ADVERTISEMENT

ಒಜೋನ್‌‌ ದಿನ ಆಚರಣೆಗಷ್ಟೇ ಸೀಮಿತವಾಗದಿರಲಿ...

ರಾಜು ಭೂಶೆಟ್ಟಿ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
   

ಒಜೋನ್‌ ಎಂಬುದು ಒಂದು ಅನಿಲ. ಅಣುವಿನಲ್ಲಿ ಮೂರು ಆಮ್ಲಜನಕದ ಪರಮಾಣುಗಳುಳ್ಳ, ವಿಶಿಷ್ಟ ವಾಸನೆಯೂ, ದಟ್ಟಣೆಯಲ್ಲಿ ನಸು ನೀಲಿ ಬಣ್ಣವುಳ್ಳ, ಅನಿಲ ರೂಪದಲ್ಲಿರುವ ಆಮ್ಲಜನಕದ ಭಿನ್ನರೂಪವೇ ಒಜೋನ್‌. ವಾಯುಮಂಡಲದ ಸ್ಟ್ರಾಟೋಸ್ಪಿಯರ್‌ನಲ್ಲಿ 15ರಿಂದ 50 ಕಿ.ಮೀ. ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇಚ್ಛವಾಗಿ ದೊರೆಯುತ್ತದೆ.

ಒಜೋನ್‌ ಉತ್ಪತ್ತಿ ಹೇಗೆ?

ಗರಿಷ್ಠ ಒಜೋನ್ ಸಾಂದ್ರತೆ ಇರುವ ಸ್ತರಗೋಳದ ಮೇಲೆ ಸೂರ್ಯನ ಶಕ್ತಿಯಿಂದಾಗಿ ಆಕ್ಸಿಜನ್ (O2) ಅಣುಗಳು ಒಡೆಯಲು ಪ್ರಾರಂಭವಾಗಿ, ಆಕ್ಸಿಜನ್‌ ಅಣು ಎರಡು (O) ಪರಮಾಣುಗಳಾಗಿ ವಿಭಜನೆಯಾಗುತ್ತದೆ. ಈ ಎರಡೂ ಪರಮಾಣುಗಳು ಮತ್ತೆ ಒಂದೊಂದು ಆಕ್ಸಿಜನ್ ಅಣುವಿನೊಡನೆ ಸೇರಿ ಮೂರು ಪರಮಾಣು
ಗಳುಳ್ಳ ಒಜೋನ್‌ ಉತ್ಪತ್ತಿಯಾಗುತ್ತದೆ. ಅತಿನೇರಳೆ ಕಿರಣಗಳು ಎಷ್ಟು ಕಾಲ ಲಭ್ಯವೋ ಅಲ್ಲಿಯವರೆಗೆ ಸತತವಾಗಿ ಈ ಕ್ರಿಯೆ ಮುಂದುವರೆಯುತ್ತದೆ. ಸ್ತರಗೋಳದಲ್ಲಿ ಒಜೋನ್‌ ಉತ್ಪಾದನೆ ಮತ್ತು ನಾಶ ಎರಡೂ ನಡೆಯುತ್ತಿರುತ್ತದೆ. ಒಜೋನ್‌ ಸ್ತರಗೋಳದಲ್ಲಿ ನೈಸರ್ಗಿಕವಾಗಿ ಹಾಗೂ ಮಾನವ ಚಟುವಟಿಕೆಗಳಿಂದ ಉಂಟಾಗುವ ಅನೇಕ ರಾಸಾಯನಿಕಗಳೊಡನೆ ವರ್ತಿಸುತ್ತದೆ. ಈ ಕ್ರಿಯೆಯಲ್ಲಿ ಒಜೋನ್‌ ಅಣು ನಾಶವಾಗಿ ಬೇರೆಯದೇ ರಾಸಾಯನಿಕ ಸಂಯುಕ್ತ ಉಂಟಾಗುತ್ತದೆ. ಕ್ಲೋರಿನ್ ಮತ್ತು ಬ್ರೋಮಿನ್ ಒಜೋನ್‌ ನನ್ನು ನಾಶಪಡಿಸುವ ಪ್ರಮುಖ ರಾಸಾಯನಿಕಗಳು.

