ADVERTISEMENT

World Environment Day| ಸಮೃದ್ಧ ಹಸಿರು: ವನ್ಯಜೀವಿಗಳ ಸಂತತಿಯೂ ವೃದ್ಧಿ

ಕಪ್ಪತಗುಡ್ಡದಲ್ಲಿ ಕಡಿಮೆಯಾದ ಮಾನವ ಹಸ್ತಕ್ಷೇಪ– ಹೆಚ್ಚುತ್ತಿದೆ ವನ ಸಂಪತ್ತು

ಸತೀಶ ಬೆಳ್ಳಕ್ಕಿ
Published 5 ಜೂನ್ 2022, 5:12 IST
Last Updated 5 ಜೂನ್ 2022, 5:12 IST
EnvironmentDay.eps
EnvironmentDay.eps   

ಗದಗ: ವನ್ಯಜೀವಿ ಸಂರಕ್ಷಣಾಧಾಮ ಎಂದು ಘೋಷಿಸಿದ ನಂತರ ಕಪ್ಪತಗುಡ್ಡದ ವನ್ಯ ಸಂಪತ್ತು ವೃದ್ಧಿಸಿದ್ದು, ಜಿಲ್ಲೆಯ ಹವಾಮಾನದಲ್ಲೂ ಗುಣಾತ್ಮಕ ಬದಲಾವಣೆ ಕಂಡುಬಂದಿದೆ. ಉತ್ತಮ ಗುಣಮಟ್ಟದ ಗಾಳಿಯನ್ನು ಹೊಂದಿರುವ ನಗರಗಳ ಪೈಕಿ ಗದಗ ಕೂಡ ಮುಂಚೂಣಿಯಲ್ಲಿದೆ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಿಂತಿದೆ. ಮನುಷ್ಯ ಸಂಚಾರ ಕಡಿಮೆ ಆಗಿದೆ. ಇದರಿಂದಾಗಿ ಕಪ್ಪತಗುಡ್ಡದಲ್ಲಿ ಕತ್ತೆಕಿರುಬ, ತೋಳ, ಚಿರತೆ, ಕಾಡುಕುರಿ, ನವಿಲು ಮೊದಲಾದ ಪ್ರಾಣಿಗಳ ಸಂತತಿ ಹೆಚ್ಚಾಗಿದೆ. ಜತೆಗೆ ಔಷಧೀಯ ಸಸ್ಯಗಳು ಕಂಗೊಳಿಸುತ್ತಿರುವುದು ಕಪ್ಪತಗುಡ್ಡದ ಸಮೃದ್ಧ ಬೆಳವಣಿಗೆಯನ್ನು ಸೂಚಿಸುತ್ತದೆ.

‘ಕೆಲವು ವರ್ಷಗಳಿಂದ ಈಚೆಗೆ ಕಪ್ಪತಗುಡ್ಡದಲ್ಲಿ ಹಸಿರಿನ ಸೊಬಗು ಹೆಚ್ಚಾಗಿದೆ. ಮಾನವ ಹಸ್ತಕ್ಷೇಪ ಕಡಿಮೆ ಆಗಿರುವುದರಿಂದ ಈ ಗುಣಾತ್ಮಕ ಬೆಳವಣಿಗೆ ಕಂಡುಬಂದಿದೆ. ಪ್ರಾಣಿ ಹಾಗೂ ಪಕ್ಷಿ ಸಂಕುಲದ ಹೆಚ್ಚಳಕ್ಕೆ ಹಣ್ಣಿನ ಗಿಡಗಳನ್ನು ಬೆಳೆಸುವುದು, ಕುಡಿಯುವ ನೀರಿನ ಕೊಳ ನಿರ್ಮಾಣ ಸೇರಿದಂತೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ವೈಲ್ಡ್‌ಲೈಫ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌ ಅನುಷ್ಟಾನಗೊಳಿಸುವ ಮೂಲಕ ಕಪ್ಪತಗುಡ್ಡದಲ್ಲಿನ ವನ್ಯ ಹಾಗೂ ಸಸ್ಯ ಸಂಪತ್ತಿನ ವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎನ್ನುತ್ತಾರೆ ಡಿಸಿಎಫ್‌ ದೀಪಿಕಾ
ಭಾಜಪೈ.

ADVERTISEMENT

‘ನೀರು ಹಾಗೂ ಸಸ್ಯ– ಹುಲ್ಲಿನ ಪ್ರಭೇದ ಹೆಚ್ಚಾದಂತೆ ಸಸ್ಯಾಹಾರಿ ಪ್ರಾಣಿಗಳ ಸಂತತಿ ಹೆಚ್ಚುತ್ತದೆ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾದರೆ ಅಲ್ಲಿ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯೂ ಬೆಳೆಯುತ್ತದೆ. ಈ ಬಗೆಯ ಪ್ರಾಕೃತಿಕ ಸರಪಳಿ ಕಪ್ಪತಗುಡ್ಡದಲ್ಲಿ ಬಲಗೊಳ್ಳುತ್ತಿದೆ. ಇರುವ ಅರಣ್ಯ ಸಂಪತ್ತನ್ನೇ ಜತನದಿಂದ ಕಾಪಾಡಿಕೊಂಡು ಬರುತ್ತಿರುವುದರಿಂದ ಈ ಬದಲಾವಣೆ ಕಂಡುಬಂದಿದೆ’ ಎನ್ನುತ್ತಾರೆ ಗದಗ ಆರ್‌ಎಫ್‌ಒ ರಾಜು ಗೋಂದಕರ.

‘ಕಪ್ಪತಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿ ಆತಂಕ ಕಾಡುತ್ತದೆ. ಕೆಲವು ಕಿಡಿಗೇಡಿಗಳು ಬೇಕಂತಲೇ ಅರಣ್ಯಕ್ಕೆ ಬೆಂಕಿ ಇಡುತ್ತಾರೆ. ಬೆಂಕಿಯಿಂದ ಕಾಡನ್ನು ರಕ್ಷಿಸುವುದೇ ದೊಡ್ಡ ಸವಾಲು. ಉಳಿದ ಅವಧಿಯಲ್ಲಿ ಕಪ್ಪತಗುಡ್ಡ ಹಸಿರಿನಿಂದ ಕಂಗೊಳಿಸುತ್ತದೆ. ವೈಲ್ಡ್‌ ಲೈಫ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌ ಅನುಷ್ಟಾನಗೊಂಡರೆ ಕಪ್ಪತಗುಡ್ಡವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಬಹುದು’ ಎನ್ನುತ್ತಾರೆ ಮುಂಡರಗಿ ಆರ್‌ಎಫ್‌ಒ ಪ್ರದೀಪ್‌ ಪವಾರ.

‘ಒಂದೇ ಭೂಮಿ’ ಘೋಷ ವಾಕ್ಯದ ಅಡಿಯಲ್ಲಿ ಈ ಬಾರಿಯ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಅದರಂತೆ, ಪ್ರಕೃತಿಯ ಜತೆಗಿನ ಸಹಬಾಳ್ವೆಯಿಂದಾಗಿ ಕಪ್ಪತಗುಡ್ಡದಲ್ಲಿ ಹಸಿರು ನಳನಳಿಸುತ್ತಿದೆ. ವನ್ಯಜೀವಿಗಳ ಸಂತತಿ ವೃದ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.