ADVERTISEMENT

ಧರೆಯ ನಕ್ಷತ್ರಗಳು ಈ ಮಿಂಚುಹುಳುಗಳು...

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 19 ಜನವರಿ 2025, 0:35 IST
Last Updated 19 ಜನವರಿ 2025, 0:35 IST
   

ಸಂಖ್ಯೆ ಮತ್ತು ಪರಿಸರದ ದೃಷ್ಟಿಯಿಂದ ಜೀವಿಗಳ ಪ್ರಪಂಚದಲ್ಲಿ ಮುಂಚೂಣಿ ಬಳಗವಾಗಿ ಭಾವಿಸಲಾಗುವ ಕೀಟಗಳದ್ದು ನಿಜಕ್ಕೂ ಬೆರಗಿನ ಲೋಕ. ಕೀಟಗಳ ವೈಶಿಷ್ಯತೆ, ಜೀವಚೈತನ್ಯ ಕಂಡುಕೇಳರಿಯದ ಕುತೂಹಲದ ಗಣಿ. ಹಾತಿ, ಚಿಟ್ಟೆ, ಜೇನ್ನೊಣ, ಜೀರುಂಡೆಗಳದು ಜೀವ ಪಸರಣೆಯ ಯಾನ.. ಗಾಳಿಗೊಡ್ಡಿದ ಗಾಯನ, ಪ್ರತಿ ಕೀಟವೂ ನಮೂನೆಯಲ್ಲಿ ಭಿನ್ನ, ತರತರದ ಬಣ್ಣ, ವಿನ್ಯಾಸವೇ ಚೆನ್ನ.. ಕತ್ತಲಲ್ಲಿ ಕಂಗೊಳಿಸುವ ಮಿಂಚುಹುಳುಗಳಂತೂ ಬೆಳಕು ಚುಮ್ಮುವ ಪರಿಯೇ ಅದ್ಭುತ…

ಎಳವೆಯಲ್ಲಿ ಕಂಡ ಡಿಸೆಂಬರ್-ಜನವರಿ ಮಾಸದ ಕರ್ದಿಂಗಳು, ಕಾರ್ಗತ್ತಲ ಇರುಳಲ್ಲಿ ಮನೆಯ ಹಿಂದಿನ ಬ್ಯಾಣದ ದೃಶ್ಯ ವೈಭವವೊಂದು ಬಿಡದೇ ಕಾಡುತ್ತಿತ್ತು, ಕರೆಯುತಿತ್ತು.. ಆ ದಿನಗಳ ಅನುಭೂತಿಯನ್ನು ನೆನೆನೆನೆದು ಮತ್ತೊಮ್ಮೆ ಅಂತಹುದೇ ಅನುಭವಕ್ಕೆ ಒಡ್ಡಿಕೊಳ್ಳುವ ಕಾತರಿಕೆಯಲ್ಲಿ ಹಳ್ಳಿಗೆ ತೆರಳಿದ್ದೆ.

ಅದು ಇರುಳ ಕಾರ್ಮುಗಿಲ ವಲಯ, ತಲೆ ಮೇಲೆ ಮಿನುಗು ನಕ್ಷತ್ರಗಳ ಬಳಗ.. ಕೆಳಗಿನ ಬ್ಯಾಣದ ಸುತ್ತಾ ಗಿಡಮರಗಳ ಕೋಟೆಗಂಟಿತ್ತು ಬೆಳಕಿನ ಅವತರಣಿಕೆ. ಕಾಡುತುಂಬಾ ನಕ್ಷತ್ರಗಳೇ ಉದುರಿ ಬಿದ್ದಿರುವ ತರಹ.. ಬೆಳಕಿನ ತುಂಡುಗಳೇ ಗಿಡಗಳಿಗಂಟಿಕೊಂಡ ಭಾವ. ಅಖಂಡರಾತ್ರಿ ಕಪ್ಪುಗಟ್ಟಿದ್ದ ಮರಗಿಡಗಳ ಹಿನ್ನೆಲೆಯಲ್ಲಿ ಬೆಳಕಿನ ಮಣಿಗಳ ಮಿಣಿಮಿಣಿ ವರ್ಣಾಲಂಕಾರ. ಕಗ್ಗಾಡಿನಲ್ಲಿ ಗಳಿಗೆಗೊಮ್ಮೆ ಮಿಂಚಿಮಾಯವಾಗುವ ಬೆಳಕಿನ ನರ್ತನ. ಫಳಕ್., ಫಳಕ್.. ವಿದ್ಯುತ್ ಸಂಚಾರ, ಒಂದರೆಗಳಿಗೆ ಕಾಡು ಕಂಗೊಳಿಸಿದರೆ ಮರುಕ್ಷಣ ಪೂರ್ತಿಕತ್ತಲು.. ಹೀಗೆ ಕತ್ತಲು-ಬೆಳಕಿನಾಟ, ಪದಗಳನ್ನು ಮೀರಿದ ಮಿಂಚುಹುಳುಗಳ ಲಯ-ಲಾಲಿತ್ಯ.

