ADVERTISEMENT

ಆಳ–ಅಗಲ | ಔಷಧ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 0:26 IST
Last Updated 25 ಡಿಸೆಂಬರ್ 2024, 0:26 IST
   
ಬಳ್ಳಾರಿಯ ವಿಮ್ಸ್‌ನಲ್ಲಿ ಸಂಭವಿಸಿರುವ ಬಾಣಂತಿಯರ ಸಾವುಗಳು ರಾಜ್ಯದ ಸಾರ್ವಜನಿಕ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ತಲ್ಲಣ ಉಂಟುಮಾಡಿವೆ. ಕಳಪೆ ಔಷಧದಿಂದ ಸಾವು ಸಂಭವಿಸಿವೆ ಎಂದು ತಜ್ಞರ ಸಮಿತಿ ಹೇಳಿದೆ. ಇಂಥ ಹಲವು ಘಟನೆಗಳು ದೇಶದ ವಿವಿಧ ಭಾಗಗಳಲ್ಲಿಯೂ ಹಿಂದೆ ನಡೆದಿವೆ. ಆರೋಗ್ಯ ಕ್ಷೇತ್ರದ ಪರಿಣತರು, ರಾಷ್ಟ್ರದ ಔಷಧ ನಿಯಂತ್ರಣ ವ್ಯವಸ್ಥೆಯ ಲೋಪದೋಷಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಔಷಧ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಲೋಪಗಳು ಮತ್ತು ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಇಲ್ಲದಿರುವುದೇ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ

ಬಳ್ಳಾರಿಯ ವಿಮ್ಸ್‌ನಲ್ಲಿ ಬಾಣಂತಿಯರ ಸಾವಿಗೆ ಅವರಿಗೆ ನೀಡಲಾಗಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ. ದ್ರಾವಣದ ಗುಣಮಟ್ಟ ಕಳಪೆಯಾಗಿದ್ದುದೇ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ. ಪ್ರಮಾಣಿತ ಗುಣಮಟ್ಟ ಪರೀಕ್ಷೆ (ಎನ್‌ಎಸ್‌ಕ್ಯೂ) ಕಳಪೆ ಗುಣಮಟ್ಟದ ಕಾರಣಕ್ಕೆ ಈ ಔಷಧವನ್ನು ತಿರಸ್ಕರಿಸಿದ್ದೇ ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್) ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ, ಔಷಧವನ್ನು ಪೂರೈಸಿದ್ದ ಪಶ್ಚಿಮ್ ಬಂಗಾ ಕಂಪನಿಯು ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯದಿಂದ (ಸಿಡಿಎಲ್) ತನ್ನ ಔಷಧಿಯ ಗುಣಮಟ್ಟ ಉತ್ತಮವಾಗಿದೆ ಎಂದು ಪ್ರಮಾಣ ಪತ್ರ ತಂದ ಕಾರಣಕ್ಕೆ ರಾಜ್ಯವು ಅನಿವಾರ್ಯವಾಗಿ ಅದನ್ನು ಬಳಸಬೇಕಾಯಿತು ಎಂದು ರಾಜ್ಯ ಸರ್ಕಾರ ಹೇಳಿದೆ. 

2022ರಲ್ಲಿ ಚಂಡೀಗಢದಲ್ಲಿ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್) ಐವರು ರೋಗಿಗಳು ಮೃತಪಟ್ಟರು. ಮೃತ‍ಪಟ್ಟ ರೋಗಿಗಳಿಗೆ ನೀಡಿದ್ದ ಚುಚ್ಚುಮದ್ದು ಕಲಬೆರಕೆ ಆಗಿದೆ ಎಂದು ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ (ಆರ್‌ಡಿಟಿಎಲ್) ನಡೆಸಿದ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಅದನ್ನು ಅಲ್ಲಿನ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿತ್ತು. ಆ ಚುಚ್ಚುಮದ್ದನ್ನು ತಯಾರಿಸಿದ್ದ ಕಂಪನಿಯು ಎರಡನೆಯ ಬಾರಿಗೆ ಔಷಧದ ಗುಣಮಟ್ಟ ಪರೀಕ್ಷೆ ಮಾಡುವಂತೆ ಸಿಡಿಎಲ್ ಅನ್ನು ಕೋರಿತ್ತು. ಆ ಔಷಧವು ಸಿಡಿಎಲ್ ನಡೆಸಿದ ಗುಣಮಟ್ಟದ ಎಲ್ಲ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿರುವುದಾಗಿ ಆರು ತಿಂಗಳ ನಂತರ, 2023ರ ಮಾರ್ಚ್‌ನಲ್ಲಿ, ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವರೇ ಲೋಕಸಭೆಯಲ್ಲಿ ತಿಳಿಸಿದ್ದರು. ಆದರೆ, ಆ ಕಂಪನಿ ನೀಡಿದ್ದ ಸಿಡಿಎಲ್ ವರದಿ ನಕಲಿ ಎನ್ನುವುದು ನಂತರ ತಿಳಿದುಬಂದಿತ್ತು. 

