ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಜಾರವಾ ಸಮುದಾಯದ ದಂಪತಿ
ಚಿತ್ರ:ಅಂಡಮಾನ್ ಮುಖ್ಯ ಚುನಾವಣಾಧಿಕಾರಿ ಎಕ್ಸ್ ಖಾತೆ
ಅಂಡಮಾನ್‌ನಲ್ಲಿ ಜನವರಿ 7ರಂದು ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮವೊಂದು ನಡೆಯಿತು. ದ್ವೀಪವಾಸಿಗಳಾದ ಜಾರವಾ ಬುಡಕಟ್ಟು ಸಮುದಾಯದ 19 ಮಂದಿಗೆ ಭಾರತದ ಚುನಾವಣಾ ಆಯೋಗವು ಗುರುತಿನ ಚೀಟಿಗಳನ್ನು ವಿತರಿಸಿತು. ಜನರಿಗೆ ಮತದಾರರ ಚೀಟಿ ವಿತರಿಸುವುದು ವಿಶೇಷವೇನಲ್ಲ. ಆದರೆ, ಅರೆ ಅಲೆಮಾರಿಗಳಾದ, ಹೊರಗಿನ ಪ್ರಪಂಚದಿಂದ ಬಹುಕಾಲ ಪ್ರತ್ಯೇಕವಾಗಿ ಉಳಿದಿದ್ದ, ಈಗಲೂ ‘ನಾಗರಿಕ’ ಸಮಾಜದ ರೀತಿರಿವಾಜುಗಳಿಂದ ದೂರವಾಗಿ ಬದುಕುತ್ತಿರುವ ಜಾರವಾ ಬುಡಕಟ್ಟಿನ ಜನರಿಗೆ ಗುರುತಿನ ಚೀಟಿ ನೀಡುವ ಮೂಲಕ ಅವರನ್ನು ಚುನಾವಣಾ ವ್ಯವಸ್ಥೆಯೊಳಗೆ ಸೇರಿಸಿಕೊಂಡಿರುವುದು ವಿಶೇಷ
319 ದ್ವೀಪಗಳನ್ನು ಒಳಗೊಂಡಿರುವ ಅಂಡಮಾನ್–ನಿಕೋಬಾರ್ ಸಮೂಹದಲ್ಲಿ ಆರು ಬುಡಕಟ್ಟುಗಳು ವಾಸವಾಗಿದ್ದು, ಅವುಗಳಲ್ಲಿ ಐದು ಬುಡಕಟ್ಟುಗಳನ್ನು ಆದಿಮ ಜನಾಂಗಗಳು ಎನ್ನಲಾಗುತ್ತದೆ. ಅವುಗಳಲ್ಲಿ ಜಾರವಾ ಸಮುದಾಯವೂ ಒಂದಾಗಿದೆ. ಸಾವಿರಾರು ವರ್ಷಗಳ ಜೀವ ವಿಕಾಸ ಮತ್ತು ಜೀವ ವೈವಿಧ್ಯಕ್ಕೆ ಸಾಕ್ಷಿಯಂತಿರುವ ಅಂಡಮಾನ್ ದ್ವೀಪದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಈ ಸಮುದಾಯ ನೆಲೆ ಕಂಡುಕೊಂಡಿದೆ.
ಕಡುಕಪ್ಪು ವರ್ಣದ, ಗುಂಗುರು ಕೂದಲಿನ ಈ ಸಮುದಾಯದ ಜನ ಎಂಥ ಆದಿಮ ಸ್ಥಿತಿಯಲ್ಲಿ ಬದುಕುತ್ತಿದ್ದರೆಂದರೆ, ಮೈಮೇಲೆ ಬಟ್ಟೆಯನ್ನೇ ಧರಿಸುತ್ತಿರಲಿಲ್ಲ. ಕಪ್ಪೆಚಿಪ್ಪು, ಎಲೆ, ಹೂವು ಮುಂತಾದ ಪ್ರಾಕೃತಿಕ ವಸ್ತುಗಳಿಂದ ತಮ್ಮ ದೇಹವನ್ನು ಮುಚ್ಚಿಕೊಳ್ಳುತ್ತಿದ್ದರು. ಬಿಲ್ಲು ಬಾಣ ಅವರ ಮುಖ್ಯ ಆಯುಧಗಳಾಗಿದ್ದವು. ಅವುಗಳ ಮೂಲಕ ಕಾಡುಹಂದಿ, ಆಮೆ, ಮೀನು ಬೇಟೆ ಆಡಿ, ಕಾಡಿನಲ್ಲಿ ಹಣ್ಣು, ಗೆಡ್ಡೆ ಗೆಣಸು, ಜೇನು ಸಂಗ್ರಹಿಸಿ ತಿನ್ನುತ್ತಿದ್ದರು. 260ರಿಂದ 400ರಷ್ಟು ಸಂಖ್ಯೆಯಲ್ಲಿರುವ ಅವರು ಕಾಡಿನಲ್ಲಿ ಗುಡಿಸಲುಗಳಲ್ಲಿ ವಾಸ ಮಾಡುತ್ತಾರೆ.