ADVERTISEMENT

ಕತ್ತಲುಹೀರಿ ಬೆಳಕನು ಬೀರಿ ಹಾರಾಡುವ ಪುಟ್ಟ ಅಚ್ಚರಿಗಳಿಗೆ ಅದೆಲ್ಲಿಂದ ಬಂತೋ ಹೀಗೆ ಬೆಳಗುವ ಗುಣ?!. ವಿಶೇಷವೆಂದರೆ ಕಾಡಂಚಲ್ಲಿ ಹುಟ್ಟಿಬೆಳೆದ ಅದೆಷ್ಟೋ ಮಂದಿಗೂ ಈವರೆಗೂ ಈ ದೃಶ್ಯ ಅಗೋಚರ!. ಕಾಣುವ ಕುತೂಹಲದ ಕಣ್ಣಿನದೇ ಕೊರತೆ. ಹೀಗೆ ಪ್ರಾಕೃತಿಕ ಸೊಗಸಿಗೆ ಕುರುಡಾಗಿ ಯಾಂತ್ರಿಕ ಸುಖದ ಸೋಗಿಗೆ ಬಿದ್ದ ವರ್ತಮಾನದ ಬಗ್ಗೆ ಬೇಸರವಿದೆ. ನಿಸರ್ಗದತ್ತವಾಗಿ ಪುಟ್ಟ ಹುಳುಗಳು ಕಂಡುಕೊಂಡ ಚಮತ್ಕಾರವೊಂದನ್ನು ಕಣ್ತುಂಬಿಕೊಂಡ ಬಗೆಗೆ ನನಗೊಂದು ಸಮಾಧಾನ ಕಡೆಗೆ.. ಕಾಡು ಕರಗುತ್ತಿರುವ ಹೊತ್ತಿನಲ್ಲಿ ಕಾಣೆಯಾಗುತ್ತಿರುವ ಇಂತಹ ಅಪರೂಪದ ವಿಸ್ಮಯಗಳನ್ನು ಕಾಪಿಟ್ಟುಕೊಳ್ಳುವ ಬಯಕೆಯೂ ಹೆಚ್ಚಾಯ್ತು.

ವಾಸ್ತವವಾಗಿ ಮಿಂಚುಹುಳುಗಳು ಅದ್ಭುತ ಜೀವಸೃಷ್ಟಿ. ಜೈವಿಕದೀಪ್ತಿಯ ಹಿನ್ನೆಲೆಯಲ್ಲಿ ಬೆಳಕು ಹೊತ್ತಿಸಿ ಕಾಡಕತ್ತಲನ್ನು ಬೆಳಗಬಲ್ಲ ಕೀಟಗಳಿವು. ‘ಫೋಟುರಿಸ್ ಲೂಸಿರೆಸೆನ್ಸ್’, ‘ಲ್ಯಾಂಪ್ರಿಸ್ ನಾಕ್ಟಿಲೂಕ’, ‘ಲೂಸಿಯೋಲ ಲ್ಯಾಟೆರಾಲಿಸ್’ ಮುಂತಾದ ವೈಜ್ಞಾನಿಕ ಹೆಸರುಗಳುಳ್ಳ ಸುಮಾರು ಎರಡು ಸಾವಿರ ಪ್ರಭೇದಗಳಲ್ಲಿ ಕಂಡುಬರುತ್ತವೆ. ಕೋಲಿಯಾಪ್ಟೀರಾ ವರ್ಗ ಮತ್ತು ಲ್ಯಾಂಪಿರಿಡೇ ಎಂಬ ಕುಟುಂಬಕ್ಕೆ ಸೇರಿದ ಉಷ್ಣ-ಸಮಶೀತೋಷ್ಣ ವಲಯದ ಪ್ರಮುಖ ದುಂಬಿಗಳಿವು.

