ADVERTISEMENT

ಸುರಳಿ ಬಾಲದ ಲೀಮರ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:45 IST
Last Updated 3 ನವೆಂಬರ್ 2019, 19:45 IST
ಲಿಮರ್
ಲಿಮರ್   

ಮಡಗಾಸ್ಕರ್‌ನ ದಕ್ಷಿಣ ಭಾಗದಲ್ಲಿ ಇದನ್ನು ಹೆಚ್ಚಾಗಿ ನೋಡಬಹುದು. ಜತೆಗೆ ಮೊರೊಂಡಾವ, ಅಂಬ್ಲಾವೊದ ಪೂರ್ವ ಕರಾವಳಿಯಲ್ಲಿ ನೋಡಬಹುದು. ದಟ್ಟ ಕಾಡು, ಶಿಲಾವೃತ ಗೊಂಡಾರಣ್ಯಗಳಲ್ಲಿ ಇರಲು ಇಷ್ಟಪಡುತ್ತದೆ. ಇದಕ್ಕೆ ಎತ್ತರ ಶಿಖರಗಳಲ್ಲಿ ವಾಸಿಸುವುದೆಂದರೆ ಬಲು ಇಷ್ಟ. ದಟ್ಟ ಸಸ್ಯ ಪ್ರಭೇದಗಳ ನಡುವೆಯೂ ಇದನ್ನು ಕಾಣಬಹುದು.

ಬಾಲದಿಂದಲೇ ಗುರುತಿಸಬಹುದಾದ ಮಧ್ಯಮ ಗಾತ್ರದ ಪ್ರಾಣಿ. ದಟ್ಟ ತುಪ್ಪಳ ಹೊಂದಿರುವ ನೀಳ ಬಾಲ ಹೊಂದಿರುತ್ತದೆ. ಈ ಬಾಲವು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದು ಸುರುಳಿ ಸುತ್ತಿದಂತೆ ಕಾಣುತ್ತದೆ. ಮರ್ದಿಂದ ಮರಕ್ಕೆ ಜಿಗಿದು, ಸದಾ ಮರದಲ್ಲಿಯೇ ವಾಸಿಸುತ್ತದೆ. ಉದ್ದದ ಬಾಲವಿದ್ದರೂ ಮರದಲ್ಲಿ ನೇತಾಡುವುದಿಲ್ಲ. ಕಣ್ಣುಗಳು ಬೆಂಕಿಯ ಉಂಡೆಯಂತೆ ಕಾಣುತ್ತದೆ.

ಎಲ್ಲಿರುತ್ತೆ?

ADVERTISEMENT

ಮಡಗಾಸ್ಕರ್‌ನ ದಕ್ಷಿಣ ಭಾಗದಲ್ಲಿ ಇದನ್ನು ಹೆಚ್ಚಾಗಿ ನೋಡಬಹುದು. ಜತೆಗೆ ಮೊರೊಂಡಾವ, ಅಂಬ್ಲಾವೊದ ಪೂರ್ವ ಕರಾವಳಿಯಲ್ಲಿ ನೋಡಬಹುದು. ದಟ್ಟ ಕಾಡು, ಶಿಲಾವೃತ ಗೊಂಡಾರಣ್ಯಗಳಲ್ಲಿ ಇರಲು ಇಷ್ಟಪಡುತ್ತದೆ. ಇದಕ್ಕೆ ಎತ್ತರ ಶಿಖರಗಳಲ್ಲಿ ವಾಸಿಸುವುದೆಂದರೆ ಬಲು ಇಷ್ಟ. ದಟ್ಟ ಸಸ್ಯ ಪ್ರಭೇದಗಳ ನಡುವೆಯೂ ಇದನ್ನು ಕಾಣಬಹುದು.

