ADVERTISEMENT

ಕಿಡ್ನಿ ಆರೋಗ್ಯ ಎಲ್ಲರಿಗೂ ಎಲ್ಲೆಲ್ಲೂ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 15:13 IST
Last Updated 14 ಮಾರ್ಚ್ 2019, 15:13 IST
ಕಿಡ್ನಿ12
ಕಿಡ್ನಿ12   

ಮೂವತ್ತೈದು ವರ್ಷದ ಸುನೈನಾ ಗೃಹಿಣಿ. ಮನೆ–ಮಕ್ಕಳು ಎಂದು ಬ್ಯುಸಿಯಾಗಿರುತ್ತಿದ್ದ ಆಕೆ ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲಾ ವೈದ್ಯರ ಮೊರೆ ಹೋಗದೆ ಮೆಡಿಕಲ್ ಶಾಪ್‌ನಿಂದ ನೋವು ನಿವಾರಕ ಮಾತ್ರೆಗಳನ್ನು ತರಿಸಿಕೊಂಡು ನುಂಗುತ್ತಿದ್ದರು. ಹಲವು ವರ್ಷಗಳ ಈ ಅಭ್ಯಾಸದಿಂದ ಸುನೈನಾ ಅವರ ಕಿಡ್ನಿಗಳಿಗೆ ಹಾನಿಯುಂಟಾಗಿತ್ತು.

ಮನುಷ್ಯನ ದೇಹದಲ್ಲಿ ಹೃದಯದಷ್ಟೇ ಮುಖ್ಯ ಅಂಗವಾಗಿರುವ ಕಿಡ್ನಿಗಳ ಪಾತ್ರ ದೊಡ್ಡದು. ದೇಹಕ್ಕೆ ಅಗತ್ಯವಾದ ರಾಸಾಯನಿಕಗಳನ್ನು ಬಳಸಿಕೊಂಡು ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಬರೀ 150 ಗ್ರಾಂ ಇರುವ ಕಿಡ್ನಿ ನೋಡಲು ಚಿಕ್ಕದಾದರೂ ಮಾಡುವ ಕೆಲಸ ಮಾತ್ರ ಅಗಾಧ. ಇವು ವೈಫಲ್ಯಗೊಂಡಲ್ಲಿ ದೇಹದ ಆಂತರಿಕ ವ್ಯವಸ್ಥೆಗಳಲ್ಲಿ ಅಲ್ಲೋಲ–ಕಲ್ಲೋಲವಾಗುತ್ತದೆ. ಇದನ್ನು ಮನಗಂಡು ಸಾರ್ವಜನಿಕರಲ್ಲಿ ಕಿಡ್ನಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ ಎರಡನೇ ಗುರುವಾರದಂದು ‘ವಿಶ್ವ ಕಿಡ್ನಿ ದಿನ’ ಆಚರಿಸಲಾಗುತ್ತದೆ.

ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ‘ನೆಫ್ರೋ–ಯುರಾಲಜಿ ಸಂಸ್ಥೆ’ ಕಿಡ್ನಿ ಅರೋಗ್ಯಕ್ಕಾಗಿ ಮುಡಿಪಾಗಿರುವ ಸಂಸ್ಥೆ. ಕರ್ನಾಟಕ ಸರ್ಕಾರದ ಸ್ವಾಯತ್ತತೆ ಪಡೆದಿರುವ ಈ ಸಂಸ್ಥೆ, ಬಿಪಿಎಲ್ ಕಾರ್ಡುದಾರರಿಗೆ ಕಿಡ್ನಿಗೆ ಸಂಬಂಧಿಸಿದಂತೆ ಉಚಿತ ಚಿಕಿತ್ಸೆಗಳನ್ನು ನಿರಂತರವಗಿ ನೀಡುತ್ತಾ ಬಂದಿದೆ. 20 ಡಯಾಲಿಸಿಸ್ ಯಂತ್ರಗಳನ್ನು ಹೊಂದಿರುವ ಈ ಸಂಸ್ಥೆ 160 ಹಾಸಿಗೆ ಸಾಮರ್ಥ್ಯ ಹೊಂದಿದೆ. ಸಂಸ್ಥೆಯ ಪಕ್ಕದಲ್ಲೇ 100 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡವೂ ನಿರ್ಮಾಣವಾಗುತ್ತಿದೆ.

