ADVERTISEMENT

ಈ ಯಂತ್ರಕ್ಕೆ ಊರವರ ಗುರುತು ಸಿಗುತ್ತಿಲ್ಲ!

ವಿಶಾಲಾಕ್ಷಿ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಪಡಿತರಕ್ಕಾಗಿ ಹೆಬ್ಬೆರಳು ಗುರುತು ನೀಡಲೆಂದು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಹುಬ್ಬಳ್ಳಿಯ ನೇಕಾರ ನಗರ ಮತ್ತು ಈಶ್ವರ ನಗರದ ನಿವಾಸಿಗಳು              -ಚಿತ್ರ: ತಾಜುದ್ದೀನ್‌ ಆಜಾದ್‌
ಪಡಿತರಕ್ಕಾಗಿ ಹೆಬ್ಬೆರಳು ಗುರುತು ನೀಡಲೆಂದು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಹುಬ್ಬಳ್ಳಿಯ ನೇಕಾರ ನಗರ ಮತ್ತು ಈಶ್ವರ ನಗರದ ನಿವಾಸಿಗಳು -ಚಿತ್ರ: ತಾಜುದ್ದೀನ್‌ ಆಜಾದ್‌   

‘ವರ್ಸಾನಗಟ್ಟಲೇ ನಾ..ನ ರೇಷನ್ ತಂದೇನಿ. ಈಗ, ನನ್ನ ಹೆಬ್ಬಟ್ಟ ಬರಂಗಿಲ್ಲ ಅಂತಾರ. ಅಂದ್ರ ಮೈಯ್ಯಾಗಿನ ರಗತ ಸುಟ್ಟಸುಟ್ಟಂಗ ಅದರ ಗುರ್‍ತ ಸಿಗಂಗಿಲ್ಲೇನ್ರಿ? ತಾಕತ್ತಿದ್ದವ್ರಿಗೆ, ಹಣ್ಣು ಹಂಪಲಾ ತಿಂದವ್ರಿಗೆ ಅಷ್ಟ ಬರತೈತೇನ್ರಿ...?’

ಧಾರವಾಡ ತಾಲ್ಲೂಕಿನ ಉಪ್ಪಿನಬೆಟಗೇರಿಯ ಅಜ್ಜಿ ನಾಗವ್ವ ಬೆಣವಣಕಿ, ಪ್ರಶ್ನೆ ಮುಂದಿಡುವುದರ ಜೊತೆಗೆ ಆಕ್ರೋಶವನ್ನೂ ಹೊರಹಾಕಿದರು.

ಅಜ್ಜಿಯ ಮಾತಿಗೆ ಕಿವಿಯೂ-ದನಿಯೂ ಏಕಕಾಲಕ್ಕೆ ಆಗಿದ್ದ ಓಣಿಯ ಮಂದಿ, ಆ ಕ್ಷಣಕ್ಕೆ ಗೊಳ್ಳನೆ ನಕ್ಕರೂ ಮರುಕ್ಷಣವೇ, ‘ಆಕಿ ಹೇಳೋದು ಬರೋಬ್ಬರಿ ಐತ್ರಿ’ ಎಂದರು. ಏಕೆಂದರೆ ಅಜ್ಜಿಯ ಮಗ ಮತ್ತು ಆಕೆಯ ಹಿರಿಯ ಇಬ್ಬರೂ ದುಡಿಯಲು ಹೋದರೆ, ರೇಷನ್‌ ತರುತ್ತಿದ್ದಾಕೆಯೇ ಆಕೆ. ಇದೀಗ ದುಡಿಮೆಗೆ ಹೋದ ಇಬ್ಬರ ಪೈಕಿ ಯಾರಾದರೂ ಒಬ್ಬರು ಕೆಲಸ ಬಿಟ್ಟು ಬೆರಳು ಗುರುತು ನೀಡಲು ನಿಲ್ಲಬೇಕಿದೆ.

ADVERTISEMENT

ನವಲಗುಂದ ತಾಲ್ಲೂಕಿನ ಗುಡಿಸಾಗರದ ಅಜ್ಜನಿಗೂ ಏಳೆಂಟು ತಿಂಗಳಿನಿಂದ ಅಕ್ಕಿ-ಬೇಳೆ ಏನೂ ಸಿಕ್ಕಿಲ್ಲ. ಅಂದಾಜು 75 ವರ್ಷದ ರುದ್ರಪ್ಪ ಉಳ್ಳಾಗಡ್ಡಿ ಹಾಗೂ ಆ ಅಜ್ಜನ ಹೆಂಡತಿ ಇಬ್ಬರ ಬೆರಳಿನ ಗುರುತೂ ಬಯೊಮೆಟ್ರಿಕ್‌ ಯಂತ್ರದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಅವರು ‘ಕಣ್ಣಿನ ಗುರುತು’ ಕೂಡ ದಾಖಲಿಸಿ ಬಂದಿದ್ದಾರೆ. ಮಷೀನು ಯಾವುದನ್ನೂ ಖೂನು ಹಿಡಿಯುತ್ತಿಲ್ಲ. ಗುರುತು ಸಿಕ್ಕರಷ್ಟೇ ಅವರ ಹೆಸರಿನ ಪಡಿತರ ಬರುತ್ತದೆ. ಬೆರಳು ಒತ್ತಿ ಬರಲೆಂದು ಒಂದು ದಿನ, ಪಡಿತರ ಬಂದಾದ ಮೇಲೆ ಅದನ್ನು ತರಲೆಂದು ಇನ್ನೊಂದು ದಿನ ದುಡಿಮೆ ಬಿಡುವುದು ಅವರಿಗೆ ಅನಿವಾರ್ಯವಾಗಿದೆ.

‘ಯಾರೂ ದರಕಾರ ಮಾಡೋದಿಲ್ಲ ಬಿಡ್ರಿ. ಈ ಊರಾಗ ಏನಿಲ್ಲಾಂದ್ರೂ 40 ಕಾರ್ಡ್‌ ಹಿಂಗ ಆಗ್ಯಾವ್ರೀ.... ಯಾರ್ ಈ ಹೆಬ್ಬಟ್ಟ ಮಾಡಿದ್ರ?’ ಎಂಬ ಬೇಸರ ಅದೇ ಊರಿನ ಶ್ರೀಶೈಲಪ್ಪ ನವಲಗುಂದ ಅವರದು.

