ADVERTISEMENT

ಆಳ ಅಗಲ– ಕ್ರೆಡಿಟ್ ಸ್ಕೋರ್: ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನಿವಾರ್ಯ ಏಕೆ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 20:40 IST
Last Updated 11 ಫೆಬ್ರುವರಿ 2025, 20:40 IST
.
.   

ಕ್ರೆಡಿಟ್ ಸ್ಕೋರ್ ಬ್ಯಾಂಕಿಂಗ್ ಕ್ಷೇತ್ರದ ಬಹಳ ಮುಖ್ಯ ವ್ಯವಸ್ಥೆ. ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಚಾಲನೆಗೊಳ್ಳುವುದೇ ಸಾಲ ಪಡೆಯುವುದರಿಂದ. ಇಂದು ಯಾವುದೇ ವೃತ್ತಿಯ ಯಾವುದೇ ವ್ಯಕ್ತಿ ಆಗಿರಲಿ, ಸಾಲ ಪಡೆಯಬೇಕೆಂದರೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಕಡ್ಡಾಯವಾಗಿದೆ. ಅತಿ ಕಡಿಮೆ ಆದಾಯದ, ಇಲ್ಲವೇ ಆದಾಯವೇ ಇಲ್ಲದ ರೈತರು, ಕಾರ್ಮಿಕರಿಗೂ ಇದನ್ನು ಕಡ್ಡಾಯ ಮಾಡಿರುವುದಕ್ಕೆ ವಿರೋಧವೂ ವ್ಯಕ್ತವಾಗಿದೆ. ಈ ಕ್ರೆಡಿಟ್ ಅಂಕಗಳ ಲೆಕ್ಕಾಚಾರವನ್ನು ಯಾರು ಮಾಡುತ್ತಾರೆ? ಯಾವ ಆಧಾರದಲ್ಲಿ ಮಾಡುತ್ತಾರೆ ಎನ್ನುವುದರ ಕುರಿತ ವಿವರಗಳು ಇಲ್ಲಿವೆ  

ಮಹಾರಾಷ್ಟ್ರದಲ್ಲಿ ಒಂದು ಘಟನೆ ನಡೆದಿದೆ. ಯುವಕನೊಬ್ಬನ ಮದುವೆ ನಿಶ್ಚಯವಾಗಿ, ಮುಹೂರ್ತಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇರುವಾಗ ವರನ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ಎಂದು ವಧುವಿನ ಕುಟುಂಬಸ್ಥರು ಮದುವೆಯನ್ನು ರದ್ದುಪಡಿಸಿದ್ದಾರೆ. ಕ್ರೆಡಿಟ್ ಸ್ಕೋರ್, ಮದುವೆಯನ್ನು ಮುರಿದಿದೆ. ಕ್ರೆಡಿಟ್ ಲೆಕ್ಕಾಚಾರವು ಬ್ಯಾಂಕ್‌ನ ಗೋಡೆಗಳನ್ನು ದಾಟಿ ಮನೆ–ಮನಗಳನ್ನೂ ಪ್ರಭಾವಿಸುತ್ತಿದ್ದು, ಸಂಬಂಧಗಳ ಪಲ್ಲಟಗಳಿಗೂ ಕಾರಣವಾಗುತ್ತಿದೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.

ಕ್ರೆಡಿಟ್ ಸ್ಕೋರ್ ಎನ್ನುವುದು ಆಧುನಿಕ ಸಾಲ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಅದು ಇಲ್ಲದೇ ಬ್ಯಾಂಕ್‌ಗಳಿಂದ ಆಗಲಿ, ಬ್ಯಾಂಕ್‌ಯೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಸಿ) ಆಗಲಿ ಸಾಲವೇ ಸಿಗುವುದಿಲ್ಲ. ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಎಷ್ಟು ಎನ್ನುವುದನ್ನು ಲೆಕ್ಕಾಚಾರ ಹಾಕುವುದು ಖಾಸಗಿ ವ್ಯವಸ್ಥೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದಿರುವ ನಾಲ್ಕು ಖಾಸಗಿ ಕಂಪನಿಗಳು ಗ್ರಾಹಕರ ‌ಮಾಹಿತಿಯನ್ನು ಬ್ಯಾಂಕ್‌ಗಳಿಂದ ಪಡೆದು ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಹಾಕುತ್ತವೆ.