ವರ್ತನೆ

ಇದನ್ನು ಬುದ್ಧಿವಂತ ಪ್ರಾಣಿಯೆಂದೇ ಪರಿಗಣಿಸಲಾಗಿದೆ. ಪರಿಕರಗಳನ್ನು ಬಳಸಿಯಾದರೂ ಆಹಾರ ಪಡೆಯುವ, ಎಂಥದ್ದೇ ಸಂದರ್ಭದಲ್ಲಿಯೂ ಧೃತಿಗೆಡದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಚಾಕಚಕ್ಯತೆಯನ್ನು ಇದು ಹೊಂದಿದೆ. ಹಗಲಿಡೀ ಕ್ರಿಯಾಶೀಲವಾಗಿರುತ್ತದೆ. ಮರಗಳನ್ನು ಕ್ಷಣಮಾತ್ರದಲ್ಲಿ ಏರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಸಾಮಾಜಿಕವಾಗಿಯೂ ಬಹಳ ಕ್ರಿಯಾಶೀಲವಾಗಿರುವ ಪ್ರಾಣಿ. ಗಂಡು ಮತ್ತು ಹೆಣ್ಣು ಲೀಮರ್‌ಗಳು ಗುಂಪುಗಳಾಗಿ, ಪ್ರತ್ಯೇಕವಾಗಿಯೂ ಜೀವಿಸುತ್ತವೆ. ಹೆಣ್ಣು ಲೀಮರ್‌ ಬಹಳ ಪ್ರಾಬಲ್ಯ ಹೊಂದಿದ್ದು, ಮಹಿಳಾ ಪ್ರಧಾನವಾದ ವ್ಯವಸ್ಥೆಯನ್ನು ಈ ಲೀಮರ್‌ಗಳು ಪಾಲಿಸುತ್ತವೆ. ಹೆಣ್ಣು ಲೀಮರ್‌ಗಳು ಕುಟುಂಬವನ್ನು ಪೋಷಣೆ ಮಾಡುವುದರ ಜತೆಗೆ ಕಾದಾಟಗಳಲ್ಲಿ ಯಶಸ್ವಿಯಾಗಿ ಭಾಗಿಯಾಗುತ್ತವೆ. ವಾಸಿಸುವ ಪ್ರದೇಶವನ್ನು ಗುರುತಿಸಿಕೊಂಡು ಅದರೊಂದಿಗೆ ಭಾವಾನಾತ್ಮಕ ಸಂಬಂಧವನ್ನು ತೋರ್ಪಡಿಸುತ್ತದೆ.

ಸಂತಾನೋತ್ಪತ್ತಿ

ಬಹುಸಂಗಾತಿಗಳೊಂದಿಗೆ ಜೀವನ ನಡೆಸುತ್ತದೆ.ಪ್ರಾಯಕ್ಕೆ ಬರುವ ಹೊತ್ತಿನಲ್ಲಿ ಗಂಡು ಲೀಮರ್‌ಗಳು ಗುಂಪು ತೊರೆದು, ಸಂಗಾತಿಯನ್ನು ಅರಸುತ್ತದೆ. ಗಂಡು ಮತ್ತು ಹೆಣ್ಣು ಸಂಗಾತಿಗಳಿಗಾಗಿ ಕಾದಾಟವೂ ನಡೆಸುತ್ತದೆ. ಕಾದಾಟದ ಮೂಲಕವೇ ಸಂಗಾತಿಯನ್ನು ಆರಿಸಿಕೊಳ್ಳುವ ಹಕ್ಕನ್ನು ಘೋಷಿಸುತ್ತವೆ. ಏಪ್ರಿಲ್‌ನ ಮಧ್ಯಭಾಗದಿಂದ ಜೂನ್‌ವರೆಗೆ ಸಂತಾನೋತ್ಪತ್ತಿ ನಡೆಸುತ್ತದೆ. 4 ತಿಂಗಳ ಕಾಲ ಗರ್ಭ ಧರಿಸುತ್ತದೆ. ಒಂದರಿಂದ 2 ಮರಿಗಳನ್ನು ಹಾಕುತ್ತದೆ. ಹೆಣ್ಣು ಲೀಮರ್‌ ಸದಾ ಮರಿಗಳನ್ನು ಜತನದಿಂದ ಕಾಪಾಡಿಕೊಳ್ಳುತ್ತದೆ. ಅದಕ್ಕೆ ಉಣಿಸುವ, ಪ್ರತಿಯೊಂದನ್ನು ಕಲಿಸುವ ಜವಾಬ್ದಾರಿಯನ್ನು ಹೊರುತ್ತದೆ. ತಾಯಿಯ ಹೊಟ್ಟೆಯ ಮೇಲೆ ಏರಿಕೊಂಡೇ ಮರಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತವೆ. ಎರಡು ತಿಂಗಳಾದ ಮೇಲೆ ಮರಿಗಳು ಘನ ಆಹಾರವನ್ನು ತಿನ್ನಲು ಆರಂಭಿಸುತ್ತವೆ. ಹೆಣ್ಣುಮರಿ ಮೂರು ವರ್ಷಕ್ಕೆ ಪ್ರಾಯಕ್ಕೆ ಬಂದರೆ, ಗಂಡು ಮರಿಯು 2.5 ತಿಂಗಳಿಗೆ ಸಂಗಾತಿಯನ್ನು ಹುಡುಕಿಕೊಳ್ಳುತ್ತದೆ.

