ಯಾವುದೇ ರೀತಿಯ ತುರ್ತುಸ್ಥಿತಿಯಲ್ಲಿ ಪರಿಹಾರಕಾರ್ಯ ಕೈಗೊಳ್ಳಲು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್) 1948ರಿಂದಲೇ ಇದ್ದರೂ ಈಗ ಪಿಎಂ ಕೇರ್ಸ್ ಎಂಬ ಇನ್ನೊಂದು ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಡೆಗೆ ಪರ ವಿರೋಧದ ವಾದಗಳು ಕೇಳಿ ಬರುತ್ತಿವೆ. ಇಷ್ಟಕ್ಕೂ ಎರಡೂ ನಿಧಿಗಳ ನಡುವಿನ ಭಿನ್ನತೆ ಏನು?
ಕೋವಿಡ್–19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ಪರಿಹಾರ ಕಾರ್ಯಗಳಿಗೆ ಬಳಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತುಸ್ಥಿತಿಗಳ ಪರಿಹಾರ ನಿಧಿ–ಪಿಎಂ ಕೇರ್ಸ್’ ಅನ್ನು ಸ್ಥಾಪಿಸಿದೆ. ಯಾವುದೇ ರೀತಿಯ ತುರ್ತುಸ್ಥಿತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸಾರ್ವಜನಿಕರಿಂದ ಹಣ ಸಂಗ್ರಹಿಸುವ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್) ಇದೆ. ಪ್ರಧಾನಿ ಹೆಸರಲ್ಲಿ ತುರ್ತು ಪರಿಹಾರಕ್ಕಾಗಿ ಒಂದು ನಿಧಿ ಇದ್ದರೂ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇನ್ನೊಂದು ನಿಧಿ ಸ್ಥಾಪನೆ ಮಾಡಲಾಗಿದೆ.
ದೇಶ ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದವರಿಗೆ ನೆಲೆ ಕಲ್ಪಿಸಲು ಅಗತ್ಯವಿದ್ದ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಲು ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ‘ಪಿಎಂಎನ್‌ಆರ್‌ಎಫ್’ ಸ್ಥಾಪಿಸಿದ್ದರು. ನೆಲೆ ಕಲ್ಪಿಸುವ ಕಾರ್ಯ ಮುಗಿದ ನಂತರವೂ ಈ ನಿಧಿ ಮುಂದುವರಿಯಿತು. ನೆರೆ–ಬರ, ಭೂಕಂಪಗಳಂತಹ ಪ್ರಾಕೃತಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಮತ್ತು ಇತರ ತುರ್ತುಸ್ಥಿತಿಗಳಲ್ಲಿ ಬಳಕೆ ಮಾಡಲು ಈ ನಿಧಿಯನ್ನು ಬಳಕೆ ಮಾಡಲಾಗುತ್ತಿದೆ. 2009–10ರಿಂದ 2018–19ರವರೆಗೆ ಈ ನಿಧಿಯಲ್ಲಿ ₹4,700 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಇದರಲ್ಲಿ ₹2,500 ಕೋಟಿಯಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. 2009ಕ್ಕಿಂತಲೂ ಹಿಂದೆ ಬಳಕೆಯಾಗದೇ ಉಳಿದಿದ್ದ ಹಣ ಸೇರಿ ಈಗ ಈ ನಿಧಿಯಲ್ಲಿ ₹3,800.44 ಕೋಟಿ ಮೊತ್ತವಿದೆ.
