
ಪ್ರಾತಿನಿಧಿಕ ಚಿತ್ರ
ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುತ್ತಲೇ ಇರುವ ಹೆಣ್ಣುಮಕ್ಕಳ ಹತ್ಯೆಗಳು ನಮ್ಮ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತಿವೆ. ಮನುಷ್ಯರನ್ನು ಮನುಷ್ಯರಂತೆ ಕಾಣದಿರುವುದು, ಗಂಡು ಹೆಣ್ಣಿನ ಪ್ರೇಮ ಮತ್ತು ವಿವಾಹವನ್ನು ಸಹಜ ಎಂದು ಒಪ್ಪದಿರುವುದು, ಸಮಾಜವು ರೋಗಗ್ರಸ್ತವಾಗಿರುವುದರ ಲಕ್ಷಣಗಳಾಗಿವೆ. ಈ ಪರಿಸ್ಥಿತಿ ಬದಲಾಗಬೇಕು, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ಮದುವೆಯಾದವರ ಹಕ್ಕುಗಳು–ಪ್ರಾಣ ರಕ್ಷಣೆಯಾಗಬೇಕು. ಈ ದಿಸೆಯಲ್ಲಿ ಕಾನೂನಿನಲ್ಲಿ ಆಗಬೇಕಿರುವ ಪರಿವರ್ತನೆ ಏನು ಎನ್ನುವುದರ ಬಗ್ಗೆ ಬರಹ ಇಲ್ಲಿದೆ ...
ಇಪ್ಪತ್ತಕ್ಕೆ ಕಾಲಿಟ್ಟ ಬಸುರಿ ಮಗಳನ್ನು ಜಾತಿಯ ಹೆಸರಿನಲ್ಲಿ ಕೊಂದ ತಂದೆ ಮತ್ತು ಸಂಬಂಧಿಕರ ಪ್ರಕರಣ ನಡೆದಿದ್ದು ಅಲ್ಲೆಲ್ಲೋ ದೂರದ ಕುಗ್ರಾಮದಲ್ಲಲ್ಲ, ಹುಬ್ಬಳ್ಳಿ- ಧಾರಾವಾಡದಂತಹ ಮಹಾನಗರದ ಮಡಿಲಲ್ಲಿ. ಕೃತಕ ಬುದ್ಧಿಮತ್ತೆಯಂತಹ ತಾಂತ್ರಿಕ ಉನ್ನತಿಯ ಕಾಲಘಟ್ಟದಲ್ಲಿ ಇದು ನಡೆದಿದೆ. 2025ರಲ್ಲಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ನೀಡಿದ ವರದಿಯ ಪ್ರಕಾರ 2020ರಲ್ಲಿ 25, 2021ರಲ್ಲಿ 33 ಮತ್ತು 2022ರಲ್ಲಿ 18 ಮರ್ಯಾದೆಗೇಡು ಹತ್ಯೆಗಳು ಭಾರತದಲ್ಲಿ ನಡೆದಿವೆ. ಆದರೆ, ಕಾನೂನಿನ ಪ್ರಕಾರ, ಈ ವಿಭಾಗದಲ್ಲಿ ಹತ್ಯೆಗಳನ್ನು ದಾಖಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ, ಈ ಸಂಖ್ಯೆ ನಿಜಸ್ಥಿತಿಗೆ ಗಾವುದಗಳಷ್ಟು ದೂರ ಇದೆ ಎಂದೇ ಹೇಳಬಹುದು. 