ADVERTISEMENT

World Environment Day| ಕಾಡಿಗೆ ಕಂಟಕ ಲಂಟನಾ ತೆರವಿಗೆ ಕಸರತ್ತು

ಚಾಮರಾಜನಗರ: ಸಂರಕ್ಷಿತ ಅರಣ್ಯದಲ್ಲಿ ಕಳೆ ಗಿಡದ ಹಾವಳಿ,

ಸೂರ್ಯನಾರಾಯಣ ವಿ
Published 5 ಜೂನ್ 2022, 5:14 IST
Last Updated 5 ಜೂನ್ 2022, 5:14 IST
ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಲಂಟನಾ ತೆರವುಗೊಳಿಸಿ ಸ್ವಚ್ಛಮಾಡಿರುವುದು
ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಲಂಟನಾ ತೆರವುಗೊಳಿಸಿ ಸ್ವಚ್ಛಮಾಡಿರುವುದು   

ಚಾಮರಾಜನಗರ: ಭೌಗೋಳಿಕವಾಗಿ ಶೇ 48ರಷ್ಟು ಹಸಿರನ್ನು ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರದ ಅರಣ್ಯಕ್ಕೆ ಕಂಟಕವಾಗುತ್ತಿರುವ ಕಳೆಗಿಡ ಲಂಟಾನದ ತೆರವಿಗೆ ಅರಣ್ಯ ಇಲಾಖೆ ಹಲವು ಕಸರತ್ತು ನಡೆಸುತ್ತಿದೆ.

ವನ್ಯಸಂಕುಲ, ಆಹಾರ ಸರಪಣಿಗೆ ಅಡ್ಡಿಯಾಗಿರುವ ಲಂಟಾನವನ್ನು ತೆರವುಗೊಳಿಸಲು ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ, ಉದ್ಯೋಗ ಖಾತ್ರಿ ಯೋಜನೆ ಹಾಗೂ ಸರ್ಕಾರದ ಅನುದಾನ ಬಳಸುತ್ತಿದೆ. ವಿನೂತನ ಪ್ರಯೋಗಗಳನ್ನೂ ನಡೆಸುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರ್ಧದಷ್ಟು ಭಾಗ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮಗಳಲ್ಲಿ ಲಂಟಾನದ ಸಮಸ್ಯೆ ಇದೆ.

ADVERTISEMENT

ಬಂಡೀಪುರ ಹಾಗೂ ಬಿಆರ್‌ಟಿ ಅರಣ್ಯದಲ್ಲಿ ಶೇ 65ರಿಂದ 70ರಷ್ಟು ಭಾಗವನ್ನು ಕಳೆ ಸಸ್ಯ ಆವರಿಸಿದೆ. ಬಿಆರ್‌ಟಿ ಪ್ರದೇಶವೊಂದರಲ್ಲೇ 20 ಸಾವಿರ ಹೆಕ್ಟೇರ್‌ನಲ್ಲಿ ಲಂಟನಾ ಹರಡಿದೆ. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶೇ 35ರಷ್ಟು ಪ್ರದೇಶದಲ್ಲಿ ಸೊಂಪಾಗಿ ಬೆಳೆದಿದೆ.

ಆಹಾರ ಸರಪಣಿಗೆ ತೊಂದರೆ: ತೇವಾಂಶ ಇರುವೆಡೆ ಹುಲುಸಾಗಿ ಬೆಳೆಯುವ ಲಂಟಾನ, ಪರಿಸರದ ಆಹಾರ ಸರಪಣಿಗೆ ಬಲವಾದ ಏಟು ನೀಡುತ್ತಿದೆ.

ಅದು ಇರುವಲ್ಲಿ ಹುಲ್ಲು, ಬಿದಿರು, ಸಣ್ಣ ಸಸ್ಯಗಳು ಬೆಳೆಯುವುದಿಲ್ಲ. ಆನೆ, ಜಿಂಕೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಎದುರಾಗುತ್ತದೆ. ಜಿಂಕೆಯಂತಹ ಬಲಿ ಪ್ರಾಣಿಗಳು ಇಲ್ಲದಿದ್ದರೆ, ಹುಲಿ, ಚಿರತೆಯಂತಹ ಮಾಂಸಹಾರಿ ಪ್ರಾಣಿಗಳ ಇರುವಿಕೆಯೂ ಕಡಿಮೆಯಾಗುತ್ತದೆ.