ಮಗ ಬೇರೆಯಾಗಿ ಹೋದಾಗಿನಿಂದ ನಾಲ್ಕು ತಿಂಗಳಿಂದ ಒಬ್ಬರೇ ಮನೆಯಲ್ಲಿರುವ ಈರವ್ವ ಕಣವಿ, ತೆವಳುತ್ತಲೇ ದಿನ ದೂಡುತ್ತಿದ್ದಾರೆ. ಕೈಕಾಲು ಹಿಡಿದುಕೊಂಡಿದ್ದು ಅನ್ನಬೇಯಿಸಿಕೊಳ್ಳಲೂ ಆಗದ ಸ್ಥಿತಿ ಅವರದು.

ಅನಾರೋಗ್ಯದಿಂದ ನರಳುತ್ತಿರುವ ಆಕೆಯ ಹೆಸರಿನಲ್ಲಿ ರೇಷನ್ ಕಾರ್ಡ್‌ ಇಲ್ಲ. ಮಗನ ಹೆಸರಿನಲ್ಲಿರುವ ಕುಟುಂಬದ ಪಡಿತರ ಚೀಟಿಯಲ್ಲೂ ಈರವ್ವನ ಹೆಸರಿಲ್ಲ. ಈಗವರು ಒಂಟಿ. ಆ ತಾಯಿಗೆ ಪಡಿತರ ಚೀಟಿ ಮಾಡಿಸಿಕೊಡುವವರು ಯಾರು? ಮಾಡಿಸಿಕೊಟ್ಟರೂ ಪ್ರತಿ ತಿಂಗಳೂ ಸರದಿಯಲ್ಲಿ ನಿಂತು ಬೆರಳು ಗುರುತು ನೀಡಿ ಬರಲು, ಅಕ್ಕಿ–ಬೇಳೆ ಪಡೆಯಲು ಆದೀತೇ?

ವೃದ್ಧಾಪ್ಯ ವೇತನವಾಗಿ ಮನೆ ಬಾಗಿಲಿಗೇ ಬರುವ ಐನೂರು ರೂಪಾಯಿಯೇ ಅವರಿಗೆ ಆಸರೆಯಾಗಿದೆ. ಆದರೆ, ಅದಕ್ಕೂ ಬಯೊಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಯಂತ್ರಕ್ಕೆ ಅವರ ಬೆರಳಿನ ಗುರುತು ಸಿಗುವುದು ಈಗೀಗ ಕಷ್ಟವಾಗಿದೆ. ಒಮ್ಮೊಮ್ಮೆ ಎರಡೆರಡು ತಾಸು ಪ್ರಯತ್ನಿಸಿದ ಮೇಲಷ್ಟೇ ದುಡ್ಡು ಸಂದಾಯವಾಗಿದೆ. ದುಡ್ಡು ಕೊಡಲು ಬಂದ ಹುಡುಗ, ‘ದೊಡ್ಡವ್ವಾ, ನಿನ್ನ ಕೈಯಾಗಿನ ಬಟ್ಟು ಸವದಾವಬೇ...’ ಎಂದು ಈಗಾಗಲೇ ಹೇಳಿದ್ದು, ಅದು ಕೂಡ ಯಾವಾಗ ನಿಲ್ಲುತ್ತದೆಯೋ ಎಂಬ ಆತಂಕ ಈರವ್ವನದು.

***

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಲು ಪಡಿತರ ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು ಎಂದು ರಾಜ್ಯ ಸರ್ಕಾರ ಷರತ್ತು ಹಾಕಿದೆ. ಆದರೆ, ಈ ಷರತ್ತಿನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಆಧಾರ್ ಇಲ್ಲದಿದ್ದರೆ ಪಡಿತರವೂ ಇಲ್ಲ ಎನ್ನುವ ಸ್ಥಿತಿ ಉಂಟಾಗಿದೆ.

ಈ ಕಾರಣಕ್ಕಾಗಿಯೇ ಗೋಕರ್ಣದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಬೇಕಾಯಿತು ಎಂಬ ಆರೋಪವೂ ಇದೆ. ಜಾರ್ಖಂಡ್‌ನಲ್ಲಿ ಬಾಲಕಿಯೊಬ್ಬಳು ಹಸಿವಿನಿಂದ ಮೃತಪಟ್ಟಿದ್ದಾಗಿ ವರದಿಯಾಗಿದೆ. ಶೌಚಾಲಯ ಕಟ್ಟಿಸಿಕೊಳ್ಳದೇ ಇರುವುದಕ್ಕಾಗಿಯೂ ಆಹಾರ ಧಾನ್ಯ ನಿರಾಕರಿಸಿರುವ ದೂರುಗಳೂ ಇವೆ. ಪಾರದರ್ಶಕತೆಯ ಹೆಸರಿನ ಈ ಪಡಿತರ ವ್ಯವಸ್ಥೆಯಿಂದಾಗಿ, ಜನರು ನಿಜವಾಗಿಯೂ ಅನುಭವಿಸುತ್ತಿರುವ ತೊಂದರೆಗಳೇನು ಎಂಬುದನ್ನು ಕಾಣಹೊರಟಾಗ, ಆಧಾರ್ ಸಂಖ್ಯೆ ಜೋಡಣೆಯಷ್ಟೇ ಅಲ್ಲ; ಇನ್ನೂ ಹಲವು ಸಮಸ್ಯೆಗಳು ಅವರನ್ನು ಹೈರಾಣು ಮಾಡುತ್ತಿರುವುದು ಧಾರವಾಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಗಮನಕ್ಕೆ ಬಂತು. ‘ಥಂಬ್‌ ಇಂಪ್ರೆಶನ್‌’ಗಾಗಿ ದಿನಗಟ್ಟಲೇ ಕಾಯುವ ಸಂಕಟ, ಸರದಿ ಬಂದಾಗ ಕೈಕೊಡುವ ಸರ್ವರ್, ಫಲಾನುಭವಿ ಕುಟುಂಬದ ಸದಸ್ಯರ ಬೆರಳಿನ ಗುರುತನ್ನೇ ಹಿಡಿಯದ ಬಯೊಮೆಟ್ರಿಕ್ ವ್ಯವಸ್ಥೆ, ಆಧಾರ್ ಇಲ್ಲ ಎಂಬ ಕಾರಣದಿಂದ ಪಡಿತರ ಚೀಟಿಯಿಂದಲೇ ಹೆಸರು ಕೈಬಿಟ್ಟಿದ್ದು, ಅಕ್ಕಿ-ಬೇಳೆಯ ಜೊತೆಗೆ ನ್ಯಾಯಬೆಲೆ ಅಂಗಡಿಯವರೇ ನಿಗದಿ ಮಾಡಿದ ಕೆಲ ಪದಾರ್ಥಗಳ ಕಡ್ಡಾಯ ಖರೀದಿ... ಅವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಎಣೆಯೇ ಇಲ್ಲವೇನೋ ಎನ್ನಿಸುತ್ತದೆ.