2012ರ ವಿಶ್ವಸಂಸ್ಥೆಯ ವರದಿ ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷವೂ ಸುಮಾರು 5,000 ಮಹಿಳೆಯರು ಸಮುದಾಯಗಳ ಮರ್ಯಾದೆ- ಗೌರವಗಳ ಹೆಸರಿನಲ್ಲಿ ಬಲಿಯಾಗುತ್ತಿದ್ದಾರೆ; ಈ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಮಹಿಳೆಯರು ಭಾರತ ಮತ್ತು ಪಾಕಿಸ್ತಾನಕ್ಕೆ ಸೇರಿದವರಾಗಿದ್ದಾರೆ. ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಮೇಲೆ ಅವರ ಕುಟುಂಬ ಸದಸ್ಯರು, ಹೆತ್ತ ತಂದೆ-ತಾಯಿಯೇ ಹೀನಕೃತ್ಯವನ್ನು ಎಸಗುತ್ತಿದ್ದರೂ ಸರಿಯಾದ ಅಂಕಿ-ಸಂಖ್ಯೆ ನಮ್ಮ ಮುಂದಿಲ್ಲ. ಈ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡುವವರೂ ಕಡಿಮೆ ಮತ್ತು ಅದಕ್ಕೆ ಪೂರಕವಾದ ನೀತಿನಿಯಮವೂ ಇಲ್ಲ. ಈ ದಿಸೆಯಲ್ಲಿ ಮರ್ಯಾದೆಗೇಡು ಹತ್ಯೆಯನ್ನು ಕಾನೂನಿನ ದೃಷ್ಟಿಯಿಂದ ನೋಡಬೇಕಾಗಿದೆ.
ನಿಖರವಾಗಿ ಹೇಳಬೇಕೆಂದರೆ, ಮರ್ಯಾದೆಗೇಡು ಹತ್ಯೆಯೂ ಕಾನೂನಿನ ದೃಷ್ಟಿಯಲ್ಲಿ ಒಂದು ಹತ್ಯೆ ಮಾತ್ರ. ಎಲ್ಲಾ ಕೊಲೆಗಳಿಗಿರುವಂತೆ ಈ ಕೊಲೆಗೂ ಶಿಕ್ಷೆ ಇದೆ. ಹಾಗಾಗಿ ಕಾನೂನನ್ನು ಸರಿಯಾಗಿ ಜಾರಿಗೆ ತಂದರೆ ಸಾಕು ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ, ಇಂತಹ ಹತ್ಯೆಗಳು ವೈಯಕ್ತಿಕ ಹಗೆಯಿಂದ ಆಗುವುದಿಲ್ಲ. ಇವು ಪುರುಷ ಪ್ರಧಾನ, ಜಾತಿ ವ್ಯವಸ್ಥೆಯ ವರುಷಗಳ ಪಾಲನೆಯ ವಿಪರೀತದ ಫಲ. ವ್ಯವಸ್ಥಿತವಾಗಿ ಶತಮಾನಗಳಿಂದ ನಮ್ಮನ್ನು ಆಳುತ್ತಾ ಬಂದ ಎರಡು ಹೀನವಾದ ಸಾಮಾಜಿಕ ಪಿಡುಗುಗಳಾದ ಜಾತಿಭೇದ ಮತ್ತು ಲಿಂಗಭೇದದ ಮದುವೆಗೆ ಹುಟ್ಟಿದ ಕೂಸು ಮರ್ಯಾದೆಗೇಡು ಹತ್ಯೆ. ಹಾಗಾಗಿ ಕೇವಲ ಕೊಲೆ ಎಂಬ ನೆಲೆಯಲ್ಲಿ ಈ ಅಪರಾಧವನ್ನು ನೋಡಿದರೆ, ಸಮಸ್ಯೆಯನ್ನು ಸಮಾಜದಿಂದ ತೊಡೆಯಲು ಸಾಧ್ಯವಾಗುವುದಿಲ್ಲ.