ಈ ನಿಧಿ ಇದ್ದೂ ಈಗ ಇಂತಹದ್ದೇ ಹೊಸ ನಿಧಿ ಸ್ಥಾಪಿಸಲಾಗಿದೆ. ಹೊಸ ನಿಧಿಯ ಘೋಷಣೆ ವೇಳೆ ಮೋದಿ ಅವರು, ‘ಕೋವಿಡ್–19 ವಿರುದ್ಧ ಹೋರಾಡುವ ಉದ್ದೇಶದಿಂದ ಈ ನಿಧಿ ಸ್ಥಾಪನೆ ಮಾಡಲಾಗಿದೆ’ ಎಂದು ವಿವರಿಸಿದ್ದರು. ಅಲ್ಲದೆ, ಎಲ್ಲರೂ ಈ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಪಿಎಂ ಕೇರ್ಸ್ ನಿಧಿಯ ಜಾಲತಾಣದಲ್ಲಿ, ನಿಧಿಗೆ ಸಂಬಂಧಿಸಿದ ಮತ್ತಷ್ಟು ವಿವರಗಳಿವೆ.‘ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಸ್ಥಿತಿ ಅಥವಾ ಬೇರೆ ಯಾವುದೇ ರೀತಿಯ ತುರ್ತುಸ್ಥಿತಿ, ಪ್ರಕೃತಿ ವಿಕೋಪ, ಮಾನವ ನಿರ್ಮಿತ ದುರಂತದಂತಹ ಪರಿಸ್ಥಿತಿಗಳಲ್ಲಿ ಈ ನಿಧಿಯನ್ನು ಬಳಸಲಾಗುತ್ತದೆ. ವೈದ್ಯಕೀಯ ಸವಲತ್ತುಗಳನ್ನು ಮೇಲ್ದರ್ಜೆಗೆ ಏರಿಸುವ ಮತ್ತು ಮೇಲೆ ವಿವರಿಸದೇ ಇರುವಂತಹ ತುರ್ತು ಸಂದರ್ಭಗಳಲ್ಲಿ ಈ ನಿಧಿ ಬಳಸಲಾಗುತ್ತದೆ’ ಎಂದು ವಿವರಿಸಲಾಗಿದೆ.
‘ಸರಿಸುಮಾರು ಎರಡೂ ನಿಧಿಗಳ ಉದ್ದೇಶ ಮತ್ತು ಕಾರ್ಯವಿಧಾನ ಒಂದೇ ಆಗಿದೆ. ಹೀಗಾಗಿ ಪಿಎಂ ಕೇರ್ಸ್ ಸ್ಥಾಪಿಸುವ ಅವಶ್ಯಕತೆ ಏನಿತ್ತು’ ಎಂದು ಸಿಪಿಎಂ ಪ್ರಶ್ನಿಸಿದೆ. ‘ಪಿಎಂ ಕೇರ್ಸ್ ನಿಧಿಗೆ ಜಮೆಯಾಗಿರುವ ಹಣವನ್ನು ಪಿಎಂಎನ್‌ಆರ್‌ಎಫ್‌ಗೆ ವರ್ಗಾಯಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಪಿಎಂ ಕೇರ್ಸ್ ನಿಧಿಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ ಎಂದೂ ವಿರೋಧ ಪಕ್ಷಗಳು ಆರೋಪಿಸಿವೆ.ಈ ನಿಧಿಗೆ ಪ್ರಧಾನಿಯು ತಮ್ಮ ಸಂಪುಟದ ಮೂವರು ಸದಸ್ಯರನ್ನು (ರಕ್ಷಣೆ, ಗೃಹ ಹಾಗೂ ಹಣಕಾಸು ಸಚಿವರು) ಟ್ರಸ್ಟಿಗಳನ್ನಾಗಿ ನೇಮಕ ಮಾಡಿದ್ದಾರೆ.
ಪಿಎಂಎನ್‌ಆರ್‌ಎಫ್ ನಿಧಿಯಲ್ಲಿ ಇರುವ ಹಣವನ್ನು ಕೋವಿಡ್–19 ವಿರುದ್ಧದ ಹೋರಾಟಕ್ಕೆ ಮಾತ್ರ ಬಳಸಲಾಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಪಿಎಂ ಕೇರ್ಸ್ ನಿಧಿಸ್ಥಾಪನೆಯಾಗಿ ವಾರದಲ್ಲಿ ₹ 6,500 ಕೋಟಿ ಜಮೆಯಾಗಿದೆ ಎಂದು ಕೆಲವು ಸುದ್ದಿತಾಣಗಳು ವರದಿ ಮಾಡಿವೆ. ಆದರೆ, ಸರ್ಕಾರದಿಂದ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಪಿಎಂ ಕೇರ್ಸ್ ಅಧಿಕೃತ ಜಾಲತಾಣದಲ್ಲೂ ಈ ಮಾಹಿತಿ ಇಲ್ಲ. ಆದರೆ, ಇದೇ ವೇಳೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು,
ತಮ್ಮ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆಯಾಗುತ್ತಿರುವ ಹಣದ ಮಾಹಿತಿಯನ್ನು ಪ್ರತಿದಿನ ನೀಡುತ್ತಿದ್ದಾರೆ.