ರೂಪ ಪರಿವರ್ತನೆಯ ವಿಶಿಷ್ಟ ವಿಧಾನದಲ್ಲಿ ಮೊಟ್ಟೆ, ಲಾರ್ವಾ, ಪ್ಯೂಪ ಮತ್ತು ವಯಸ್ಕಜೀವಿಗಳಾಗಿ ಸಾಗಿಬರುವ ಬಹುಹಂತಗಳ ಜೀವನಚಕ್ರ ಇವುಗಳದು. ಸುಮಾರಾಗಿ ಮೂರ‍್ನಾಲ್ಕು ವಾರಗಳಷ್ಟೇ ಮಿಂಚುಹುಳುಗಳು ಬದುಕಬಲ್ಲವು. ಆದರೆ ಕೆಲವು ಪ್ರಭೇದಗಳು ಆರು ತಿಂಗಳವರೆಗಿನ ಜೀವಿತಾವಧಿಯನ್ನೂ ಹೊಂದಿರುವ ಉದಾಹರಣೆಗಳಿವೆ. ತೇವಯುತ ಮಣ್ಣಿನಲ್ಲಿ ಮೊಟ್ಟೆಯನ್ನಿಟ್ಟು ಮರಿ ಮಾಡುತ್ತವೆ. ಲಾರ್ವಾಗಳು ಕೆಲವು ವಾರಗಳ ನಂತರ ಸಣ್ಣಕೀಟ, ಮೃದ್ವಂಗಿಗಳನ್ನು ತಿನ್ನುತ್ತಾ ವಯಸ್ಕಜೀವಿಯಾಗಿ ಮಾರ್ಪಡುತ್ತವೆ. ಕೆಲವೊಮ್ಮೆ ಶತ್ರುಗಳಿಂದ ಪಾರಾಗಲು ತಮ್ಮ ಮೈಬಣ್ಣ ಬದಲಾಯಿಸುವ ರಕ್ಷಣಾ ತಂತ್ರವನ್ನೂ ಅಳವಡಿಸಿಕೊಂಡಿರುತ್ತವೆ. ಇವುಗಳಿಗೆ ತೇವದ ವಾತಾವರಣದೊಟ್ಟಿಗೆ 15 ರಿಂದ 30 ಡಿಗ್ರಿ ಉಷ್ಣಾಂಶವು ಹಿತಕರ.

ಮಿಂಚುಹುಳುಗಳಿಗೊಂದು ಪರಿಸರಸ್ನೇಹಿ ಜೀವನಶೈಲಿ ಇದೆ. ಜೇನ್ನೊಣಗಳಂತೆಯೇ ಪರಾಗಸ್ಪರ್ಶಕ್ಕೆ ಇವುಗಳ ಕೊಡುಗೆ ಅಪಾರ. ಕೆಲವೊಮ್ಮೆ ಇವುಗಳ ಲಾರ್ವಾಗಳು ಸಾವಯವ ಪದಾರ್ಥಗಳನ್ನು ವಿಭಜಿಸಿ ಪ್ರಕೃತಿಯಲ್ಲಿ ಪೋಷಕಾಂಶಗಳ ಚಕ್ರೀಯ ಚಲನೆಗೂ ನೆರವಾಗುವುದಿದೆ. ಹಲವು ಬಗೆಯ ಪಕ್ಷಿಗಳು, ಬಾವಲಿ, ಜೇಡ ಮುಂತಾದವುಗಳಿಗೆ ಆಹಾರವಾಗಿಯೂ ಇವು ಆಹಾರ ಸರಪಳಿಯ ಕೊಂಡಿಯಲ್ಲಿ ಬಂಧಿಯಾಗುಳಿದಿವೆ.

ಜೈವಿಕದೀಪ್ತಿ...