ADVERTISEMENT

ಯಾವುದೇ ವ್ಯಕ್ತಿಗೆ ಆಗಲಿ ಕ್ರೆಡಿಟ್ ಸ್ಕೋರ್ ಸೃಷ್ಟಿಯಾಗಬೇಕು ಎಂದರೆ, ಆತ/ಆಕೆ ಒಮ್ಮೆಯಾದರೂ ಸಾಲ ಮಾಡಿರಲೇಬೇಕು ಇಲ್ಲವೇ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ಸಾಲ ಮಾಡಿದ ನಂತರವೇ ಅವರ ಕ್ರೆಡಿಟ್ ಅಂಕಗಳ ಖಾತೆ ಚಾಲನೆಗೊಳ್ಳುತ್ತದೆ. ಒಬ್ಬರು ಎಷ್ಟು ಸಾಲ ಮಾಡಿದ್ದಾರೆ, ಅವರ ಮರುಪಾವತಿ ಹೇಗಿದೆ ಮುಂತಾದ ಮಾಹಿತಿ ಇರುವ ಸಾಲ ಇತಿಹಾಸವನ್ನು (ಕ್ರೆಡಿಟ್ ಹಿಸ್ಟರಿ) ಸೂಚಿಸುವ 300–900ರ ನಡುವಿನ ಅಂಕಗಳೇ ಕ್ರೆಡಿಟ್ ಸ್ಕೋರ್. 750ರ ನಂತರ ಸ್ಕೋರ್ ಹೆಚ್ಚು ಇದ್ದಷ್ಟೂ ಅವರಿಗೆ ಸಾಲ ಲಭ್ಯತೆ ಸಾಧ್ಯತೆ ಹೆಚ್ಚುತ್ತದೆ. ಅತಿ ಕಡಿಮೆ ಇದ್ದರೆ ಅವರಿಗೆ ಸಾಲವೇ ಸಿಗುವುದಿಲ್ಲ. ಗ್ರಾಹಕರಿಗೆ ಸಾಲ ಕೊಡಬೇಕೋ ಬೇಡವೋ ಎನ್ನವುದರಿಂದ ಹಿಡಿದು ಎಷ್ಟು ಸಾಲ ಕೊಡಬೇಕು ಎನ್ನುವವರೆಗೆ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಎನ್‌ಬಿಎಫ್‌ಸಿಗಳು ನಿರ್ಧರಿಸಲು ಕ್ರೆಡಿಟ್ ಸ್ಕೋರ್‌ ಆಧಾರವಾಗಿದೆ. ಸಾಲ ಪಡೆದವರು ಸಾಲದ ಕಂತುಗಳನ್ನು ಕಟ್ಟುವಲ್ಲಿ ವಿಫಲವಾದರೂ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಕಂಪನಿಗಳಿಗೂ ಕ್ರೆಡಿಟ್ ಸ್ಕೋರ್ (ಸಿಸಿಆರ್) ಲೆಕ್ಕ ಹಾಕಲಾಗುತ್ತದೆ. ಕಂಪನಿಗಳ ಸ್ಕೋರ್ 1–10ರವರೆಗಿನ ಅಂಕಿಗಳನ್ನು ಒಳಗೊಂಡಿದ್ದು 1 ಅತ್ಯುತ್ತಮ ಸ್ಕೋರ್ ಆಗಿದ್ದರೆ, 10 ಅತಿ ಕಳಪೆ ಸ್ಕೋರ್ ಎಂದು ಪರಿಗಣಿತವಾಗಿದೆ. 