ಮರ್ಯಾದೆಗೇಡು ಹತ್ಯೆ ವರದಕ್ಷಿಣೆ ಪಿಡುಗು, ಅಸ್ಪೃಶ್ಯತೆಯ ರೀತಿ ಆಳವಾಗಿ ಸಮಾಜದಲ್ಲಿ ಬೇರೂರಿರುವ ಕೊಳಕಿನ ರಾಕ್ಷಸರೂಪ. ಆದರೆ ಇದು ಶುರುವಾಗುವುದು ಕೊಲೆಯಿಂದಲ್ಲ ಅಥವಾ ದೈಹಿಕ ಹಿಂಸೆಗಳಿಂದಲ್ಲ; ಒಂದು ಜಾತಿಯ ಜನರು ತಾವೇ ಶ್ರೇಷ್ಠರು ಎಂದು ಯೋಚಿಸುವ ಮತ್ತು ಒಬ್ಬ ಗಂಡಸು ಹೆಣ್ಣಿಗಿಂತ ಒಂದು ಕೈ ಮೇಲೆ ಎಂದು ಯೋಚಿಸುವ ಹಂತದಿಂದ. ಇವು ಸಮಾಜದ ತಳಹದಿಯನ್ನೇ ಕದಡುವ ಕಳೆ ಬೀಜಗಳು. ನಮ್ಮ ನಡುವೆಯೇ ಪರೋಕ್ಷವಾಗಿ ಎಷ್ಟೋ ಸಂಘ ಸಂಸ್ಥೆಗಳು ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಈ ಪಿಡುಗಿನ ನಾಟಿ ಮಾಡಲು ಮಣ್ಣು ಹದ ಮಾಡುತ್ತಿವೆ. ಮದುವೆಯಾಗಿ ಎಂಟು ವರ್ಷಗಳಾದರೂ ಮನೆಗೆ ಪ್ರವೇಶವಿಲ್ಲ, ಹಬ್ಬ-ಹರಿದಿನಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ, ಮಾತು- ಕಥೆಯಿಲ್ಲದ ಅನಧಿಕೃತ ಸಾಮಾಜಿಕ ಬಹಿಷ್ಕಾರವನ್ನು ನನ್ನಂತೆಯೇ ಅದೆಷ್ಟೂ ಹೆಣ್ಣುಮಕ್ಕಳು ಸಹಜವೆಂಬಂತೆ ಅನುಭವಿಸುತ್ತಿದ್ದಾರೆ. ನನ್ನ ವಿಚಾರದಲ್ಲಿ ಹೀಗೆಯೇ ಮಾಡಬೇಕು ಎಂಬ ತೀರ್ಪಿತ್ತಿದ್ದು, ಹೆಸರಾಂತ ಮಠದ ಗುರುಗಳು ಮತ್ತು ಈ ಮಠದ ‘ಜಾಗೃತಿ ಕಾರ್ಯಪಡೆ’. ಈ ಕಾರ್ಯಪಡೆಯು ಪಾಲಕರ ಅನುಮತಿ ಇರುವ ಮದುವೆಗಳನ್ನೂ ತಡೆಯುವ, ಜಾತಿಯ ಹೊರಗಿನ ಜನರಿಗೆ ಜಮೀನು ವಿಲೇವಾರಿಗಳನ್ನು ತಡೆಯುವ ಮತ್ತು ಅನೇಕ ಜನರ ವೈಯಕ್ತಿಕ ವಿಚಾರಗಳಲ್ಲಿ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ತಲೆತೂರಿಸುವ ಒಂದು ಸಂಸ್ಥೆ. ಈ ಕಾರ್ಯಪಡೆಯ ಇರುವಿಕೆ ಸಾರ್ವಜನಿಕರ, ಜನಪ್ರತಿನಿಧಿಗಳ ಅರಿವಿನಲ್ಲಿ ಇರುವ ವಿಚಾರವೇ. ಇಂತಹ ಸಂಸ್ಥೆಗಳು ರಾಜ್ಯದ, ದೇಶದ ಹಲವು ಧಾರ್ಮಿಕ-ಸಾಂಸ್ಕೃತಿಕ ಸಂಘಟನೆಗಳ ನೆರಳಿನಲ್ಲಿ ಕೆಲಸ ಮಾಡುತ್ತಿವೆ. ಮರ್ಯಾದೆಗೇಡು ಹತ್ಯೆ ಶುರುವಾಗುವುದು ಈ ಹಂತದಿಂದ.