ADVERTISEMENT

ಜೀವ ರಕ್ಷಾಕವಚ ಹೇಗೆ?

ಒಜೋನ್‌ ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳನ್ನು ತಡೆಯುತ್ತವೆ. ಒಂದು ವೇಳೆ ಈ ವಿಕಿರಣಗಳು ಭೂಮಿಯನ್ನು ತಲುಪಿದರೆ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಸಮುದ್ರದಲ್ಲಿರುವ ಆಲ್ಗೆಗಳು ಸಾವನ್ನಪ್ಪುತ್ತವೆ. ಆಹಾರ ಸರಪಣಿಗೆ ತೊಂದರೆಯಾಗುತ್ತದೆ. ಸ್ಮಾರಕಗಳು ತಮ್ಮ ಭವ್ಯತೆ, ಬಣ್ಣಗಳ ಅಸ್ತಿತ್ವ ಕಳೆದುಕೊಳ್ಳುತ್ತವೆ. ಮಾನವನಲ್ಲಿ ಚರ್ಮದ ಕ್ಯಾನ್ಸರ್ ಉಂಟಾಗಬಹುದು. ವಂಶವಾಹಿಗಳಲ್ಲಿ ಏರುಪೇರಾಗಬಹುದು. ಇದೆಲ್ಲದರಿಂದ ಒಜೋನ್‌ ಜೀವ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.

ಒಜೋನ್‌ ಕ್ಷೀಣಿಸಲು ಕಾರಣಗಳೇನು?

ಕ್ಲೋರೋ ಫ್ಲೋರೋ ಕಾರ್ಬನ್‌ಗಳು: ಕ್ಲೋರೋ ಫ್ಲೋರೋ ಕಾರ್ಬನ್‌ಗಳನ್ನು ಬಳಸುವುದರಿಂದ ಇವುಗಳ ಜೊತೆಗೆ ಮಾನವನ ಚಟುವಟಿಕೆಗಳಿಂದಾಗಿ ಕ್ಲೋರಿನ್ ಮತ್ತು ಬ್ರೋಮಿನ್ ಪರಮಾಣುಗಳುಳ್ಳ ಅನಿಲಗಳು ಸ್ತರಗೋಳಕ್ಕೆ ತಲುಪಿದವೆಂದರೆ ಒಜೋನ್‌ ನಾಶದ ಪ್ರಾರಂಭವಾದಂತೆ. ಕ್ಲೋರೋ ಫ್ಲೋರೋ ಕಾರ್ಬನ್‌ನಲ್ಲಿರುವ ಕ್ಲೋರಿನ್ ಒಜೋನ್‌‌ನಲ್ಲಿರುವ ಆಕ್ಸಿಜನ್‌ನೊಡನೆ ಸಂಯೋಗ ಹೊಂದಿ ಆಕ್ಸಿಕ್ಲೋರೈಡ್ ಆಗುತ್ತದೆ. ಹೀಗೆ ಒಜೋನ್‌ ಪದರ ಕಡಿಮೆಯಾಗುತ್ತಾ ಸಾಗುತ್ತದೆ.

ಹ್ಯಾಲೋಜನ್‌ಗಳು: ಅಗ್ನಿಶಾಮಕಗಳಲ್ಲಿ, ವಾಯುನೌಕೆ, ಗಗನನೌಕೆ, ಹಡಗು, ಜಲಾಂತರ್ಗಾಮಿಗಳಲ್ಲಿ ಬಳಕೆಯಾಗುತ್ತವೆ. ಸಿ.ಎಫ್.ಸಿ ಗಿಂತ 3ರಿಂದ 10ಪಟ್ಟು ಪರಿಣಾಮಕಾರಿಯಾಗಿವೆ.

ಕಾರ್ಬನ್ ಟೆಟ್ರಾ ಕ್ಲೋರೈಡ್‌ಗಳು: ಬಣ್ಣಗಳು, ಕೀಟನಾಶಕಗಳು ಇತ್ಯಾದಿಗಳಿಂದ ಹೊರಬಂದು ಒಜೋನ್‌ ಪೊರೆ ಹರಿಯುವಂತೆ ಮಾಡುತ್ತವೆ.