ವ್ಯಕ್ತಿ ಪಡೆದ ಒಟ್ಟು ಸಾಲಗಳು, ಅದರ ಬಡ್ಡಿ, ಮರುಪಾವತಿ ಇತ್ಯಾದಿ ಮಾಹಿತಿ ಒಳಗೊಂಡ ವರದಿಯನ್ನು ಕ್ರೆಡಿಟ್ ಇನ್‌ಫರ್ಮೇಷನ್ ರಿಪೋರ್ಟ್ (ಸಿಐಆರ್‌) ಎನ್ನುತ್ತಾರೆ. ಸಿಐಆರ್‌, ಬ್ಯಾಂಕ್‌ ದಾಖಲೆಗಳಲ್ಲಿ ನಮೂದಾಗಿರುವ ಹೆಸರು, ಪ್ಯಾನ್ ನಂಬರ್, ಹುಟ್ಟಿದ ದಿನಾಂಕ ಮುಂತಾದ ವೈಯಕ್ತಿಕ ಮಾಹಿತಿ, ಖಾತೆದಾರನ ವಿಳಾಸ, ಫೋನ್ ನಂಬರ್, ಮೇಲ್‌ ಐಡಿ, ಖಾತೆದಾರನ ಉದ್ಯೋಗ ಮಾಹಿತಿ (ಕೆಲಸದ ಸ್ವರೂಪ, ಆದಾಯ) ಮತ್ತು ಖಾತೆದಾರನ ಸಾಲದ ಸ್ಥಿತಿಗತಿ (ಗೃಹ ಸಾಲ, ವಾಹನ ಸಾಲ ಇತ್ಯಾದಿ ಯಾವ ಮೂಲಗಳಿಂದ ಎಷ್ಟು ಸಾಲ ಪಡೆದಿದ್ದಾರೆ, ಮರುಪಾವತಿ ಹೇಗಿದೆ) ಮಾಹಿತಿಯನ್ನು ಒಳಗೊಂಡಿರುತ್ತದೆ.

ಕ್ರೆಡಿಟ್ ಸ್ಕೋರ್, ಇಂದು ಬ್ಯಾಂಕಿಂಗ್ ಕ್ಷೇತ್ರದ ಅನಿವಾರ್ಯ ವ್ಯವಸ್ಥೆ. ಬ್ಯಾಂಕ್/ಹಣಕಾಸು ಸಂಸ್ಥೆಗಳ ಸಾಲ ವ್ಯವಸ್ಥೆಯ ಆರೋಗ್ಯ ಕಾಪಾಡಲು ನೆರವಾಗುತ್ತಿರುವ ಈ ವ್ಯವಸ್ಥೆ, ಕೆಲವು ಗ್ರಾಹಕರಿಗೆ ಚಕ್ರವ್ಯೂಹವಾಗಿಯೂ ಮಾರ್ಪಟ್ಟಿದೆ. ರೈತರು, ಕಾರ್ಮಿಕರು ಮುಂತಾದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೂ ಸಾಲ ನೀಡಲು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಪರಿಗಣಿಸುತ್ತಿರುವುದರ ವಿರುದ್ಧ ಟೀಕೆ, ವಿರೋಧ ವ್ಯಕ್ತವಾಗುತ್ತಲೇ ಇದೆ.

ಗ್ರಾಹಕರು ವರ್ಷಕ್ಕೆ ಒಂದು ಬಾರಿ ಈ ನಾಲ್ಕೂ ಕಂಪನಿಗಳಿಂದ ಉಚಿತವಾಗಿ ತಮ್ಮ ಕ್ರೆಡಿಟ್‌ ಸ್ಕೋರ್‌ ತಿಳಿಯಬಹುದು. ಸ್ಕೋರ್‌ ಪಡೆಯುವುದಕ್ಕೆ ಮಿತಿ ಏನಿಲ್ಲ. ಹೆಚ್ಚು ಬಾರಿ ಬೇಕಾದರೆ ಕಂಪನಿಗಳಿಗೆ ಶುಲ್ಕ ಪಾವತಿಸಬೇಕಾಗಬಹುದು. ಇದಲ್ಲದೆ, ಖಾತೆ ಹೊಂದಿರುವ ಬ್ಯಾಂಕುಗಳ ಮೂಲಕವೂ ಕ್ರೆಡಿಟ್‌ ಸ್ಕೋರ್‌ ತಿಳಿದುಕೊಳ್ಳಬಹುದು.