ಭಾರತದ ಸಂವಿಧಾನದ ಪ್ರಕಾರ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕು. ಅಂತಹ ಹಕ್ಕಿನ ಬುಡಕ್ಕೇ ಕೊಡಲಿ ಏಟು ಹಾಕುವ ಈ ಕೊಲೆಗಳನ್ನು ನ್ಯಾಯಾಲಯಗಳು ಒಂದು ಗಂಭೀರ ಸಾಮಾಜಿಕ ಪಿಡುಗಾಗಿ ಪರಿಗಣಿಸಿವೆ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಒಬ್ಬ ಮಹಿಳೆಯ ಅಭಿವ್ಯಕ್ತಿಯ ಹಕ್ಕಿನಲ್ಲಿ ಒಳಗೊಂಡಿದೆ (ಆಶಾ ರಂಜನ್ ಪ್ರಕರಣ (2022). ಒಂದು ಸಮುದಾಯದ ಗೌರವ ಎಂಬ ಹೆಸರಲ್ಲಿ ಆ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದೇ ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಯೇ, ಮರ್ಯಾದೆಗೇಡು ಹತ್ಯೆ ಅಪರೂಪದಲ್ಲಿ ಅಪರೂಪದ ಅಪರಾಧಗಳ ಅಡಿಯಲ್ಲಿ ಬರುತ್ತದೆ ಎಂದು ಭಗವಾನ್ ದಾಸ್ (2011) ಪ್ರಕರಣದಲ್ಲಿ ಹೇಳಿದೆ. 2018ರ ಸುಪ್ರೀಂ ಕೋರ್ಟ್‌ನ ಶಕ್ತಿವಾಹಿನಿ ತೀರ್ಪು ಕೂಡ ಮದುವೆಯ ಆಯ್ಕೆಯ ವಿಚಾರದಲ್ಲಿ ಕುಟುಂಬದ ಕಡೆಯಿಂದ ಮಹಿಳೆಗೆ ಕೊಡುವ ಕಿರುಕುಳ ಆಕೆಯ ಜೀವಿಸುವ ಹಕ್ಕು ಮತ್ತು ಅಭಿವ್ಯಕ್ತಿಯ ಹಕ್ಕಿನ ಉಲ್ಲಂಘನೆ ಆಗಿದೆ ಎಂದೇ ಹೇಳಿದೆ. ಅಂತಹ ಚಟುವಟಿಕೆಗಳು ಕಾನೂನುಬಾಹಿರ ಎಂದು ಘೋಷಿಸಿ, ಮಹಿಳೆಯರ ಹಕ್ಕನ್ನು ಕಾಪಾಡಲು ಕೆಲವು ನಿರ್ದೇಶನಗಳನ್ನೂ ಆ ಪ್ರಕರಣದಲ್ಲಿ ನೀಡಲಾಗಿತ್ತು.