ಈ ಎರಡು ಪ್ರಕರಣಗಳು ಔಷಧ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದ ಸಿಡಿಎಲ್‌ನ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಸಿಡಿಎಲ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಕಾರ್ಯ ನಿರ್ವಹಿಸುವ ಸಂಸ್ಥೆ. ಅದು ತನ್ನ ಕೇಂದ್ರೀಕೃತ ದತ್ತಾಂಶವನ್ನಾಗಲಿ, ಪರೀಕ್ಷಾ ವಿಧಾನಗಳನ್ನಾಗಲಿ, ಪರೀಕ್ಷಾ ವರದಿಗಳನ್ನಾಗಲಿ ಬಹಿರಂಗಪಡಿಸುವುದಿಲ್ಲ. ಆ ಪರೀಕ್ಷೆಗಳನ್ನು ನಡೆಸಿದ ತಜ್ಞರ ಹೆಸರು ಮತ್ತು ಅರ್ಹತೆಗಳನ್ನೂ ಬಹಿರಂಗಪಡಿಸುವುದಿಲ್ಲ. ಎಲ್ಲವೂ ಗೋಪ್ಯವಾಗಿ ನಡೆಯುತ್ತವೆ. 

ADVERTISEMENT

ದೇಶದಲ್ಲಿ ಏಳು ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯಗಳಿದ್ದು, ಇವುಗಳಲ್ಲಿ ಕೋಲ್ಕತ್ತದ ಪ್ರಯೋಗಾಲಯವು ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಪಡಿಸುವ, ಅಂತಿಮ ವರದಿ ನೀಡುವ ಅಧಿಕಾರ ಹೊಂದಿದೆ.

ಉನ್ನತ ಮಟ್ಟದ, ಮೇಲ್ಮನವಿಗಳನ್ನು ಇತ್ಯರ್ಥಪಡಿಸುವ ಪರಮಾಧಿಕಾರ ಹೊಂದಿರುವ ಸಂಸ್ಥೆಯಾಗಿರುವ ಸಿಡಿಎಲ್, ಪಾರದರ್ಶಕತೆಯನ್ನು ಹೊಂದಿರುವುದು ಮೂಲಭೂತ ಅಗತ್ಯವಾಗಿರುತ್ತದೆ. ಈ ವಿಚಾರದಲ್ಲಿ ಸಿಡಿಎಲ್ ವಿಪರೀತ ಎನ್ನುವಷ್ಟು ಗೋಪ್ಯತೆಯನ್ನು ಅನುಸರಿಸುತ್ತಿದೆ. ಹಲವರು ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದಾಗಲೂ ಕೊಟ್ಟಿಲ್ಲ. 

ಇನ್ನೊಂದು ಸಮಸ್ಯೆ ಎಂದರೆ, ರಾಜ್ಯಗಳಿಂದ ಸಿಡಿಎಲ್‌ಗೆ ಔಷಧಗಳ ಮಾದರಿಗಳನ್ನು ಕಳುಹಿಸುವ ಕ್ರಮವು ಸಂಕೀರ್ಣವಾಗಿದ್ದು, ಹಲವು ಮಾರ್ಗಗಳ ಮೂಲಕ ನಡೆಯುತ್ತದೆ. ಡ್ರಗ್ ಇನ್ಸ್‌ಪೆಕ್ಟರ್, ನ್ಯಾಯಾಲಯದ ಸಿಬ್ಬಂದಿ, ಅಂಚೆ ಇಲಾಖೆ ಮತ್ತು ಸಿಡಿಎಲ್ ಸಿಬ್ಬಂದಿ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಈ ಮಾರ್ಗದಲ್ಲಿ ಯಾವ ಹಂತದಲ್ಲಿ ಬೇಕಾದರೂ ಮಾದರಿಗಳನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಔಷಧ ಕ್ಷೇತ್ರದ ತಜ್ಞರು ಹಲವು ಬಾರಿ ಅನುಮಾನ ವ್ಯಕ್ತಪಡಿಸಿದ್ದರು. ಇಡೀ ಪ್ರಕ್ರಿಯೆಯೇ ಅನುಮಾನಾಸ್ಪದ ಮತ್ತು ದೋಷಪೂರ್ಣ ಎನ್ನುವುದು ಅವರ ವಾದ.