ಅಂಡಮಾನ್‌ನ ಅಕಾ–ಬೋ ಭಾಷೆಯಲ್ಲಿ ಜಾರವಾ ಎಂದರೆ ಅಪರಿಚಿತ ಎಂದು ಅರ್ಥ. ಬಹುಕಾಲದವರೆಗೆ ಈ ಬುಡಕಟ್ಟು ಹೊರಜಗತ್ತಿಗೆ ಅಪರಿಚಿತವಾಗಿಯೇ ಉಳಿದಿತ್ತು. ಹೊರಜಗತ್ತಿನೊಂದಿಗೆ ಸಂಪರ್ಕ ಅವರಿಗೆ ಇಷ್ಟವೂ ಇರಲಿಲ್ಲ. ಅದಕ್ಕಿಂತಲೂ ವಿಚಿತ್ರ ಎಂದರೆ, ಹೊರಜಗತ್ತಿನ ಜನರನ್ನು ಕಂಡರೆ ಅವರಿಗೆ ಒಂದು ರೀತಿಯ ಹಗೆತನ ಇತ್ತು. ತಮ್ಮ ವಾಸಸ್ಥಳದತ್ತ ಯಾರಾದರೂ ಠಳಾಯಿಸಿದರೂ ಸಾಕು, ಅವರ ಮೇಲೆ ವಿಷ ಲೇಪಿತ ಬಾಣಗಳನ್ನು ಬಿಟ್ಟು ಓಡಿಸುತ್ತಿದ್ದರು. ಬ್ರಿಟಿಷರು ಅವರ ಮೇಲೆ ವಿವಿಧ ರೀತಿಯ ದೌರ್ಜನ್ಯ ಎಸಗಿದ್ದೇ ಇವರ ಇಂಥ ಆಕ್ರಮಣಕಾರಿ ವರ್ತನೆಗೆ ಕಾರಣ ಎನ್ನಲಾಗಿದೆ.
ಅಂಡಮಾನ್‌ನ ಆದಿವಾಸಿ ಜನರನ್ನು ಹೊರಪ್ರಪಂಚದೊಡನೆ ಬೆಸೆಯುವ ಪ್ರಯತ್ನಗಳು ಬ್ರಿಟಿಷರ ಕಾಲದಲ್ಲಿಯೇ ಆರಂಭವಾದವು. ಅಂಡಮಾನ್‌ನ ಬಹುತೇಕ ಬುಡಕಟ್ಟುಗಳು ಆ ಪ್ರಯತ್ನಗಳಿಗೆ ಸ್ಪಂದಿಸಿದವು. ಅವರನ್ನು ‘ನಾಗರಿಕರ’ನ್ನಾಗಿಸಲು ಪೋರ್ಟ್ ಬ್ಲೇರ್‌ನಲ್ಲಿ ‘ಅಂಡಮಾನ್ ಹೋಮ್’ ಸ್ಥಾಪಿಸಲಾಗಿತ್ತು. ಬಹುತೇಕ ಬುಡಕಟ್ಟುಗಳು ಪರಿವರ್ತನೆಗೆ ಮೈ ಒಡ್ಡಿದರೂ ಜಾರವಾ ಜನ ಮಾತ್ರ ಜಗ್ಗಲಿಲ್ಲ.