ಜೀವಿಗಳು ತಮ್ಮೊಳಗೆ ಬೆಳಕನ್ನು ಉತ್ಪಾದಿಸುವಂತಹ ಒಂದು ವೈಶಿಷ್ಟ್ಯ ವಿದ್ಯಮಾನವೇ ಬಯೋಲುಮಿನೆಸೆನ್ಸ್ (ಜೈವಿಕದೀಪ್ತಿ). ಪ್ರಮುಖವಾಗಿ ಲೂಸಿಫೆರೇಸ್ ಕಿಣ್ವಗಳು ರಾಸಾಯನಿಕವಾದ ಲೂಸಿಫೆರಿನ್ ಮತ್ತು ಆಕ್ಸಿಜನ್ ನ ಉತ್ಕರ್ಷಣೆ ಮಾಡಿ ಬೆಳಕಿನೋತ್ಪತ್ತಿಗೆ ಕಾರಣವಾಗುತ್ತವೆ. ನೂರರಷ್ಟು ಶಕ್ತಿಯನ್ನು ಬೆಳಕಿನ ಉತ್ಪಾದನೆಗಾಗಿ ಉಪಯೋಗಿಸುವ ಮಿಂಚುಹುಳುಗಳಲ್ಲಿ ಉದರದ ಕೆಳಭಾಗದಲ್ಲೊಂದು ವಿಶಿಷ್ಟಾಂಗವಿದ್ದು, ಅದು ಕೆಲವು ರಾಸಾಯನಿಕ ಮತ್ತು ಕಿಣ್ವಗಳ ಸಹಾಯದಿಂದ ಬೆಳಕನ್ನು ಉತ್ಪಾದಿಸುತ್ತವೆ. ಮಿಂಚುಹುಳು ಹಲವು ಬಗೆಯಲ್ಲಿ ಜೈವಿಕದೀಪ್ತಿಯನ್ನು ಬಳಸಿಕೊಳ್ಳುವುದಿದೆ. ಪ್ರಮುಖವಾಗಿ ನಿಶಾಚರಿಗಳಾದ ಇವು ರಾತ್ರಿ ಸಂಗಾತಿ ಹುಡುಕಾಟ ಮತ್ತು ತಮ್ಮೊಟ್ಟಿಗಿರುವ ಇತರೆ ಸದಸ್ಯರೊಂದಿಗಿನ ಸಂವಹನ ಸಾಧನವಾಗಿ ಬೆಳಕನ್ನು ಹೊರಹೊಮ್ಮಿಸುತ್ತವೆ. ಶತ್ರುಗಳನ್ನು ಓಡಿಸಲು, ಆಹಾರವನ್ನು ಮತ್ತು ತಮ್ಮ ವಲಯವನ್ನು ಹುಡುಕಿಕೊಳ್ಳಲು, ಮುಂತಾಗಿ ಮಿಂಚುಹುಳುಗಳಲ್ಲಿ ಬೆಳಕು ಚಿಮ್ಮುವುದಿದೆ. ದೂರದ ಅಂತರಕ್ಕೆ ಸಂದೇಶ ಕಳಿಸುವುದು ಕೂಡ ಇವು ಬೆಳಕಿನ ಮೂಲಕವೇ. ಬೆಳಕು ಹೊಮ್ಮಿಸುವ ವಿಧಾನದಲ್ಲಿಯೂ ವೈವಿಧ್ಯತೆಯನ್ನು ತೋರುವಂತವು. ಮಿಂಚುಹುಳುಗಳ ಬೆರಗಿಗೆ ಕಾರಣವಾಗಿದ್ದು ಅವುಗಳ ಬೆಳಕನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ. ಕೆಲವೊಮ್ಮೆ ಸ್ವಿಚ್ ಆಫ್ ಮತ್ತು ಸ್ವಿಚ್ ಆನ್ ತಂತ್ರಗಳನ್ನು ಬಳಸುವಾಗ ನೋಡುವ ಕಣ್ಣುಗಳಿಗೆ ಹಬ್ಬ. ಕಾಡಿನೊಳಗೊಂದು ವಿದ್ಯುದ್ದೀಪಗಳ ಸಾಲು, ‘ಸೀರಿಯಲ್ ಸೆಟ್ಟಿನ’ ಕಲ್ಪನೆಯನ್ನು ಕಣ್ಣೆದುರು ತಂದು ಹೊಸದೊಂದು ಬೆಳಕಿನ-ಬೆಡಗಿನ ಲೋಕವನ್ನು ಅನಾವರಣಗೊಳಿಸುತ್ತವೆ. ಪ್ರತಿಕ್ಷಣಗಳನ್ನೂ ರೋಮಾಂಚನಗೊಳಿಸುತ್ತವೆ.

