ADVERTISEMENT

ಕೆಆರ್‌ಎಸ್‌: ಅಭಿವೃದ್ಧಿಯೋ, ಅನಾಹುತವೋ?

ಕಾವೇರಿ ಆರತಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಗಳಿಗೆ ರೈತಸಂಘದ ಪ್ರಬಲ ವಿರೋಧ

ಕೆ.ಎನ್‌.ನರಸಿಂಹಮೂರ್ತಿ
ಸಿದ್ದು ಆರ್.ಜಿ.ಹಳ್ಳಿ
Published 12 ಜೂನ್ 2025, 0:37 IST
Last Updated 12 ಜೂನ್ 2025, 0:37 IST
<div class="paragraphs"><p>ಕೆಆರ್‌ಎಸ್‌</p></div>

ಕೆಆರ್‌ಎಸ್‌

   

ರೈತರ ಜೀವನಾಡಿಯಾದ ಕೆಆರ್‌ಎಸ್‌ ಜಲಾಶಯದ ಬಳಿ ‘ಕಾವೇರಿ ಆರತಿ’ ನಡೆಸುವ ಹಾಗೂ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಯತ್ನ ರೈತರನ್ನು ಕೆರಳಿಸಿದೆ. 94 ವರ್ಷಗಳ ಹಳೆಯ ಅಣೆಕಟ್ಟೆಯ ಸುತ್ತ ರಾಜ್ಯ ಸರ್ಕಾರ ಹಲವು ಅಭಿವೃದ್ಧಿ ಯೋಜನೆ, ಕಾರ್ಯಕ್ರಮ, ಕಾಮಗಾರಿ ಹಮ್ಮಿಕೊಳ್ಳುತ್ತಿದೆ. ಅದರಿಂದ ಕನ್ನಂಬಾಡಿ ಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ. ಅವು ಅವೈಜ್ಞಾನಿಕ ಯೋಜನೆಗಳಾಗಿದ್ದು, ಅವಕಾಶ ಕೊಡುವುದಿಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದು, ಟೆಂಡರ್ ಪ್ರಕ್ರಿಯೆ ಮುಂದುವರಿಸಿದೆ. ವಿವಾದವು ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ

ಮೈಸೂರು ಮತ್ತು ಮಂಡ್ಯದ ಕೃಷಿ ಚಟುವಟಿಕೆಗಳಿಗೆಂದೇ ನಿರ್ಮಾಣವಾಗಿ, ಈಗ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುತ್ತಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯದ ನೆಲದಲ್ಲಿ ಈಗ ಪ್ರತಿಭಟನೆಯ ಕಾವೇರಿದೆ. ಅಲ್ಲಿ ‘ಕಾವೇರಿ ಆರತಿ’ ಹಮ್ಮಿಕೊಳ್ಳುವ ಹಾಗೂ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ (ಬೃಂದಾವನ ಉದ್ಯಾನ ಉನ್ನತೀಕರಣ) ನಿರ್ಮಿಸುವ ರಾಜ್ಯ ಸರ್ಕಾರದ ಪ್ರಯತ್ನ ರೈತರನ್ನು ಕೆರಳಿಸಿದೆ. ಬೃಹತ್ತಾದ ಯೋಜನೆ ಮತ್ತು ‘ಕಾವೇರಿ ಆರತಿ’ ಕಾರ್ಯಕ್ರಮಗಳೆರಡನ್ನೂ ರೈತರು ಏಕಕಾಲಕ್ಕೆ ವಿರೋಧಿಸುತ್ತಿದ್ದಾರೆ.

ADVERTISEMENT

ಕೆಆರ್‌ಎಸ್‌ ಅಣೆಕಟ್ಟೆಯ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಬೇಡ ಎಂಬುದು ರೈತರ ಆಗ್ರಹ. ಆದರೆ ರಾಜ್ಯ ಸರ್ಕಾರ ಮಾತ್ರ ಹೆಜ್ಜೆ ಹಿಂದಿಡುವುದಿಲ್ಲ ಎಂದು ಹೇಳಿದೆ. ಹೀಗಾಗಿ, ಸರ್ಕಾರ ಮತ್ತು ರೈತಸಂಘದ ನಡುವಿನ ಸಂಘರ್ಷ ತಾರಕಕ್ಕೇರಿದೆ. 

ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸ್ಥಳ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಒಳಗೊಂಡಿರುವ ‘ಕೆಆರ್‌ಎಸ್‌ ಡ್ಯಾಂ’ ಕೆಳಭಾಗದ ಪ್ರದೇಶ. ಈ ಅಂಶವೇ ರೈತರ ಕೆಂಗಣ್ಣಿಗೆ ಕಾರಣವಾಗಿರುವುದು. 1931ರಲ್ಲಿ ನಿರ್ಮಾಣಗೊಂಡ ಅಣೆಕಟ್ಟೆಗೆ ಈಗ 94 ವರ್ಷವಾಗಿದ್ದು, ಶತಮಾನದ ಹೊಸ್ತಿಲಲ್ಲಿದೆ. ‘ರೈತರ ಜೀವನಾಡಿಯಾದ ಕನ್ನಂಬಾಡಿ ಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆ ತರುವ, ಅನಾಹುತ ಸೃಷ್ಟಿಸುವ ಇಂಥ ಅವೈಜ್ಞಾನಿಕ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ’ ಎಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ.

ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕೈಗೊಳ್ಳಲು 2015–16, 2018–19 ಹಾಗೂ 2024–25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ‘198 ಎಕರೆ ಜಾಗದಲ್ಲಿ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಉನ್ನತೀಕರಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಬಹುದು ಮತ್ತು ಅದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ’ ಎಂಬುದು ಸರ್ಕಾರದ ವಾದ. 

‘2024ರ ಜುಲೈನಲ್ಲಿ ₹2,663 ಕೋಟಿ ಮೊತ್ತದ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಎರಡು ಬಾರಿ ಟೆಂಡರ್‌ ಆಹ್ವಾನಿಸಿದರೂ, ಬಿಡ್ಡುದಾರರು ಪ್ರತಿಕ್ರಿಯಿಸದೇ ಇದ್ದುದರಿಂದ 3ನೇ ಬಾರಿಗೆ 2025ರ ಮಾರ್ಚ್‌ 15ರಂದು ಟೆಂಡರ್‌ ಆಹ್ವಾನಿಸಲಾಗಿದೆ. ಈ ಬಾರಿ 7 ಬಿಡ್ಡುದಾರರು ಆಸಕ್ತಿ ವ್ಯಕ್ತಪಡಿಸಿದ್ದು, ‘ಪ್ರೀ ಬಿಡ್‌’ ಸಭೆಯಲ್ಲಿ ಭಾಗವಹಿಸಿದ್ದಾರೆ. ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು. 

ಅಮ್ಯೂಸ್‌ಮೆಂಟ್ ಪಾರ್ಕ್‌ನ ಭಾಗವಾಗಿ ಹೆಲಿಪ್ಯಾಡ್, ವಾಹನ ನಿಲ್ದಾಣ, ಮನರಂಜನಾ ಉದ್ಯಾನ, ತೂಗು ಸೇತುವೆ, ವೀಕ್ಷಣಾ ಗೋಪುರ ಸೇರಿದಂತೆ ಒಟ್ಟು 41 ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇವುಗಳಿಂದ ಅಣೆಕಟ್ಟೆಗೆ ಅಪಾಯ ಒದಗುತ್ತದೆ ಎನ್ನುವುದು ರೈತರ ವಾದ.   

ವಿವಾದಕ್ಕೆ ದಶಕದ ಇತಿಹಾಸ: ಈಗ ಎದ್ದಿರುವ ವಿವಾದ, ವಿರೋಧ, ಪ್ರತಿಭಟನೆಗೆ ದಶಕದ ಇತಿಹಾಸವಿದೆ. 2016–17ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಜಲಾಶಯ ಸಮೀಪ 300 ಎಕರೆ ಪ್ರದೇಶದಲ್ಲಿ ₹1,500 ಕೋಟಿ ವೆಚ್ಚದಲ್ಲಿ ‘ಡಿಸ್ನಿಲ್ಯಾಂಡ್’ ಹಾಗೂ 125 ಅಡಿಯ ಕಾವೇರಿ ಪ್ರತಿಮೆಯನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಿತ್ತು. ಡ್ಯಾಂ ಸಮೀಪದ ನಿಷೇಧಿತ ಪ್ರದೇಶದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಪರಿಸರ, ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆ ಚಳವಳಿ ಮತ್ತು ಕಾನೂನು ಹೋರಾಟದ ಮೂಲಕ ಯೋಜನೆಯನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದವು.