ಅವರ ಬಳಿ ಮತದಾರರ ಗುರುತಿನ ಚೀಟಿ ಇದೆ. ಬ್ಯಾಂಕ್ ಪಾಸ್‌ಬುಕ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರೇ ಖುದ್ದಾಗಿ ಬಂದರೂ ಆಧಾರ್ ಸಂಖ್ಯೆ ಜೋಡಣೆ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ವಾಪಸ್ ಹೋಗುವ ಪರಿಸ್ಥಿತಿ. ಅದಕ್ಕಿಂತಲೂ ದೊಡ್ಡ ಸಮಸ್ಯೆ ಎಂದರೆ, ಧಾರವಾಡ ತಾಲ್ಲೂಕಿನ ಉಪ್ಪಿನಬೆಟಗೇರಿಯಲ್ಲಿ ಪಡಿತರ ಚೀಟಿಗಳಿಗೆ ನೂರಾರು ಜನರ ಆಧಾರ್ ಸಂಖ್ಯೆಯೇ ಲಿಂಕ್ ಆಗುತ್ತಿಲ್ಲ.

ಅವರ ಬಳಿ ಪರ್ಯಾಯ ಗುರುತಿನ ಚೀಟಿಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿವೆ. ‘ನಮ್ಮ ಇರುವಿಕೆಯನ್ನು ದೃಢೀಕರಿಸಲು ನಾವು ಎಷ್ಟು ನಮೂನೆಯ ಗುರುತಿನ ಚೀಟಿ ನೀಡಬೇಕು? ದಿನಕ್ಕೊಂದು ದಾಖಲೆ ಕೇಳಿ ಜೀವ ಹಿಂಡುವ ಬದಲಾಗಿ, ಎಲ್ಲ ವಿವರಗಳನ್ನು ದಾಖಲಿಸಿ ಸರ್ಕಾರವೇ ಯಾಕೆ ಒಂದು ಸ್ಮಾರ್ಟ್ ಕಾರ್ಡ್ ನೀಡಬಾರದು?’ ಎಂದು ಕೇಳುತ್ತಾರೆ ಉಪ್ಪಿನ ಬೆಟಗೇರಿಯ ಬಸವರಾಜ ಆಯಟ್ಟಿ ಮತ್ತು ಈರಪ್ಪ ಆಯಟ್ಟಿ.

ದಿನದ ದುಡಿಮೆ ಹಾಳು! : ಬೆರಳಿನ ಗುರುತು ನೀಡಲು ನಸುಕಿನಲ್ಲೇ ನ್ಯಾಯಬೆಲೆ ಅಂಗಡಿ, ಸೊಸೈಟಿ ಮುಂದೆ ಸರದಿಯಲ್ಲಿ ನಿಲ್ಲುವವರ ಪೈಕಿ ವೃದ್ಧರೂ ಇದ್ದಾರೆ, ಮಕ್ಕಳೂ ಇದ್ದಾರೆ. ಮನೆ ಮಂದಿಯ ಪೈಕಿ ಯಾರದೇ ಒಬ್ಬರ ಗುರುತು ಹೊಂದಾಣಿಕೆ ಆದರೂ ಆ ಕುಟುಂಬದ ಹೆಸರಿನಲ್ಲಿ ಆಹಾರ ಧಾನ್ಯ ನಿಗದಿಯಾಗುತ್ತದೆ. ಹಾಗೊಂದು ವೇಳೆ ಆದರೆ ಅದು ಅವರವರ ಆ ದಿನದ ‘ಅದೃಷ್ಟ’ಎಂದೇ ಭಾವಿಸಬೇಕು! ಏಕೆಂದರೆ ಸಾಲುಗಟ್ಟಿ ನಿಂತವರ ಸರದಿ ಇನ್ನೇನು ಬಂದೇಬಿಟ್ಟಿತು ಎನ್ನುವಾಗ ಬೆರಳ ಗುರುತು ಹೊಂದಾಣಿಕೆ ಆಗುವುದೇ ಇಲ್ಲ. ಮನೆಯ ಉಳಿದ ಸದಸ್ಯರೂ ಅಲ್ಲಿಯೇ ಇದ್ದರೆ ಅವರ ಪೈಕಿ ಯಾರಾದರೂ ಬೆರಳು ಒತ್ತುತ್ತಾರೆ. ಒಮ್ಮೊಮ್ಮೆ ಮನೆಮಂದಿಯೆಲ್ಲ ಪ್ರಯತ್ನಿಸಿದರೂ ಫಲ ಸಿಗದು.

‘ಹೆಬ್ಬೆಟ್ಟಲ್ರೀ, ಹತ್ತೂ ಬಟ್ಟು ಹಚ್ಚಿದ್ರೂ ತೊಗೊಳೋದಿಲ್ಲ ಅದು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಹಿಳೆಯರು. ಅಲ್ಲಿಗೆ, ಅವರಿಗೆ ಆ ತಿಂಗಳ ಪಡಿತರ ಇಲ್ಲವೆಂದೇ ಅರ್ಥ. ಇದಕ್ಕಾಗಿಯೇ ಒಂದು ದಿನದ ದುಡಿಮೆಯನ್ನೂ ಕಳೆದುಕೊಂಡು, ಅಕ್ಕಿಯೂ ಸಿಗದೇ ಹತಾಶರಾಗುತ್ತಾರೆ ಅವರು. ಆದರೆ, ಮತ್ತೆ ಮರುದಿನ ಮರೆಯದೇ ಪಾಳಿಗೆ ನಿಲ್ಲುತ್ತಾರೆ. ಇಂದಾದರೂ ಗುರುತು ಸಿಗಬಹುದು ಎಂಬ ಆಸೆಯಲ್ಲಿ. ಹೀಗೆ ಗುರುತು ನೀಡುವ ಗದ್ದಲದಲ್ಲೇ ಎಂಟೆಂಟು ದಿನಗಳು ಕಳೆದುಹೋದ ಉದಾಹರಣೆಗಳೂ ಇವೆ.

