ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಚೀನಾದ ಡೀಪ್‌ಸೀಕ್ ಸ್ಟಾರ್ಟ್‌ಅಪ್, ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದೆ. ಅದು ಅಭಿವೃದ್ಧಿ ಪಡಿಸಿರುವ ‘ಡೀಪ್‌ಸೀಕ್ ಆರ್1’ ಎಂಬ ಜನರೇಟಿವ್ ಎಐ ಮಾದರಿಯು (ಮಾಡೆಲ್) ಅಮೆರಿಕದ ಓಪನ್ ಎಐನ ಚಾಟ್‌ಜಿಪಿಟಿ ಸೇರಿದಂತೆ ದೊಡ್ಡದೊಡ್ಡ ತಂತ್ರಜ್ಞಾನ ಕಂಪನಿಗಳು ರೂಪಿಸಿರುವ ಜನರೇಟಿವ್ ಎಐ ಮಾದರಿಗಳಿಗೆ ಸವಾಲೊಡ್ಡಿದೆ. ಓಪನ್ ಎಐ, ಮೆಟಾ, ಗೂಗಲ್, ಅಮೆಜಾನ್ ಸೇರಿದಂತೆ ಅಮೆರಿಕದ ಕಂಪನಿಗಳು ಎಐ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡಿದ್ದು, ಭಾರಿ ಮೊತ್ತದ ಬಂಡವಾಳ ಹೂಡಿವೆ. ಆದರೆ, ಡೀಪ್‌ಸೀಕ್ ಕಂಪನಿಯು ಒಂದು ವರ್ಷದ ಹಿಂದೆಯಷ್ಟೇ ಸ್ಥಾಪನೆಯಾಗಿದ್ದು, ಅತ್ಯಂತ ಕಡಿಮೆ ಅವಧಿ ಮತ್ತು ಕಡಿಮೆ ವೆಚ್ಚದಲ್ಲಿ ಈಗ ಬಳಕೆಯಲ್ಲಿರುವಂತಹ ಜನರೇಟಿವ್ ಎಐ ಮಾದರಿಗಳಿಗಿಂತ ಹೆಚ್ಚು ಸುಧಾರಿತವಾದ ಮಾದರಿಯನ್ನು ಅಭಿವೃದ್ಧಿ ಪಡಿಸಿರುವುದು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತೊಡಗಿರುವ ಘಟನಾನುಘಟಿ ಕಂಪನಿಗಳು ಮತ್ತು ತಂತ್ರಜ್ಞರನ್ನು ಅಚ್ಚರಿ ಹಾಗೂ ಆತಂಕಕ್ಕೆ ಕೆಡವಿದೆ.
ಚೀನಾದ ಪುಟ್ಟ ತಂತ್ರಜ್ಞಾನ ನವೋದ್ಯಮ ಡೀಪ್‌ಸೀಕ್. 2023ರ ವರ್ಷಾಂತ್ಯದಲ್ಲಿ ಇದು ಸ್ಥಾಪನೆಗೊಂಡಿತು. ‘ಹೈ ಫ್ಲಯರ್’ ಎಂಬ ಹೆಜ್ ಫಂಡ್ (ವಿವಿಧ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಿ ಅದನ್ನು ಮತ್ತೆ ಹೂಡಿಕೆ ಮಾಡುವ ಸಂಸ್ಥೆ) ಸ್ಥಾಪಿಸಿರುವ ಕೃತಕ ಬುದ್ಧಿಮತ್ತೆ ಕಂಪನಿ ಇದು. ಲಿಯಾಂಗ್ ವೆನ್‌ಫೆಂಗ್ ಇದರ ರೂವಾರಿ. ಈ ಹೈ ಫ್ಲಯರ್ ಸಂಸ್ಥೆಯು 2021ರಿಂದ ಷೇರು ಮಾರುಕಟ್ಟೆಯಲ್ಲಿ ಮಾಡುವ ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಡೀಪ್‌ಸೀಕ್ ಕಂಪನಿಯು ತನ್ನ ವಿ3 ಜನರೇಟಿವ್ ಎಐ ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದು ಅದರ ಎಐ ಮೂಲ ಮಾದರಿಯಾಗಿತ್ತು. ಓಪನ್ ಎಐನ ಜಿಪಿಟಿ–4 ಹಾಗೂ ಇನ್ನಿತರ ಜನರೇಟಿವ್ ಎಐ ಮಾದರಿಗಳಂತೆ ಕಾರ್ಯನಿರ್ವಹಿಸುತ್ತಿತ್ತು. ಈ ಮಾದರಿಯನ್ನು ಅಭಿವೃದ್ಧಿ ಪಡಿಸಲು 55.8 ಲಕ್ಷ ಡಾಲರ್ (ಸುಮಾರು ₹48.18 ಕೋಟಿ) ವೆಚ್ಚ ಮಾಡಿರುವುದಾಗಿ ಕಂಪನಿ ಹೇಳಿದೆ. ಚಾಟ್ ಜಿಪಿಟಿ–4 ಮಾದರಿಗೆ ಹೋಲಿಸಿದರೆ ಇದು ತುಂಬಾ ಅಗ್ಗ. ಓಪನ್ ಎಐಯು ಜಿಪಿಟಿ–4 ಚಾಟ್‌ಬಾಟ್ ಅಭಿವೃದ್ಧಿ ಪಡಿಸಲು 10 ಕೋಟಿ ಡಾಲರ್‌ಗೂ (ಸುಮಾರು ₹863 ಕೋಟಿ) ಹೆಚ್ಚು ವೆಚ್ಚ ಮಾಡಿದೆ.
ವಿ3 ಮಾದರಿಯನ್ನು 2,000ದಷ್ಟು ವಿಶೇಷ ಕಂಪ್ಯೂಟರ್ ಚಿಪ್‌ಗಳನ್ನು (ಎನ್‌ವಿಡಿಯಾದ ಎಚ್800 ಜಿಪಿಯು ಚಿಪ್‌ಗಳು) ಬಳಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಡೀಪ್‌ಸೀಕ್ ಹೇಳಿಕೊಂಡಿದ್ದು, ಬೇರೆ ಕಂಪನಿಗಳು ಇದೇ ರೀತಿಯ ಜನರೇಟಿವ್ ಎಐ ಮಾದರಿಗಳಿಗೆ 16 ಸಾವಿರದಷ್ಟು, ಹೆಚ್ಚು ಸಾಮರ್ಥ್ಯದ ಎಚ್100 ಚಿಪ್‌ಗಳನ್ನು ಬಳಸಿವೆ.
ಜನವರಿ 20ರಂದು ಡೀಪ್‌ಸೀಕ್, ಆರ್1 ಜನರೇಟಿವ್ ಎಐ ಮಾದರಿಯನ್ನು (ಆರ್1 ಚಾಟ್‌ಬಾಟ್) ಬಿಡುಗಡೆ ಮಾಡಿತು. ವಿ3 ಮಾದರಿಗೆ ಹೋಲಿಸಿದರೆ ಈ ಆವೃತ್ತಿಯ ಕಾರ್ಯನಿರ್ವಹಣೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಚಾಟ್ ಜಿಪಿಟಿ, ಗೂಗಲ್‌ನ ಜೆಮಿನಿ ಸೇರಿದಂತೆ ಸದ್ಯ ಚಾಲ್ತಿಯಲ್ಲಿರುವ ಜನರೇಟಿವ್ ಎಐ ಮಾದರಿಗಳು ಮತ್ತು ಎಐ ಜನರೇಟಿವ್ ತಂತ್ರಜ್ಞಾನದಲ್ಲಿ ಬಳಕೆಯಾಗುವಂತಹ ಲಾರ್ಜ್ ಲಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ವ್ಯವಸ್ಥೆಯನ್ನೇ ಆರ್1 ಚಾಟ್‌ಬಾಟ್ ಕೂಡ ಹೊಂದಿದೆ. ಆದರೆ, ಈ ಆವೃತ್ತಿಯು ಅವುಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅತಂತ್ಯ ಸಂಕೀರ್ಣವಾದ ಸಮಸ್ಯೆಗಳು, ವಿಚಾರಗಳನ್ನು ಹಂತ ಹಂತವಾಗಿ ವಿವರಿಸಲು ಇದು ಯತ್ನಿಸುತ್ತದೆ.
