ADVERTISEMENT

ನೀಳಮೂತಿಯ ಚೂಪುಕೋಡುಗಳ ಹಿರೊಲಾ ಜಿಂಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:46 IST
Last Updated 25 ಸೆಪ್ಟೆಂಬರ್ 2019, 19:46 IST
ಹಿರೊಲಾ
ಹಿರೊಲಾ   

ವಿಶ್ವದ ವಿವಿಧ ಭೂಭಾಗಗಳಲ್ಲಿ ವಿಸ್ತರಿಸುವ ಜಿಂಕೆ ಸಂತತಿಯಲ್ಲಿ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ. ಕೆಲವು ಜಿಂಕೆಗಳ ದೇಹರಚನೆ ಭಿನ್ನವಾಗಿರುತ್ತದೆ. ಹೀಗೆ ಭಿನ್ನ ಎನಿಸುವ ಜಿಂಕೆಗಳಲ್ಲಿ ಹಿರೊಲಾ (Hirola) ಕೂಡ ಒಂದು.
ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ಜಿಂಕೆಯ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬಿಟ್ರಗಸ್‌ ಹಂಟೇರಿ (Beatragus hunteri). ಇದು ಸಸ್ಯಾಹಾರಿ ಪ್ರಾಣಿಗಳ ಬೋವಿಡೇ (Bovidae) ಮತ್ತು ಅಲ್ಕೆಲಾಫಿನೇ (Alcelaphinae) ಉಪಕುಟುಂಬಕ್ಕೆ ಸೇರಿದೆ. ಇದನ್ನು ಅರ್ಟಿಯೊಡ್ಯಾಕ್ಟಲಾ (Artiodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ADVERTISEMENT

ನೋಡಿದ ಕೂಡಲೇ ಹಸು ಅಥವಾ ಎತ್ತಿನಂತೆ ಕಾಣುತ್ತದೆ. ಜಿಂಕೆಯಂತಹ ಕಪ್ಪುಬಣ್ಣದ ಆಕರ್ಷಕ ಕೋಡುಗಳನ್ನು ಹೊಂದಿದ್ದು, ತಳಭಾಗದಿಂದ ಮಧ್ಯಭಾಗದವರೆಗೆ ಸುರುಳಿಗಳಿರುತ್ತವೆ. ತುದಿಯಲ್ಲಿ ಚೂಪಾಗಿರುತ್ತವೆ. ಕಂದು ಬಣ್ಣದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕುದುರೆಯಂತೆ ನೀಳವಾದ ಮೂತಿ ಹೊಂದಿದ್ದು, ತಲೆಭಾಗ, ಮುಖ ಕುದುರೆ ತಲೆ ಭಾಗವನ್ನೇ ಹೋಲುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಎಲೆಯಾಕಾರದ ದೊಡ್ಡದಾದ ಕಿವಿಗಳು ಸದಾ ಸೆಟೆದುಕೊಂಡಿರುತ್ತವೆ. ಕಾಲುಗಳು ನೀಳವಾಗಿದ್ದು, ದೃಢವಾಗಿರುತ್ತವೆ. ಕಾಲಿನ ಕೆಳಭಾಗ ಕಪ್ಪುಬಣ್ಣದಲ್ಲಿರುತ್ತದೆ. ಹಣೆಯ ಮೇಲೆ ಬಿಳಿ ಬಣ್ಣದ ಪಟ್ಟಿ ಇದ್ದು, ಎರಡೂ ಕಣ್ಣುಗಳನ್ನು ಕೂಡಿರುವಂತೆ ರಚನೆಯಾಗಿದೆ.

ಎಲ್ಲಿದೆ?

ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಮಾತ್ರ ಕಾಣಸಿಗುವ ವಿಶೇಷ ಜಿಂಕೆ ಇದು. ಕೆನ್ಯಾ ಮತ್ತು ಸೊಮಾಲಿಯಾ ರಾಷ್ಟ್ರಗಳಲ್ಲಿ ಇದನ್ನು ಕಾಣಬಹುದು. ಹುಲ್ಲು ಬೆಳೆದಿರುವ ಬಯಲು ಪ್ರದೇಶ, ಕುರುಚಲು ಗಿಡಗಳು ಬೆಳೆದಿರುವ ಬಯಲು ಪ್ರದೇಶ, ಸವನ್ನಾ ‍ಪ್ರದೇಶ, ಮರಗಳು ಬೆಳೆದಿರುವ ಪ್ರದೇಶ ಮತ್ತು ಅರೆ ಮರಳುಗಾಡು ಪ್ರದೇಶದಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಮುಂಜಾನೆ ಮತ್ತು ಸಂಜೆ ಇದು ಹೆಚ್ಚು ಚುರುಕಾಗಿರುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾಗಿರುವ ಅವಧಿಯಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತದೆ. ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಜಿಂಕೆಗಳಲ್ಲಿ ಇದು ಕೂಡ ಒಂದು. 15–40 ಜಿಂಕೆಗಳು ಸೇರಿ ಗುಂಪು ರಚಿಸಿಕೊಂಡಿರುತ್ತವೆ. ಈ ಗುಂಪಿನಲ್ಲಿ ಮರಿಗಳು ಮತ್ತು ಹೆಣ್ಣು ಹಿರೊಲಾಗಳು ಇರುತ್ತವೆ. ಪ್ರಬಲ ಗಂಡು ಹಿರೊಲಾ ಗುಂಪಿನ ನೇತೃತ್ವ ವಹಿಸಿಕೊಂಡಿದ್ದು, ತನ್ನ ಗುಂಪಿನ ಗಡಿ ಗುರುತಿಸಿಕೊಂಡಿರುತ್ತದೆ. ಬೇರೊಂದು ಗಂಡು ಜಿಂಕೆಯನ್ನು ತನ್ನ ಗಡಿಯೊಳಗೆ ಸೇರಿಸಿಕೊಳ್ಳುವುದಿಲ್ಲ.

