ಮಾನವ ದೇಹದ ಅಂಗಗಳನ್ನು ಸಂರಕ್ಷಿಸಿ ಇಡುವ ತಂತ್ರಜ್ಞಾನದಲ್ಲಿ ಪ್ರಗತಿ, ರೋಗನಿರೋಧಕ ಶಕ್ತಿಯ ಉತ್ತಮ ನಿರ್ವಹಣೆಯಿಂದ ಅಂಗಾಂಗ ದಾನ ವಲಯದಲ್ಲಿ ದೊಡ್ಡ ಮಟ್ಟದ, ಸಕಾರಾತ್ಮಕ ಬದಲಾವಣೆಗಳು ಘಟಿಸುತ್ತಿವೆ. ಆದರೆ, ಈ ಬೆಳವಣಿಗೆಗಳ ಫಲ ಎಲ್ಲರಿಗೂ ಸಮಾನವಾಗಿ ಸಿಗುತ್ತಿಲ್ಲ. ಈ ವಿಚಾರದಲ್ಲಿ ಪ್ರಾದೇಶಿಕ, ಆರ್ಥಿಕ ಹಾಗೂ ಸಾಮಾಜಿಕ ಅಂತರಗಳಿದ್ದು, ಅವನ್ನು ಹೋಗಲಾಡಿಸಲು ನೀತಿ ನಿರೂಪಣೆ ಮತ್ತು ಸಂಪನ್ಮೂಲಗಳ ಪೂರೈಕೆಯಲ್ಲಿ ಬದಲಾವಣೆ ಆಗಬೇಕಿದೆ ಎಂದು ‘ದಿ ಲ್ಯಾನ್ಸೆಟ್’ ವರದಿ ಪ್ರತಿಪಾದಿಸಿದೆ.
ಭಾರತವು ಅಂಗಾಂಗ ಕಸಿಯಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಹೊರದೇಶಗಳಿಂದಲೂ ಅಂಗಾಂಗ ಕಸಿಗಳಿಗಾಗಿ ರೋಗಿಗಳು ಭಾರತಕ್ಕೆ ಬರುತ್ತಿದ್ದಾರೆ. 2024ರಲ್ಲಿ 39 ವಿವಿಧ ದೇಶಗಳ ರೋಗಿಗಳು ಅಂಗಾಂಗ ಕಸಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ‘ಇಂಡಿಯನ್ ಸೊಸೈಟಿ ಆಫ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಷನ್’ ಹೇಳಿದೆ. ಆದರೂ, ಭಾರತದಲ್ಲಿ ನಗರ–ಗ್ರಾಮೀಣ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಅಂತರಗಳಿರುವುದು ಅಧ್ಯಯನಗಳಲ್ಲಿ ಕಂಡುಬಂದಿದೆ.
ಅಂಗಾಂಗ ಕಸಿಯಲ್ಲಿ ಸಮಾನತೆ ಸಾಧಿಸುವ ವಿಚಾರದಲ್ಲಿ ಭಾರತವು ಹಿಂದುಳಿದಿದೆ. ಮಹಾನಗರಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿಯೇ ಬಹುತೇಕ ಕಸಿ ನಡೆಯುತ್ತಿದ್ದು, ಗ್ರಾಮಗಳಲ್ಲಿ ವಾಸಿಸುವ ಜನರು ಈ ವ್ಯವಸ್ಥೆಯ ಸೌಲಭ್ಯ ಪಡೆಯಲಾಗುತ್ತಿಲ್ಲ.ದೇಶದ ಬಹುತೇಕ ರಾಜ್ಯಗಳಲ್ಲಿ ಉಚಿತ ಡಯಾಲಿಸಿಸ್ ವ್ಯವಸ್ಥೆ ಲಭ್ಯವಿದ್ದರೂ ಅಂಗಾಂಗ ಕಸಿಯ ವೆಚ್ಚಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ಸಮಗ್ರವಾದ ನಿಯಮಾವಳಿ ಇಲ್ಲ. ಕೆಲವು ಖಾಸಗಿ ಆಸ್ಪತ್ರೆಗಳ ಶೇ 90ರಷ್ಟು ಕಸಿಗಳು ವಿದೇಶಿ ಪ್ರಜೆಗಳಿಗೆ ನಡೆಯುತ್ತಿವೆ ಎಂದು ವರದಿ ಹೇಳಿದೆ.