ಆಂಡ್ರಾಯ್ಡ್ ಮತ್ತು ಐಒಎಸ್ (ಆ್ಯಪಲ್) ಮೊಬೈಲ್ ಬಳಕೆದಾರರು ಪೈಪೋಟಿಗೆ ಬಿದ್ದವರಂತೆ ಡೀಪ್‌ಸೀಕ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆ್ಯಪ್ ಸ್ಟೋರ್‌ಗಳಲ್ಲಿ ಇದು ಮುಂಚೂಣಿ ಸ್ಥಾನಗಳಿಸಿದೆ. ಬುಧವಾರದ ಹೊತ್ತಿಗೆ ಅಮೆರಿಕ ಮತ್ತು ಇಂಗ್ಲೆಂಡ್ ಎರಡು ರಾಷ್ಟ್ರಗಳಲ್ಲಿಯೇ 30 ಲಕ್ಷ ಮಂದಿ ಡೀಪ್‌ಸೀಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಈ ಎಐ ತಂತ್ರಜ್ಞಾನ ಅಭಿವೃದ್ಧಿ ವೆಚ್ಚ ಕಡಿಮೆ, ಕಾರ್ಯನಿರ್ವಹಣೆಯೂ ಉತ್ತಮವಾಗಿದೆ ಎಂಬ ಅಭಿಪ್ರಾಯ ಷೇರು ಮಾರುಕಟ್ಟೆಯಲ್ಲೂ ಸದ್ದುಮಾಡಿತು. ಡೀಪ್‌ಸೀಕ್ ಅಮೆರಿಕದ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾ, ಚಾಟ್ ಜಿಪಿಟಿ ನಿರ್ಮಾತೃ ಓಪನ್‌ಎಐ, ಎಐ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ಮೆಟಾ, ಗೂಗಲ್, ಅಮೆಜಾನ್ ನಂತಹ ತಂತ್ರಜ್ಞಾನ ಕಂಪನಿಗಳಿಗೆ ಸವಾಲೊಡ್ಡಬಹುದು ಎಂಬ ಭಾವನೆ ಷೇರುದಾರರಲ್ಲಿ ಮೂಡಿದ್ದು ಎನ್‌ವಿಡಿಯಾ ಸೇರಿದಂತೆ ಹಲವು ಕಂಪನಿಗಳ ಷೇರು ಮೌಲ್ಯದಲ್ಲಿ ಭಾರಿ ಕುಸಿತಕ್ಕೆ ಕಾರಣವಾಯಿತು.
ಡೀಪ್‌ಸೀಕ್‌ನ ಮಾದರಿಗಳು ಮತ್ತು ಕಾರ್ಯವಿಧಾನಗಳನ್ನು (ಕೋಡ್‌ಗಳನ್ನು) ಉಚಿತ ಎಂಐಟಿ ಪರವಾನಗಿ ಅಡಿಯಲ್ಲಿ (ಓಪನ್ ಸೋರ್ಸ್) ಬಿಡುಗಡೆ ಮಾಡಲಾಗಿದೆ. ಅಂದರೆ, ಈ ಮಾದರಿಗಳನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ತಮಗೆ ಬೇಕಾದಂತೆ ಬದಲಾಯಿಸಲೂ ಬಹುದು. ಚಾಟ್‌ಜಿಪಿಟಿ ಸೇರಿದಂತೆ ಬೇರೆ ಚಾಟ್‌ಬಾಟ್‌ಗಳಲ್ಲಿ ಇದಕ್ಕೆ ಅವಕಾಶ ಇಲ್ಲ.