ADVERTISEMENT

‌‘ಮುಖ್ಯಮಂತ್ರಿ ಸಾಂತ್ವನ ಪರಿಹಾರ ನಿಧಿ ಅಡಿ ಅಗತ್ಯವಿದ್ದವರಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗುತ್ತಿದೆ. ಕಿಡ್ನಿ ದಾನಿಗಳು ಮತ್ತು ಕಿಡ್ನಿ ಪಡೆದವರು ಇಬ್ಬರಿಗೂ ಶಸ್ತ್ರಚಿಕಿತ್ಸೆಯ ನಂತರ ಸೋಂಕುನಿವಾರಕಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಅವರ ಆರೋಗ್ಯ ಸುಧಾರಣೆಗೆ ನಿರಂತರವಾಗಿ ಫಾಲೋಅಪ್ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ನೆಫ್ರೋ–ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಎಂ.ಶಿವಲಿಂಗಯ್ಯ.

ಸಿಎಪಿಡಿ ಪೈಲಟ್ ಪ್ರಾಜೆಕ್ಟ್: ಸಂಸ್ಥೆಯಲ್ಲಿ ಒಂದೂವರೆ ವರ್ಷದ ಹಿಂದೆ ಸಿಎಪಿಡಿ (ಕಂಟಿನ್ಯೂಯಸ್ ಅಂಬ್ಯುಲೆಟರಿ ಪೆರಿಟೋನಿಯಲ್ ಡಯಾಲಿಸಿಸ್) ಅನ್ನುವ ಪ್ರಾಯೋಗಿಕ ಯೋಜನೆ (ಪೈಲಟ್ ಪ್ರಾಜೆಕ್ಟ್‌) ಆರಂಭಿಸಲಾಗಿದೆ. ಪುಟ್ಟಮಕ್ಕಳಿಗೆ ಕಾಡುವ ಕಿಡ್ನಿ ಸಮಸ್ಯೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳು ದೊಡ್ಡವರಂತೆ ಡಯಾಲಿಸಿಸ್‌ಗೆ ಒಳಪಡುವುದು ಕಷ್ಟದ ಸಂಗತಿ. ಇದನ್ನು ತಪ್ಪಿಸಲು ಮಕ್ಕಳಿಗೆ ಹೊಟ್ಟೆಯಲ್ಲಿ ಟ್ಯೂಬ್ ಅಳವಡಿಸಿ ರಾತ್ರಿ ಹೊತ್ತು ದೇಹಕ್ಕೆ ದ್ರವಾಂಶ ಸೇರಿಸಲಾಗುತ್ತದೆ. ಇದು ಕಿಡ್ನಿಗಳಲ್ಲಿರುವ ಕಲ್ಮಶವನ್ನು ಸುಲಭವಾಗಿ ಹೊರಹಾಕುತ್ತದೆ. ಈ ಚಿಕಿತ್ಸೆ ನಮ್ಮಲ್ಲಿ ಉಚಿತವಾಗಿ ದೊರೆಯುತ್ತದೆ’ ಎನ್ನುತ್ತಾರೆ ಶಿವಲಿಂಗಯ್ಯ.

ಸಿಎಪಿಡಿ ಯೋಜನೆಯಡಿ ಇದುವರೆಗೆ 100 ರೋಗಿಗಳು ಸದುಪಯೋಗ ಪಡಿಸಿಕೊಂಡು ಅರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಈ ಚಿಕಿತ್ಸೆ ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತದೆಯಾದರೂ ಅದರ ಚಿಕಿತ್ಸಾ ವೆಚ್ಚ ದುಬಾರಿ. ಬಡವರಿಗೆ ಇದು ನಿಲುಕಲಾರದ್ದು. ಇದನ್ನು ಮನಗಂಡು ಸರ್ಕಾರ ಸಹಾಯದಿಂದ ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಯೋಜನೆ ಸೌಲಭ್ಯ ಹೊಂದಿರುವವರಿಗೂ ಇಲ್ಲಿ ಚಿಕಿತ್ಸೆ ಉಚಿತ ಎಂಬ ವಿವರಣೆ ಅವರದ್ದು.

ಕಿಡ್ನಿ ವೈಫಲ್ಯಕ್ಕೆ ಶೇ 70ರಷ್ಟು ಇನ್ನೂ ಕಾರಣಗಳು ತಿಳಿದಿಲ್ಲ. ಈ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಿವೆ. ಪುಟ್ಟ ಮಕ್ಕಳಿಗೆ ತಾಯಿಯ ಹೊಟ್ಟೆಯಲ್ಲಿರುವಾಗಲೇ ಕಿಡ್ನಿ ನ್ಯೂನತೆ ಆಗಿರಬಹುದು. ಮೂತ್ರಕೋಶದ ಸೋಂಕು, ರಕ್ತದೊತ್ತಡ, ಮಧುಮೇಹವೂ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.