‘ಡಿಸ್ನಿಲ್ಯಾಂಡ್‌’ ಯೋಜನೆ ಮರುನಾಮಕರಣಗೊಂಡು ಈಗ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಆಗಿದೆ. ಇದರ ವಿರುದ್ಧವೂ ಪತ್ರಿಕಾಗೋಷ್ಠಿ, ಪ್ರತಿಭಟನೆ, ಮುಖ್ಯಮಂತ್ರಿಗೆ ಮನವಿ ಸೇರಿದಂತೆ ಹಲವು ರೀತಿಯಲ್ಲಿ ರೈತಸಂಘದವರು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಜೂನ್‌ 6ರಂದು ಮಂಡ್ಯದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ರೈತ ಸಂಘಟನೆಗಳ ಸಭೆ ಕರೆದು, ಅಭಿಪ್ರಾಯ ಕೇಳಲಾಗಿತ್ತು. ಈ ಎರಡು ಯೋಜನೆಗಳನ್ನು ಕೈಬಿಡಲು ರೈತಸಂಘದ ಮುಖಂಡರು ಸರ್ವಾನುಮತದ ನಿರ್ಣಯ ಮಂಡಿಸಿದ್ದರು. 

‘ರೈತರ ಅಭಿಪ್ರಾಯವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ತಿಳಿಸಿ, ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಕದ್ದುಮುಚ್ಚಿ ಕೆಆರ್‌ಎಸ್‌ ಅಣೆಕಟ್ಟೆ ಬಳಿ ಯೋಜನೆಗಳಿಗೆ ಸಂಬಂಧಿಸಿ ಕಾಮಗಾರಿ ಮುಂದುವರಿಸಿ ಮರಗಳನ್ನು ಕಡಿದು, ಪ್ಲಾಟ್‌ಫಾರಂ ಮಾಡಲು ಮುಂದಾಗಿರುವುದು ರೈತ ಮತ್ತು ಪ್ರಗತಿಪರ ಮುಖಂಡರನ್ನು ಕೆರಳಿಸಿದೆ. ಹೀಗಾಗಿ, ಮೇಣದ ಬತ್ತಿ ಪ್ರದರ್ಶನ, ಪ್ರತಿಭಟನಾ ಸಭೆ ಸೇರಿದಂತೆ ಹೋರಾಟ ವಿವಿಧ ರೂಪಗಳನ್ನು ಪಡೆಯುತ್ತಿದೆ.

ಕಾನೂನು ಹೋರಾಟ: ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಮತ್ತು ಕಾವೇರಿ ಆರತಿಯನ್ನು ವಿರೋಧಿಸಿ ಪ್ರತಿಭಟನೆಯ ಜೊತೆಜೊತೆಗೇ ಕಾನೂನು ಹೋರಾಟವೂ ಶುರುವಾಗಿದೆ. ಹೈಕೋರ್ಟ್ ವಕೀಲ ಎಂ.ಶಿವಪ್ರಕಾಶ್‌ ಅವರ ನೇತೃತ್ವದಲ್ಲಿ ರೈತರಾದ, ಮಂಡ್ಯ ತಾಲ್ಲೂಕಿನ ಗೋಪಾಲಪುರದ ಕೆ.ಬೋರಯ್ಯ, ಕೆ.ಆರ್‌.ಪೇಟೆ ತಾಲ್ಲೂಕಿನ ಇಂದುವಾಳು ಗ್ರಾಮದ ಎಚ್.ಚಂದ್ರಶೇಖರ್‌, ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರದ ಸಿ.ಮಂಜುನಾಥ್‌, ಹೊಂಗಳ್ಳಿಯ ಕೆ.ನರಸಿಂಹ ಮತ್ತು ಕನ್ನಂಬಾಡಿ ಗ್ರಾಮದ ಬಿ.ಪಾಪಣ್ಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ.

