ಪ್ರಾತಿನಿಧಿಕ ಚಿತ್ರ
ಭಾರತದ ಯುವಜನರು ವಿವಿಧ ರೀತಿಯ ಉದ್ಯೋಗ ಯೋಗ್ಯವಾದ ಕೌಶಲ ಗಳಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇದು ದೇಶದ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎಂದು ಭಾರತ ಕೌಶಲ ವರದಿ–2025ರಲ್ಲಿ ಪ್ರತಿಪಾದಿಸಲಾಗಿದೆ. ದೇಶದ ಬಹುತೇಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಕೌಶಲ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಯು ರಾಜ್ಯವಾರು ಮತ್ತು ಕ್ಷೇತ್ರವಾರು ಉದ್ಯೋಗಯೋಗ್ಯತೆಯ ಚಿತ್ರಣ ನೀಡುತ್ತಿದೆ. ದೇಶದಲ್ಲಿ ಕರ್ನಾಟಕ ಮತ್ತು ಬೆಂಗಳೂರು ನಗರ ಹಲವು ವಲಯಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವುದು ವಿಶೇಷ
ಸಂಪನ್ಮೂಲ ತಂತ್ರಜ್ಞಾನ ಸಂಸ್ಥೆ ‘ವೀಬಾಕ್ಸ್’ ರಾಜ್ಯವಾರು ಯುವಜನರ ಉದ್ಯೋಗಯೋಗ್ಯತೆಯನ್ನು ವಿವರಿಸುವ ‘ಭಾರತ ಕೌಶಲ ವರದಿ–2025’ ಬಿಡುಗಡೆ ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವೀಧರರ ಉದ್ಯೋಗದ ಅರ್ಹತೆಯನ್ನು ಪರೀಕ್ಷಿಸಲು ‘ಜಾಗತಿಕ ಉದ್ಯೋಗಯೋಗ್ಯತೆಯ ಪರೀಕ್ಷೆ’ (ಜಿಇಟಿ) ನಡೆಸಲಾಗಿದೆ. ದೇಶದ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶ ಮತ್ತು 15 ವಲಯಗಳ 6.5 ಲಕ್ಷ ಯುವಜನರು ಜಿಇಟಿ ಎದುರಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ಅಸೋಸಿಯೇಷನ್ ಫಾರ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಈ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಶೇ 60ಕ್ಕೂ ಹೆಚ್ಚು ಅಂಕ ಗಳಿಸಿದವರನ್ನು ಪರಿಗಣಿಸಿ, ಉದ್ಯೋಗಯೋಗ್ಯತೆಯ ಪ್ರಮಾಣವನ್ನು ರಾಜ್ಯವಾರು, ವಿಷಯವಾರು ಅಳೆಯಲಾಗಿದೆ.
ಭಾರತದ ಶೇ 65ಕ್ಕೂ ಹೆಚ್ಚು ಉದ್ಯೋಗಿಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇದು ಜಾಗತಿಕ ಆರ್ಥಿಕತೆ ಮತ್ತು ಉದ್ಯೋಗ ವಲಯದಲ್ಲಿ ದೇಶದ ಸಾಧ್ಯತೆಗಳನ್ನು ಹೆಚ್ಚಿಸಿದೆ. ತಮ್ಮ ಕೌಶಲ ಮತ್ತು ಹೊಂದಿಕೆಯ ಗುಣದಿಂದ ಜಾಗತಿಕ ಬೆಳವಣಿಗೆಯಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಗಲ್ಫ್ ರಾಷ್ಟ್ರಗಳು, ಆಗ್ನೇಯ ಏಷ್ಯಾ, ಆಫ್ರಿಕಾ, ಯೂರೋಪ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಕೌಶಲ ಕೊರತೆ ಇದ್ದು, ಸಮರ್ಥ ಉದ್ಯೋಗಿಗಳ ಅಗತ್ಯವಿದೆ. ಭಾರತದಲ್ಲಿ ಕಾರ್ಮಿಕಬಲವು ಹೆಚ್ಚಿನ ಪ್ರಮಾಣದಲ್ಲಿರುವುದು ಅಷ್ಟೇ ಅಲ್ಲ, ಕೌಶಲಗಳ ಗಳಿಕೆಯಲ್ಲೂ ಉತ್ತಮ ಸಾಧನೆ ಮಾಡಿದೆ. ವರ್ಷದಿಂದ ವರ್ಷಕ್ಕೆ ದೇಶದ ಯುವಜನರ ಕೌಶಲಗಳ ಪ್ರಮಾಣವೂ ಹೆಚ್ಚುತ್ತಿದೆ.
