ್ತಿಗೋಸ್ಕರ ಗೂಡು ಕಟ್ಟುತ್ತವೆ. ಹುಲ್ಲು, ಒಣ ಕಡ್ಡಿ-ರೆಂಬೆಗಳಿಂದ ತಯಾರಿಸಿದ ಅಟ್ಟಣಿಗೆ ರೀತಿಯ ಗೂಡು ಕಟ್ಟುವುದನ್ನು ನೋಡುವುದೇ ಒಂದು ಸೊಬಗು.

ಕೆಲವು ಪಕ್ಷಿಗಳು ತಟ್ಟೆ, ಕಪ್ಪಿನಂತೆ ಒಣ ಹುಲ್ಲು, ಎಲೆ, ಪೊದೆಯಂತಹ ಹುಲ್ಲಿನ ಎಸಳುಗಳನ್ನು ಜೋಡಿಸಿ ಮೆದುವಾದ ಗೂಡು ಕಟ್ಟಿ ವಾಸಿಸುತ್ತವೆ. ಇನ್ನೂ ಕೆಲವು ಮರ, ಬದುಗಳನ್ನು ಕೊರೆದು ಸುರಂಗದಂತೆ ಮಾಡಿದ ಗೂಡು ಕಟ್ಟಿ ಜೀವಿಸುತ್ತವೆ. ಕೆಲವು ಬಾನಾಡಿಗಳು ಮಣ್ಣು, ಎಲೆಗಳನ್ನು ಎಂಜಲಿನೊಂದಿಗೆ ಅರೆದು ಮೆತ್ತಿದರೆ ಮಂಗಟ್ಟೆಹಕ್ಕಿಗಳು ಪೊಟರೆ ಬೆಳೆಸುತ್ತವೆ. ಸಿಂಪಿಗ ಎರಡು ಎಲೆಗಳನ್ನು ಜೋಡಿಸಿ ಗೂಡು ಹೊಲಿಯುತ್ತವೆ.

ಗೀಜಗ ಪಕ್ಷಿಗಳು ಹುಲ್ಲು, ನಾರನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಬಂದು ಗೂಡು ನೇಯುತ್ತವೆ. ತೇಲುವಗೂಡು, ಮಣ್ಣು ಗೂಡು, ಬಿಲ, ಕೆದರಿದ ಗೂಡು, ಬಟ್ಟಲಿನಾಕಾರದ ಗೂಡು, ತೊಟ್ಟಿಲುಗೂಡು, ಎಲೆಗೂಡು, ನೇತಾಡುವ ಗೂಡು, ಕಡ್ಡಿಗಳ ಗೂಡು ಪೊಟರೆ.. ಹೀಗೆ ಋತುಮಾನಕ್ಕೆ ತಕ್ಕಂತೆ ಗೂಡು ಕಟ್ಟುವ ಪ್ರಕ್ರಿಯೆಯನ್ನು ಇಲ್ಲಿ ನೋಡಬಹುದು.

ಈಗ ಚಳಿಗಾಲ ಆರಂಭವಾಗಿದೆ. ಪಕ್ಷಿಗಳು ವಲಸೆ ಬರುವ ಪ್ರಕ್ರಿಯೆ ಶುರುವಾಗಿದೆ. ಗೂಡುಕಟ್ಟುವ ಸಂಭ್ರಮವೂ ಮೇಳೈಸುತ್ತಿದೆ. ಇನ್ನೇಕ ತಡ. ಹೊರಡಿ ರಂಗನತಿಟ್ಟು ಪಕ್ಷಿಧಾಮಕ್ಕೆ. ಪಕ್ಷಿಗಳ ಹಾರಾಟ, ಪ್ರೇಮ-ಪ್ರಣಯ, ಲಾಲನೆ–ಪಾಲನೆಯಂತಹ ಮನೋಹರ ದೃಶ್ಯಗಳನ್ನು ನೋಡಿ ಬನ್ನಿ.

ಚಿತ್ರಗಳು:ಸುಬ್ರಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.