ಕೇಂದ್ರದ ಜಲಶಕ್ತಿ ಸಚಿವಾಲಯ, ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ, ಕಾವೇರಿ ನೀರಾವರಿ ನಿಗಮ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಜಿಲ್ಲಾಡಳಿತವನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಮೇ 15ರಂದು ಮೊಕದ್ದಮೆ ಹೂಡಿದ್ದು, ವಿಚಾರಣೆಯನ್ನು ಜೂನ್‌ 26ಕ್ಕೆ ನಿಗದಿ ಮಾಡಲಾಗಿದೆ. 

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನ ಬಳಿ ‘ಕಾವೇರಿ ಆರತಿ’ ನಡೆಯುವ ಸ್ಥಳದ ನೀಲನಕ್ಷೆ
ಜನವರಿಯಿಂದ ಜೂನ್‌ವರೆಗೆ ಡ್ಯಾಂನಲ್ಲಿ ನೀರು ಕಡಿಮೆಯಾಗಿ ಕೃಷಿ ಮತ್ತು ಕುಡಿಯುವುದಕ್ಕೆ ನೀರಿನ ತತ್ವಾರವಾಗುತ್ತದೆ. ಆಗ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಎಲ್ಲಿಂದ ನೀರು ತರುತ್ತಾರೆ?
– ಕೆ.ಬೋರಯ್ಯ ರೈತ ಮುಖಂಡ 
ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಉನ್ನತೀಕರಿಸುವ ಯೋಜನೆ ಇದಾಗಿದ್ದು ಡ್ಯಾಂ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ 
– ರಘುರಾಮ್‌ ಅಧೀಕ್ಷಕ ಎಂಜಿನಿಯರ್‌ ಕಾವೇರಿ ನೀರಾವರಿ ನಿಗಮ 
ಜಗತ್ತಿನಲ್ಲಿ ಎಲ್ಲಿಯೂ ಡ್ಯಾಂ ಪಕ್ಕ ಅಮ್ಯೂಸ್‌ಮೆಂಟ್‌ ಪಾರ್ಕ್‌ ಸ್ಥಾಪಿಸಿರುವ ಉದಾಹರಣೆಯಿಲ್ಲ. ಅಣೆಕಟ್ಟೆ ಪಕ್ಕ ನಿರ್ಮಾಣ ಕಾಮಗಾರಿ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಡ್ಯಾಂನಿಂದ 20 ಕಿ.ಮೀ.ದೂರದಲ್ಲಿ ಈ ಯೋಜನೆ ಕೈಗೊಳ್ಳುವುದು ಸೂಕ್ತ
– ಪ್ರೊ.ಬಸವರಾಜಪ್ಪ ನಿವೃತ್ತ ಹಿರಿಯ ಭೂವಿಜ್ಞಾನಿ

‘ರೈತರು ದುಡುಕಬಾರದು’

ಯೋಜನೆ ಕುರಿತು ರೈತರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ; ‌ಮತ್ತೊಮ್ಮೆ ಚರ್ಚಿಸಲೂ ಸಿದ್ಧನಿದ್ದೇನೆ. ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ನಂತರ ಸಂಘಟನೆಯವರ ಬಳಿಗೇ ಬಂದು ತೀರ್ಮಾನ ಕೈಗೊಳ್ಳಬೇಕೆಂಬುದು ನನ್ನ ಆಲೋಚನೆ. ಸಂಘಟನೆಯವರು ಆತುರಪಟ್ಟು ಪ್ರತಿಭಟನೆ ಮಾಡಿದರೆ ನಾನೇನು ಮಾಡಲಿ. ನಮಗೆ ಅವರಂತೆ ದುಡುಕುವ ಅವಶ್ಯಕತೆ ಇಲ್ಲ. ಅವರಿಗೆ ನಾವು ಯಾವ ಸೂಚನೆಗಳನ್ನೂ ನೀಡಲು ಆಗುವುದಿಲ್ಲ. ದೇವರು ಅವರಿಗೆ ಶಕ್ತಿ ಕೊಡಲಿ