ಸಿಡಿಎಸ್‌ಸಿಒ ಪಾತ್ರ: ಹೊಸ ಔಷಧಗಳಿಗೆ ಅನುಮೋದನೆ, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಔಷಧಗಳ ಮೇಲೆ ನಿಷೇಧ ಇತ್ಯಾದಿ ಜವಾಬ್ದಾರಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯದ್ದಾಗಿದೆ (ಸಿಡಿಎಸ್‌ಸಿಒ). ಮಾರುಕಟ್ಟೆಗೆ ಅಡಿಯಿಟ್ಟ ಹೊಸ ಔಷಧಗಳ ಬಗ್ಗೆ ಸಿಡಿಎಸ್‌ಸಿಒ ಕಾಲದಿಂದ ಕಾಲಕ್ಕೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುತ್ತದೆ. ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳ ಬಗ್ಗೆಯೂ ಅದು ಮಾಹಿತಿ ನೀಡಬೇಕು. ಆದರೆ, ಸಿಡಿಎಸ್‌ಸಿಒ ವೆಬ್‌ಸೈಟ್‌ನಲ್ಲಿ ಕೇಂದ್ರೀಕೃತ ಮಾಹಿತಿ ಲಭ್ಯವಿಲ್ಲ. 

ಔಷಧಗಳ ಗುಣಮಟ್ಟ ಕಾಪಾಡುವ ವಿಚಾರದಲ್ಲಿ ಹತ್ತಾರು ತೊಡಕುಗಳಿವೆ. ಅದು ಸಿಡಿಎಸ್‌ಸಿಒ ಜವಾಬ್ದಾರಿಯಾಗಿದ್ದು, ಅದರ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ರಚನೆಯೇ ಒಂದು ದೊಡ್ಡ ಮಿತಿಯಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಇರುವಂಥ ಶಾಸನಾತ್ಮಕ ಬಲ ಸಿಡಿಎಸ್‌ಸಿಒಗೆ ಇಲ್ಲ. ಇದು ಕೇಂದ್ರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಒಂದು ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ, ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರ ನೇರ ಉಸ್ತುವಾರಿಯಲ್ಲಿ ಕೆಲಸ ಮಾಡಬೇಕಿದೆ. ಸಿಡಿಎಸ್‌ಸಿಒಗೆ ಸ್ವಾಯತ್ತೆ ನೀಡಲು 2013ರಲ್ಲಿ  ಔಷಧಗಳು ಮತ್ತು ಸೌಂದರ್ಯವರ್ಧಕಗಳ (ತಿದ್ದುಪಡಿ) ಮಸೂದೆ ಮಂಡಿಸಲಾಗಿತ್ತು. ಆದರೆ, ಚರ್ಚೆ ನಡೆಯದೆಯೇ ಮಸೂದೆಯನ್ನು ಹಿಂಪಡೆಯಲಾಗಿತ್ತು.

ಔಷಧಗಳ ಗುಣಮಟ್ಟ ನಿಯಂತ್ರಣ ಅಧಿಕಾರವು 38 ವಿವಿಧ ಸಂಸ್ಥೆಗಳ ಬಳಿ ಇದ್ದು, (ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸಂಸ್ಥೆ ಮತ್ತು ಕೇಂದ್ರದ ಅಡಿಯಲ್ಲಿರುವ ಸಿಡಿಎಸ್‌ಸಿಒ ಸೇರಿ) ಅದೊಂದು ಸಂಕೀರ್ಣ ವ್ಯವಸ್ಥೆಯಾಗಿದೆ. 