ಇದೇ ಗ್ರಾಮದ ಕಸ್ತೂರೆವ್ವ ಕಿತ್ತೂರ ಮನೆಯಲ್ಲಿ ಒಬ್ಬರೇ ಇದ್ದಾರೆ. ರೇಷನ್ ಕಾರ್ಡ್‌ ಕೂಡ ಅವರದೇ ಹೆಸರಿನಲ್ಲಿದೆ. ಆದರೆ ಅವರದೇ ಬೆರಳಿನ ಗುರುತು ಹೊಂದಾಣಿಕೆಯಾಗುತ್ತಿಲ್ಲ. 65 ವರ್ಷದ ಆ ತಾಯಿ ಗ್ರಾಮ ಪಂಚಾಯ್ತಿಗೆ ಹೋಗಿ ಕೇಳಿದರೆ, ತಾಲ್ಲೂಕು ಪಂಚಾಯ್ತಿ ಕಚೇರಿಗೆ ಹೋಗುವಂತೆ ಹೇಳಿದ್ದಾರೆ. ಎಲ್ಲೆಲ್ಲಿ ಅಲೆಯುವುದೆಂದು ಅವರು ಕೈಚೆಲ್ಲಿ ಕುಳಿತಿದ್ದಾರೆ. ‘ಈ ಊರೊಂದರಲ್ಲೇ ಇಷ್ಟೇಕೆ ತ್ರಾಸು’ ಎಂಬುದು ಅವರ ಪ್ರಶ್ನೆ.

‘ಒಂದು ಮನೆಯಲ್ಲಿ ಒಬ್ಬರೇ ಇರುವ ವ್ಯಕ್ತಿಯ ಬೆರಳಿನ ಗುರುತನ್ನೂ ಅಲ್ಲಗಳೆಯುವ ಈ ಯಂತ್ರ ನಮ್ಮನ್ನೆಲ್ಲ ಕಳ್ಳರಂತೆ ನೋಡುತ್ತದೆ; ನಮ್ಮ ಊರಿನವರೇ ಆದ ಅಂಗಡಿಕಾರರೂ ನಮ್ಮನ್ನು ಸಂಶಯದಿಂದ ನೋಡುವ ಪರಿಸ್ಥಿತಿ ತಂದಿಟ್ಟಿದೆ’ ಎಂಬ ನೋವು ಆ ಗ್ರಾಮಸ್ಥರದು.

ನ್ಯಾಯಬೆಲೆ ಅಂಗಡಿಗಳಿಗೆ, ಸೊಸೈಟಿಗಳಿಗೆ ನಿಯಮಿತವಾಗಿ ಪಡಿತರ ಬರುತ್ತಿದೆ. ಅದನ್ನು ಯಾರಿಗೆ ಹಂಚಬೇಕಾಗಿದೆಯೋ ಅವರ ಗುರುತು ಈ ಊರಿನ ಅಂಗಡಿಯವರಿಗೂ ಇದೆ. ಆದರೆ ‘ಬಯೊಮೆಟ್ರಿಕ್’ ವ್ಯವಸ್ಥೆಯು ಯಾರನ್ನೂ ನಂಬುವುದಿಲ್ಲ. ಹೋದ ತಿಂಗಳು ಸಿಕ್ಕವರ ಗುರುತು, ಅದಕ್ಕೆ ಈ ತಿಂಗಳು ಸಿಗುವುದಿಲ್ಲ!

ಪಡಿತರ ಚೀಟಿಯೇ ಇಲ್ಲ! : ಈ ಊರಲ್ಲಿ ಹಲವಾರು ಜನರ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ. ಇನ್ನು ಕೆಲವರಿಗೆ ಪಡಿತರ ಚೀಟಿಯೇ ಇಲ್ಲ. ಅರ್ಜಿ ಕೊಟ್ಟು 10 ವರ್ಷವಾದರೂ ಪಡಿತರ ಚೀಟಿ ಸಿಗದವರು ಇಲ್ಲಿ ಸಿಗುತ್ತಾರೆ. ‘ಸೀಮೆಎಣ್ಣೆ ಬೇಕಾದರೂ ಪಡಿತರ ಚೀಟಿ ಬೇಕು; ಅಡುಗೆ ಅನಿಲ ಸಿಲಿಂಡರ್‌ ಪಡೆಯಲೂ ಬೇಕು. ಆದರೆ ಯಾವುದಕ್ಕೂ ಸಿಗಲಿಲ್ಲವೆಂದರೆ ಏನು ಮಾಡಬೇಕು’ ಎಂದು ಕೇಳುತ್ತಾರೆ ಉಪ್ಪಿನ ಬೆಟಗೇರಿಯ ಬಸವರಾಜ ಆಯಟ್ಟಿ ಮತ್ತು ಯಲ್ಲಪ್ಪ ಮಸೂತಿ. ಗ್ರಾಮ ಪಂಚಾಯ್ತಿ ಕಚೇರಿಗೆ ಎಡತಾಕಿ ಸುಸ್ತುಹೊಡೆದಿರುವ ಅವರು ಇದೀಗ ಅಂಚೆಯಣ್ಣ ರೇಷನ್‌ ಕಾರ್ಡ್‌ ತಂದುಕೊಡುತ್ತಾನೆಂಬ ನಿರೀಕ್ಷೆಯಲ್ಲಿದ್ದಾರೆ. ಹತ್ತು ವರ್ಷ ಕಾದವರು ಇನ್ನಷ್ಟು ದಿನ ಕಾಯಲೂ ಸಿದ್ಧರಿದ್ದಾರೆ. ಹಳೆಯ ಕಾರ್ಡುಗಳು ರದ್ದಾಗಿ ವರ್ಷಗಳೇ ಕಳೆದುಹೋಗಿದ್ದರೂ ಅವರಿಗಿನ್ನೂ ಹೊಸ ಕಾರ್ಡುಗಳು ಸಿಕ್ಕಿಲ್ಲ. ಅಂಥವರು ಉಪ್ಪಿನಬೆಟಗೇರಿ, ಮನಸೂರ, ನವಲಗುಂದ ತಾಲ್ಲೂಕಿನ ಬೆಳವಟಗಿ, ಗುಡಿಸಾಗರ ಗ್ರಾಮಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ.

ಮನಸೂರಿನ ನಿಂಗವ್ವ ರಾಯಾಪುರ ಮತ್ತು ನೀಲಮ್ಮ ಬಂಡಿ ಅವರು ಪಡಿತರ ಕಾರ್ಡ್‌ಗೆ ಅವಶ್ಯವಿರುವ ಫೋಟೊ ನೀಡಿದ್ದಾರೆ. ದಾಖಲೆ ಸಲ್ಲಿಸಿದ್ದಾರೆ. ಇದಾಗಿ 5 ವರ್ಷಗಳೇ ಆಗಿವೆ. ಆಧಾರ್‌ ಕಾರ್ಡ್‌ ಬೇಕೆಂದಾಗ ಅದನ್ನೂ ಕೊಟ್ಟಿದ್ದಾರೆ. ಬೆರಳಿನ ಗುರುತನ್ನೂ. ಆದರೆ, ಅವರಿಗೂ ಇದುವರೆಗೆ ಪಡಿತರ ಚೀಟಿ ಸಿಕ್ಕಿಲ್ಲ. ‘ಮಳಿ ಇಲ್ಲದ ಹೊಲಾ ಎಲ್ಲಾ ಪಡಾ ಬಿದ್ದಾವು. ಏನ್‌ ಉಣ್ಣೋದು? ಎಲ್ಲಾನೂ ಪ್ಯಾಟ್ಯಾಗ ತಂದ... ತಿನ್ನೋದಾಗೇತಿ’ ಎನ್ನುತ್ತಾರೆ ಅವರಿಬ್ಬರು.