- ಎನ್.‌ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ 

‘ಕಾವೇರಿ ಆರತಿ ನಿಲ್ಲಿಸಿ ಕೆರೆ–ಕಟ್ಟೆ ತುಂಬಿಸಿ’

ಕೆಆರ್‌ಎಸ್‌ ಅಣೆಕಟ್ಟೆ ಸಮೀಪ ಬೃಂದಾವನ ಉದ್ಯಾನದ ಬಳಿ ದಸರಾ ವೇಳೆಗೆ ‘ಕಾವೇರಿ ಆರತಿ’ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿದ್ದು ಅದನ್ನೂ ರೈತರು ಮತ್ತು ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.  ‘ಉತ್ತರ ಪ್ರದೇಶದ ‘ಗಂಗಾ ಆರತಿ’ಯಿಂದ ಪ್ರೇರಿತವಾದ ‘ಕಾವೇರಿ ಆರತಿ’ಯು ಮೌಢ್ಯ ಬಿತ್ತುವ ಕಾರ್ಯಕ್ರಮ. ಕರ್ಪೂರದ ಆರತಿಗೇಕೆ ₹92 ಕೋಟಿ? ಡ್ಯಾಂ ಬಳಿ 10 ಸಾವಿರ ಜನ ಒಂದೆಡೆ ಸೇರಿದರೆ ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ. ಕಾವೇರಿ ನದಿ ಕಲುಷಿತಗೊಂಡರೆ ಕುಡಿಯುವ ನೀರು ತಿನ್ನುವ ಅನ್ನ ವಿಷಮಯವಾಗುತ್ತದೆ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆತಂಕ ವ್ಯಕ್ತಪಡಿಸಿದರು.  ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ‘ಕಾವೇರಿ ಆರತಿ’ ಮತ್ತು ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಯೋಜನೆ ಜಾರಿಗೊಳಿಸುವುದರಿಂದ ಜಿಲ್ಲೆಯ ರೈತರಿಗೆ ಆಗುವ ಪ್ರಯೋಜನವೇನು? ಇದೇ ಹಣದಲ್ಲಿ ಉಪನಾಲೆಗಳನ್ನು ದುರಸ್ತಿಗೊಳಿಸಿ ಕೆರೆ–ಕಟ್ಟೆಗಳ ಹೂಳು ತೆಗೆಸಿದರೆ ರೈತರ ಬದುಕು ಬಂಗಾರವಾಗುತ್ತದೆ’ ಎಂದರು.  ಆದರೆ ‘ಯಾರೇ ವಿರೋಧಿಸಿದರೂ ದಸರಾ ವೇಳೆಗೆ ಕಾವೇರಿ ಆರತಿ ಮಾಡುತ್ತೇವೆ’ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್‌ ಹೇಳಿಕೆ ನೀಡಿದ್ದು ಅದು ರೈತರ ಆಕ್ರೋಶವನ್ನು ಹೆಚ್ಚಿಸಿದೆ. ‘ಶಾಸಕರು ತೊಡೆ ತಟ್ಟಿದರೆ ರೈತರು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ’ ಎಂದು ರೈತ ಮುಖಂಡರು ತಿರುಗೇಟು ನೀಡಿದ್ದಾರೆ.