ವರದಿಯ ಪ್ರಕಾರ, ಭಾರತದ ಪದವೀಧರರಲ್ಲಿ ಶೇ 54.81ರಷ್ಟು ಜನರು ಉದ್ಯೋಗಯೋಗ್ಯತೆ ಉಳ್ಳವರಾಗಿದ್ದಾರೆ. ದಶಕದ ಹಿಂದೆ ಈ ಪ್ರಮಾಣವು ಶೇ 33ರಷ್ಟಿತ್ತು. ಬೆಳೆಯುತ್ತಿರುವ ಜಾಗತಿಕ ಆರ್ಥಿಕತೆಯ ವೇಗಕ್ಕೆ ತಕ್ಕಂತೆ ಉದ್ಯೋಗಯೋಗ್ಯತೆಯೂ ಹೆಚ್ಚಾಗಿದೆ. ಅಂದರೆ, ಒಂದು ದಶಕದಲ್ಲಿ ಶೇ 17ರಷ್ಟು ಹೆಚ್ಚಳ. ಜಾಗತಿಕ ಕೌಶಲ ಕೊರತೆಯನ್ನು ಭಾರತದ ಯುವಜನರು ತುಂಬುತ್ತಿದ್ದಾರೆ ಎನ್ನುವುದಕ್ಕೆ ದೇಶಕ್ಕೆ ವಿದೇಶಗಳಿಂದ ಅತಿ ಹೆಚ್ಚು ಹಣ (ಸುಮಾರು ₹9.42 ಲಕ್ಷ ಕೋಟಿ) ಹರಿದುಬರುತ್ತಿರುವುದೇ ನಿದರ್ಶನ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದ್ದು, ಅದನ್ನು ‘ಜಾಗತಿಕ ಪ್ರತಿಭಾ ಚಲನೆ’ ಎಂದು ಕರೆಯಲಾಗಿದೆ.
ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ವಲಯವು ಉದ್ಯೋಗ ಯೋಗ್ಯ ಕ್ಷೇತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಭದ್ರತೆ, ಡೇಟಾಸೈನ್ಸ್ ಮುಂತಾದ ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ದೇಶದ ಹೆಚ್ಚು ಮಂದಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ವರದಿ ಅಂದಾಜಿಸಿದೆ.
ಉದ್ಯೋಗ ಪಡೆಯಲು ಬೇಕಾದ ಕೌಶಲ ಹೊಂದಿರುವ ಯುವಜನರು ಹೆಚ್ಚು ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದ ಉದ್ಯೋಗಯೋಗ್ಯತೆ ಪ್ರಮಾಣ ಶೇ 74ರಷ್ಟಿದೆ. ಮಹಾರಾಷ್ಟ್ರ (ಶೇ 84) ಮೊದಲ ಸ್ಥಾನದಲ್ಲಿದೆ. ದೆಹಲಿ (ಶೇ 78) 2ನೇ ಸ್ಥಾನದಲ್ಲಿದೆ. ಕೇರಳ (ಶೇ 71) ಮತ್ತು ಉತ್ತರ ಪ್ರದೇಶ (ಶೇ 70) ನಂತರದ ಸ್ಥಾನಗಳಲ್ಲಿವೆ.
ಪದವೀಧರರಲ್ಲಿರುವ ವಿವಿಧ ಕೌಶಲಗಳ ಬಗ್ಗೆಯೂ ವರದಿ ಬೆಳಕು ಚೆಲ್ಲಿದ್ದು, ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಹಲವು ವಿಭಾಗಗಳಲ್ಲಿ ಮುಂಚೂಣಿಯಲ್ಲಿದೆ.