ಹೊಸ ಔಷಧಗಳಿಗೆ ಅನುಮೋದನೆ, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಆಮದು, ರಫ್ತಿಗೆ ಸಂಬಂಧಿಸಿದ ಅನುಮತಿ ನೀಡುವುದು, ಔಷಧಗಳನ್ನು ನಿಷೇಧಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದರೆ, ಔಷಧಿಗಳ ಉತ್ಪಾದನೆ ಮತ್ತು ಮಾರಾಟವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ಸಿಡಿಎಸ್‌ಸಿಒ ರಾಜ್ಯ ಔಷಧ ನಿಯಂತ್ರಕರು (ಎಸ್‌ಡಿಸಿ) ಜೊತೆಯಾಗಿ ಕೆಲಸ ಮಾಡಬೇಕು. ಆದರೆ, ಔಷಧದ ಗುಣಮಟ್ಟ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯವೇ ಇಲ್ಲದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಯಾವ ರಾಜ್ಯದಲ್ಲಿ ಯಾವ ಬ್ರ್ಯಾಂಡ್‌ನ ಯಾವ ಔಷಧದ ವಿರುದ್ಧ ಆರೋಪ ಕೇಳಿಬಂದಿತ್ತು, ಅದನ್ನು ಹೇಗೆ ಪರೀಕ್ಷೆ ನಡೆಸಲಾಗಿತ್ತು, ಅದರ ಫಲಿತಾಂಶ ಏನು ಎನ್ನುವುದರ ಮಾಹಿತಿಯೇ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ರಾಜ್ಯ ಸರ್ಕಾರಗಳಿಗೂ ಅದು ಸಿಗುತ್ತಿಲ್ಲ. ಯಾವ ಔಷಧ ಯಾವ ರಾಜ್ಯದಲ್ಲಿ ನಿಷೇಧವಾಗಿದೆ ಎನ್ನುವ ಮೂಲಭೂತ ವಿಚಾರ ಸಹ ಮತ್ತೊಂದು ರಾಜ್ಯಕ್ಕೆ ತಿಳಿಯುವುದಿಲ್ಲ. 

ರಾಜ್ಯ ರಾಜ್ಯಗಳ ನಡುವೆ ಇರುವ ಮಾಹಿತಿಯ ಕೊರತೆ ಮತ್ತು ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಕೇಂದ್ರೀಕರಣವನ್ನು ಕೆಲವು ಕಂಪನಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡು, ಕಳಪೆ ಔಷಧಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ರಿಟಿಷ್ ಕಾಲದ ಕಾಯ್ದೆ... 

ಭಾರತದಲ್ಲಿ ಸದ್ಯ ಔಷಧಗಳ ಗುಣಮಟ್ಟ ನಿಯಂತ್ರಣಕ್ಕೆ ಆಧಾರವಾಗಿರುವುದು ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940. ಇದಕ್ಕೆ ಹಲವು ಬಾರಿ ತಿದ್ದುಪಡಿಗಳನ್ನು ಮಾಡಲಾಗಿದೆಯಾದರೂ ಒಟ್ಟಾರೆಯಾಗಿ ಇದು ಬ್ರಿಟಿಷರ ವಸಾಹತುಶಾಹಿ ಗುಣವುಳ್ಳ ಕಾಯ್ದೆಯಾಗಿಯೇ ಉಳಿದಿದೆ ಎನ್ನುವ ವಿಶ್ಲೇಷಣೆಗಳಿವೆ. 

ಆಗ ಭಾರತವು ಹೆಚ್ಚು ಔಷಧಗಳನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿತ್ತು. ಮೂಲ ಕಾಯ್ದೆಯನ್ನು, ಔಷಧಗಳನ್ನು ಪೂರೈಸುತ್ತಿದ್ದ ವಿದೇಶಿ ವ್ಯಾಪಾರಿಗಳು ಮತ್ತು ತಯಾರಕರ ಹಿತಾಸಕ್ತಿಗಳಿಗೆ ತಕ್ಕಂತೆ ರೂಪಿಸಲಾಗಿತ್ತು. ಆದರೆ, ಇಂದು ಭಾರತವು ಔಷಧ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದಷ್ಟೇ ಅಲ್ಲ, 200ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಕೂಡ ಮಾಡುತ್ತಿದೆ. ಆದರೆ, ಔಷಧಗಳ ನಿಯಂತ್ರಣ ವ್ಯವಸ್ಥೆಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಕೇಂದ್ರವು ಸಿಡಿಎಲ್ ಮತ್ತು ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940 ಅನ್ನು ಸುಧಾರಣೆ ಮಾಡಬೇಕು ಎನ್ನುವ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಲೇ ಇದೆ.