ದೇಶ ಸ್ವಾತಂತ್ರ್ಯ ಪಡೆದ ನಂತರ ಜಾರವಾ ಬುಡಕಟ್ಟನ್ನು ಆಧುನಿಕ ಜಗತ್ತಿನೊಂದಿಗೆ ಸಂಪರ್ಕಿಸುವ ಪ್ರಯತ್ನಗಳು ಮತ್ತೆ ಆರಂಭವಾದವು. ಅದೇ ಕಾಲಕ್ಕೆ ಭಾರತ ಸರ್ಕಾರವು ಪೂರ್ವ ಪಾಕಿಸ್ತಾನದ ಕೆಲವು ಜನರಿಗೆ ಅಂಡಮಾನ್‌ನಲ್ಲಿ ನೆಲೆ ಕಲ್ಪಿಸಿತು. ಅದರಿಂದ ಜಾರವಾಗಳು ತಮ್ಮ ವಾಸಸ್ಥಳಗಳನ್ನು ಆಗಾಗ ಬದಲಿಸಬೇಕಾಗಿ ಬಂತು.
ಅಂಡಮಾನ್–ನಿಕೋಬಾರ್ ನಕ್ಷೆ
ಇದೇ ಸಂದರ್ಭದಲ್ಲಿ ಸರ್ಕಾರ ನೇಮಿಸಿದ ‘ಸಂಪರ್ಕ ತಂಡ’ವು ಬಾಳೆ ಹಣ್ಣು, ತೆಂಗಿನಕಾಯಿ, ಬಾಳೆ ಗಿಡ, ತೆಂಗಿನ ಗಿಡ ಇತ್ಯಾದಿ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ ಜಾರವಾಗಳಿದ್ದ ಕಾಡಿನ ಮರಗಳಿಗೆ ತೂಗುಹಾಕಿ ಬರುತ್ತಿತ್ತು. ಅವನ್ನು ಜಾರವಾ ಜನ ತೆಗೆದುಕೊಂಡು ಹೋಗತೊಡಗಿದರು. 1969–74ರ ನಡುವೆ ಇದು ಹೆಚ್ಚಾಯಿತು. ಕ್ರಮೇಣ ಉಡುಗೊರೆ ತೆಗೆದುಕೊಂಡು ಹೋಗುತ್ತಿದ್ದ ಸಂಪರ್ಕ ಗುಂಪಿನಲ್ಲಿ ಒಬ್ಬ ವೈದ್ಯರೂ ಹೋಗಿ, ಅವರಿಗೆ ಸಣ್ಣಪುಟ್ಟ ಚಿಕಿತ್ಸೆ ನೀಡಿ ಬರುತ್ತಿದ್ದರು. ಇಷ್ಟಾದರೂ ಹೊರಜಗತ್ತಿನ ಜನರನ್ನು ಜಾರವಾ ಜನ ಸಂಪೂರ್ಣವಾಗಿ ನಂಬಿರಲಿಲ್ಲ; ಅವರಿಗೆ ತಮ್ಮ ವಾಸಸ್ಥಳಗಳಿಗೆ ಪ್ರವೇಶ ನೀಡಿರಲಿಲ್ಲ. 1996ರಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಜಾರವಾಗಳ ಬದುಕಿನಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಯಿತು.
ಮನೆಯಿಂದ ಹೊರಗೆ ಹೋಗಿದ್ದ ಯುವಕನೊಬ್ಬ ಅಪಘಾತಕ್ಕೀಡಾಗಿ, ಕಾಲು ಮುರಿದುಕೊಂಡಿದ್ದ. ಅವನನ್ನು ಪೋರ್ಟ್ ಬ್ಲೇರ್‌ಗೆ ಕರೆದೊಯ್ದು ಎ.ಕೆ.ಪಂತ್ ಆಸ್ಪತ್ರೆಗೆ ಸೇರಿಸಲಾಗಿತ್ತು. ತಮಗಿಂತ ಭಿನ್ನವಾಗಿ ಕಾಣುತ್ತಿದ್ದ ಅವನನ್ನು ನೋಡಲು ಅಂದು ನೆರಿದಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಆರಂಭದಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ ಅವನನ್ನು ವೈದ್ಯರು ಪ್ರೀತಿಯಿಂದ ಮಾತನಾಡಿಸಿ, ಚಿಕಿತ್ಸೆ ಪಡೆಯುವಂತೆ ಆತನ ಮನವೊಲಿಸಿದ್ದರು. ಸುಮಾರು ಐದು ತಿಂಗಳು ಆಸ್ಪತ್ರೆಯಲ್ಲಿಯೇ ಇದ್ದ ಆತ ಗುಣಮುಖನಾಗಿ ಕಾಡಿಗೆ ಹಿಂದಿರುಗಿದ ನಂತರ ಬುಡಕಟ್ಟಿನ ಜನರಿಗೆ ತನ್ನ ‘ಹಿತಕರ’ವಾದ ಅನುಭವ ವಿವರಿಸಿದ. ಅಂದಿನಿಂದ ಜಾರವಾ ಜನ ಹೊರಜಗತ್ತನ್ನು ನೋಡುವ ಕ್ರಮವೇ ಬದಲಾಗಿಹೋಯಿತು; ಹಗೆತನದ ಜಾಗದಲ್ಲಿ ಸ್ನೇಹ ವಿಶ್ವಾಸ ಮೂಡಿತು. ಅವರು ಕಾಡಿನಿಂದ ಆಗಾಗ್ಗೆ ಹೊರಬಂದು ಹೊರಜಗತ್ತಿನ ಇತರೆ ಜನರೊಂದಿಗೆ ಬೆರೆಯಲು ಆರಂಭಿಸಿದರು.