‘ಒಲಿ ಪುಟ ಮಾಡಾಕ ಚಿಮಣಿ ಎಣ್ಣಿ ಬೇಕ. ನಮಗ ಕಾರ್ಡ್‌ ಇಲ್ಲಲ್ಲ? ಹರಕ ಅರಿಬಿ (ಹರಿದ ಬಟ್ಟೆ), ಬ್ಯಾಗಡಿ (ಪ್ಲಾಸ್ಟಿಕ್‌ ಹಾಳೆ), ಮ್ಯಾಣಬತ್ತಿ ಹಚ್ಚಿ ಒಲಿ ಪುಟ ಮಾಡೋದಾಗೇತಿ. ಹಳ್ಳ್ಯಾಗ ಕರೆಂಟ್‌ ಏನ್‌ ಗೊತ್ತಿಂದ? ಯಾವಾಗ್‌ ಬೇಕಾದಾಗ ತಗೀತಾರು. ಕತ್ತಲದಾಗ ದಿನಾಲೂ ಮ್ಯಾಣಬತ್ತಿ ಎಷ್ಟೊಂದ್ ಹಚಕೊಂಡ್‌ ಕುಂದ್ರದಾಕ್ಕೇತಿ?’ ಎಂದು ತಮ್ಮ ಸಂಕಟ ಬಿಚ್ಚಿಡುತ್ತಾರೆ. ಕೊನೆಗೆ ಅಡುಗೆ ಅನಿಲ ಸಂಪರ್ಕ ಪಡೆಯಬೇಕಾದರೂ ಅವರಿಗೆ ಪಡಿತರ ಚೀಟಿಯ ಅವಶ್ಯಕತೆ ಇದೆ.

ಅಕ್ಕಿಯಷ್ಟನ್ನೇ ಪಡೆದರೆ ₹20 ಕೊಡಬೇಕು! : ತಲಾ 7 ಕೆ.ಜಿ ಅಕ್ಕಿಯನ್ನಷ್ಟೇ (ಉಚಿತ) ಪಡೆದರೆ, ಅಂಗಡಿಯವರಿಗೆ ₹20 ಕೊಟ್ಟು ಬರಬೇಕಾದ ಪರಿಸ್ಥಿತಿ ಮನಸೂರಿನಲ್ಲಿದೆ. ಇನ್ನು, ರಿಯಾಯ್ತಿ ದರದಲ್ಲಿ (₹ 38) ಕೊಡಬೇಕಾದ ಬೇಳೆಯನ್ನು ₹38, ₹40, ₹ 50 ಹಾಗೂ ₹ 60ಕ್ಕೂ ಮಾರಲಾಗುತ್ತಿದೆ. ಅದನ್ನು ಪ್ರಶ್ನಿಸಲೂ ಆಗದೇ, ಅಷ್ಟು ದುಡ್ಡು ಕೊಡುವ ಮನಸ್ಸೂ ಇಲ್ಲದೇ ಗೊಂದಲದಲ್ಲಿದ್ದಾರೆ ಊರವರು. ಯಾಕೆ ಹೀಗೆ ಎಂದು ಕೇಳಿದವರಿಗೆ ಅಂಗಡಿಯವರು ಕೊಡುವ ಉತ್ತರ ‘ರೇಷನ್‌ ಕೊಡೋದ್ರಿಂದ ನಮಗೇನೂ ಗಿಟ್ಟೋದಿಲ್ಲ’ ಎಂಬುದು. ಅವರನ್ನು ಎದುರು ಹಾಕಿಕೊಳ್ಳಲಾಗದೇ, ಸಿಗುವ ಒಂದು ಲೀಟರ್ ಸೀಮೆಎಣ್ಣೆಗೂ ಎಲ್ಲಿ ಕಲ್ಲು ಬಿದ್ದೀತೋ ಎಂಬ ಆತಂಕದಲ್ಲಿ ಅವರು ಹೇಳಿದಷ್ಟು ದರಕ್ಕೆ ಬೇಳೆ ತರುತ್ತಿರುವುದಾಗಿ ಹೇಳುತ್ತಾರೆ ಸಾವಿತ್ರಿ ಅಡಿವೆಪ್ಪನವರ. ವಿಶೇಷ ಎಂದರೆ ಒಂದೇ ಊರಿನಲ್ಲಿ ಒಂದು ಕೆ.ಜಿ ಬೇಳೆಗೆ ನಾಲ್ಕು ತೆರನಾದ ದರವಿದೆ ಎಂಬುದು ಅವರ ಊರಿನ ಬಹುತೇಕರಿಗೆ ಗೊತ್ತಿಲ್ಲ.

ಇನ್ನು ಇದೇ ಊರಿನ ಅಜ್ಜಿ ತಿಪ್ಪಮ್ಮ ಹಾಗೂ ಆಕೆಯ ವೃದ್ಧ ಪತಿ ಹೆಸರಿನಲ್ಲಿ ಪಡಿತರ ಚೀಟಿಯೇ ಇಲ್ಲ. ಇಬ್ಬರೂ ಕೃಷಿ ಕಾರ್ಮಿಕರು. ‘ಯಾರ್‍ದರ ಹತ್ರ ಜಾಸ್ತಿ ಇದ್ರ, ನೂರು ರೂಪಾಯಿಗೆ ಚಿಟ್ಟಿ (8 ಸೇರು) ಅಕ್ಕಿ ಕೊಡತಾರ್‍ರಿ. ಇನ್ನುಳಿದ ಸಾಮಾನೆಲ್ಲ ಕೊಂಡ...ತರತೇವ್ರಿ’ ಎನ್ನುತ್ತಾಳೆ ತಿಪ್ಪಮ್ಮ.

ಮೊದಲಿದ್ದದ್ದ... ಪಾಡಿತ್ತು!: ‘ಒಮ್ಮೆ ಕರೆಂಟ್ ಇಲ್ಲ ಅನ್ನೋದು, ಇನ್ನೊಮ್ಮೆ ಸರ್ವರ್ ಇಲ್ಲ ಅನ್ನೋದು. ರೇಷನ್ ಕಾರ್ಡು, ಫೋಟೊ, ಆಧಾರ್ ಕಾರ್ಡ್ ಎಲ್ಲಾ ಇದ್ದೂ ಕಾಯ್ಕೊಂತ ಕುಂದರಬೇಕಾಗತೈತಿ. ಸರ್ಕಾರಕ್ಕ ಇದೆಲ್ಲ ತಿಳಿಯೋದಿಲ್ಲ ಬಿಡ್ರಿ. ಹೆಂಗೋ ಒಂದ್ ಕಾಯ್ದೆ ಮಾಡಿಬಿಡ್ತಾರಾ ತೀರ್‍ತು! ಏನೋ ಮೊದ್ಲಿಂದ ಒಂದೀಟು ಪಾಡಿತ್ತು’ ಎಂಬುದು ನವಲಗುಂದ ತಾಲ್ಲೂಕು ಬೆಳವಟಗಿಯ ಮಲ್ಲಪ್ಪ ಅಳಗವಾಡಿ ಅವರ ಅಂಬೋಣ.

‘ಹಂಗಲ್ರೀ ಅಜ್ಜಾರ, ಮೊದ್ಲ ಆಗಿದ್ರ ಅಕ್ಕೀನ್ನ ಕಾಳಸಂತ್ಯಾಗ ಮಾರತಿದ್ರು. ನಕಲಿ ಕಾರ್ಡ್ ಇದ್ವು. ಅದನ್ನೆಲ್ಲ ತಪ್ಪಸಾಕ...’ ಎಂದು ಹೇಳುತ್ತಿದ್ದುದೇ ತಡ, ‘ಈಗೇನ್ ಮಾರೋದಿಲ್ಲೇನ್ರಿ’ ಎಂದು ಮರಳಿ ಪ್ರಶ್ನೆ ಎಸೆದರು ಮಲ್ಲಪ್ಪ.

‘ಅಲ್ಲೊಂದು ಗೋಡಾನ್ ಹಿಡದಾರ, ಇಲ್ಲೊಂದು ಗೋಡಾನ್ ಹಿಡದಾರ ಅಂತ ಎಷ್ಟು ಓದೋದಿಲ್ಲ ಪೇಪರನ್ಯಾಗ? ಕುಂದಗೋಳದಾಗ ಗ್ರಾಮ ಪಂಚಾಯ್ತಿ ಸದಸ್ಯನ ಮನ್ಯಾಗನ ಕ್ವಿಂಟಾಲ್‌ಗಟ್ಟಲೆ ಅಕ್ಕಿ ಸಿಕ್ಕವು. ಯಾರ್ ಮಾರ್‍ತಾರ್ ಯಾರಿಗ್ಗೊತ್ತು? ರೇಷನ್ ಹೋರೋರ ಮನಿಗೆ ನಾಕ್ ಚೀಲ ಹೊಕ್ಕಾವು. ಏಜೆನ್ಸಿ ಮಾಡೋನ್ನ ಮನೀಗೆ ನಾಕ್ ಚೀಲ ಹೊಕ್ಕಾವು.... ಅದನ್ ಏನ್ ಕೇಳ್ತೀರಿ?’ ಎನ್ನುತ್ತಾರೆ ಅವರು.

‘ನೂರಾಎಂಟ್ ನಮೂನೆ ಕಾಯ್ದೆ ತಂದಾರ. ಆದ್ರೂ ಇದೆಲ್ಲ ಅತೀ ಆತು ಬಿಡ್ರಿ. ಈ ಸಲ ಹೆಬ್ಬೆಟ್ಟು ಹತ್ತಿದರ, ಮುಂದಿನ ತಿಂಗಳ ಹತ್ತತೈತಿ ಅನ್ನೋ ಗ್ಯಾರಂಟೀನೂ ಇಲ್ಲ’ ಎಂದು ಬೇಸರಿಸಿದರು.

‘ಮುದುಕ್ರು ತದುಕ್ರಿಗೆ ಎಷ್ಟು ತ್ರಾಸು? ಎಂಟೆಂಟ್ ದಿನಾ ಎಡತಾಕತಾವು ಪಾಪ... ಅಡ್ಯಾಡಕ ಬರೋದಿಲ್ಲ. ರಿಕ್ಷಾದಾಗ ಬರಬೇಕು. ಇಲ್ಲಾ... ಮೋಟಾರ್ ಸೈಕಲ್ ಮ್ಯಾಲ ಯಾರರ ಕರ್‍ಕೊಂಡ್ ಬರಬೇಕು. ಇಲ್ಲೆ ಬಂದು ಸಕಾದ್ ಕಾದ್ ಹೋಗಬೇಕು. ಮತ್ ಮ್ಯಾಲ ಅವರ ಕೂಡ ಒಬ್ರು ಬಾಳೆಗೆಟ್ಟ ಕುತ್ಕೋಬೇಕು. ಎಂಥಾ ಕಾಯ್ದೇರಿ ಇವು?’ ಎಂದು ಮಲ್ಲಪ್ಪ ಕೇಳಿದರೆ, ಬೆರಳು ಗುರುತು ಕೊಡಲೆಂದು ಬಂದಿದ್ದ ವೃದ್ಧೆ ಲಕ್ಷ್ಮವ್ವ, ‘ನೀ ಹೇಳೋದು ಬರೋಬ್ಬರಿ ಐತಿ’ ಎಂದರು. ‘ಮೊದ್ಲ ಇದ್ದಿದ್ದ ಪಾಡಿತ್ತು. ಏಟರ ಯಾಕಾಗವಲ್ದಾಕ. ರೊಕ್ಕಾ ಕೊಡತಿದ್ವಿ; ತೂಕ ಮಾಡಿ ಕೊಡತಿದ್ರು, ಒಯ್ಯತಿದ್ವಿ’ ಎಂದು ದನಿಗೂಡಿಸಿದರು.

ಕಿವಿಯಾಗಿ ನಿಂತಿದ್ದ ದುರ್ಗಪ್ಪ, ‘ಮೂರ್ ಸಲ ಅರ್ಜಿ ಕೊಟ್ರೂ ನಮ್ಮ ರೇಷನ್ ಕಾರ್ಡ್ ಬಂದಿಲ್ಲರಿ. ಪಂಚಾಯ್ತಿಯವ್ರು ಹೇಳದಂಗ ಎಲ್ಲಾ ಮಾಡೇವಿ. ಇಲ್ಲೇ ನಮ್ಮೂರಾಗ 70 ಕಾರ್ಡ್ ರದ್ದು ಆಗ್ಯಾವು. ದುಡ್ಕೊಂಡ್ ತಿನ್ನೋ ಮಂದಿರಿ.. ಭಾಳ ಒಜ್ಜಿ ಆಗೇತಿ’ ಎಂದರು.

