ADVERTISEMENT

ಜೀವವೈವಿಧ್ಯ ವಾಪಸ್‌ ಬರುವುದೇ?

ಶೇಷಾದ್ರಿ ರಾಮಸ್ವಾಮಿ
Published 29 ಮಾರ್ಚ್ 2019, 20:00 IST
Last Updated 29 ಮಾರ್ಚ್ 2019, 20:00 IST
ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ
ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ   

ಮರಗಳನ್ನು ಕಳೆದುಕೊಳ್ಳುವುದು ಎಂದರೆ ಪ್ರದೇಶದ ತಾಪಮಾನ ಹೆಚ್ಚಿಸಿಕೊಂಡಂತೆ. ಇದರಿಂದ ನಗರ ಪ್ರದೇಶ ಎನ್ನುವುದು ಉಷ್ಣ ನಡುಗಡ್ಡೆ ಮಾಡಿಕೊಂಡಂತೆ. ಬರಿಯ ರಸ್ತೆ ಅಗಲೀಕರಣಕ್ಕೆ ಅಥವಾ ಸಾರಿಗೆ ಸಂಪರ್ಕದ ಒಂದೇ ಉದ್ದೇಶದಿಂದ ಮರಗಳ ಬದುಕಿಗೆ ಕೊಡಲಿ ಕೊಡುವುದಾದರೆ ಅದರಿಂದ ಆಗುವ ನಷ್ಟಗಳನ್ನು ಕೂಡ ಲೆಕ್ಕ ಹಾಕಬೇಕಾಗುತ್ತದೆ.

ಮೇಲ್ಸೇತುವೆಯಂಥ ರಸ್ತೆಗಳನ್ನು ರೂಪಸಿಕೊಂಡರೂ ಅದರಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಕೂಡ ಉಂಟಾಗುತ್ತದಲ್ಲವೇ? ಇದು ನೇರವಾಗಿ ಪರಿಸರದಲ್ಲೇ ಬದುಕುತ್ತಿರುವ ಮಾನವ ಸಂತತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ.

ಪರಿಸರದ ಸಂಪನ್ಮೂಲವನ್ನು ಮೊಟಕುಗೊಳಿಸುವುದರಿಂದ ದೈಹಿಕವಾದ ಮತ್ತು ಮಾನಸಿಕವಾದ ಅಸ್ವಸ್ಥತೆ ನಗರದ ಜನಸಂಖ್ಯೆಯ ಮೇಲೆ ಖಂಡಿತ ಆಗುತ್ತದೆ. ಐಹಿಕ ಬದುಕಿಗಾಗಿ ಅಭಿವೃದ್ಧಿಯ ಉಮೇದಿಯಲ್ಲಿ ನಗರದ ಕಬ್ಬನ್‌ ಪಾರ್ಕ್‌ನ ಜೀವವೈವಿಧ್ಯ ವಿನಾಶವಾದರೆ ಮುಂದೊಂದು ದಿನ ಬಹುದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ ಎನ್ನುವ ಎಚ್ಚರ ಇರುವುದು ಒಳ್ಳೆಯದು.

ADVERTISEMENT

ಈಗ ನಗರದಲ್ಲಿ ಆಗುತ್ತಿರುವ ವಾಹನದ ದಟ್ಟಣೆಯನ್ನು ನಿಯಂತ್ರಿಸಲು ರಸ್ತೆಗಳಿಗಾಗಿ ಮೇಲ್ಸೇತುವೆಯಂಥ ಪರಿಹಾರ ಹುಡುಕುವುದು ಕೇವಲ ತಾತ್ಕಾಲಿಕ. ಯಾವತ್ತೂ ಸಮಸ್ಯೆಯಾಗಿಯೇ ಉಳಿದುಬಿಡುತ್ತಿರುವ ಇಂಥ ಸಮಸ್ಯೆಗಳಿಗೆ ತುಂಬ ದೂರದೃಷ್ಟಿಯ ಮತ್ತು ಅತ್ಯಂತ ಸೂಕ್ತವಾದ ಪರ್ಯಾಯ ಯೋಜನೆಗಳ ವ್ಯವಸ್ಥೆ ಮಾಡಿಕೊಳ್ಳುವುದು ನಿಜವಾದ ವೈಜ್ಞಾನಿಕ ಮನೋಧರ್ಮವಾಗಬಲ್ಲುದು.

ಎತ್ತರದ ಮೇಲ್ಸೇತುವೆ ರೂಪಿಸುವುದರಿಂದ ಈಗ ಇಷ್ಟಾದರು ಒಂದೆಡೆ ಉಳಿದುಕೊಂಡಿರುವ ಹಸಿರು ವಲಯವನ್ನು ಮತ್ತಷ್ಟು ತುಣುಕುಗಳಾಗಿಸಿದಂತಾಗುತ್ತದೆ. ಮಳೆ ನೀರು ಅಂತರ್ಜಲ ಸೇರುವ ಪ್ರಕ್ರಿಯೆಗೆ ದೊಡ್ಡ ಅಡ್ಡಿಯೂ ಆಗುತ್ತದೆ. ಒಮ್ಮೆ ಕಳೆದುಕೊಂಡ ಜೀವವೈವಿಧ್ಯ ಮತ್ತು ಹಸಿರು ವಾಪಸ್‌ ಆಗಿಸಿಕೊಳ್ಳುವುದು ಸಾಧ್ಯವೇ?