ಲಂಟನಾದ ಕಾರಣದಿಂದ ಬಿಆರ್‌ಟಿ, ಬಂಡೀಪುರ ಅರಣ್ಯದ ಕೋರ್‌ ವಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿರು ಮೇವು ಲಭ್ಯವಿಲ್ಲ ಎಂದು ಇಲಾಖೆಯ ತಳಮಟ್ಟದ ಸಿಬ್ಬಂದಿ ಹೇಳುತ್ತಾರೆ.

ಅರಣ್ಯ ಇಲಾಖೆ ಪ್ರತಿ ವರ್ಷ ಬಿದಿರು, ಹುಲಿನ ಬೀಜ ಬಿತ್ತನೆ, ನಾಟಿ ಮಾಡಿದರೂ ಕಳೆ ಗಿಡಗಳಿಂದಾಗಿ ಬೆಳೆಯುತ್ತಿಲ್ಲ. ಲಂಟಾನ ತೆರವುಗೊಳಿಸುವುದೊಂದೇ ಪರಿಹಾರವೆಂಬ ಕಾರಣಕ್ಕೆ ಇಲಾಖೆ, ಲಂಟಾನ ನಿರ್ಮೂಲನೆಗೂ ಆದ್ಯತೆ ನೀಡುತ್ತಿದೆ.

ಲಂಟಾನ ತೆರವುಗೊಳಿಸಿ, ಹುಲ್ಲುಗಾವಲು ನಿರ್ಮಿಸುವ ಯೋಜನೆ ಜಾರಿಗೊಳಿಸಿದೆ.ಕಳೆದ ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲೂ ಸ್ಥಳೀಯ ಕಾರ್ಮಿಕರನ್ನು ಬಳಸಿ ಲಂಟಾನ ಕೀಳಲಾಗುತ್ತಿದೆ. ಕಳೆದ ವರ್ಷ ಬಿಆರ್‌ಟಿ, ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಕಳೆ ಗಿಡ ತೆರವುಗೊಳಿಸಲಾಗಿದೆ. ಅಲ್ಲಿ ಹುಲ್ಲಿನ ಬೀಜ ಬಿತ್ತನೆ ಮಾಡಲಾಗಿದೆ.

ಎನ್‌ಜಿಒಗಳ ನೆರವು: ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಕೆಲವು ಸೇವಾ ಸಂಸ್ಥೆಗಳು ಕೂಡ ಲಂಟಾನ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಲಂಟಾನದ ಕಾಂಡ, ರೆಂಬೆ ಕೊಂಬೆಗಳನ್ನು ಬಳಸಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಕೆಲಸವೂ ಜಿಲ್ಲೆಯಲ್ಲಿ ನಡೆಯುತ್ತಿದೆ.

ಅಶೋಕಾ ಟ್ರಸ್ಟ್‌ ಫಾರ್‌ ರೀಚರ್ಚ್‌ ಇನ್‌ ಇಕಾಲಜಿ ಅಂಡ್‌ದ ಎನ್ವಿರಾನ್‌ಮೆಂಟ್‌ (ಏಟ್ರೀ) ಸಂಸ್ಥೆಯು ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗೊರಸಾಣೆಯಲ್ಲಿ ಲಂಟಾನದಿಂದ ಪೀಠೋಪಕರಣಗಳು, ಅಲಂಕಾರಿಕ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದೆ. ಡಿಯರ್‌ ಹನಿ ಫೌಂಡೇಷನ್‌ ಸಂಸ್ಥೆಯು ಸ್ಥಳೀಯರ ನೆರವಿನಿಂದ ಕೊಂಬುಡಿಕ್ಕಿ ಗ್ರಾಮದಲ್ಲಿ ಲಂಟಾನ, ಸೀಮೆತಂಗಡಿ ಗಿಡದಿಂದ ಜೇನಿನ ಪೆಟ್ಟಿಗೆ ತಯಾರಿಸುತ್ತಿದೆ. ಬಿಆರ್‌ಟಿ ವ್ಯಾಪ್ತಿಯ ಬೆಲವತ್ತದಲ್ಲಿ ಕರಕುಶಲಿಗರ ತಂಡವೊಂದು ಲಂಟಾನದಿಂದ ಗೃಹೋಪಯೋಗಿ, ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದೆ.