ವರದಿಯಲ್ಲಿ ಅಂಗಾಂಗ ಕಸಿಯ ಸ್ಥಿತಿಗಳನ್ನು ಆಧರಿಸಿ ವಿವಿಧ ದೇಶಗಳನ್ನು ಐದು ಗುಂಪುಗಳನ್ನಾಗಿ ಮಾಡಲಾಗಿದ್ದು, ಭಾರತವು ನಾಲ್ಕನೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾವೂ ಇದೆ. ಭಾರತದಲ್ಲಿ ಉದರ, ಎದೆಗೆ ಸಂಬಂಧಿಸಿದ ಕಸಿಗಳು ಹೆಚ್ಚು ನಡೆಯುತ್ತಿವೆ. ಸತ್ತವರು ಮತ್ತು ಜೀವಂತ ದಾನಿಗಳಿಂದ ಅಂಗಾಂಗ ಸಂಗ್ರಹ ಮಾಡಿ, ಸರ್ಕಾರಿ ಮತ್ತು ಖಾಸಗಿ ಧನಸಹಾಯದೊಂದಿಗೆ ಕಸಿ ನೆರವೇರಿಸಲಾಗುತ್ತಿದೆ.
ಮಾನವ ಅಂಗಾಂಗ ಕಸಿ ಕಾಯ್ದೆ–1994 ಮೃತ ದಾನಿಯಿಂದ ಪಡೆದ ಅಂಗಾಂಗಗಳ ಕಸಿಗೆ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಚೌಕಟ್ಟು ಒದಗಿಸುತ್ತದೆ. ‘ಮೋಹನ’ದಂಥ ಸ್ವಯಂ ಸೇವಾ ಸಂಸ್ಥೆಗಳು ವೈದ್ಯಕೀಯ ಸಿಬ್ಬಂದಿ ಕಾರ್ಯದಕ್ಷತೆ ಉತ್ತಮಪಡಿಸಲು ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಹಾಗಿದ್ದರೂ ದೇಶದಲ್ಲಿ ಅಂಗಾಂಗ ಕಸಿಯು ಭಿನ್ನ ಪ್ರದೇಶಗಳಲ್ಲಿ ಭಿನ್ನವಾದ ರೀತಿಯಲ್ಲಿ ನಡೆಯುತ್ತಿದೆ.
ಅನೇಕ ಭಾರತೀಯರು, ಮುಖ್ಯವಾಗಿ ಬಡವರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಜೀವ ಉಳಿಸಲು ನೆರವಾಗುವಂಥ ಅಂಗಾಂಗ ಕಸಿಯಿಂದ ದೂರ ಉಳಿದಿದ್ದು, ಸರ್ಕಾರವು ಇವರಿಗೂ ಕಸಿ ಸೌಲಭ್ಯ ಕಲ್ಪಿಸದಿದ್ದರೆ ಈ ಅಸಮಾನತೆ ಹೀಗೆಯೇ ಮುಂದುವರಿಯಲಿದೆ ಎಂದು ವರದಿ ಹೇಳಿದೆ.
ಕಸಿ ಮಾಡಲು ಅಂಗಾಂಗಗಳಿಗಾಗಿ ಜೀವಂತ ಇರುವವರನ್ನೇ ನೆಚ್ಚಿಕೊಂಡಿರುವುದರಿಂದ ಹೆಚ್ಚು ಅಂಗಾಂಗಗಳು ಲಭ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪನ್ಮೂಲದ ಕೊರತೆ ಇದೆ. ಜತೆಗೆ, ಅಂಗಾಂಗಗಳಿಗೆ ಹೆಚ್ಚು ಬೇಡಿಕೆ ಇದ್ದು, ಕಸಿ ಸಾಮರ್ಥ್ಯ ಕಡಿಮೆ ಇದೆ. ಅಂಗಾಂಗಗಳನ್ನು ಹಣ ಕೊಟ್ಟು ಕೊಳ್ಳುವಂತಹ ಅನೈತಿಕ ಪದ್ಧತಿಗಳೂ ಚಾಲ್ತಿಯಲ್ಲಿವೆ. ಒಟ್ಟು ಅಂಗಾಂಗ ಕಸಿಗಳ ಲೆಕ್ಕದಲ್ಲಿ ಭಾರತವು ಅಗ್ರ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ, ಪಟ್ಟಿಯಲ್ಲಿ ಕೆಳಕ್ಕೆ ಕುಸಿಯುತ್ತದೆ ಎಂದು ಅಧ್ಯಯನ ತಂಡದ ಭಾಗವಾಗಿದ್ದವರು ಹೇಳಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಗುಜರಾತ್ ರಾಜ್ಯಗಳು ಅಂಗಾಂಗ ಕಸಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ದೇಶದಲ್ಲಿಯೇ ತಮಿಳುನಾಡು ಮುಂದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತ ವ್ಯಕ್ತಿಗಳ ಅಂಗಾಂಗಗಳನ್ನು ಸಂಗ್ರಹಿಸಿ, ಕಸಿ ಮಾಡಲಾಗುತ್ತಿದೆ. ಅದಕ್ಕಾಗಿ ಖಾಸಗಿ ಮೂಲಗಳಿಂದಲೂ ಹಣವನ್ನು ಪೂರೈಸಲಾಗುತ್ತಿದೆ. ಒಡಿಶಾ ಮತ್ತು ಕೆಲವು ಈಶಾನ್ಯ ರಾಜ್ಯಗಳು ಇದರಲ್ಲಿ ಹಿಂದುಳಿದಿವೆ. ಜಾರ್ಖಂಡ್, ಛತ್ತೀಸಗಢ, ಬಿಹಾರ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈ ವ್ಯವಸ್ಥೆ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲ ವರ್ಗ, ಪ್ರದೇಶಗಳ ಜನರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರೆ, ಅದಕ್ಕೆ ತಕ್ಕಂತೆ ಆಸ್ಪತ್ರೆಗಳ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯಮಾವಳಿಗಳನ್ನು ರೂಪಿಸಬೇಕು ಎಂದು ವರದಿ ಪ್ರತಿಪಾದಿಸಿದೆ.
ಜಾಗತಿಕ ಅಂಗಾಂಗ ಕಸಿಯ ವ್ಯವಸ್ಥೆಯನ್ನು ವರದಿಯಲ್ಲಿ ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದನೇ ಗುಂಪಿನಲ್ಲಿ ಜಿಂಬಾಬ್ವೆ, ಚಾಡ್, ನೈಗರ್‌ನಂಥ ಅಂಗಾಂಗ ಕಸಿ ವ್ಯವಸ್ಥೆ ಇಲ್ಲದ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಸ್ಥಾನ ಪಡೆದಿವೆ. ಎರಡನೇ ಗುಂಪಿನಲ್ಲಿ ಕ್ಯಾಮರೂನ್, ಉಗಾಂಡ, ಮಂಗೋಲಿಯಾದಂಥ ಸೀಮಿತ ಕಸಿ ಕೇಂದ್ರಗಳಿರುವ, ಕಿಡ್ನಿ ಕಸಿಗೆ ಹೆಚ್ಚು ಆದ್ಯತೆ ನೀಡುವ ದೇಶಗಳು ಸ್ಥಾನ ಪಡೆದಿವೆ. ಮೂರನೇ ಗುಂಪಿನಲ್ಲಿ ಹಲವು ಕಸಿ ಕೇಂದ್ರಗಳಿರುವ ಈಜಿಪ್ಟ್, ವಿಯೆಟ್ನಾಂನಂಥ ದೇಶಗಳು ಇದ್ದು, ಅವು ಹಣದ ಕೊರತೆ ಮತ್ತು ಆದ್ಯತೆಯ ಪ್ರಶ್ನೆಗಳನ್ನು ಎದುರಿಸುತ್ತಿವೆ. ಐದನೇ ಗುಂಪಿನಲ್ಲಿ ಅಮೆರಿಕ, ಸ್ಪೇನ್‌ನಂಥ ಅಂಗಾಂಗ ಕಸಿಯನ್ನು ವ್ಯವಸ್ಥಿತವಾಗಿ, ನಿರ್ದಿಷ್ಟ ಚೌಕಟ್ಟುಗಳೊಳಗೆ ನಡೆಸುತ್ತಿರುವ ದೇಶಗಳಿವೆ.