ಮಕ್ಕಳಿಂದ ದೂರವಾದ, ವೃದ್ಧರು, ವಿಧವೆಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹೀಗೆ ಹಲವರಿಗೆ ಹಲವು ಸಮಸ್ಯೆಗಳಿವೆ. ಅದು ನ್ಯಾಯಬೆಲೆ ಅಂಗಡಿಯವರಿಗೂ ಗೊತ್ತಿದೆ. ಪಂಚಾಯ್ತಿ ಸಿಬ್ಬಂದಿಗೂ ಗೊತ್ತಿದೆ. ಆದರೆ, ಅವರಿಗೆ ನೆರವಾಗುವ ಸಮಯ ಬಂದಾಗ ಸರ್ಕಾರದ ಆದೇಶ ಅಡ್ಡ ಬರುತ್ತಿದೆ!

ಆಹಾರದ ಹಕ್ಕಿನ ನಿರಾಕರಣೆ: ಇಷ್ಟು ದಿನ ಪಡಿತರ ಎನ್ನುವುದು ಒಂದು ಯೋಜನೆ ಮಾತ್ರ ಆಗಿತ್ತು. ಆದರೆ ಅದೀಗ ಜನರ ಹಕ್ಕಾಗಿದೆ. ಆದರೆ ನೂರೆಂಟು ನಿಯಮಗಳನ್ನು ಮುಂದೆ ಮಾಡಿ ಜನರ ಈ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎನ್ನುತ್ತಾರೆ ಆಹಾರದ ಹಕ್ಕಿಗಾಗಿ ಆಂದೋಲನದ ಕಾರ್ಯಕರ್ತೆ ಶಾರದಾ ಗೋಪಾಲ.

ಈ ಎಲ್ಲ ನಿಯಮ ಮಾಡಿದ್ದು ಬೋಗಸ್ ಕಾರ್ಡ್ ತಡೆಯಲು ಎನ್ನುವುದಾದರೆ, ಅಂಥ ಕಾರ್ಡುಗಳನ್ನು ಕೊಟ್ಟವರಾರು ಎಂಬುದು ಅವರ ಪ್ರಶ್ನೆ. ‘ನೀವು ಯಾರಿಗೆ ಕುರ್ಚಿ ಕೊಟ್ಟಿದ್ದೀರೋ ಅವರು ಮಾಡಿದ ತಪ್ಪಿಗೆ ಜನರಿಗೆ ಯಾಕೆ ಶಿಕ್ಷೆ?’ ಎಂದು ಕೇಳುತ್ತಾರೆ ಅವರು.

ಅಂತ್ಯೋದಯ ಕಾರ್ಡ್‌ಗಳನ್ನು ಸಾರಾಸಾರವಾಗಿ ಪರಿಶೀಲಿಸಿದ ಬಳಿಕವಷ್ಟೇ ರದ್ದು ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಅದು ದಾಖಲೆಯಲ್ಲಷ್ಟೇ ಇದೆ. ಆಧಾರ್ ಇಲ್ಲದಿದ್ದರೆ ಪಡಿತರ ನಿರಾಕರಿಸುವಂತಿಲ್ಲ ಎಂಬ ಆಹಾರ ಇಲಾಖೆಯ ಸೂಚನೆಯೂ ಅದೇ ರೀತಿಯದು. ಬಯೊಮೆಟ್ರಿಕ್ ದೃಢೀಕರಿಸುವಲ್ಲಿ ತೊಂದರೆ ಆದರೆ, ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ತಾಂತ್ರಿಕ ದೋಷದಿಂದ ಯಾರೊಬ್ಬರಿಗೂ ಪಡಿತರ ಆಹಾರ ಧಾನ್ಯ ಸಿಗದೇ ಹೋಗಬಾರದು ಎಂಬ ಆ ಸೂಚನೆ ಕೂಡ ದಾಖಲೆಯಲ್ಲಷ್ಟೇ ಇದೆ. ಆದರೆ, ಮೌಖಿಕ ಆದೇಶ ಬೇರೆಯದೇ ಇರುತ್ತದೆ. ಜಿಲ್ಲೆಗೆ ಇಂತಿಷ್ಟೇ ಆಹಾರ ಧಾನ್ಯ ಹೋಗಬೇಕು ಎಂದು ಹೇಳಲಾಗಿರುತ್ತದೆ. ಅಷ್ಟೇ ಅಲ್ಲ; ನಿಜವಾದ ಬೋಗಸ್ ಕಾರ್ಡುಗಳನ್ನು ರದ್ದುಮಾಡಿಯೇ ಇಲ್ಲ ಎನ್ನುತ್ತಾರೆ ಶಾರದಾ.

ಆದರೆ, ಈಗೀಗ ಪಡಿತರ ಧಾನ್ಯ ಪೋಲಾಗುತ್ತಿಲ್ಲ ಎಂದು ಜನರು ಅಲ್ಲಲ್ಲಿ ಹೇಳುತ್ತಿದ್ದಾರೆ. ವ್ಯವಸ್ಥೆ ಬಿಗಿಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆಗೆ ತಮಗೆ ಒಂದೊಂದು ತಿಂಗಳು ಒಂದು ಕೆ.ಜಿ ಅಕ್ಕಿ ಕಡಿಮೆ ಬರುತ್ತದೆ ಎಂದೂ ಹೇಳುತ್ತಾರೆ. ಕುಟುಂಬದಲ್ಲಿ ಐವರಿದ್ದರೆ ಅವರಿಗೆ ತಲಾ ಏಳು ಕೆ.ಜಿಯಂತೆ 35 ಕೆ.ಜಿ ಅಕ್ಕಿ ಸಿಗಬೇಕು. ಆದರೆ 30 ಕೆ.ಜಿ ಕೊಟ್ಟರೂ ಸುಮ್ಮನೇ ತರುತ್ತಾರೆ ಹುಬ್ಬಳ್ಳಿಯ ಲೋಕಪ್ಪನಹಕ್ಕಲದ ನಿವಾಸಿ ಅನ್ನಪೂರ್ಣಮ್ಮ.

ಎಲ್ಲದಕ್ಕಿಂತ ಹೆಚ್ಚು ಅವರಿಗೆ ಸಮಸ್ಯೆ ಎನಿಸಿರುವುದು ಹಲವಾರು ‘ಲಿಂಕ್‌’ಗಳ ಜಂಜಾಟದಲ್ಲಿ, ರದ್ದಾದ ಕಾರ್ಡ್‌ ಇದುವರೆಗೂ ಮರಳಿ ಸಿಗದೇ ಇರುವಲ್ಲಿ. ಬೆರಳ ಗುರುತು ಸಿಗದೇ ಹೋದಲ್ಲಿ. ಎರಡೆರಡು ದಿನದ ದುಡಿಮೆಯನ್ನು ಕಳೆದುಕೊಳ್ಳುವಲ್ಲಿ.