ಪಕ್ಷಿಧಾಮಗಳಿಗೆ ಧಕ್ಕೆ; ಆತಂಕ

‘ಡ್ಯಾಂ ಸಮೀಪದ ಬೃಂದಾವನ ಉದ್ಯಾನ ಮತ್ತು ತೋಟಗಾರಿಕೆ ಜಾಗ ‘ಅರಣ್ಯ ಪ್ರದೇಶ’ ಎಂದು 1978ರಲ್ಲಿ ನೋಟಿಫಿಕೇಶನ್‌ ಆಗಿದೆ. ಅಣೆಕಟ್ಟೆಗೆ ಒಂದು ಕಿ.ಮೀ. ದೂರದಲ್ಲಿರುವ ದೇವರಾಜ ಪಕ್ಷಿಧಾಮದಲ್ಲಿ ನೀರುನಾಯಿ ಮತ್ತು ವಲಸೆ ಪಕ್ಷಿಗಳಿವೆ. 3 ಕಿ.ಮೀ. ದೂರದಲ್ಲಿ ರಂಗನತಿಟ್ಟು ಮತ್ತು ಕಾವೇರಿ ನದಿ ತೀರದಲ್ಲಿ ಗೆಂಡೆಹೊಸಹಳ್ಳಿ ಪಕ್ಷಿಧಾಮವಿದೆ. ಪಕ್ಷಿ ಸಂಕುಲಕ್ಕೂ ಯೋಜನೆಯಿಂದ ತೊಂದರೆಯಾಗುತ್ತದೆ’ ಎನ್ನುತ್ತಾರೆ ಮಂಡ್ಯದ ಸಾಮಾಜಿಕ ಕಾರ್ಯಕರ್ತ ಕೆ.ಆರ್‌.ರವೀಂದ್ರ.   ‘ಈ ಹಿಂದೆ ಡ್ಯಾಂ ಬಳಿ ನಡೆಸಲು ಯತ್ನಿಸಿದ್ದ ‘ಟ್ರಯಲ್‌ ಬ್ಲಾಸ್ಟ್‌’ ಅನ್ನು ಹೋರಾಟದ ಮೂಲಕ ತಡೆದಿದ್ದೇವೆ. ಈಗ ಅಮ್ಯೂಸ್‌ಮೆಂಟ್‌ ಪಾರ್ಕ್‌ಗಾಗಿ ಆಳವಾದ ದೊಡ್ಡ ಗುಂಡಿಗಳನ್ನು ತೋಡಿದರೆ ಶಿಲಾ ಪದರದ ಮೇಲೆ ನಿಂತಿರುವ ಕೆಆರ್‌ಎಸ್ ಅಣೆಕಟ್ಟೆ ಕಂಪಿಸಿದರೆ ಆಗುವ ಅನಾಹುತಕ್ಕೆ ಯಾರು ಹೊಣೆ? ನಾವು ಅಭಿವೃದ್ಧಿ ವಿರೋಧಿಗಳಲ್ಲ. ನಮ್ಮ ಹೋರಾಟ ಡ್ಯಾಂ ಉಳಿವಿಗಾಗಿ’ ಎನ್ನುತ್ತಾರೆ ರೈತ ಮುಖಂಡ ಎ.ಎಲ್‌.ಕೆಂಪೂಗೌಡ.

‘ಅಣೆಕಟ್ಟು ಸುರಕ್ಷತಾ ಕಾಯ್ದೆ ಉಲ್ಲಂಘನೆ’

‘ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿ.ಮೀ ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ. ಬೇರೆ ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಅಣೆಕಟ್ಟೆಯ ಸ್ವರೂಪವನ್ನು ಬದಲಿಸುವಂತಿಲ್ಲ. ಆದರೂ ಸರ್ಕಾರವು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ’ ಎನ್ನುತ್ತಾರೆ ಯೋಜನೆ ವಿರುದ್ಧ ಪಿಐಎಲ್‌ ಹೂಡಿರುವ ‌ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್‌. ‘ಅಣೆಕಟ್ಟು ಸಂರಕ್ಷಿತ ಪ್ರದೇಶ. ಅದನ್ನು ಎಲ್ಲ ಬಗೆಯ ಅಪಾಯಗಳಿಂದ ಸಂರಕ್ಷಿಸಬೇಕು. ಆದರೆ ಅಭಿವೃದ್ಧಿಯ ಕಾರಣ ಒಡ್ಡಿ ಸಹಜ ನ್ಯಾಯಕ್ಕೆ ವಿರುದ್ಧವಾಗಿ ಯೋಜನೆಯ ವ್ಯಾಪ್ತಿಯ ಜಮೀನುಗಳ ಖಾತೆಗಳನ್ನು ಏಕಾಏಕಿ ಕಾವೇರಿ ನೀರಾವರಿ ನಿಗಮದ ಹೆಸರಿಗೆ ನಮೂದಿಸಲಾಗಿದೆ. ಇದು ಕಾನೂನುಬಾಹಿರ’ ಎಂಬುದು ಅವರ ಪ್ರತಿಪಾದನೆ. 

ಕೆಆರ್‌ಎಸ್‌ ಅಣೆಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.