ಇದೇ ಸುಸಂದರ್ಭ ಎಂದು ಭಾವಿಸಿದ ಸರ್ಕಾರವು, ಎ.ಕೆ.ಪಂತ್ ಆಸ್ಪತ್ರೆಯಲ್ಲಿ ಜಾರವಾ ಯುವಕನಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲಿ ಒಬ್ಬರಾಗಿದ್ದ ಡಾ.ರತನ್ ಚಂದ್ರ ಕರ್ ಅವರನ್ನೇ ಜಾರವಾ ಜನರೊಂದಿಗೆ ಸಂಪರ್ಕಸೇತುವನ್ನಾಗಿ ಮಾಡಿ, ಅವರನ್ನು ಕಾಡಿಗೆ ಕಳುಹಿಸಿತು. ಯಾವ ಆಧುನಿಕ ಸೌಕರ್ಯವೂ ಇಲ್ಲದೇ ಕಾಡಿನಲ್ಲಿ ಬೇಟೆ ಆಡಿ ಬದುಕುತ್ತಿದ್ದ ಅವರ ಕಟ್ಟುಮಸ್ತಾದ, ಆರೋಗ್ಯವಂತ ದೇಹಗಳನ್ನು ನೋಡಿ ಡಾ.ಕರ್ ಬೆರಗಾದರು. ರಕ್ತದೊತ್ತಡ, ಬೊಜ್ಜು, ಮಾನಸಿಕ ಸಮಸ್ಯೆಗಳ ಪರಿಚಯವೇ ಅಲ್ಲಿನ ಜನರಿಗೆ ಇರಲಿಲ್ಲ. ದೇಹದ ಮೇಲೆ ಹಾವು, ಚೇಳು ಇತ್ಯಾದಿಗಳ ಕಡಿತದ ಚಿಹ್ನೆಗಳು ಬಿಟ್ಟರೆ ಬೇರೆ ಕಾಯಿಲೆ ಇಲ್ಲದ ಅವರು, ದೇಶದ ಗ್ರಾಮೀಣ ಭಾಗದ ಜನರಿಗಿಂತಲೂ ಹೆಚ್ಚು ಸದೃಢವಾಗಿದ್ದರು. ಆರೋಗ್ಯ ಸಮಸ್ಯೆಗಳಿಗೆ ಹಂದಿಯ ಕೊಬ್ಬು ಸೇರಿದಂತೆ ಹಲವು ರೀತಿಯ ಔಷಧಗಳನ್ನು ಅವರೇ ತಯಾರಿಸಿ, ಬಳಸುತ್ತಿದ್ದರು. ಹೊರಜಗತ್ತಿನಲ್ಲಿ ಅಷ್ಟಾಗಿ ಕಾಣದ, ಕುಳಿತು ಹೆರಿಗೆ ಮಾಡಿಸುವ ವೈಜ್ಞಾನಿಕ ಪದ್ಧತಿಯನ್ನು ಅವರು ಅನುಸರಿಸುತ್ತಿದ್ದರು.
ನಿಧಾನಕ್ಕೆ ಸಮಸ್ಯೆಗಳು ಶುರುವಾದವು. ಹೊರಜಗತ್ತಿನ ಜನರಿಗೆ ಜಾರವಾಗಳು ಒಂದು ಆಕರ್ಷಣೆಯಂತಾಗಿ, ಅವರನ್ನು ನೋಡಲು ಪೋರ್ಟ್‌ಬ್ಲೇರ್–ದಿಗಲೀಪುರ ರಸ್ತೆಯಲ್ಲಿ (ಅಂಡಮಾನ್ ಟ್ರಂಕ್ ರಸ್ತೆ) ತಮ್ಮ ವಾಹನಗಳಲ್ಲಿ ಸಾಲುಗಟ್ಟಿ ಸಫಾರಿ ಹೊರಡುತ್ತಿದ್ದರು. ಹೀಗೆ ಹೋದ ಕೆಲವರು ಜಾರವಾ ಮಹಿಳೆಯರ ಜತೆ ಅಸಭ್ಯವಾಗಿ ನಡೆದುಕೊಂಡದ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ವರದಿಯಾಯಿತು.
ಅತ್ಯಂತ ಆರೋಗ್ಯವಂತರಾಗಿದ್ದ ಜಾರವಾ ಜನ ಹೊರಜಗತ್ತಿನೊಂದಿಗೆ ಬೆರೆಯಲು ಆರಂಭಿಸಿದ ನಂತರ ಅವರಲ್ಲಿ ಹಲವು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದವು. 1999ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕಾಣಿಸಿಕೊಂಡ ದಡಾರ 108 ಮಂದಿಗೆ ಹರಡುವುದರೊಂದಿಗೆ ತೀವ್ರ ಸ್ವರೂಪ ಪಡೆಯಿತು. ಈ ಕಾಯಿಲೆ ತಮ್ಮ ಜನಾಂಗವನ್ನು ಸರ್ವನಾಶ ಮಾಡುತ್ತದೆ ಎಂದೇ ಅವರು ಹೆದರಿದ್ದರು. ಆಗ ಅವರ ನೆರವಿಗೆ ಬಂದದ್ದು ಅದೇ ಡಾ.ರತನ್ ಚಂದ್ರ ಕರ್. ಕಾಡಿನಲ್ಲಿಯೇ ಹಲವು ಶಿಬಿರಗಳನ್ನು ರೂಪಿಸಿ, ಹಗಲಿರುಳು ಶ್ರಮಿಸುವ ಮೂಲಕ ಜಾರವಾಗಳನ್ನು ಅವರು ರಕ್ಷಿಸಿದರು. ಈ ಸೇವೆಗಾಗಿ ಡಾ.ಕರ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಮಗುವನ್ನು ಬೆನ್ನ ಮೇಲೆ ಹಾಕಿಕೊಂಡು ಕೆಲಸದಲ್ಲಿ ನಿರತವಾಗಿರುವ ಜಾರವಾ ಮಹಿಳೆ
ಜಾರವಾ ಎಂಬ ಪದವು ಅಂಡಮಾನೀ ಅಕಾ–ಬೋ ಭಾಷೆಯಿಂದ ಬಂದಿದೆ ಎಂದು ನಂಬಲಾಗಿದೆ. ಶೋಂಪೆನ್ ಮತ್ತು ನಿಕೋಬಾರೀ ಸಮುದಾಯಗಳು ದ್ವೀಪ ಸಮೂಹದ ಮೂಲ ಸಮುದಾಯಗಳು ಎಂದು ನಂಬಲಾಗಿದ್ದು, ಜಾರವಾ ಹಾಗೂ ಉಳಿದ ಬುಡಕಟ್ಟು ಸಮುದಾಯಗಳು ಆಫ್ರಿಕಾದಿಂದ ವಲಸೆ ಬಂದವು ಎಂದು ಹೇಳಲಾಗಿದೆ. ಸಮುದಾಯವು ತನ್ನದೇ ಭಾಷೆಯನ್ನೂ ಹೊಂದಿದೆ.
ಮಧ್ಯ ಅಂಡಮಾನ್ ಮತ್ತು ದಕ್ಷಿಣ ಅಂಡಮಾನಿನ ಪಶ್ಚಿಮ ದಂಡೆಯ ಅರಣ್ಯದಲ್ಲಿ ವಾಸಿಸುವ ಈ ಸಮುದಾಯ ಮೂರು ಗುಂಪುಗಳನ್ನು ಹೊಂದಿದೆ. ಉತ್ತರ ಭಾಗದ ಗುಂಪು, ದಕ್ಷಿಣದ ಗುಂಪು ಮತ್ತು ಮಧ್ಯದ ಗುಂಪು.