ಡೀಪ್‌ಸೀಕ್‌ನ ಈ ನಿರ್ಧಾರವು, ಲಾಭದ ಉದ್ದೇಶ ಹೊಂದಿರುವ ಕಂಪನಿಗಳಿಗೆ ನಷ್ಟ ಉಂಟು ಮಾಡಲಿದೆ. ಆದರೆ, ಎಐ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ ನಡೆಸುವವರಿಗೆ, ಮೊಬೈಲ್, ಕಂಪ್ಯೂಟರ್ ಬಳಸುವವರಿಗೆ ಎಐ ತಂತ್ರಜ್ಞಾನ ಅಗ್ಗವಾಗಿ ಲಭ್ಯವಾಗಲಿದೆ.
ಡೀಪ್‌ಸೀಕ್ ಸದ್ದು ಮಾಡುತ್ತಿರುವ ಬೆನ್ನಿಗೇ, ಚೀನಾದ ಮತ್ತೊಂದು ದೊಡ್ಡ ಕಂಪನಿ ಅಲಿಬಾಬಾ ಕೂಡ ಡೀಪ್‌ಸೀಕ್‌ಗಿಂತಲೂ ಸುಧಾರಿತವಾದ ಜನರೇಟಿವ್ ಎಐ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಡೀಪ್‌ಸೀಕ್ ತನ್ನ ಬಳಕೆದಾರರದಿಂದ ದೊಡ್ಡ ಪ್ರಮಾಣದ ಖಾಸಗಿ ಮಾಹಿತಿಯಯನ್ನು ಸಂಗ್ರಹಿಸುತ್ತದೆ ಮತ್ತು ಅವನ್ನು ಚೀನಾದಲ್ಲಿರುವ ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸುತ್ತದೆ ಎಂದು ಡೀಪ್‌ಸೀಕ್‌ನ ಖಾಸಗಿ ನಿಯಮ ಹೇಳುತ್ತದೆ. ಖಾತೆಯನ್ನು ತೆರೆಯಬೇಕಾದರೆ, ಬಳಕೆದಾರರ ಇ–ಮೇಲ್ ವಿಳಾಸ, ಹುಟ್ಟಿದ ದಿನಾಂಕ, ಬಳಕೆದಾರರು ಟೈಪ್ ಮಾಡುವ ಅಕ್ಷರ ಮತ್ತು ಆಡುವ ಮಾತಿನ ಏರಿಳಿತದ ಶಬ್ದ ಮುಂತಾದ ಚಾಟ್ ಹಿಸ್ಟರಿ, ಬಳಕೆದಾರರ ಫೋನ್‌ನ ಮಾಡೆಲ್ ಮತ್ತು ಕಂಪ್ಯೂಟರ್ ಐಪಿ ಅಡ್ರೆಸ್ ಮೂಲಕ ಅದರ ಆಪರೇಟಿಂಗ್ ಸಿಸ್ಟಮ್ ಹಾಗೂ ಕೀಗಳ ಬಳಕೆಯ ವಿಧಾನಗಳನ್ನು ಸಂಗ್ರಹಿಸುತ್ತದೆ.
ಇವೆಲ್ಲವನ್ನು ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತಮಪಡಿಸುವ ಸಲುವಾಗಿ ಸಂಗ್ರಹಿಸಲಾಗುತ್ತದೆ ಎಂದು ಡೀಪ್‌ಸೀಕ್ ತಿಳಿಸಿದೆ. ನಂತರ ಈ ಎಲ್ಲ ಮಾಹಿತಿಯನ್ನು ಸೇವಾ ಪೂರೈಕೆದಾರರು, ಜಾಹೀರಾತು ಪಾಲುದಾರರು ಮತ್ತು ತನ್ನ ಕಾರ್ಪೊರೇಟ್ ಗುಂಪಿನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅವರು ಮಾಹಿತಿಯನ್ನು ಎಲ್ಲಿಯವರೆಗೆ ಅಗತ್ಯವೋ ಅಲ್ಲಿಯವರೆಗೆ ಉಳಿಸಿಕೊಳ್ಳುತ್ತಾರೆ ಎಂದು ಅದು ಹೇಳಿದೆ.