ಸ್ವಾರಸ್ಯಕರಸಂಗತಿಗಳು

*ಇದು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ, ವಿವಿಧ ಭಂಗಿಯನ್ನು ಪ್ರದರ್ಶಿಸುತ್ತದೆ. ಕೆಲವೊಮ್ಮೆ ಯೋಗಾಸನದ ಹಲವು ಭಂಗಿಗಳಂತೆ ಕಂಡರೆ ಆಶ್ಚರ್ಯವಿಲ್ಲ.

*ಬಾಲವನ್ನು ಕತ್ತಿಗೆ ಸುತ್ತಿಕೊಂಡು ಪ್ರಶಾಂತವಾಗಿ ನಿದ್ರಿಸುತ್ತವೆ.

*ಆರಂಭದಲ್ಲಿ ಹುಟ್ಟಿದ ಮರಿಗಳ ಕಂಗಳು ನೀಲಿ ಬಣ್ಣದಲ್ಲಿದ್ದು, ಬೆಳೆಯುತ್ತ ಬಣ್ಣ ಬದಲಾಗುತ್ತದೆ.

*ಸ್ವಚ್ಛತೆಯ ಬಗ್ಗೆ ಕಾಳಜಿ ಹೊಂದಿರುವ ಪ್ರಾಣಿಯಾಗಿದ್ದು, ಆಹಾರ ತಿಂದ ಮೇಲೂ ಕೈ ಕಾಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತದೆ.

ಆಹಾರ ಪದ್ಧತಿ

ಸುರುಳಿಯಾಕಾರದ ಲೀಮರ್‌ಗಳು ಮಿಶ್ರಾಹಾರಿಗಳು. ಸಸ್ಯ, ಎಲೆ. ಹೂವು, ವಿವಿಧ ಬಗೆಯ ಹಣ್ಣುಗಳನ್ನು ತಿಂದು ಮುಗಿಸುತ್ತದೆ. ಜತೆಗೆ ಸಣ್ಣ ಪುಟ್ಟ ಹುಳುಗಳು, ಕ್ರಿಮಿಕೀಟಗಳು, ಚಿಕ್ಕ ಗಾತ್ರದ ಪಕ್ಷಿಗಳೆಂದರೂ ಇದಕ್ಕಿಷ್ಟ.

ಜೀವಿತಾವಧಿ: 15ರಿಂದ 33 ವರ್ಷ,ಗಾತ್ರ : 2,5 ರಿಂದ 3.5 ಕೆ.ಜಿ.ಉದ್ದ: 39ರಿಂದ 43 ಸೆಂ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.