ADVERTISEMENT

ಅಂಡಮಾನ್‌ ನಿಕೋಬಾರ್‌ ಬಳಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿ: ಪರಿಣಾಮಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2021, 9:54 IST
Last Updated 30 ನವೆಂಬರ್ 2021, 9:54 IST
ಹವಾಮಾನದ ಉಪಗ್ರಹ ಚಿತ್ರ (ಚಿತ್ರ ಕೃಪೆ: ಭಾರತೀಯ ಹವಾಮಾನ ಇಲಾಖೆ)
ಹವಾಮಾನದ ಉಪಗ್ರಹ ಚಿತ್ರ (ಚಿತ್ರ ಕೃಪೆ: ಭಾರತೀಯ ಹವಾಮಾನ ಇಲಾಖೆ)   

ನವದೆಹಲಿ: ಅಂಡಮಾನ್‌ ನಿಕೋಬಾರ್‌ಗೆ ಹೊಂದಿಕೊಂಡಂತಿರುವ ದಕ್ಷಿಣ ಥಾಯ್ಲೆಂಡ್‌ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಅಂಡಮಾನ್‌ ನಿಕೋಬಾರ್‌, ಉತ್ತರ ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಮುಂದಿನ 12 ಗಂಟೆಗಳಲ್ಲಿ ಅಂಡಮಾನ್‌ ನಿಕೋಬಾರ್‌ನಲ್ಲಿಯೂ ಕಡಿಮೆ ಒತ್ತಡ ಪ್ರದೇಶ ಉಂಟಾಗಲಿದೆ. ನಂತರ ಪಶ್ಚಿಮ-ವಾಯವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ.

ಡಿಸೆಂಬರ್ 2ರ ವೇಳೆಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಇದಾದ ನಂತರ ವಾಯುವ್ಯಕ್ಕೆ ಚಲಿಸಿ, ಡಿಸೆಂಬರ್ 4 ರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ - ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ADVERTISEMENT

ಎಲ್ಲೆಲ್ಲಿ ಯಾವಾಗ ಮಳೆ?

ನ.30, ಡಿ.1 ರಿಂದ 2: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಸಾಧಾರಣದೊಂದಿಗೆ, ಭಾರಿ ಮಳೆಯಾಗಲಿದೆ.

ಡಿ. 3: ಸಂಜೆ ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾದ ಕೆಲವೆಡೆ ಸಾಧಾರಣ, ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಡಿ: 4: ಒಡಿಶಾದ ಬಹುತೇಕ ಭಾಗಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಮತ್ತು ಉತ್ತರ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ

ಡಿ.5 ರಿಂದ 6: ಪಶ್ಚಿಮ ಬಂಗಾಳ, ಉತ್ತರ ಒಡಿಶಾದಾದ್ಯಂತ ಭಾರಿ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚಿಸಲಾಗಿದೆ.

ಫಸಲು ರಕ್ಷಣೆಗೆ ಸೂಚನೆ

ಮುಂದಿನ ವಾರದಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಒಡಿಶಾ ಸರ್ಕಾರವು ಫಸಲು ರಕ್ಷಣೆ ಆದ್ಯತೆ ನೀಡಿದೆ. ಭತ್ತದ ಕೊಯ್ಲನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.