ನವಿರಾದ ವಿಶೇಷ ವಿವರಣೆಗಳನ್ನು ಒಳಗೊಂಡ ನಗರ ರಸ್ತೆ ನಿರ್ವಹಣೆ (Tender S.U.R.E (Specifications for Urban Roads Execution) 2011ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿತು. ಇದು ರಸ್ತೆ ಛೇದಕ ಅಭಿವೃದ್ಧಿ, ವಿದ್ಯುತ್‌, ನೀರು, ಒಳಚರಂಡಿ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕಕ್ಕೆ ಅನುಕೂಲವಾಗುವಂತೆ ಪಾದಚಾರಿ ಮಾರ್ಗದ ಅಡಿಯಲ್ಲಿ ವ್ಯವಸ್ಥೆ ಕಲ್ಪಿಸುವ ರಸ್ತೆ ಸುಧಾರಣೆಯ ಪ್ರಯತ್ನ.

ಇದರ ಜೊತೆಗೆ ಮರ ಸಾಲುಗಳಿಗೆ ಮೀಸಲು ಜಾಗದ ವ್ಯವಸ್ಥೆಯೂ ಮಾಡಲಾಯಿತು. ಆದರೆ ಬಹುತೇಕ ಅಂಥ ಮೀಸಲು ಜಾಗಗಳು ಈಗ ಕಸ ಎಸೆಯುವ ತೊಟ್ಟಿಗಳಾಗಿವೆ. ಇದರಿಂದ ಅದಷ್ಟು ನೆಲ ಮಣ್ಣಲ್ಲಿ ಬೆರೆಯದ ಕಸದಿಂದ ಬಂಜರಾಗುವಂಥ ಸ್ಥಿತಿ. ಗುಟ್ಟಹಳ್ಳಿಯ ರಸ್ತೆಯಲ್ಲಿ ನಡೆದು ಹೋಗುವಾಗ ಒಂದು ಪುಟ್ಟ ತೊಟ್ಟಿಯ ಬಳಿ ಯಾರೋ ಸಿಂಗಪುರ್‌ ಚೆರಿ ಸಸಿಯುಳ್ಳ ಕುಂಡವೊಂದನ್ನು ಎಸೆದುಬಿಟ್ಟಿದ್ದರು. ನಾನು ಅದನ್ನು ಎತ್ತಿಕೊಂಡು ನನ್ನ ಓಣಿಯ ಹುಡುಗರ ಮೂಲಕ ನನ್ನದೇ ಮನೆಯ ಮುಂದೆ ನೆಟ್ಟೆ. ಈಗದು ಬೆಳೆದಿದೆ. ಓಣಿಯ ಹುಡುಗರು ತಮ್ಮ ಸ್ನೇಹಿತರನ್ನು ಕರೆತಂದು ಅದನ್ನು ತೋರಿಸಿ ಖುಷಿ ಪಡುತ್ತಾರೆ. ಆ ಹುಡುಗರು ಈಗ ಅದನ್ನೊಂದು ಹಕ್ಕಿಗಳ ಕ್ಯಾಂಟಿನ್‌ ಆಗಿಸಿದ್ದಾರೆ.

ಅರಣ್ಯಗಳು ಎಂದರೆ ಸ್ಪಾಂಜ್‌ ಇದ್ದ ಹಾಗೆ. ಮಳೆ ನೀರನ್ನು ಅವು ಎಳೆದುಕೊಂಡು ನಿಧಾನಕ್ಕೆ ಬಿಡುಗಡೆ ಮಾಡುತ್ತವೆ. ಆ ಮೂಲಕ ನಮ್ಮ ನದಿಗಳು ಸದಾ ಕಾಲ ಹರಿಯುವ ಹಾಗೆ ನೋಡಿಕೊಳ್ಳುತ್ತವೆ. ಹೀಗೊಂದು ಜೀವತೋಟ ನಮ್ಮ ಸುಂದರ ಗ್ರಹದಲ್ಲಿ ಸುಸ್ಥಿರವಾಗಿ ಅತ್ಯಂತ ಸೊಗಸಾಗಿ ವಿಕಾಸಗೊಂಡಿದೆ. ಇದನ್ನು ತುಂಬ ಅಂತಃಕರಣದಿಂದ ಕಾಣಬೇಕಿದೆ.

(ಲೇಖಕರು ಜೀವವೈವಿಧ್ಯ ಅಧ್ಯಯನ ನಿರತರು ಮತ್ತು ಮರಗಳ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.