ಕ್ರೆಡಿಟ್‌ ಸ್ಕೋರ್‌ನ ಲೆಕ್ಕಾಚಾರ ಹೇಗೆ?

ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಗ್ರಾಹಕರ ಸಾಲ ಮತ್ತು ಕ್ರೆಡಿಟ್‌ ಕಾರ್ಡ್‌ ಪಾವತಿ ವಿವರಗಳನ್ನು ತಿಂಗಳಿಗೊಮ್ಮೆ (ಇನ್ನು 15 ದಿನಗಳಿಗೊಮ್ಮೆ ನೀಡಬೇಕು ಎಂದು ಆರ್‌ಬಿಐ ಇತ್ತೀಚೆಗೆ ಆದೇಶ ಹೊರಡಿಸಿದೆ) ಕ್ರೆಡಿಟ್‌ ಇನ್ಫರ್ಮೇಷನ್‌ ಕಂಪನಿಗಳಿಗೆ ನೀಡುತ್ತವೆ. ಈ ಮಾಹಿತಿಯ ಆಧಾರದಲ್ಲಿ ಕಂಪನಿಗಳು ಆಯಾ ಗ್ರಾಹಕರ ಕ್ರೆಡಿಟ್‌ ಸ್ಕೋರ್‌ ಅನ್ನು ಲೆಕ್ಕಹಾಕಿ ಕ್ರೆಡಿಟ್‌ ಇನ್ಫರ್ಮೇಷನ್‌ ವರದಿಯನ್ನು (ಸಿಐಆರ್‌) ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿಗೆ ನೀಡುತ್ತವೆ. ಗ್ರಾಹಕರ ಸಾಲದ ಅರ್ಜಿಯನ್ನು ಪರಿಶೀಲಿಸುವಾಗ ಬ್ಯಾಂಕುಗಳು ಈ ಕ್ರೆಡಿಟ್‌ ಸ್ಕೋರ್‌ ಪರಿಗಣಿಸುತ್ತವೆ.

ಕ್ರೆಡಿಟ್‌ ಸ್ಕೋರ್‌ ಲೆಕ್ಕ ಹಾಕುವಾಗ ಕಂಪನಿಗಳು ಹಲವು ಮಾನದಂಡಗಳನ್ನು ಪರಿಗಣಿಸುತ್ತವೆ. ವ್ಯಕ್ತಿಯೊಬ್ಬರ ಸಾಲ/ಕ್ರೆಡಿಟ್ ಕಾರ್ಡ್‌ ಕಂತಿನ ಮರುಪಾವತಿಯ ವಿವರ, ಸಾಲ ಬಳಕೆ ಅನುಪಾತ (ಆದಾಯ ಮತ್ತು ಸಾಲದ ಅನುಪಾತ), ಹಲವು ಸಾಲಗಳು, ಕ್ರೆಡಿಟ್‌ ಕಾರ್ಡ್‌ ಬಳಕೆ, ಅಡಮಾನ ಇಲ್ಲದೆ ಪಡೆದಿರುವ ಸಾಲಗಳು ಮುಂತಾದ ವಿಚಾರಗಳನ್ನು ಅವಲೋಕಿಸಿ ಕ್ರೆಡಿಟ್‌ ಸ್ಕೋರ್‌ ಅನ್ನು ಲೆಕ್ಕಹಾಕಲಾಗುತ್ತದೆ. ಪ್ರತಿ ಕಂಪನಿ ನೀಡುವ ಸ್ಕೋರ್‌ನಲ್ಲಿ ವ್ಯತ್ಯಾಸ ಇರುತ್ತದೆ.