ಅಂಗಾಂಗ ದಾನ ಜಾಗೃತಿ ಅಗತ್ಯ

ನಗರದಲ್ಲಿ ಅಂಗಾಂಗ ದಾನದ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿಯ ಅವಶ್ಯಕತೆ ಇದೆ. ಈ ಬಾರಿ ಬಜೆಟ್‌ನಲ್ಲಿ ಅಂಗಾಂಗ ಕಸಿ ಜೋಡಣೆಗಾಗಿ ಅನುದಾನ ಬಿಡುಗಡೆಯಾಗಿದ್ದು, ಜೀವ ಸಾರ್ಥಕತೆ ಯೋಜನೆಯಡಿ ಒಂದು ತಿಂಗಳಲ್ಲೇ ಮೂವರು ರೋಗಿಗಳಿಗೆ ಕಿಡ್ನಿ ಕಸಿ ಜೋಡಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಅಪಘಾತದಲ್ಲಿ ಮಡಿದವರು, ಮಿದುಳು ನಿಷ್ಕ್ರಿಯರಾದ ವ್ಯಕ್ತಿಗಳಿಂದ ಕಿಡ್ನಿಗಳನ್ನು ದಾನವಾಗಿ ಪಡೆದು, ಅಗತ್ಯವಿರುವರಿಗೆ ಕಸಿ ಮಾಡಲಾಗುತ್ತದೆ. ಕಿಡ್ನಿವೈಫಲ್ಯವಾದ ತಕ್ಷಣ ಜೀವನ ಮುಗಿಯದು. ಅದಕ್ಕೆ ಖಂಡಿತಾ ಪರಿಹಾರವಿದೆ’ ಎಂದು ಮಾಹಿತಿ ನೀಡುತ್ತಾರೆ ಶಿವಲಿಂಗಯ್ಯ.

2007ರಿಂದಲೂ ವಿಶ್ವ ಕಿಡ್ನಿ ದಿನಾಚರಣೆ ಮಾಡುತ್ತಾ ಬಂದಿರುವ ನೆಫ್ರೋ–ಯುರಾಲಜಿ ಸಂಸ್ಥೆ ಈ ಬಾರಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿದೆ. ‘ಕಿಡ್ನಿ ಆರೋಗ್ಯ ಎಲ್ಲರಿಗೂ ಎಲ್ಲೆಲ್ಲೂ’ ಅನ್ನುವುದು ಈ ಬಾರಿಯ ಘೋಷಣೆ. ಮಾರ್ಚ್ 14ರಂದು ಬೆಳಿಗ್ಗೆ 6.30ಕ್ಕೆ ಕಾಲ್ನಡಿಗೆ ಜಾಥಾದ ಮೂಲಕ ಕಿಡ್ನಿ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಉಚಿತ ಪರೀಕ್ಷೆ

ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ–ಯುರಾಲಜಿ ಸಂಸ್ಥೆ ಮಾರ್ಚ್ 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಹೊರರೋಗಿಗಳಿಗೆ ಸೆರ‍್ರಂ ಕ್ರಿಟನೈನ್, ಯೂರಿನ್ ರೂಟಿನ್ ಮತ್ತು ಆರ್‌ಬಿಎಸ್ ಪ್ರಯೋಗಾಲಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿದೆ.

ಕಿಡ್ನಿ ವೈಫಲ್ಯಕ್ಕೆ ಕಾರಣಗಳು

* ಮಧುಮೇಹ‌

* ಅಧಿಕ ರಕ್ತದೊತ್ತಡ

* ನೋವು ನಿವಾರಕಗಳು ಮೊದಲಾದ ಔಷಧಗಳ ಅತಿಯಾದ ಸೇವನೆ/ ಮಾದಕ ವಸ್ತುಗಳ ಸೇವನೆ

* ಕಿಡ್ನಿ ಸೋಂಕು

* ಅನುವಂಶಿಕ ಕಾರಣಗಳು

* ಕಿಡ್ನಿ ಕಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿರುವುದು.

***

ಕಿಡ್ನಿ ಅರೋಗ್ಯಕ್ಕೆ ಹೀಗೆ ಮಾಡಿ

* ದಿನವೂ 6ರಿಂದ 8 ಲೋಟ ಶುದ್ಧ ನೀರು ಕುಡಿಯುವುದು

* ಊಟದಲ್ಲಿ ಉಪ್ಪಿನ ನಿಯಮಿತ ಸೇವನೆ

* ವೈದ್ಯರ ಸಲಹೆ ಇಲ್ಲದೇ, ಔಷಧಿ ಅಂಗಡಿಗಳಲ್ಲಿ ದೊರೆಯುವ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬೇಡಿ

* ಆಗಾಗ್ಗೆ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ ಹಾಗೂ ಮೂತ್ರ ಪರೀಕ್ಷೆಗಳನ್ನು ಮಾಡಿಸುವುದು

*ನಿತ್ಯವೂ 30 ನಿಮಿಷಗಳ ಚುರುಕು ನಡಿಗೆ (ವಾಕಿಂಗ್) ಮಾಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.