ಸಾಮ್ಯವೇನು–ವ್ಯತ್ಯಾಸವೇನು?
ಪ್ರಧಾನಮಂತ್ರಿ ಪರಿಹಾರ ನಿಧಿಯ ಲೆಕ್ಕಪತ್ರ
ನಿಧಿ ಬಳಸಲು ಕಾಂಗ್ರೆಸ್ ಅಧ್ಯಕ್ಷರ ಸಹಿ ಬೇಕಾಗಿಲ್ಲ.....
‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ನಿರ್ವಹಣಾ ಸಮಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಇದ್ದಾರೆ. ಈ ನಿಧಿಯಲ್ಲಿರುವ ಹಣವನ್ನು ಮಂಜೂರು ಮಾಡಲು ಕಾಂಗ್ರೆಸ್ ಅಧ್ಯಕ್ಷರ ಸಹಿ ಪಡೆಯುವುದು ಅನಿವಾರ್ಯ. ಸದಾ ಕಾಂಗ್ರೆಸ್ ಅಧ್ಯಕ್ಷರ ಎದುರು ಸಹಿಗಾಗಿ ಗೋಗರೆಯುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಿಲ್ಲ. ಹೀಗಾಗಿ ಅವರು ಹೊಸದಾಗಿ ಪಿಎಂ ಕೇರ್ಸ್ ಎಂಬ ನಿಧಿ ಸ್ಥಾಪನೆ ಮಾಡಿದ್ದಾರೆ. ಈ ನಿಧಿಯನ್ನು ಬಳಸಲು ಅವರು ಕಾಂಗ್ರೆಸ್‌ನ ಈಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಹಿ ಪಡೆಯುವ ಅವಶ್ಯಕತೆಯಿಲ್ಲ. ಇದು ಪ್ರಧಾನಿ ಮೋದಿ ಅವರ ಅಸಾಧಾರಣ ಕ್ರಮ’ ಎಂಬ ಸುದ್ದಿ ಮತ್ತು ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
‘ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಎಷ್ಟೇ ಇದ್ದರೂ, ಕಾಂಗ್ರೆಸ್‌ನ ಅಧ್ಯಕ್ಷರುಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ನಿರ್ವಹಣಾ ಸಮಿತಿಯ ಸದಸ್ಯರಾಗಿರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರು ಇಲ್ಲದ ನಿಧಿ ಇರಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದರು’ ಎಂದು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಏಪ್ರಿಲ್ 9ರಂದು ಲೇಖನ ಪ್ರಕಟಿಸಿದೆ. ಇದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ನಿರ್ವಹಣಾ ಸಮಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ (ಎಫ್‌ಐಸಿಸಿಐ) ಮತ್ತು ಟಾಟಾ ಸಂಸ್ಥೆಯ ಪ್ರತಿನಿಧಿಗಳು ಸದಸ್ಯರಾಗಿದ್ದರು ನಿಜ. ಆದರೆ, ಹಣ ಮಂಜೂರು ಮಾಡಲು ಪ್ರಧಾನಿ ಅವರು ಕಾಂಗ್ರೆಸ್ ಅಧ್ಯಕ್ಷರ ಸಹಿ ಪಡೆಯಬೇಕಿಲ್ಲ. ಈ ನಿಧಿಯಲ್ಲಿರುವ ಹಣವನ್ನು ಪ್ರಧಾನಿ ಅವರ ಆದೇಶದ ಮೇರೆಗೆ ಮಾತ್ರ ಮಂಜೂರು ಮತ್ತು ಬಿಡುಗಡೆ ಮಾಡಲಾಗುತ್ತದೆ. 