ಗಡಿ ಗುರುತಿಸಿಕೊಳ್ಳುವುದಕ್ಕಾಗಿ ಗಂಡು ಹಿರೊಲಾಗಳು ಕಾಳಗ ನಡೆಸುತ್ತವೆ. ಈ ಕಾಳಗದಲ್ಲಿ ಗಂಭೀರವಾಗಿ ಗಾಯಗೊಳ್ಳುತ್ತವೆ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತವೆ. ಇತರೆ ಜಿಂಕೆ ಪ್ರಭೇದಗಳಾದ ಆರಿಕ್ಸ್, ಗ್ರ್ಯಾಂಟ್ಸ್ ಗಸೆಲ್, ಬ್ರಚೆಲ್ಲಸ್‌ ಜೀಬ್ರಾ, ಕಾಡೆಮ್ಮೆ ಮತ್ತು ಆನೆಗಳ ಗುಂಪು ಇರುವ ಕಡೆಯೂ ಇದು ಇರುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಚಿಗುರು ಹುಲ್ಲನ್ನು ಮೇಯುವುದಕ್ಕೆ ಹೆಚ್ಚು ಇಷ್ಟಪಡುತ್ತದೆ. ವಿವಿಧ ಬಗೆಯ ಗಿಡಗಳ ಎಲೆಗಳು, ಹೂ, ಮೃದು ಕಾಂಡಗಳನ್ನೂ ತಿನ್ನುತ್ತದೆ. ಮರುಭೂಮಿ ಪ್ರದೇಶಗಳಲ್ಲಿ ವಾಸಿಸುವುದರಿಂದ ನೀರು ಕುಡಿಯದೇ ಹಲವು ದಿನಗಳ ವರೆಗೆ ಇರುವ ಸಾಮರ್ಥ್ಯ ಇದಕ್ಕಿದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿರುವ ಎಲ್ಲ ಹೆಣ್ಣು ಹಿರೊಲಾಗಳೊಂದಿಗೆ ಗಂಡು ಹಿರೊಲಾ ಜೊತೆಯಾಗುತ್ತದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಸುಮಾರು 7 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್‌ (Calf) ಎನ್ನುತ್ತಾರೆ. ಮರಿ ಜನಿಸಿದ ಕೆಲವೇ ನಿಮಿಷಗಳಲ್ಲೇ ಎದ್ದು ಓಡಾಡುತ್ತದೆ. ಮರಿಯ ರಕ್ಷಣೆ ಮತ್ತು ಆರೈಕೆಗಾಗಿ ಹೆಣ್ಣು ಹಿರೊಲಾ ಎರಡು ತಿಂಗಳುಗಂಪು ಬಿಟ್ಟು ಜೀವಿಸುತ್ತದೆ. ಪೊದೆಗಳ ಮಧ್ಯೆ ಮರಿಯನ್ನು ಬಚ್ಚಿಟ್ಟು ಹಾಲುಣಿಸಿ ಜೋಪನವಾಗಿ ಬೆಳೆಸುತ್ತದೆ.

ಎರಡು ತಿಂಗಳ ನಂತರ ಮರಿ ತಾಯಿಯೊಂದಿಗೆ ಗುಂಪು ಸೇರಿಕೊಳ್ಳುತ್ತದೆ. ಹೆಣ್ಣು ಮರಿ 2–3 ವರ್ಷಗಳ ನಂತರ, ಗಂಡು ಮರಿ 3–4 ವರ್ಷಗಳ ನಂತ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಗಂಡು ಹಿರೊಲಾವನ್ನು ಬಕ್ ಎಂದು, ಹೆಣ್ಣನ್ನು ಡೊ ಎಂದು ಕರೆಯುತ್ತಾರೆ.

* ಪ್ರಸ್ತುತ 500 ಹಿರೊಲಾಗಳು ಮಾತ್ರ ಉಳಿದಿವೆ.

* 1980ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಇದರ ಸಂತತಿ ಶೇ 85–90ರಷ್ಟು ಕ್ಷೀಣಿಸಿತು.

* ಹಿರೊಲಾ ಸಂತತಿ ರಕ್ಷಣೆಗೆ ಕೀನ್ಯಾ ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.