ಮಿಥೈಲ್ ಕ್ಲೋರೋಫಾರ್ಮ: ಕಾರ್ಖಾನೆಗಳಲ್ಲಿ ಬಳಕೆ. ಇವು ಕೂಡ ಒಜೋನ್‌ ಪೊರೆ ಹರಿಯುವಂತೆ ಮಾಡುತ್ತವೆ.

ಮಾನವ ಅಂತರಿಕ್ಷ ಯಾತ್ರೆಗಳು, ಸ್ವಾಭಾವಿಕ ಕಾಡ್ಗಿಚ್ಚುಗಳು ಇತ್ಯಾದಿಗಳಿಂದಲೂ ಒಜೋನ್‌ ನಾಶವಾಗುತ್ತದೆ. ಒಜೋನ್‌ ರಂಧ್ರವೆಂದರೆ ಬೇರೇನೂ ಅಲ್ಲ; ಈ ಮೇಲಿನ ಕಾರಣ
ಗಳಿಂದ ಒಜೋನ್‌‌ನಲ್ಲಾಗುವ ಏರಿಳಿತ
ಗಳು. ಇದನ್ನು ಡಾಬ್ಸನ್ ಮಾನದಿಂದ ಅಳೆಯಲಾಗುತ್ತದೆ. 1982ರಲ್ಲಿ ಒಜೋನ್‌ ಪದರದ ದೊಡ್ಡ ರಂಧ್ರವನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಅಂಟಾರ್ಟಿಕ್ ಪ್ರದೇಶದಲ್ಲಿ ಪತ್ತೆಯಾದ ಈ ರಂಧ್ರವು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು.

1987ರ ಸೆಪ್ಟೆಂಬರ್ 16ರಂದು ವಿಯೆನ್ನಾದಲ್ಲಿ ಒಜೋನ್‌ ಪದರ ರಕ್ಷಣೆಗಾಗಿ ಅಂತರರಾಷ್ಟ್ರ್ರೀಯ ಸಮಾವೇಶ ನಡೆಯಿತು. ಒಜೋನ್‌ ಬಗ್ಗೆ ಜಾಗೃತಿಗೊಳಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧ ಮಾಂಟ್ರೆಲ್ ಪ್ರೊಟೊಕಾಲ್‌ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಒಜೋನ್‌ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಹೀಗಾಗಿ ಪ್ರತಿ ವರ್ಷ ಸೆ.16 ಅನ್ನು ವಿಶ್ವ ಒಜೋನ್‌ ದಿನವನ್ನಾಗಿ ಆಚರಿಸಲಾಗುತ್ತದೆ.

ನಮ್ಮ ಜೀವನಶೈಲಿ ಬದಲಾಯಿಸುವ ಮೂಲಕ ಒಜೋನ್‌ ರಕ್ಷಣೆ ಸಾಧ್ಯ. ಅವಶ್ಯವಿದ್ದಾಗ ಮಾತ್ರ ವಾಹನ ಬಳಸಿ, ಆದಷ್ಟು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವುದು. ಗಾಳಿಯಾಡುವ ಚಾವಣಿ ರಚಿಸಬೇಕು. ಸಾಧ್ಯವಾದಷ್ಟು ಹಸಿರುಕರಣ ಮಾಡಿ ಪರಿಸರದಲ್ಲಿ ಅಗತ್ಯ ಸಮತೋಲನ ಕಾಯ್ದುಕೊಳ್ಳಬೇಕು. ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಹಿತ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಬಸವಣ್ಣನವರ ಒಂದು ವಚನದಲ್ಲಿ ಒಲೆ ಹೊತ್ತಿ ಉರಿದರೆ ನಿಲ್ಲಬಹುದಲ್ಲದೆ, ಧರೆ ಹೊತ್ತಿ ಉರಿದರೆ ನಿಲ್ಲಬಹುದೆ? ಎಂಬಂತೆ ಭೂಮಿಗೆ ಆಪತ್ತು ಬರುವ ಮೊದಲೇ ನಾವು ವಾಸಿಸಲು ಯೋಗ್ಯವಾದ ಈ ಏಕೈಕ ಗ್ರಹವನ್ನು ರಕ್ಷಿಸಲು ಪಣತೊಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.