ಡೀಪ್‌ಸೀಕ್‌ನ ಖಾಸಗಿತನ ನೀತಿಯನ್ನು ನೋಡಿದರೆ, ಅದರ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಗಂಭೀರವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಮತ್ತು ನಿಮ್ಮ ಚಟುವಟಿಕೆಗಳಿಗೆ ಸೂಕ್ತವೆನಿಸುವಂತಹ ರೀತಿಯಲ್ಲಿ ನಮ್ಮ ಸೇವೆಯ ಆಚೆಗೂ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಖಾಸಗಿತನ ನೀತಿಯಲ್ಲಿರುವುದರ ಬಗ್ಗೆಯೂ ಆಕ್ಷೇಪಣೆ ವ್ಯಕ್ತವಾಗಿದೆ.
ಆದರೆ, ಈಗಾಗಲೇ ಬಳಕೆಯಲ್ಲಿರುವ ಚಾಟ್‌ಜಿಪಿಟಿ, ಜೆಮಿನಿ ಮತ್ತು ಸಾಮಾಜಿಕ ಜಾಲತಾಣಗಳ ನಿಯಮಗಳೂ ಇದೇ ರೀತಿ ಇವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಡೀಪ್‌ಸೀಕ್ ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಕೆಲವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರೇಟಿವ್ ಎಐಗೆ ಸಂಬಂಧಿಸಿದ ಡೀಪ್‌ಸೀಕ್ ಅಥವಾ ಅಮೆರಿಕ ಮೂಲದ ಯಾವುದೇ ಆ್ಯಪ್ ಅಥವಾ ಎಐ ಮಾದರಿ ಇರಲಿ, ಅಲ್ಲಿ ಕೇಳಲಾದ ಪ್ರಶ್ನೆ ಮತ್ತು ಉತ್ತರಗಳು ಅದನ್ನು ರೂಪಿಸಿದವರಿಗೆ ಸಿಕ್ಕೇ ಸಿಗುತ್ತವೆ. ಹೀಗಾಗಿ ರಾಷ್ಟ್ರೀಯ ಭದ್ರತೆಯೂ ಸೇರಿದಂತೆ ಗುಪ್ತ ವಿಚಾರಗಳ ಸಂವಹನ ಅಥವಾ ಹುಡುಕಾಟಕ್ಕೆ ತೊಡಗುವವರು ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದು ಅವರ ವಾದ.