ದೇಶದಲ್ಲಿವೆ ನಾಲ್ಕು ಕಂಪನಿಗಳು

ಭಾರತದಲ್ಲಿ ನಾಲ್ಕು ಕಂಪನಿಗಳು ಕ್ರೆಡಿಟ್‌ ರೇಟಿಂಗ್ ನೀಡುತ್ತವೆ. ಈ ನಾಲ್ಕೂ ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಪರವಾನಗಿ ನೀಡಿದೆ.  

1. ಟ್ರಾನ್ಸ್‌ಯೂನಿಯನ್‌ ಕ್ರೆಡಿಟ್‌ ಇನ್ಫರ್ಮೇಷನ್‌ ಬ್ಯೂರೊ (ಇಂಡಿಯಾ) ಲಿಮಿಟೆಡ್‌ (ಸಿಬಿಲ್‌)

2. ಈಕ್ವಿಫಾಕ್ಸ್‌ ಕ್ರೆಡಿಟ್‌ ಇನ್ಫರ್ಮೇಷನ್‌ ಸರ್ವಿಸಸ್‌ ಪ್ರೈವೆಟ್‌ ಲಿಮಿಟೆಡ್‌

3. ಎಕ್ಸ್‌ಪೀರಿಯನ್‌ ಕ್ರೆಡಿಟ್‌ ಇನ್ಫರ್ಮೇಷನ್‌ ಕಂಪನಿ ಆಫ್‌ ಇಂಡಿಯಾ
ಪ್ರೈವೆಟ್‌ ಲಿಮಿಟೆಡ್‌

4. ಸಿಆರ್‌ಐಎಫ್‌ ಹೈ ಮಾರ್ಕ್‌ ಇನ್ಫರ್ಮೇಷನ್‌ ಸರ್ವೀಸಸ್‌ ಪ್ರೈವೆಟ್‌ ಲಿಮಿಟೆಡ್‌

ಕ್ರೆಡಿಟ್‌ ಇನ್ಫರ್ಮೇಷನ್‌ ಕಂಪನಿಗಳ (ನಿಯಂತ್ರಣ) ಕಾಯ್ದೆ –2005 ಮತ್ತು ಕ್ರೆಡಿಟ್‌ ಇನ್ಫರ್ಮೇಷನ್‌ ಕಂಪನಿಗಳ ನಿಯಮಗಳು–2006ರ ಅನುಸಾರ ಆರ್‌ಬಿಐ ಈ ಕಂಪನಿಗಳನ್ನು ನಿಯಂತ್ರಿಸುತ್ತದೆ.

ಈ ನಾಲ್ಕು ಕಂಪನಿಗಳ ಪೈಕಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಸಿಬಿಲ್. ಕ್ರೆಡಿಟ್‌ ಸ್ಕೋರ್‌ ನೀಡಲು ಆರಂಭಿಸಿದ ದೇಶದ ಮೊದಲ ಸಂಸ್ಥೆ ಇದು. 2000ದಲ್ಲಿ ಸ್ಥಾಪನೆಗೊಂಡಿದೆ. ಇದು ಎಷ್ಟು ಜನಪ್ರಿಯ ಎಂದರೆ, ಕ್ರೆಡಿಟ್‌ ಸ್ಕೋರ್‌ಗೆ ಅನ್ವರ್ಥವಾಗಿ ‘ಸಿಬಿಲ್‌ ಸ್ಕೋರ್‌’ ಎಂಬ ಪದವೇ ಬಳಕೆಯಲ್ಲಿದೆ. 2003ರಲ್ಲಿ ಕಂಪನಿಯು ಷಿಕಾಗೊದ ಕ್ರೆಡಿಟ್‌ ಬ್ಯೂರೊ ಸಂಸ್ಥೆ ಟ್ರಾನ್ಸ್‌ಯೂನಿಯನ್‌ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿತ್ತು. ಉಳಿದ ಮೂರನ್ನೂ ಅಮೆರಿಕದ ಕಂಪನಿಗಳು ನಿಯಂತ್ರಿಸುತ್ತಿವೆ.

