ADVERTISEMENT

ಪಶ್ಚಿಮ ಘಟ್ಟದಲ್ಲಿ, ಕಪ್ಪೆ ಪ್ರಪಂಚದಲ್ಲಿ...

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 19:46 IST
Last Updated 31 ಡಿಸೆಂಬರ್ 2018, 19:46 IST
ಕೆ.ಎಸ್‌.ಶೇಷಾದ್ರಿ, ಯುವ ವಿಜ್ಞಾನಿ, ಬೆಂಗಳೂರು
ಕೆ.ಎಸ್‌.ಶೇಷಾದ್ರಿ, ಯುವ ವಿಜ್ಞಾನಿ, ಬೆಂಗಳೂರು   

ಉಡುಪಿಯಲ್ಲಿ ಎಂಟುವಿಜ್ಞಾನಿಗಳ ತಂಡವೊಂದು 2016ರಲ್ಲಿ ತುಂಬಾ ಪುಟ್ಟದಾದ ಕಪ್ಪೆಯೊಂದನ್ನು ಪತ್ತೆ ಹಚ್ಚಿತ್ತು.‘ಮೈಕ್ರೊಹೈಲಿಡ್ಸ್‌’ (microhylids) ಎಂಬ ವರ್ಗಕ್ಕೆ ಸೇರಿದ ಕಿರಿದಾದ ಬಾಯಿಯ ಈ ಶೋಲಿಗ ಕಪ್ಪೆಯನ್ನು ಪತ್ತೆ ಹಚ್ಚಿದ ವಿಜ್ಞಾನಿಗಳ ತಂಡದಲ್ಲಿ ಕೆ.ಎಸ್‌.ಶೇಷಾದ್ರಿ ಕೂಡ ಒಬ್ಬರು. ಈ ‘ಶೋಲಿಗ’ ಪುಟಾಣಿಯನ್ನು ಪತ್ತೆ ಮಾಡಿದ್ದರ ಮಹತ್ವ ಏನೆಂದು ಕೇಳುವಿರಾ?ಭಾರತದಲ್ಲಿರುವ ಒಟ್ಟು 277 ಕಪ್ಪೆಗಳ ಪ್ರಭೇದಗಳಲ್ಲಿ 150 ಪ್ರಭೇದಗಳು ಅಳವಿನಂಚಿನಲ್ಲಿವೆ ಎಂಬ ಸತ್ಯ ಸಂಗತಿ ಹೊರಬಿದ್ದ ಸಂದರ್ಭದಲ್ಲೇ ಕಿರಿದಾದ ಬಾಯಿಯ ಈ ಪುಟ್ಟ ಕಪ್ಪೆ ಪತ್ತೆಯಾಗಿ ಹಿರಿದಾದ ಸುದ್ದಿ ಮಾಡಿದೆ.

‘ಪಶ್ಚಿಮ ಘಟ್ಟದ ತಪ್ಪಲಿನ ಕೊಳವೊಂದರ ಬಳಿ ಮಿಡತೆಯಂತೆ ಕೂಗುತ್ತಿದ್ದ ಶೋಲಿಗ ಕಪ್ಪೆ ನಮಗೆ ಕಂಡಿತ್ತು. ಆ ಕಪ್ಪೆಯನ್ನು ಹಿಡಿದು ತಂದಿದ್ದೆವು. ಅದು ಅಳಿವಿನಂಚಿನಲ್ಲಿ ಗುರುತಿಸಲಾದ ಪ್ರಭೇದ ಎನ್ನುವುದು ಬಳಿಕ ಗೊತ್ತಾಯಿತು’ ಎಂದು ಆಗಿನ ಘಟನೆಯನ್ನು ನೆನೆಯುತ್ತಾರೆ ಶೇಷಾದ್ರಿ. ಕಪ್ಪೆಗಳ ಕುರಿತು ಅವರಿಗೆ ಅಪರಿಮಿತವಾದ ಆಸಕ್ತಿ. ಅವುಗಳ ವರ್ತನೆಯನ್ನು ಬಲು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿರುವ ಸಂಶೋಧಕರಲ್ಲಿ ಅವರೂ ಒಬ್ಬರಾಗಿದ್ದಾರೆ.