ಎರಡನೇ ಭಾಷೆಯಾಗಿ ಇಂಗ್ಲಿಷ್ ಅನ್ನು ಬಳಸುವಲ್ಲಿ ನಿಪುಣರಾಗಿರುವ ಪದವೀಧರರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಶೇ 67.45ರಷ್ಟು ಯುವಜನರು ಇಂಗ್ಲಿಷ್ ಭಾಷೆ ಮೇಲೆ ಪ್ರೌಢಿಮೆ ಹೊಂದಿದ್ದಾರೆ. ಕರ್ನಾಟಕದಲ್ಲಿ ಶೇ 63.5ರಷ್ಟು ಮಂದಿ ಈ ಕೌಶಲ ಹೊಂದಿದ್ದಾರೆ. ಉತ್ತರ ಪ್ರದೇಶ (ಶೇ 60.48), ಕೇರಳ (ಶೇ 59.72) ಮತ್ತು ದೆಹಲಿ (ಶೇ 56.89) ನಂತರದ ಸ್ಥಾನಗಳಲ್ಲಿವೆ.
ಸಂಖ್ಯಾ ಕೌಶಲದಲ್ಲಿ ಉತ್ತರ ಪ್ರದೇಶ (ಶೇ 80.12), ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ, ಒಡಿಶಾ, ಹರಿಯಾಣ ರಾಜ್ಯಗಳ ನಂತರದ ಸ್ಥಾನದಲ್ಲಿ ಕರ್ನಾಟಕ (ಶೇ 64) ಇದೆ.
ವಿಮರ್ಶಾತ್ಮಕ ಚಿಂತನೆಯಲ್ಲಿ (ಕ್ರಿಟಿಕಲ್ ಥಿಂಕಿಂಗ್) ಉತ್ತರ ಪ್ರದೇಶ (ಶೇ 45) ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ (ಶೇ 43), ಮಧ್ಯಪ್ರದೇಶ (ಶೇ 42) ನಂತರದ ಸ್ಥಾನದಲ್ಲಿ ಕರ್ನಾಟಕ (ಶೇ 40) ಇದೆ. ವಿಮರ್ಶಾತ್ಮಕ ಚಿಂತನೆಯಲ್ಲಿ (ಕ್ರಿಟಿಕಲ್ ಥಿಂಕಿಂಗ್) ಉತ್ತರ ಪ್ರದೇಶ (ಶೇ 45) ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ (ಶೇ 43), ಮಧ್ಯಪ್ರದೇಶ (ಶೇ 42), ಕರ್ನಾಟಕದ (ಶೇ 40) ನಂತರದ ಸ್ಥಾನಗಳಲ್ಲಿವೆ.
ಕಂಪ್ಯೂಟರ್ ಕೌಶಲದಲ್ಲಿ ಉತ್ತರ ಪ್ರದೇಶ (ಶೇ 45.93) ಕೇರಳ (ಶೇ 37.34), ಮಹಾರಾಷ್ಟ್ರ (ಶೇ 30.55), ತೆಲಂಗಾಣ (ಶೇ 29.72), ತಮಿಳುನಾಡು (ಶೇ 29.47) ರಾಜ್ಯಗಳ ನಂತರ ಕರ್ನಾಟಕ (ಶೇ 28.48) ಬರುತ್ತದೆ.
ಬೆಂಗಳೂರು ನಗರವೂ ಹಲವು ವಿಚಾರಗಳಲ್ಲಿ ಮುಂಚೂಣಿಯಲ್ಲಿದೆ. ಉದ್ಯೋಗಯೋಗ್ಯತೆಯುಳ್ಳ ನಗರಗಳ ಪಟ್ಟಿಯಲ್ಲಿ ಪುಣೆ (ಶೇ 78.32) ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು (76.48) ಎರಡನೇ ಸ್ಥಾನದಲ್ಲಿದೆ. ಇಂಗ್ಲಿಷ್ ಭಾಷಾ ಜ್ಞಾನ, ಸಂಖ್ಯಾ ಕೌಶಲ, ವಿಮರ್ಶಾತ್ಮಕ ಚಿಂತನೆ ಮತ್ತು ಕಂಪ್ಯೂಟರ್ ಕೌಶಲದಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ.