ಭಾರತದಲ್ಲಿ ಅಂಗಾಂಗ ಕಸಿ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಸುಧಾರಣೆಯಾಗುತ್ತಿದೆ. ಪ್ರತಿ ದಾನಿಗೆ ಸಂಬಂಧಿಸಿದಂತೆ ಅಂಗಾಂಗ ಕಸಿಯ ಸರಾಸರಿ ಸಂಖ್ಯೆಯು 2016ರಲ್ಲಿ 2.43 ಇದ್ದರೆ, 2022ರಲ್ಲಿ ಇದು 3.05ಕ್ಕೆ ಏರಿಕೆಯಾಗಿದೆ. ಹಾಗಿದ್ದರೂ, ಬಹುತೇಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಖಾಸಗಿ ಆರೋಗ್ಯ ಸೇವೆ ದುಬಾರಿಯಾಗಿರುವುದರಿಂದ ಬಹುಪಾಲು ರೋಗಿಗಳಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಆಗುತ್ತಿಲ್ಲ.
ಭಾರತದಲ್ಲಿ ಹೆಚ್ಚು ಮೂತ್ರಪಿಂಡ (ಕಿಡ್ನಿ) ಕಸಿ ಮಾಡಲಾಗುತ್ತಿದೆ. ಹಾಗಿದ್ದರೂ, ಈ ಪ್ರಕ್ರಿಯೆಯು ಬಹುತೇಕ ರೋಗಿಗಗಳನ್ನು ಒಳಗೊಳ್ಳುತ್ತಿಲ್ಲ. ರೋಗಿಗಳ ನಡುವೆ ಸಮಾನತೆಯನ್ನೂ ಸಾಧಿಸಲಾಗುತ್ತಿಲ್ಲ. ಮೃತಪಟ್ಟವರ (ಮಿದುಳು ನಿಷ್ಕ್ರಿಯಗೊಂಡವರು ಮತ್ತು ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟವರ) ಮೂತ್ರಪಿಂಡಗಳನ್ನು ಅಗತ್ಯವಿರುವವರಿಗೆ ಕಸಿ ಕಟ್ಟುವ ಪ್ರಕ್ರಿಯೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ದೇಶದಲ್ಲಿ ಮೃತರ ಅಂಗಾಂಗಗಳನ್ನು ಬಳಸುವ ವ್ಯವಸ್ಥೆ ಉತ್ತಮವಾಗಿಲ್ಲ. ಇದಕ್ಕೆ ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳು, ಆರೋಗ್ಯ ವ್ಯವಸ್ಥೆಯಲ್ಲಿನ ಇತಿಮಿತಿಗಳು ಸೇರಿದಂತೆ ಹಲವು ಕಾರಣಗಳಿವೆ.
2023ರಲ್ಲಿ ಭಾರತದಲ್ಲಿ 18,378 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ಪೈಕಿ ಮೃತಪಟ್ಟ 2,935 ಮಂದಿಯ (ಶೇ 15.9ರಷ್ಟು) ಅಂಗಾಂಗಗಳನ್ನು ಮಾತ್ರ ಪಡೆಯಲಾಗಿತ್ತು.
‘ದಿ ಲ್ಯಾನ್ಸೆಟ್’ನ 2024ರ ವರದಿ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 11,243 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಆದರೆ, ಪ್ರತಿ ವರ್ಷ 2 ಲಕ್ಷ ಮಂದಿ ಮೂತ್ರಪಿಂಡ ನಿಷ್ಕ್ರಿಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಬೇಡಿಕೆಯಷ್ಟು ಮೂತ್ರಪಿಂಡಗಳು ಲಭ್ಯವಾಗುತ್ತಿಲ್ಲ. ಬಹುತೇಕ ರೋಗಿಗಳು ಜೀವನಪೂರ್ತಿ ಡಯಾಲಿಸಿಸ್ ಅವಲಂಬಿಸಿದ್ದಾರೆ. ಇನ್ನೂ ಕೆಲವರು ಕಸಿ ಕಟ್ಟಲು ಮೂತ್ರಪಿಂಡಗಳಿಗೆ ಇಲ್ಲವೇ ಖಾಸಗಿ ಆಸ್ಪತ್ರೆಗಳಲ್ಲಿ ಕಸಿ ಶಸ್ತ್ರಚಿಕಿತ್ಸೆಗಾಗಿ ಹಣಕಾಸು ನೆರವಿಗೆ ಕಾದುಕುಳಿತಿದ್ದಾರೆ.