ಜನಪ್ರಿಯವಾದ, ಹೆಚ್ಚು ಮಂದಿ ಬಳಸುವ ಆ್ಯಪ್‌ಗಳ ವಿಚಾರದಲ್ಲಂತೂ ಮತ್ತಷ್ಟು ಜಾಗ್ರತೆಯಿಂದ ಇರಬೇಕಾಗುತ್ತದೆ. ಎಐ ಮಾದರಿಗಳಿಗೆ ತರಬೇತಿ ನೀಡಲು ಬಳಸುವ ಮಾಹಿತಿಯ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಇಂಗ್ಲೆಂಡ್‌ನ ಮಾಹಿತಿ ಆಯುಕ್ತರ ಅಡಿಯಲ್ಲಿ ಬರುವ ದತ್ತಾಂಶ ನಿಯಂತ್ರಕರು ಸೂಚಿಸಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವೆ ಹಲವು ವಿಷಯಗಳಲ್ಲಿರುವಂತೆ ಎಐ ತಂತ್ರಜ್ಞಾನದ ಸಾಧನಗಳ ಸಂಶೋಧನೆ ಮತ್ತು ಬಳಕೆಯ ವಿಚಾರದಲ್ಲಿಯೂ ಪೈಪೋಟಿ ಇದೆ. ಜನರೇಟಿವ್ ಎಐ ತಂತ್ರಜ್ಞಾನ ರೂಪಿಸಿ, ಅದನ್ನು ಸರ್ವರ್‌ಗಳಲ್ಲಿ ಸಂಗ್ರಹಿಸಲು ಚಿಪ್‌ಗಳ ಅಗತ್ಯವಿರುತ್ತದೆ. ಅಮೆರಿಕದ ಎನ್‌ವಿಡಿಯಾ ಕಂಪನಿಯು ಕಂಪ್ಯೂಟರ್ ಚಿಪ್‌ಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಎಐ ಕ್ಷೇತ್ರದಲ್ಲಿ ಚೀನಾದ ಬೆಳವಣಿಗೆಯನ್ನು ತಡೆಯಲೆಂದೇ ಚೀನಾಕ್ಕೆ ಚಿಪ್‌ಗಳ ರಫ್ತಿನ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಇಷ್ಟಾದರೂ, ಚೀನಾ ಕಡಿಮೆ ಚಿಪ್‌ಗಳನ್ನು ಬಳಸಿಕೊಂಡು ಪರಿಣಾಮಕಾರಿ ಜನರೇಟಿವ್ ಎಐ ಮಾದರಿ ರೂಪಿಸಿರುವುದು ತಂತ್ರಜ್ಞಾನ ಲೋಕದಲ್ಲಿ ಬೆರಗು ಮೂಡಿಸಿದೆ. ಡೀಪ್‌ಸೀಕ್‌ನಿಂದಾಗಿ ಎಐ ಕ್ಷೇತ್ರದಲ್ಲಿ ಚೀನಾ ಕೈ ಮೇಲಾಗಬಹುದು ಎಂದೂ ಹೇಳಲಾಗುತ್ತಿದೆ.
ಕಡಿಮೆ ಬೆಲೆಯ ಡೀಪ್‌ಸೀಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವ ಕಾರಣಕ್ಕೆ ಇದರ ಬಗ್ಗೆ ತಂತ್ರಜ್ಞಾನ ವಲಯದಲ್ಲಿ ಭಾರಿ ನಿರೀಕ್ಷೆ ಮೂಡಿದೆ. ಆದರೆ, ಇದೇ ವೇಳೆ, ಇದರಲ್ಲಿ ದತ್ತಾಂಶದ ಸುರಕ್ಷತೆಯ ಬಗ್ಗೆಯೂ ಹಲವು ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಂಡಿವೆ. ಹ್ವಾವೆ, ಟಿಕ್ ಟಾಕ್‌ವರೆಗೆ ಚೀನಾದ ಆ್ಯಪ್‌ಗಳ ಬಗ್ಗೆ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಅನೇಕ ಆರೋಪಗಳು ವ್ಯಕ್ತವಾಗಿದ್ದವು. ಅದೇ ರೀತಿ ಈಗ ಡೀಪ್‌ಸೀಕ್ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಚೀನಾದ ತಂತ್ರಜ್ಞಾನಗಳು, ಕಂಪನಿಗಳ ಮೇಲೆಯೂ ಸರ್ಕಾರ ಹಿಡಿತ ಹೊಂದಿದೆ. ಹೀಗಾಗಿ ಡೀಪ್‌ಸೀಕ್ ಎಐ ಮಾದರಿಗಳ ಬಳಕೆದಾರರ ಖಾಸಗಿ ಮಾಹಿತಿ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಗುಪ್ತಚರ ಉದ್ದೇಶಗಳಿಗಾಗಿ ಚೀನಾ ಸರ್ಕಾರವು ಮಾಹಿತಿ ಕದಿಯುವ ಸಂಭವ ಇದೆ ಎನ್ನುವ ಅನುಮಾನಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಡೀಪ್‌ಸೀಕ್‌ನಿಂದ ಖಾಸಗಿತನದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮೊದಲು ಪ್ರಶ್ನೆ ಎತ್ತಿದವರು ಆಸ್ಟ್ರೇಲಿಯಾದ ವಿಜ್ಞಾನ ಸಚಿವ ಎಡ್ ಹುಸಿಕ್. ಚೀನಾದ ಎಐ ಮಾದರಿಯ ಬಗ್ಗೆ ತಾವು ಜಾಗರೂಕರಾಗಿದ್ದು, ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ; ದತ್ತಾಂಶ ಮತ್ತು ಖಾಸಗಿತನದ ನಿರ್ವಹಣೆಯ ಬಗ್ಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೀಪ್‌ಸೀಕ್ ಬಗ್ಗೆ ಅಮೆರಿಕ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಆದರೆ, ಇದರಿಂದ ಬೆಲೆ ಕಡಿಮೆಯಾಗುವುದಾದರೆ ಅದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ. ಅಮೆರಿಕದ ಅಧಿಕಾರಿಗಳು ಡೀಪ್‌ಸೀಕ್‌ನಿಂದ ರಾಷ್ಟ್ರೀಯ ಭದ್ರತೆಯ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಹೇಳಿದ್ದಾರೆ. ಅಮೆರಿಕದ ನೌಕಾಪಡೆಯು, ಸಂಭವನೀಯ ಅಪಾಯ ಮತ್ತು ನೀತಿಸಂಹಿತೆಯ ಕಾರಣಕ್ಕೆ ತನ್ನ ಸಿಬ್ಬಂದಿ ಡೀಪ್‌ಸೀಕ್ ಬಳಸಬಾರದೆಂದು ನಿಷೇಧ ಹೇರಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ಚೀನಾ ಪರ ನಿಲುವು: ಈವರೆಗೆ ಡೀಪ್‌ಸೀಕ್ ಆ್ಯಪ್ ಬಳಸಿದವರು, ಜನರೇಟಿವ್ ಎಐ ಮಾದರಿಯ ನಿಲುವು ಚೀನಾ ಪರವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಜನರೇಟಿವ್ ಎಐ ಎಂದರೆ, ಕೃತಕ ಬುದ್ಧಿಮತ್ತೆಯ ಇನ್ನೊಂದು ರೂಪ. ಇದು ಲೇಖನ, ಚಿತ್ರಗಳು, ಸಂಗೀತ, ಧ್ವನಿ, ಮತ್ತು ವಿಡಿಯೊಗಳಂತಹ ಹೊಸ ವಿಷಯಗಳನ್ನು (ಕಂಟೆಂಟ್) ಸೃಷ್ಟಿಸುತ್ತದೆ. ಬಳಕೆದಾರರು ಯಾವುದೇ ಪ್ರಶ್ನೆ ಅಥವಾ ಮಾಹಿತಿಗಳನ್ನು ಕೇಳಿದಾಗ ಇಂಟರ್‌ನೆಟ್‌ನ ದತ್ತಾಂಶಗಳ ಸಾಗರದಲ್ಲಿ ಅಗಾಧ ಪ್ರಮಾಣದಲ್ಲಿರುವ ಮಾಹಿತಿಗಳನ್ನು ಹೆಕ್ಕಿ ತೆಗೆದು, ಅದನ್ನು ಅತ್ಯಂತ ವ್ಯವಸ್ಥಿತ ಮತ್ತು ಸಮಗ್ರವಾಗಿ ಕಟ್ಟಿಕೊಡುತ್ತದೆ.
ಜಾಗತಿಕ ಮಟ್ಟದಲ್ಲಿ ಚೀನಾದ ಡೀಪ್‌ಸೀಕ್ ಜನರೇಟಿವ್ ಎಐ ಮಾದರಿ ಸದ್ದು ಮಾಡುತ್ತಿರುವುದರ ನಡುವೆಯೇ, ಭಾರತ ಕೂಡ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತನ್ನ ಮಹತ್ವಾಕಾಂಕ್ಷೆಗಳನ್ನು ಜಗತ್ತಿನ ಮುಂದಿಟ್ಟಿದ್ದು, ತನ್ನದೇ ಆದ ಜನರೇಟಿವ್ ಎಐ ಮಾದರಿಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.