ನೈಸರ್ಗಿಕ ಆವಾಸ ನಾಶ

ಮಿಂಚುಹುಳುಗಳನ್ನೊಳಗೊಂಡ ಜೀವ ಸಮುದಾಯ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ- ಸವಾಲು ಎಂದರೆ ಜೀವಿಗಳ ನೈಸರ್ಗಿಕ ಆವಾಸದ ನಾಶ. ಪರಿಣಾಮವಾಗಿ ಮಿಂಚುಹುಳಗಳ ಸಂಖ್ಯೆಯೂ ದಿನೇದಿನೇ ಕ್ಷೀಣಿಸುತ್ತಿದೆ. ತೀವ್ರಗತಿಯ ಅರಣ್ಯನಾಶದ ಪರಿಣಾಮವಾಗಿ ಪರಿಸರಸೂಕ್ಷ್ಮ ಕೀಟಗಳಾಗಿರುವ ಮಿಂಚುಹುಳುಗಳ ಅಸ್ತಿತ್ವಕ್ಕೂ ಕುತ್ತು ಬಂದಿದೆ. ಮಾತ್ರವಲ್ಲ, ಹೊರಗಿನ ಕಣ್ಣು ಕೋರೈಸುವ ಕೃತಕ ವಿದ್ಯುದ್ದೀಪಗಳು ಮತ್ತು ಪ್ರಖರ ಬೆಳಕಿನ ಝಗಮಗಿಸುವಿಕೆಯಲ್ಲಿ ಮಿಂಚುಹುಳುಗಳ ದೀಪೋತ್ಪತ್ತಿ ಸಾಮರ್ಥ್ಯ ಕುಂದಿರುವ ಬಗ್ಗೆ ಅಧ್ಯಯನ ತಿಳಿಸುತ್ತದೆ. ಕೆಲವೆಡೆ ಕೀಟನಾಶಕ ಹಾಗೂ ರಾಸಾಯನಿಕಗಳ ಅತಿಯಾದ ಬಳಕೆ ಮತ್ತು ಪರಿಸರ ಮಾಲಿನ್ಯದ ಪರಿಣಾಮವೂ ಮಿಂಚುಹುಳುಗಳ ಉಳಿವಿಗೆ ಅಪಾಯವೊಡ್ಡಿವೆ.

ನಮ್ಮೊಟ್ಟಿಗಿರುವ ‘ಜೀವಪ್ರಭೇದಗಳ ಅಳಿವೆಂದರೆ ಅದು ನಮ್ಮದೇ ಅಳಿವಿನ ಕಣ್ಸನ್ನೆ’ ಎಂಬ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳದಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಕೀಟಗಳಿಲ್ಲದ ಜೀವಜಗತ್ತಿನಲ್ಲಿ ನಾವು ಮುಂದುವರೆಯಲಾರೆವು. ನಮ್ಮ ಯಾಂತ್ರಿಕತೆ ಮತ್ತು ಕೃತಕತೆಗಳು ಪ್ರಕೃತಿಯ ಆಶಯದ ವಿರುದ್ಧ ದಿಕ್ಕಿನಲ್ಲಿರುವ ಬಗ್ಗೆ ಬೇಗನೆ ಅರಿತುಕೊಳ್ಳಬೇಕು. ವಿಷಮಯ ಗಾಳಿ, ನೀರು, ಮಣ್ಣು ಇವು ಜೀವ ಪ್ರಭೇದಗಳನ್ನು ಬಲಿಪಡೆಯುತ್ತಿರುವ ಬಗ್ಗೆಯೂ ಎಚ್ಚರವಹಿಸಲೇಬೇಕು. ನಮ್ಮ ಉಳಿವಿಗಾಗಿಯಾದರೂ ಜೀವಚರಗಳ ಬದುಕಿಗೆ ಅನುವಾಗುವ ಬಗೆಯೊಂದನ್ನು ನಾವಿಲ್ಲಿ ತುರ್ತಾಗಿ ಯೋಚಿಸಬೇಕು ಮತ್ತು ಯೋಜಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.