ದೇಶದಲ್ಲಿ ಅಂಗಾಂಗ ದಾನ ಪ್ರಕ್ರಿಯೆಯಲ್ಲೂ ಲಿಂಗ ಅಸಮಾನತೆ ಇರುವುದರ ಬಗ್ಗೆ ಈ ವರ್ಷದ ಜೂನ್‌ನಲ್ಲಿ ಪ್ರಕಟವಾದ ‘ದಿ ಲ್ಯಾನ್ಸೆಟ್’ನ ಮತ್ತೊಂದು ಅಧ್ಯಯನ ವರದಿ ಬೊಟ್ಟು ಮಾಡಿದೆ.
2000–2025ರ ನಡುವೆ ದೇಶದಲ್ಲಿ ನಡೆದಿರುವ ಕಿಡ್ನಿ ಮತ್ತು ಯಕೃತ್ (ಲಿವರ್) ವಿನಿಮಯ ಕಸಿ ಶಸ್ತ್ರಚಿಕಿತ್ಸೆಗಳನ್ನು (exchange transp*antation) ಈ ಅಧ್ಯಯನದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. 1,839 ಮೂತ್ರಪಿಂಡ ಮತ್ತು 259 ಯಕೃತ್ ವಿನಿಮಯ ಕಸಿ ಶಸ್ತ್ರಚಿಕಿತ್ಸೆಗಳನ್ನು ಅಧ್ಯಯನಕ್ಕಾಗಿ ಪರಿಗಣಿಸಲಾಗಿದೆ. ಕಿಡ್ನಿ ವಿನಿಮಯ ಕಸಿಯಲ್ಲಿ ಪುರುಷರು 1,504 ಕಿಡ್ನಿಗಳನ್ನು (ಶೇ 82ರಷ್ಟು) ಪಡೆದರೆ, 1,469 ಕಿಡ್ನಿಗಳನ್ನು (ಶೇ 80ರಷ್ಟು) ಮಹಿಳೆಯರೇ ದಾನ ಮಾಡಿದ್ದಾರೆ. ಯಕೃತ್ ಅನ್ನು ಪಡೆದವರಲ್ಲೂ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 222 ಪುರುಷರು ಯಕೃತ್ ಪಡೆದಿದ್ದರೆ, 37 ಮಹಿಳೆಯರಿಗೆ ಮಾತ್ರ ಯಕೃತ್ ಲಭ್ಯವಾಗಿದೆ.
* ರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶ ಕೊರತೆ
* ಸರ್ಕಾರ ಸಾಕಷ್ಟು ಬಂಡವಾಳ ಹೂಡದಿರುವುದು, ದೂರದೃಷ್ಟಿ ಕೊರತೆ
* ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ಲಭ್ಯ ಇಲ್ಲದಿರುವುದು
* ಅಂಗಾಂಗ ಕಸಿಗೆ ಶಿಫಾರಸು ಮಾಡುವ ವೈದ್ಯರು ಮತ್ತು ಅಂಗಾಂಗ ಕಸಿ ಯೋಜನೆಯ ನಡುವೆ ಸಮನ್ವಯ ಇಲ್ಲದಿರುವುದು
* ವಿಮೆ ಸೌಲಭ್ಯದ ಇತಿಮಿತಿ
* ರೋಗಿಗಳಿಗೆ ಹಣಕಾಸಿನ ಕೊರತೆ
* ರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶಗಳನ್ನು ದಾಖಲಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು
* ರೋಗಿಗಳ ಮೇಲೆ ಬರುವ ಹಣಕಾಸಿನ ಹೊರೆಯನ್ನು ತಪ್ಪಿಸುವಂತಹ ನೀತಿಗಳನ್ನು ಜಾರಿಗೊಳಿಸಬೇಕು
* ಮೃತಪಟ್ಟವರ ಅಂಗಾಂಗಗಳನ್ನು ದಾನವಾಗಿ ಪಡೆಯುವ ದಿಸೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚು ಬಂಡವಾಳ ಹೂಡಬೇಕು
* ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚಿಸುವುದಕ್ಕಾಗಿ ಆಸ್ಪತ್ರೆಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಆರೈಕೆ ಸಮನ್ವಯವನ್ನು ಸುಧಾರಿಸಬೇಕು
ಆಧಾರ: ದಿ ಲ್ಯಾನ್ಸೆಟ್‌ನ ‘ಪಾಲಿಸಿ ಇನೊವೇಷನ್ಸ್ ಟು ಅಡ್ವಾನ್ಸ್ ಈಕ್ವಿಟಿ ಇನ್ ಸಾಲಿಡ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಷನ್’ ಮತ್ತು ಇತರ ವರದಿಗಳು, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.