ಆದರೂ ಇಂತಹ ಘಟನೆಗಳು ನಡೆಯುತ್ತಲೇ ಇರುವುದು, ಸಾಮಾಜಿಕವಾಗಿ ಪ್ರಬಲರೇ ತಪ್ಪಿತಸ್ಥರ ಸ್ಥಾನದಲ್ಲಿ ಇರುವ ಇಂತಹ ಹೆಚ್ಚಿನ ಪ್ರಕರಣಗಳು ವರದಿಯೂ ಆಗದಿರುವುದು ಒಂದು ಪ್ರತ್ಯೇಕ ಕಾನೂನಿನ ಅಭಾವದಿಂದಾಗಿ. ಹತ್ಯೆ ಮತ್ತು ಇತರ ದೈಹಿಕ ಹಿಂಸೆ ಅಥವಾ ಬೆದರಿಕೆಗಳಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ನಡೆಯುವ ವಯಸ್ಕ ಹೆಣ್ಣು-ಗಂಡಿನ ನಡುವಿನ ಮದುವೆಗಳಿಗೆ ಅಡ್ಡಿ ಮಾಡುವ, ಬೆದರಿಸುವ, ಕಿರುಕುಳ ಕೊಡುವ, ಬಹಿಷ್ಕಾರ ಹಾಕುವ ಎಲ್ಲ ರೀತಿಯ ಚಟುವಟಿಕೆಗಳನ್ನು ಅಪರಾಧವಾಗಿ ಘೋಷಿಸಿ, ಶಿಕ್ಷೆ ವಿಧಿಸುವಂತಹ ಕಾನೂನು ಈ ಸಮಸ್ಯೆಗೆ ಪರಿಹಾರವಾಗಬಹುದು. ಬೆಂಕಿ ಹಚ್ಚಿ ಸೊಸೆಯರ ಜೀವ ತೆಗೆಯುವ ಸಾವುಗಳ ಮೂಲ ಹೇಗೆ ವರದಕ್ಷಿಣೆ ಎಂಬ ಸಾಧಾರಣ ರೂಢಿಯೋ, ಹಾಗೆಯೇ ಮರ್ಯಾದೆಗೇಡು ಹತ್ಯೆಯ ಸಾಧಾರಣ ಆದರೆ ಅಪಾಯಕಾರಿ ಮೂಲ ಎಂದರೆ ಮದುವೆಗಳನ್ನು ಅಡ್ಡಿಪಡಿಸುವ, ಬಹಿಷ್ಕಾರ ಹಾಕುವ ಸಾಮುದಾಯಿಕ ನಡೆಗಳು.
ಈ ದಿಸೆಯಲ್ಲಿ 2019ರಲ್ಲಿ ರಾಜಸ್ಥಾನದಲ್ಲಿ ‘ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ವೈವಾಹಿಕ ಸ್ವಾತಂತ್ರ್ಯಕ್ಕೆ ಹಸ್ತಕ್ಷೇಪ ನಿಷೇಧ ಮಸೂದೆ’ ಎಂಬುದನ್ನು ಮೇಲ್ಮನೆ, ಕೆಳಮನೆಗಳೆರಡೂ ಅಂಗೀಕರಿಸಿದ್ದರೂ ರಾಷ್ಟ್ರಪತಿಗಳ ಸಹಿ ಸಿಗದೆ ಅದು ಕಾನೂನಾಗದೆಯೇ ಉಳಿದಿದೆ. ಈ ಮಸೂದೆಯಲ್ಲಿ ಒಂದು ಮದುವೆಯನ್ನು ತಡೆಯುವುದಕ್ಕೆ, ಅಡ್ಡಿಪಡಿಸುವುದಕ್ಕೆ ಸೇರುವ ಸಮುದಾಯದ ಸಭೆಯೂ ಆರು ತಿಂಗಳ ಜೈಲಿನ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದೆ. ಅಷ್ಟೇ ಅಲ್ಲದೆ, ಮದುವೆಗೆ ಅಡ್ಡಿಪಡಿಸುವ, ಇಷ್ಟವಿಲ್ಲದ ಮದುವೆಗೆ ಒತ್ತಡ ಹಾಕುವ ಚಟುವಟಿಕೆಗಳೂ ಶಿಕ್ಷಾರ್ಹವಾದ ಅಪರಾಧವಾಗಿವೆ. ಇಂತಹ ಸಭೆಗಳಲ್ಲಿ ಭಾಗವಹಿಸಿದವರೆಲ್ಲರೂ ತಾವು ಅಪರಾಧ ಮಾಡಿಲ್ಲ ಎಂದು ಸಾಬೀತುಪಡಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಇಂತಹ ಸಭೆಗಳು ನಡೆಯಲಿವೆ ಎಂಬ ಮಾಹಿತಿ ಸಿಕ್ಕಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಈ ಕರಡಿನಲ್ಲಿ ಹೇಳಿದ ಚಟುವಟಿಕೆಗಳನ್ನು ಜಾಮೀನುರಹಿತ ಅಪರಾಧಗಳನ್ನಾಗಿ ಘೋಷಣೆಯೂ ಮಾಡಲಾಗಿದೆ. ನಮ್ಮಲ್ಲಿಯೂ ಇಂತಹ ಕಾನೂನಿನ ಅಗತ್ಯವಿದೆ.