ಜನಾಂಗವು ಕುಟುಂಬ, ಸ್ಥಳೀಯ ಗುಂಪು ಮತ್ತು ಪ್ರಾಂತೀಯ ಗುಂಪು ಎಂಬ ಮೂರು ಸ್ತರದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ. ಅತ್ಯಂತ ಸಣ್ಣ ಸಾಮಾಜಿಕ ಘಟಕ ಎಂದರೆ ಗಂಡ, ಹೆಂಡತಿ ಮಕ್ಕಳನ್ನು ಒಳಗೊಂಡ ಕುಟುಂಬ. ಮಕ್ಕಳ ವಯಸ್ಸು ಆರು ಅಥವಾ ಏಳು ವರ್ಷ ದಾಟಿದ ಮೇಲೆ ಅವರು ಪೋಷಕರೊಂದಿಗೆ ಇರುವುದಿಲ್ಲ. ಬಾಲಕರಾಗಿದ್ದರೆ ಅವಿವಾಹಿತರೊಂದಿಗೆ, ಬಾಲಕಿಯರಾಗಿದ್ದರೆ ಅವಿವಾಹಿತ ಯುವತಿಯರೊಂದಿಗೆ ಇರುತ್ತಾರೆ.
ಹಲವು ಕುಟುಂಬಗಳು ಸೇರಿ ಸ್ಥಳೀಯ ಗುಂಪು ಆಗುತ್ತದೆ. ಸಮುದಾಯದ ಕೆಲವರು ಒಟ್ಟಾಗಿ ಸೇರಿ ಒಂದು ಗುಂಪು ರಚಿಸಿಕೊಳ್ಳುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿರುತ್ತಾರೆ. ಸ್ಥಳೀಯ ಗುಂಪಿನಲ್ಲಿರುವ ಬಹುತೇಕರು ಪರಸ್ಪರ ಸಂಬಂಧಿಗಳು.
ಜಾರವಾ ಸಮುದಾಯದ ಅತಿ ದೊಡ್ಡ ಸಾಮಾಜಿಕ ಸ್ತರ ಎಂದರೆ ಪ್ರಾಂತೀಯ ಗುಂಪು. ಈ ಗುಂಪಿನಲ್ಲಿ ಹಲವು ಸ್ಥಳೀಯ ಗುಂಪುಗಳಿರುತ್ತವೆ.
ಜಾರವಾ ಕುಟುಂಬ
ಸಮುದಾಯದ ಗಂಡು ಮಕ್ಕಳು 13ರಿಂದ 14ನೇ ವಯಸ್ಸಿಗೆ ಬರುವಾಗ ಅವರನ್ನು ತರುಣರೆಂದು ಪರಿಗಣಿಸಲಾಗುತ್ತದೆ. ‘ಲೆಪಾ’ ಎಂಬ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ. ಈ ವಯಸ್ಸಿಗೆ ಬಂದ ಹುಡುಗ ಯಾರ ನೆರವೂ ಇಲ್ಲದೆ ಕಾಡು ಹಂದಿಯನ್ನು ಬೇಟೆಯಾಡಿ, ಮಾಂಸವನ್ನು ತನ್ನ ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬೇಕು ಎಂಬ ಕಟ್ಟುಪಾಡು ಇದೆ. ಹೆಣ್ಣುಮಕ್ಕಳು ಮೈನೆರೆದಾಗಲೂ ‘ಒಪೆಮಾಮೆ’ ಎಂಬ ಸಮಾರಂಭ ಆಯೋಜಿಸುವ ಪದ್ಧತಿ ಅವರಲ್ಲಿದೆ. ಮಕ್ಕಳು ವಯಸ್ಸಿಗೆ ಬಂದ ನಂತರ ಅವರ ಹೆಸರನ್ನು ಬದಲಾಯಿಸುವ ಸಂಪ್ರದಾಯವೂ ಚಾಲ್ತಿಯಲ್ಲಿದೆ.