1948ರಲ್ಲಿ ಈ ನಿಧಿಯನ್ನು ಸ್ಥಾಪಿಸಿದಾಗ ಹಣ ಮಂಜೂರು ಮಾಡಲು ಎಲ್ಲಾ ಸದಸ್ಯರ ಸಹಿ ಪಡೆಯುವುದು ಅಗತ್ಯವಾಗಿತ್ತು. ಆದರೆ, 1985ರಲ್ಲಿ ಈ ಸಮಿತಿಯ ಸದಸ್ಯರ ಸಹಿ ಪಡೆಯಬೇಕು ಎಂಬ ಷರತ್ತನ್ನು ದೆಹಲಿ ಹೈಕೋರ್ಟ್ ವಜಾ ಮಾಡಿತು. ಅಂದಿನಿಂದ ಈ ನಿಧಿಯ ಬಳಕೆಗೆ ಆದೇಶ ನೀಡುವ, ನಿರ್ದೇಶನ ನೀಡುವ ಅಧಿಕಾರ ಪ್ರಧಾನಿಯದ್ದು ಮಾತ್ರ.
ಸಿಎಜಿ ತಪಾಸಣೆಯಿಲ್ಲ
ಕೇಂದ್ರ ಸರ್ಕಾರದ ಎಲ್ಲ ಆರ್ಥಿಕ ವ್ಯವಹಾರಗಳು ಮಹಾಲೇಖಪಾಲರು ಹಾಗೂ ಲೆಕ್ಕ ಪರಿಶೋಧಕರಿಂದ (ಸಿಎಜಿ) ಪರಿಶೀಲನೆಗೆ ಒಳಗಾಗುವುದು ಕಡ್ಡಾಯ. ಆದರೆ, ‘ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತುಸ್ಥಿತಿಗಳ ಪರಿಹಾರ ನಿಧಿ–ಪಿಎಂ ಕೇರ್ಸ್’ನ ಲೆಕ್ಕಪತ್ರವು ಸಿಎಜಿ ಪರಿಶೀಲನೆಗೆ ಒಳಪಡುವುದಿಲ್ಲ.
‘ಪಿಎಂ ಕೇರ್ಸ್’ ನಿಧಿಗೆ ಸರ್ಕಾರದ ಹಣ ಹೋಗುವುದಿಲ್ಲ. ನಾಗರಿಕರು ನೀಡಿದ ವೈಯಕ್ತಿಕ ದೇಣಿಗೆ ಅದಾಗಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.ಪಿಎಂಎನ್‌ಆರ್‌ಎಫ್‌ನ ಲೆಕ್ಕಪತ್ರವನ್ನೂ ನಾವು ಪರಿಶೀಲಿಸುವುದಿಲ್ಲ’ ಎಂದು ಸಿಎಜಿ ಮೂಲಗಳು ಹೇಳಿರುವುದನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ‘ಪಿಎಂಎನ್‌ಆರ್‌ಎಫ್‌ನ ಲೆಕ್ಕವನ್ನು ಸಿಎಜಿ ಪರಿಶೀಲಿಸದಿದ್ದರೂ ಅದರ ನಿಧಿ ಬಳಕೆ ಕುರಿತು ಲೆಕ್ಕಪರಿಶೋಧಕರು ಈ ಹಿಂದೆ ಪ್ರಶ್ನೆ ಮಾಡಿದ್ದುಂಟು’ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
ದಂಡದ ಎಚ್ಚರಿಕೆ: ಪಿಎಂ ಕೇರ್ಸ್ ನಿಧಿ ಸ್ಥಾಪನೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದ ವಕೀಲರಿಗೆ, ಈ ಅರ್ಜಿಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ದಂಡ ಪಾವತಿಸಲು ಸಿದ್ಧವಾಗಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತುಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.