ಪಾರದರ್ಶಕತೆಯ ಕೊರತೆ: ಆಕ್ಷೇಪ

ದೇಶದಲ್ಲಿರುವ ನಾಲ್ಕು ಕ್ರೆಡಿಟ್‌ ರೇಟಿಂಗ್‌ ಕಂಪನಿಗಳು ಖಾಸಗಿಯವು. ಒಂದನ್ನು ಬಿಟ್ಟು ಉಳಿದ ಮೂರು ಕಂಪನಿಗಳು ನೇರವಾಗಿ ಅಮೆರಿಕದ ಕಂಪನಿಗಳ ಹಿಡಿತದಲ್ಲಿವೆ. ಇವುಗಳು ನೀಡುವ ಕ್ರೆಡಿಟ್‌ ರೇಟಿಂಗ್‌ನಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಂಸತ್ತಿನಲ್ಲೇ ಈ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರು ಇದರ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದಾರೆ.

ಹಣಕಾಸಿನ ವ್ಯವಹಾರಗಳಿಗೆ ಈಗ ಕ್ರೆಡಿಟ್‌ ಸ್ಕೋರ್‌ ಬಹಳ ಮುಖ್ಯ. ಗ್ರಾಹಕರು ಸಕಾಲದಲ್ಲಿ ಸಾಲ, ಕ್ರೆಡಿಟ್‌ ಕಾರ್ಡ್‌ನ ಕಂತು ಪಾವತಿಸಿದ್ದರೂ ಬ್ಯಾಂಕುಗಳ ನಿರ್ಲಕ್ಷ್ಯ ಅಥವಾ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳು ಲೆಕ್ಕ ಹಾಕುವಾಗ ಆಗುವ ತಪ್ಪುಗಳಿಂದಾಗಿ ಕಡಿಮೆ ಕ್ರೆಡಿಟ್‌ ಸ್ಕೋರ್‌ ದೊರೆತು ಅವರಿಗೆ ಸಾಲ ಸಿಗದಿರುವ ನಿದರ್ಶನಗಳೂ ಇವೆ (ನೀಡಿರುವ ಕ್ರೆಡಿಟ್‌ ಸ್ಕೋರ್‌ ಬಗ್ಗೆ ಆಕ್ಷೇಪ ಇದ್ದರೆ ಕಾನೂನು ಹೋರಾಟಕ್ಕೆ ಅವಕಾಶ ಇದೆ). ಕ್ರೆಡಿಟ್‌ ಇನ್ಫರ್ಮೇಷನ್‌ ವರದಿ ಸಿದ್ಧಪಡಿಸುವಾಗ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳು ಪಾರದರ್ಶಕತೆ ಕಾಪಾಡುತ್ತಿಲ್ಲ ಎನ್ನುವ ಆರೋಪವೂ ಇದೆ. 

ಮೊದಲೆಲ್ಲ ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು ತಿಂಗಳಿಗೊಮ್ಮೆ ಕ್ರೆಡಿಟ್‌ ರೇಟಿಂಗ್ ಸಂಸ್ಥೆಗಳಿಗೆ ಗ್ರಾಹಕರ ಸಾಲ ಪಾವತಿ ವಿವರಗಳನ್ನು ನೀಡುತ್ತಿದ್ದವು. ಇನ್ನು ಮುಂದೆ ತಿಂಗಳಿಗೆ ಎರಡು ಸಲ ನೀಡಬೇಕು ಎಂದು ಆರ್‌ಬಿಐ ಆದೇಶಿಸಿದೆ. ರೇಟಿಂಗ್‌ನಲ್ಲಿ ಪಾರದರ್ಶಕತೆ ತರುವ ದಿಸೆಯಲ್ಲಿ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ರೈತರಿಗೆ ಸಂಕಷ್ಟ 