ಅಂಡಮಾನ್–ನಿಕೋಬಾರ್ ದ್ವೀಪ ಸಮೂಹಗಳಲ್ಲಿ ನೆಲಸಿರುವ ಆರು ಬುಡಕಟ್ಟು ಸಮುದಾಯಗಳ (ಓಂಗೊ, ಶೋಂಪೆನ್, ಗ್ರೇಟ್ ಅಂಡಮಾನೀ, ಸೆಂಟಿನಲೀ, ನಿಕೋಬಾರೀ ಮತ್ತು ಜಾರವಾ) ಪೈಕಿ, ಸೆಂಟಿನಲೀ ಮತ್ತು ಜಾರವಾ ಬಿಟ್ಟು ಉಳಿದ ನಾಲ್ಕು ಸಮುದಾಯಗಳ ಜನರನ್ನು ಇದಕ್ಕೂ ಮೊದಲೇ ಮತದಾರರ ಪಟ್ಟಿಗೆ ಸೇರಿಸುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಓಂಗೊ ಸಮುದಾಯದವರು ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಿದ್ದರೆ, ಶೋಂಪೆನ್ ಸಮುದಾಯದ ಏಳು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಹೊರಜಗತ್ತಿನಿಂದ ಬಹುತೇಕ ದೂರ ಇದ್ದು, ಆಕ್ರಮಣಕಾರಿ ಸ್ವಭಾವಕ್ಕೆ ಹೆಸರಾಗಿರುವ ಜಾರವಾ ಸಮುದಾಯದವರನ್ನೂ ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ಹಲವು ವರ್ಷಗಳಿಂದ ನಡೆಸುತ್ತಾ ಇತ್ತು. ಈ ವರ್ಷ ಅದು ತನ್ನ ಪ್ರಯತ್ನದಲ್ಲಿ ಯಶಕಂಡಿದೆ. 2024ರ ನವೆಂಬರ್‌ನಲ್ಲಿ ನಡೆದಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಭಾಗವಾಗಿ, ಜನಾಂಗದವರನ್ನು ಸಂಪರ್ಕಿಸಿ ವಯಸ್ಕರ ಹೆಸರುಗಳನ್ನು ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆಯೋಗವು ಈಗ 19 ಮಂದಿಗೆ ಮತದಾರರ ಗುರುತಿನ ಚೀಟಿ ವಿತರಿಸಿದೆ. ತಮ್ಮ ಹಕ್ಕನ್ನು ಚಲಾಯಿಸಲು ಅವರು 2029ರ ಚುನಾವಣೆಯವರೆಗೂ ಕಾಯಬೇಕು.
ಸೆಂಟಿನಲೀ ಬುಡಕಟ್ಟು ಸಮುದಾಯ ಈಗಲೂ ಹೊರ ಪ್ರಪಂಚದಿಂದ ದೂರ ಇದ್ದು, ಅವರೊಂದಿಗೆ ಚುನಾವಣಾ ಆಯೋಗಕ್ಕೆ ಸಂಪರ್ಕ ಸಾಧಿಸಲು ಆಗಿಲ್ಲ. ಈ ಸಮುದಾಯದವರು ಕೂಡ ಆಕ್ರಮಣಕಾರಿಗಳಾಗಿದ್ದು, ತಮ್ಮನ್ನು ಸಂಪರ್ಕಿಸಲು ಬಂದವರ ಮೇಲೆ ದಾಳಿ ಮಾಡಿರುವ ನಿದರ್ಶನಗಳಿವೆ. ಉತ್ತರ ಸೆಂಟಿನಲ್ ದ್ವೀಪಕ್ಕೆ 2018ರಲ್ಲಿ ಭೇಟಿ ನೀಡಲು ಯತ್ನಿಸಿದ ಅಮೆರಿಕದ ಕ್ರಿಶ್ಚಿಯನ್ ಮಿಷನರಿ ಸದಸ್ಯ ಜಾನ್ ಅಲೆನ್ ಚಾವು ಎಂಬಾತನನ್ನು ಈ ಬುಡಕಟ್ಟು ಜನರು ಕೊಂದಿದ್ದರು.
ಆಧಾರ: ಎಸ್‌ಐ ಅಂಡಮಾನ್ ಮತ್ತು ನಿಕೋಬಾರ್ ಬುಡಕಟ್ಟು ಸರಣಿಯ ‘ದಿ ಜಾರವಾ’ ಪುಸ್ತಕ (ಲೇಖಕ: ಜಯಂತ ಸರ್ಕಾರ್), ಆ್ಯಡಮ್ ಗುಡ್‌ಹಾರ್ಟ್ ಅವರ ‘ದಿ ಲಾಸ್ಟ್ ಐಲ್ಯಾಂಡ್’ ಪುಸ್ತಕ, ಬಿಬಿಸಿ, ಅಂಡಮಾನ್.ಎನ್‌ಐಸಿ.ಇನ್, ಪಿಟಿಐ, ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.