ತಂತ್ರಜ್ಞಾನ ಬೆಳೆದಂತೆ, ಶಿಕ್ಷಣ ಮತ್ತು ಜ್ಞಾನ ಎಲ್ಲರ ಕೈಗೆಟುಕುತ್ತಾ ಹೋದಂತೆ, ವ್ಯಕ್ತಿಗಳ ಆಯ್ಕೆಯ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ. ಮದುವೆ, ಮನೆ, ಮಕ್ಕಳು ಇತ್ಯಾದಿ ವಿಚಾರಗಳಲ್ಲಿ ಹೆಣ್ಣುಮಕ್ಕಳು ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ, ಈ ಬೆಳವಣಿಗೆಗಳಿಂದ ಧಕ್ಕೆಯಾಗುವ ಜಾತಿಯ, ಪುರುಷ ಪ್ರಧಾನ ವ್ಯವಸ್ಥೆಯ ಕಾವಲುದಾರರು, ಹಿಂಸೆಗೆ ಕೈ ಹಚ್ಚುವುದನ್ನು ನಾವು ನಿರೀಕ್ಷಿಸಲೇಬೇಕು. ಅಂತಹ ಸನ್ನಿವೇಶಗಳಿಂದ ಸಮಾಜವನ್ನು ಕಾಪಾಡಲು, ಮಾರುತ್ತರ ನೀಡುವ ವ್ಯವಸ್ಥೆ ನಮಗೆ ಬೇಕಾಗಿದೆ. ಹುಬ್ಬಳ್ಳಿಯಲ್ಲಿ ನಡೆದಂಥ ಪ್ರಕರಣ ಮರುಕಳಿಸದಿರಲು, ಮನೆ- ಮನೆಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುವ ಕಿರುಕುಳಗಳು ಕೊನೆಯಾಗಬೇಕು. ಹಾಗಾಗಲು ವೈಯಕ್ತಿಕ ನೆಲೆಯಲ್ಲಿ ನಡೆಯುವ ಮಹಿಳೆಯರ ಆಯ್ಕೆಯ ಮೇಲೆ ಆಗುವ ದಬ್ಬಾಳಿಕೆಗಳನ್ನೂ ಶಿಕ್ಷಿಸುವಂತಹ ಶಕ್ತಿಯುತವಾದ ಕಾನೂನೊಂದರ ಅಗತ್ಯ ಹಿಂದೆಂದಿಗಿಂತಲೂ ಈಗ ಇದೆ.
ಲೇಖಕಿ: ಸುಪ್ರೀಂ ಕೋರ್ಟ್ ವಕೀಲೆ
ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಅನಾಚಾರ...