ಬ್ಯಾಂಕುಗಳು ಸಾಲ ನೀಡುವಾಗ ಕ್ರೆಡಿಟ್‌ ಸ್ಕೋರ್‌ ಪರಿಗಣಿಸುವುದರಿಂದ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಲಕ್ಷಾಂತರ ರೈತರಿಗೆ ತೊಂದರೆಯಾಗುತ್ತಿದೆ. ರೈತರು ಕೃಷಿ ಸಾಲ ಪಡೆಯುದಕ್ಕಾಗಿ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಿದಾಗ ಅವರ ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದೆ ಎಂಬ ಕಾರಣಕ್ಕೆ ಸಾಲ ತಿರಸ್ಕರಿಸಲಾಗುತ್ತಿದೆ. ಬರ, ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಸಕಾಲದಲ್ಲಿ ರೈತರಿಗೆ ಸಾಲ ಮರುಪಾವತಿಸಲು ಆಗದೇ ಇದ್ದಾಗ, ಅವರ ಕ್ರೆಡಿಟ್‌ ಸ್ಕೋರ್‌ ಕಡಿಮೆಯಾಗುತ್ತದೆ. ಇದು ಮತ್ತೆ ಅವರಿಗೆ ಸಾಲ ಸಿಗದಂತೆ ಮಾಡುತ್ತದೆ. 

ಕರ್ನಾಟಕದಲ್ಲಿ ಇದರ ವಿರುದ್ಧ ರೈತ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ರೈತರಿಗೆ ಸಾಲ ನೀಡುವಾಗ ಕ್ರೆಡಿಟ್‌ ಸ್ಕೋರ್‌ ಅನ್ನು ಬ್ಯಾಂಕುಗಳು ಪರಿಗಣಿಸಬಾರದು ಎಂದು ಆಗ್ರಹಿಸುತ್ತಲೇ ಬಂದಿವೆ. ಕಳೆದ ವರ್ಷ ಮಹಾರಾಷ್ಟ್ರದಲ್ಲೂ ಈ ವಿಚಾರ ಚರ್ಚೆ ಹುಟ್ಟುಹಾಕಿತ್ತು. ರೈತರ ಒತ್ತಡಕ್ಕೆ ಮಣಿದಿದ್ದ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲ ನೀಡುವಾಗ ಕ್ರೆಡಿಟ್‌ ರೇಟ್‌ ಪರಿಗಣಿಸಿದರೆ ಎಫ್‌ಐಆರ್‌ ದಾಖಲಿಸುವ ಎಚ್ಚರಿಕೆಯನ್ನು ನೀಡಿತ್ತು.

ಕ್ರೆಡಿಟ್‌ ಸ್ಕೋರ್‌ ತಿಳಿದುಕೊಳ್ಳುವುದು ಹೇಗೆ?

ಗ್ರಾಹಕರು ವರ್ಷಕ್ಕೆ ಒಂದು ಬಾರಿ ಈ ನಾಲ್ಕೂ ಕಂಪನಿಗಳಿಂದ ಉಚಿತವಾಗಿ ತಮ್ಮ ಕ್ರೆಡಿಟ್‌ ಸ್ಕೋರ್‌ ತಿಳಿಯಬಹುದು. ಸ್ಕೋರ್‌ ಪಡೆಯುವುದಕ್ಕೆ ಮಿತಿ ಏನಿಲ್ಲ. ಹೆಚ್ಚು ಬಾರಿ ಬೇಕಾದರೆ ಕಂಪನಿಗಳಿಗೆ ಶುಲ್ಕ ಪಾವತಿಸಬೇಕಾಗಬಹುದು. ಇದಲ್ಲದೆ, ಖಾತೆ ಹೊಂದಿರುವ ಬ್ಯಾಂಕುಗಳ ಮೂಲಕವೂ ಕ್ರೆಡಿಟ್‌ ಸ್ಕೋರ್‌ ತಿಳಿದುಕೊಳ್ಳಬಹುದು.

ಆಧಾರ: ಪಿಟಿಐ, ಸಿಬಿಲ್ ವೆಬ್‌ಸೈಟ್, ಆರ್‌ಬಿಐ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.