ಶೇಷಾದ್ರಿ ಅವರ ಪರಿಸರ ಹಾಗೂ ಜೀವವೈವಿಧ್ಯದ ಬಗೆಗಿನ ಪ್ರೀತಿ ಬಾಲ್ಯದಲ್ಲೇ ಬೆಳೆದಂಥದ್ದು. ಚಿಕ್ಕವರಿದ್ದಾಗ ಗುಬ್ಬಿಗಳಿಗೆ ಕಾಳು ತಿನ್ನಿಸುತ್ತಿದ್ದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪಕ್ಷಿ ವೀಕ್ಷಣೆಯ ಹವ್ಯಾಸವನ್ನೂ ಬೆಳೆಸಿಕೊಂಡರು. ಹೀಗೆ ಬಾಲ್ಯದಲ್ಲೇ ಅವರಿಗೆ ಪರಿಸರದ ನಂಟು ಬೆಳೆದಿತ್ತು.ಈ ಚಟುವಟಿಕೆಗಳಿಗೆ ಪ್ರೇರಣೆಯಾಗಿದ್ದು ಅವರಮ್ಮ ಓದಿ ಹೇಳುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು. ಹೀಗೆ ಅವರಲ್ಲಿ ಬೆಳೆದ ಜೀವವೈವಿಧ್ಯದ ಕೌತುಕ ಪಶ್ಚಿಮ ಘಟ್ಟದ ತುಂಬಾ ಅವರನ್ನು ಸುತ್ತಾಡುವಂತೆ ಮಾಡಿದೆ.

ADVERTISEMENT

ಪರಿಸರ ಸಂಶೋಧನೆ ನಡೆಸುವ ಅಶೋಕ ಟ್ರಸ್ಟ್‌ನ ಸಹ ಸಂಶೋಧಕರಾಗಿರುವ ಅವರು, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಅಗಸ್ತ್ಯಮಲೈ ಅರಣ್ಯದಲ್ಲಿ ಅವರು ಕಂಡ ಕಪ್ಪೆಗಳ ವಿಶಿಷ್ಟ ವರ್ತನೆಯೇ ಅವರ ಪಿಎಚ್‌.ಡಿ ಸಂಶೋಧನಾ ವಿಷಯವಸ್ತುವಾಗಿತ್ತು. ಹೆಣ್ಣು ಕಪ್ಪೆ ಮೊಟ್ಟೆ ಇಟ್ಟರೆ, ಗಂಡು ಕಪ್ಪೆ ಅವುಗಳನ್ನು ರಕ್ಷಿಸಿ, ಮರಿ ಮಾಡುವಂತಹ ಬಲು ಅಪರೂಪದ ಪ್ರಭೇದ ಅದು. ಈ ಕಪ್ಪೆಗಳು ಬಿದರಿನಲ್ಲಿ ಮೊಟ್ಟೆ ಇಡುತ್ತವಂತೆ. ‘ತಂದೆ’ ತುಸು ಯಾಮಾರಿದರೂ ಬೇರೆ ಗಂಡು ಕಪ್ಪೆಗಳು ಈ ಮೊಟ್ಟೆಗಳನ್ನು ತಿಂದು ಹೋಗುತ್ತವಂತೆ! ಇಂತಹ ಹಲವು ಕುತೂಹಲಕಾರಿ ಅಂಶಗಳು ಅವರ ಸಂಶೋಧನಾ ಪ್ರಬಂಧದಲ್ಲಿವೆ.

ಇನ್ನೇನು ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ನಿರ್ದೇಶಕರಾಗಿ ಕೆಲಸ ಆರಂಭಿಸಲಿದ್ದಾರೆ. ‘ಪಶ್ಚಿಮ ಘಟ್ಟದಲ್ಲಿ ಇದುವರೆಗೆ ಶೋಧಿಸಿದ್ದು ಅತ್ಯಲ್ಪ. ಇನ್ನುಮುಂದೆ ಮಾಡಬೇಕಾದ ಕೆಲಸವೇ ಬಹಳಷ್ಟಿದೆ’ ಎಂದೆನ್ನುವ ಶೇಷಾದ್ರಿ ಅವರ ಮುಂದಿನ ಸಂಶೋಧನಾ ಚಿತ್ತವೆಲ್ಲ ಘಟ್ಟದಲ್ಲೇ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.