ಚಾಟ್‌ಜಿಟಿಪಿ, ಡೀಪ್‌ಸೀಕ್ ಆರ್1 ಸೇರಿದಂತೆ ಇತರ ಜನರೇಟಿವ್ ಎಐ ಮಾದರಿಗಳಿಗೆ ಪೈಪೋಟಿ ನೀಡುವಂತಹ ಜನರೇಟಿವ್ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರು ಕೈಗೆಟುಕುವ ಶುಲ್ಕ ನೀಡಿ ಬಳಸಬಹುದಾದ,18,693 ಜಿಪಿಯು (ಕಂಪ್ಯೂಟರ್ ಚಿಪ್‌ಗಳು) ಸಾಮರ್ಥ್ಯದ ಬೃಹತ್ ‘ಕಂಪ್ಯೂಟ್ ಸೌಲಭ್ಯ’ (ಸರ್ವರ್‌ಗಳು, ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ವ್ಯವಸ್ಥೆ) ಕಲ್ಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಗುರುವಾರ ಭಾರತವು ಎಐ ನೀಲನಕ್ಷೆಯಲ್ಲಿ ತನ್ನ ಮುಂದಿನ ಕ್ರಮಗಳನ್ನು ಘೋಷಣೆ ಮಾಡಿದ್ದು ಇದರ ಅಡಿಯಲ್ಲಿ ಎಂಟು ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಅದರಲ್ಲಿ 18,693 ಜಿಪಿಯುಗಳ ಕಂಪ್ಯೂಟ್ ಸೌಲಭ್ಯ ಮತ್ತು ಎಐ ಸುರಕ್ಷತಾ ಸಂಸ್ಥೆಯ ಸ್ಥಾಪನೆ ಮಾಡುವುದೂ ಸೇರಿವೆ.
ಇದರೊಂದಿಗೆ ತನ್ನದೇ ಆದ ಜನರೇಟಿವ್ ಎಐ ಮಾದರಿ ಅಭಿವೃದ್ಧಿಪಡಿಸಲು ಆಸಕ್ತರಿಂದ ಪ್ರಸ್ತಾವಗಳನ್ನೂ ಸರ್ಕಾರ ಆಹ್ವಾನಿಸಿದೆ. ಭಾರತವು ವಿಶ್ವದರ್ಜೆಯ ಮತ್ತು ಜಗತ್ತಿನಲ್ಲಿ ಬಳಕೆಯಲ್ಲಿರುವ ಎಲ್ಲ ಅತ್ಯುತ್ತಮ ಎಐ ಮಾದರಿಗಳೊಂದಿಗೆ ಪೈಪೋಟಿ ನೀಡಬಲ್ಲ ಮಾದರಿಗಳನ್ನು ಎಂಟರಿಂದ ಹತ್ತು ತಿಂಗಳಲ್ಲಿ ಅಭಿವೃದ್ಧಿಪಡಿಸಲಿದೆ ಎಂದು ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೀಪ್‌ಸೀಕ್ ವಿಚಾರದಲ್ಲಿ ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನದ ಧಕ್ಕೆಗೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸುವುದಕ್ಕಾಗಿ ಡೀಪ್‌ಸೀಕ್ ಆರ್1 ಮಾದರಿಯ ದತ್ತಾಂಶಗಳನ್ನು ಶೀಘ್ರದಲ್ಲಿ ಭಾರತದ ಸರ್ವರ್‌ಗಳಲ್ಲಿ ಶೇಖರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಆಧಾರ: ಪಿಟಿಐ, ಎಪಿ, ಬಿಬಿಸಿ, ಸಿಎನ್‌ಎನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.