ಕೇಂದ್ರವು ಹೇಳಿದ್ದೇನು? 

ಸಿಡಿಎಸ್‌ಸಿಒ ಕಾರ್ಯಶೈಲಿಯ ಬಗ್ಗೆ ಇತ್ತೀಚೆಗೆ ಲೋಕಸಭೆಯಲ್ಲಿ ಸಂಸದರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಅದಕ್ಕೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು, ಔಷಧ ನಿಯಮಗಳು 1945ರ ಪ್ರಕಾರ, ಎಲ್ಲ ಔಷಧ ಉತ್ಪಾದಕರು ಉತ್ತಮ ಉತ್ಪಾದನಾ ಅಭ್ಯಾಸಗಳು (ಜಿಎಂಪಿ) ಸೇರಿದಂತೆ ‘ಔಷಧ ನಿಯಮಗಳು–1945’ರ ಅನುಸೂಚಿ ‘ಎಂ’ನಲ್ಲಿ ನಿಗದಿಪಡಿಸಲಾಗಿರುವ ಅನುಮತಿಯ ಷರತ್ತುಗಳನ್ನು ಪಾಲಿಸಬೇಕು ಎಂದಿದ್ದರು. ಇಲ್ಲದಿದ್ದರೆ, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ನಿಯಮಗಳ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. 

ಸಿಡಿಎಸ್‌ಸಿಒ ಸಿಬ್ಬಂದಿಯ ಸಂಖ್ಯೆಯನ್ನು ಕಳೆದ ಹತ್ತು ವರ್ಷದಲ್ಲಿ ಗಮನಾರ್ಹವಾಗಿ ಹೆಚ್ಚಿಸಿದ್ದೇವೆ ಎಂದಿದ್ದ ಸಚಿವರು, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ಅಡಿ ದಾಖಲಾದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿರುವುದಾಗಿಯೂ ಮಾಹಿತಿ ನೀಡಿದ್ದರು.

ಕೇಂದ್ರೀಕೃತ ದತ್ತಾಂಶ ಲಭ್ಯ ಇಲ್ಲ 

ನಕಲಿ ಮತ್ತು ಕಲಬೆರಕೆ ಔಷಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿಗದಿತ ಕಾಲಮಿತಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು (2024–25) ಔಷಧ ಇಲಾಖೆಗೆ ಶಿಫಾರಸು ಮಾಡಿದೆ. ಇಂಥ ಪ್ರಕರಣಗಳ ಇತ್ಯರ್ಥ ಪ್ರಮಾಣವು ಅತ್ಯಂತ ಕಡಿಮೆ ಇರುವುದರ ಬಗ್ಗೆ ಸಮಿತಿಯು ಕಳವಳ ವ್ಯಕ್ತಪಡಿಸಿದೆ.

2015–16ರಿಂದ 2018–19ರ ನಡುವೆ ರಾಜ್ಯ ಔಷಧ ನಿಯಂತ್ರಕರು 2.5 ಲಕ್ಷ ಔಷಧ ಮಾದರಿಗಳನ್ನು ಪರೀಕ್ಷೆ ಮಾಡಿದ್ದು, ಅವುಗಳ ಪೈಕಿ 593 ನಕಲಿ ಎಂದೂ, 9266 ಕಳಪೆ ಎಂದೂ ಪತ್ತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಪ್ರಕರಣಗಳ ಇತ್ಯರ್ಥ ಪ್ರಮಾಣವು ಕಡಿಮೆ ಇದೆ ಎಂದಿರುವ ಸಮಿತಿಯು, ಅದಕ್ಕೆ ಸಂಬಂಧಿಸಿದ ದತ್ತಾಂಶವನ್ನು ಕೇಂದ್ರೀಕೃತವಾಗಿ ಸಂಗ್ರಹಿಸಲಾಗುತ್ತಿಲ್ಲ ಎನ್ನುವ ಅಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.

ಆಧಾರ: ಫಾರ್ಮಾಬಿಜ್.ಕಾಂ, ಲೋಕಸಭೆಯಲ್ಲಿ ಸಚಿವರ ಉತ್ತರ, ವಿಶ್ವ ⇒ಆರೋಗ್ಯ ಸಂಸ್ಥೆಯ ‘ಮೆಡಿಕಲ್ ಡೈಲಾಗ್ಸ್’ ಪೋರ್ಟಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.