ಗಮನಾರ್ಹ ವಿಚಾರ ಎಂದರೆ, ಬಿಇ/ಬಿಟೆಕ್, ಎಂಬಿಎ, ಎಂಸಿಎ, ಐಟಿಐ, ಬಿಸಿಎ ಪದವೀಧರರ ಸಂಖ್ಯೆಯಲ್ಲಿ ಅಗ್ರ 5 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿಲ್ಲ. ಎಂಎಸ್‌ಸಿ ಪದವೀಧರರ ಪಟ್ಟಿಯಲ್ಲಿ ಐದನೇ ಸ್ಥಾನ, ಬಿ.ಕಾಂ ಪದವೀಧರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು, ಬಿಎಸ್‌ಸಿ ಪದವೀಧರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು, ಬಿಬಿಎ ಪದವೀಧರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕರ್ನಾಟಕ ಪಡೆದಿದೆ.
ಭಾರತ ಕೌಶಲ ವರದಿ–2025ರಲ್ಲಿ ಹಲವು ವಿಚಾರಗಳಲ್ಲಿ ಕೇರಳ, ಆಂಧ್ರಪ್ರದೇಶ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ. ವಿದ್ಯಾರ್ಥಿಗಳು ಹೆಚ್ಚುವರಿ ಕೌಶಲ ಗಳಿಕೆ ಕಾರ್ಯಕ್ರಮ (ಎಎಸ್ಎಪಿ) ಮುಂಚೂಣಿಯಲ್ಲಿರುವುದು ಕೇರಳ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಆಂಧ್ರದಲ್ಲಿ, ದೇಶದಲ್ಲೇ ಮೊದಲ ಬಾರಿಗೆ ಕೌಶಲ ಗಣತಿ ನಡೆಸಲಾಗುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಯಲ್ಲಿ ಅದರದ್ದು ಮುಖ್ಯ ಪಾತ್ರವಾಗಿದೆ ಎಂದು ವರದಿ ಹೇಳಿದೆ.
ಮಾಹಿತಿ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ (ಎಂಎಲ್), ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಭದ್ರತೆ
ಆರೋಗ್ಯಸೇವೆ ಮತ್ತು ಫಾರ್ಮಾಸ್ಯೂಟಿಕಲ್: ಜೈವಿಕ ತಂತ್ರಜ್ಞಾನ
ನವೀಕರಿಸಬಹುದಾದ ಇಂಧನ: ಸೌರಶಕ್ತಿಗೆ ಸಂಬಂಧಿಸಿದ ಪರಿಣತಿ ಮತ್ತು ಪರಿಸರ ನಿರ್ವಹಣೆ
ಇ–ಕಾಮರ್ಸ್ ಮತ್ತು ಡಿಜಿಟಲ್ ಅರ್ಥವ್ಯವಸ್ಥೆ: ಡಿಜಿಟಲ್ ಮಾರುಕಟ್ಟೆ ವಿಸ್ತರಣೆ ಮತ್ತು ದತ್ತಾಂಶ ಆಧಾರಿತ ಕಾರ್ಯಾಚರಣೆ
ಉತ್ಪಾದನೆ ಮತ್ತು ಮೂಲಸೌಕರ್ಯ: ರೊಬೊಟಿಕ್ ಮತ್ತು ಸ್ವಯಂಚಾಲಿತ ತಂತ್ರಜ್ಞಾನ
ಹಣಕಾಸು ತಂತ್ರಜ್ಞಾನ ಮತ್ತು ಶಿಕ್ಷಣ ತಂತ್ರಜ್ಞಾನ: ಡಿಜಿಟಲ್ ಕರೆನ್ಸಿ ವ್ಯವಹಾರದ ದತ್ತಾಂಶ ವಿವರಗಳನ್ನೊ ಒಳಗೊಂಡ ಬ್ಲಾಕ್‌ಗಳು (ಬ್ಲಾಕ್‌ಚೈನ್), ಸೈಬರ್ ಭದ್ರತೆ ಮತ್ತು ಡಿಜಿಟಲ್ ಕಲಿಕೆಗೆ ಸಂಬಂಧಿಸಿದ ವಿನೂತನ ಕಲ್ಪನೆಗಳು.
ಆಧಾರ: ಭಾರತ ಕೌಶಲ ವರದಿ–2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.