ಕೈಯಲ್ಲಿನ ಗೆರೆ ಸವೆಯುವಂತೆ ದುಡಿದು ಹಣ್ಣಾದ ಜೀವಗಳಿಗೆ ಆ ಗೆರೆಗಳೇ ಹೀಗೆ ಕಾಡಬಹುದು ಎಂಬ ಅಂದಾಜು ಇರಲಿಕ್ಕಿಲ್ಲವೇನೋ! ಹೊಲದ ಕೆಲಸ ಮಾಡುವ ಕೈಗಳು ಮುದುಕರದಾದರೇನು, ಯುವಕರದಾದರೇನು? ಯಾರ ಕೈಬೆರಳೂ ನಿತ್ಯ ಒಂದೇ ರೀತಿಯಾಗಿ ಇರದು; ಅದರಲ್ಲೂ ಚಳಿಗಾಲದಲ್ಲಿ ಇನ್ನೂ ಕಷ್ಟ ಎಂಬುದನ್ನು ಯಾರಿಗೆ ಹೇಳಬೇಕು ಅವರು?
*
₹ 135ರ ಖರೀದಿ ಕಡ್ಡಾಯ!
ನಸುಕಿನ 5ಕ್ಕೇ ಪಾಳಿ ಹಚ್ಚಿ, ಒಂದು ದಿನದ ದುಡಿಮೆ ಬಿಟ್ಟು ಕಾದು ನಿಂತರೂ ಸರ್ವರ್ ನೆಟ್ಟಗೆ ಕೆಲಸ ಮಾಡುತ್ತದೆ ಎನ್ನುವಂತಿಲ್ಲ. ಆದರೆ ಆಯ್ತು ಇಲ್ಲದಿದ್ದರೆ ಇಲ್ಲ ಎನ್ನುವ ಅಜಮಾಸಿನಲ್ಲೇ ಕಾಯಬೇಕು. ಬಯೊಮೆಟ್ರಿಕ್ ಕೂಡ ಬೆರಳಿನ ಗುರುತು ಹಿಡಿದುಬಿಟ್ಟರೆ ಮಧ್ಯಾಹ್ನದವರೆಗೂ ಕಾದಿದ್ದು ಸಾರ್ಥಕ! ರೇಷನ್‌ ಬಂದ ಬಗ್ಗೆ ಊರಲ್ಲಿ ಡಂಗುರ ಸಾರಿದ ಮೇಲೆ ಹೋಗಿ ಅಕ್ಕಿ, ಬೇಳೆ ತೆಗೆದುಕೊಂಡು ಬಂದುಬಿಡಬೇಕು ಅಷ್ಟೆ.

ಆದರೆ, ಉಪ್ಪಿನ ಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾತ್ರ ಅಕ್ಕಿಯ ಜೊತೆಗೆ ಊದುಬತ್ತಿ, ಚಹಾಪುಡಿ, ಸ್ನಾನದ ಸಾಬೂನು, ಬಟ್ಟೆ ತೊಳೆಯುವ ಸಾಬೂನು ಸೇರಿದಂತೆ ₹ 135 ಬಿಲ್ ಸಿದ್ಧವಾಗಿರುತ್ತದೆ. ಬೇಳೆ ಹೊರತುಪಡಿಸಿ ಉಳಿದವುಗಳನ್ನು ನಿರಾಕರಿಸುವಂತೆಯೇ ಇಲ್ಲ. ಖರೀದಿ ಕಡ್ಡಾಯ! ಇಲ್ಲದಿದ್ದರೆ ಅಕ್ಕಿ–ಬೇಳೆ ಸಿಗುವುದಿಲ್ಲ ಎನ್ನುತ್ತಾರೆ ಊರವರು. ಆ ಸಾಮಗ್ರಿಗಳು ಕೂಡ ಕಳಪೆ ಗುಣಮಟ್ಟದ್ದಾಗಿದ್ದು, ಅವರು ಕೊಟ್ಟ ಸಾಬೂನು ಬಳಸಿದರೆ ಮೈಗೆ ತುರಿಕೆ ಏಳುತ್ತದೆ ಎಂದು ದೂರುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ‘ನಮ್ಮ ಸಂಘದ ಗೋದಾಮಿನ ನಿರ್ವಹಣೆಗೆ, ಅಕ್ಕಿಮೂಟೆಗಳನ್ನು ಹೊರುವ ಹಾಗೂ ತೂಕ ಮಾಡುವ ಕಾರ್ಮಿಕರಿಗೆ ಹಾಗೂ ಬೆರಳು ಗುರುತು ಪಡೆಯುವ ಸಿಬ್ಬಂದಿಗೆ ಸಂಬಳ ನೀಡಬೇಕು. ಅದರ ಖರ್ಚು ತೆಗೆಯಲೆಂದು ₹ 135 ಸಾಮಾನು ನೀಡುತ್ತಿದ್ದೇವೆ’ ಎಂದರು. ಆದರೆ, ಇದೇ ವೇಳೆಗೆ ‘ಇದೇನು ಕಡ್ಡಾಯವಲ್ಲ’ ಎಂದೂ ಹೇಳಿದರು. ಎಂಎಸ್‌ಐಎಲ್‌ ನಿಂದ ಖರೀದಿಸಿದ, ಜನರಿಗೆ ಉಪಯುಕ್ತವಾದ ಪದಾರ್ಥಗಳನ್ನೇ ನೀಡಲಾಗುತ್ತಿದೆ. ಇದು ಹತ್ತು– ಹದಿನೈದು ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದು ಹೊಸದೇನಲ್ಲ ಎಂದರು.

‘ಪಡಿತರ ವಿತರಣೆಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡುವ ಕಮಿಷನ್‌ ಸಾಕಾಗುವುದಿಲ್ಲ. ಅದಕ್ಕಾಗಿ ಈ ಸಂಘವು ಈ ಮಾರ್ಗ ಕಂಡುಕೊಂಡಿದೆ. ಜನರು ಈ ಬಗ್ಗೆ ಆರಂಭದಲ್ಲಿ ತಕರಾರು ತೆಗೆದರು. ಆದರೆ ಅವರಿಗೆ ನ್ಯಾಯಬೆಲೆ ಅಂಗಡಿಗಳಿಗಿಂತಲೂ ಸಂಘದ ವಹಿವಾಟಿನ ಪ್ರಾಮುಖ್ಯ ತಿಳಿಸಿ, ಮನವೊಲಿಸಲಾಗಿದೆ’ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹಿರಿಯ ಉಪ ನಿರ್ದೇಶಕ ಸದಾಶಿವ ಮರ್ಜಿ ಅವರು ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.