ಮರ್ಯಾದೆಗೇಡು ಹತ್ಯೆ ವರದಕ್ಷಿಣೆ ಪಿಡುಗು ಅಸ್ಪೃಶ್ಯತೆಯ ರೀತಿ ಆಳವಾಗಿ ಸಮಾಜದಲ್ಲಿ ಬೇರೂರಿರುವ ಕೊಳಕಿನ ರಾಕ್ಷಸರೂಪ. ಆದರೆ ಇದು ಶುರುವಾಗುವುದು ಕೊಲೆಯಿಂದಲ್ಲ ಅಥವಾ ದೈಹಿಕ ಹಿಂಸೆಗಳಿಂದಲ್ಲ; ಒಂದು ಜಾತಿಯ ಜನರು ತಾವೇ ಶ್ರೇಷ್ಠರು ಎಂದು ಯೋಚಿಸುವ ಮತ್ತು ಒಬ್ಬ ಗಂಡಸು ಹೆಣ್ಣಿಗಿಂತ ಒಂದು ಕೈ ಮೇಲೆ ಎಂದು ಯೋಚಿಸುವ ಹಂತದಿಂದ. ಇವು ಸಮಾಜದ ತಳಹದಿಯನ್ನೇ ಕದಡುವ ಕಳೆ ಬೀಜಗಳು. ನಮ್ಮ ನಡುವೆಯೇ ಪರೋಕ್ಷವಾಗಿ ಎಷ್ಟೋ ಸಂಘ ಸಂಸ್ಥೆಗಳು ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಈ ಪಿಡುಗಿನ ನಾಟಿ ಮಾಡಲು ಮಣ್ಣು ಹದ ಮಾಡುತ್ತಿವೆ. ಮದುವೆಯಾಗಿ ಎಂಟು ವರ್ಷಗಳಾದರೂ ಮನೆಗೆ ಪ್ರವೇಶವಿಲ್ಲ ಹಬ್ಬ-ಹರಿದಿನಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಮಾತು- ಕಥೆಯಿಲ್ಲದ ಅನಧಿಕೃತ ಸಾಮಾಜಿಕ ಬಹಿಷ್ಕಾರವನ್ನು ನನ್ನಂತೆಯೇ ಅದೆಷ್ಟೂ ಹೆಣ್ಣುಮಕ್ಕಳು ಸಹಜವೆಂಬಂತೆ ಅನುಭವಿಸುತ್ತಿದ್ದಾರೆ. ನನ್ನ ವಿಚಾರದಲ್ಲಿ ಹೀಗೆಯೇ ಮಾಡಬೇಕು ಎಂಬ ತೀರ್ಪಿತ್ತಿದ್ದು ಹೆಸರಾಂತ ಮಠದ ಗುರುಗಳು ಮತ್ತು ಈ ಮಠದ ‘ಜಾಗೃತಿ ಕಾರ್ಯಪಡೆ’. ಈ ಕಾರ್ಯಪಡೆಯು ಪಾಲಕರ ಅನುಮತಿ ಇರುವ ಮದುವೆಗಳನ್ನೂ ತಡೆಯುವ ಜಾತಿಯ ಹೊರಗಿನ ಜನರಿಗೆ ಜಮೀನು ವಿಲೇವಾರಿಗಳನ್ನು ತಡೆಯುವ ಮತ್ತು ಅನೇಕ ಜನರ ವೈಯಕ್ತಿಕ ವಿಚಾರಗಳಲ್ಲಿ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ತಲೆತೂರಿಸುವ ಒಂದು ಸಂಸ್ಥೆ. ಈ ಕಾರ್ಯಪಡೆಯ ಇರುವಿಕೆ ಸಾರ್ವಜನಿಕರ ಜನಪ್ರತಿನಿಧಿಗಳ ಅರಿವಿನಲ್ಲಿ ಇರುವ ವಿಚಾರವೇ. ಇಂತಹ ಸಂಸ್ಥೆಗಳು ರಾಜ್ಯದ ದೇಶದ ಹಲವು ಧಾರ್ಮಿಕ-ಸಾಂಸ್ಕೃತಿಕ ಸಂಘಟನೆಗಳ ನೆರಳಿನಲ್ಲಿ ಕೆಲಸ ಮಾಡುತ್ತಿವೆ. ಮರ್ಯಾದೆಗೇಡು ಹತ್ಯೆ ಶುರುವಾಗುವುದು ಈ ಹಂತದಿಂದ.
ಮೈತ್ರೇಯಿ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.