ಬಿಆರ್‌ಟಿಯಲ್ಲಿ ವಿನೂತನ ಪ್ರಯತ್ನ

ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ಲಂಟಾನ ತೆರವುಗೊಳಿಸಲು ಇಲಾಖೆಯು ‘ದಿ ರಿಯಲ್‌ ಎಲಿಫೆಂಟ್‌ ಕಲೆಕ್ಟಿವ್‌’ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

‘ಬೆಟ್ಟದ ವ್ಯಾಪ್ತಿಯ 100 ಹೆಕ್ಟೇರ್‌ ಪ್ರದೇಶದ ವ್ಯಾಪ್ತಿಯಲ್ಲಿ ಸಂಸ್ಥೆಯು ಯಂತ್ರಗಳು ಹಾಗೂ ಸ್ಥಳೀಯರ ನೆರವಿನೊಂದಿಗೆ ತೆರವು ಕಾರ್ಯ ಆರಂಭಿಸಿದೆ. ಅದನ್ನು ಬುಡ ಸಮೇತ ಕೀಳುವ ಯಂತ್ರ ಮುಂದೆ ಬರಲಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯೋಜನಾ ನಿರ್ದೇಶಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚು ಯಂತ್ರಗಳನ್ನು ಬಳಸುವುದರಿಂದ ಅರಣ್ಯಕ್ಕೇ ತೊಂದರೆ. ಹುಲ್ಲು, ಸಣ್ಣ ಪುಟ್ಟ ಗಿಡಗಳಿಗೆ ಹಾನಿಯಾಗುತ್ತದೆ. ಗಿಡವನ್ನು ಒಮ್ಮೆ ತೆರವುಗೊಳಿಸಿದರೆ ಕೆಲಸ ಮುಗಿಯುವುದಿಲ್ಲ. ಮೂರು ವರ್ಷ ಸತತವಾಗಿ ತೆರವುಗೊಳಿಸಬೇಕು’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜಿ.ಮಲ್ಲೇಶಪ್ಪ ಅಭಿಪ‍್ರಾಯಪಟ್ಟರು.

---

ಬಂಡೀಪುರದ 12 ಸಾವಿರ ಹೆಕ್ಟೇರ್‌ನಲ್ಲಿ ನರೇಗಾ ಅಡಿ ಲಂಟಾನ ತೆರವುಗೊಳಿಸಲು ಉದ್ದೇಶಿಸಿದ್ದು, ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದೇವೆ
- ರಮೇಶ್‌ ಕುಮಾರ್‌, ಹುಲಿಯೋಜನೆ ನಿರ್ದೇಶಕ

--

ಲಂಟಾನ ತೆರವುಗೊಳಿಸುವುದು ಅತ್ಯಂತ ಅಗತ್ಯ. ಯಂತ್ರೋಪಕರಣಗಳ ಬದಲು ಸ್ಥಳೀಯರನ್ನೇ ಬಳಸಿ ತೆರವುಗೊಳಿಸುವುದು ಹೆಚ್ಚು ಸೂಕ್ತ
- ಜಿ.ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ

--

ಪ್ರಾಯೋಗಿಕವಾಗಿ 100 ಹೆಕ್ಟೇರ್‌ ಪ್ರದೇಶದಲ್ಲಿ ಲಂಟಾನ ತೆಗೆಯಲಾಗುತ್ತಿದೆ. ಸಾಧಕ ಬಾಧಕಗಳನ್ನು ಪರಿಶೀಲಿಸಿ ಬೇರೆ ಕಡೆಗೆ ವಿಸ್ತರಿಸಲಾಗುವುದು
- ಡಾ.ಜಿ.ಸಂತೋಷ್‌ಕುಮಾರ್, ಬಿಆರ್‌ಟಿ ಹುಲಿಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.