ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳು ಇದ್ದು, ಅವುಗಳ ಒಟ್ಟು ಜನಸಂಖ್ಯೆ 1.07 ಕೋಟಿಗೂ ಹೆಚ್ಚಿದೆ. ಇವು ಭಿನ್ನರೂಪದ ಜಾತಿಗಳಾಗಿದ್ದು, ವಿವಿಧ ಪ್ರದೇಶಗಳಲ್ಲಿ ಹರಡಿ, ವಿವಿಧ ಹೆಸರು, ಕಸುಬು, ಪದ್ಧತಿಗಳೊಂದಿಗೆ ಜೀವಿಸುತ್ತಿವೆ. ಇವುಗಳ ನಡುವೆ ಒಳಮೀಸಲಾತಿ ಕಲ್ಪಿಸಲು ಅವುಗಳ ಜನಸಂಖ್ಯೆ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಸೇರಿದಂತೆ ಸಮಗ್ರ ದತ್ತಾಂಶ ಅಗತ್ಯವಾಗಿದೆ. ನ್ಯಾ.ನಾಗಮೋಹನದಾಸ್ ಆಯೋಗದ ವರದಿಯು ರಾಜ್ಯದ ಪರಿಶಿಷ್ಟ ಜಾತಿಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ. ಹಾಗೆಯೇ ನ್ಯಾ.ಸದಾಶಿವ ಆಯೋಗದಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗೊಂದಲವನ್ನು ಬಗೆಹರಿಸುವ ಸಂಬಂಧ ಅಂಕಿಅಂಶ ಕಲೆಹಾಕಿ, ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದ ಬೇಡ ಜಂಗಮ, ಬುಡ್ಗ ಜಂಗಮ ಸಮಸ್ಯೆಗೂ ವರದಿಯಲ್ಲಿ ಪರಿಹಾರ ಸೂಚಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆಯಾಗಿರುವ ವರದಿಯ ಮುಖ್ಯ ಅಂಶಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಈಗಾಗಲೇ ಹಲವು ವಿಶೇಷ ವರದಿಗಳು ಪ್ರಕಟವಾಗಿವೆ. ವರದಿಯ ಮತ್ತಷ್ಟು ಮುಖ್ಯ ಅಂಶಗಳ ಮಾಹಿತಿ ಇಲ್ಲಿದೆ
ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಪದಗಳು ಎಸ್‌ಸಿ ಮೀಸಲಾತಿ ವರ್ಗೀಕರಣದಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗಿವೆ. ಈ ವಿಚಾರದ ಬಗ್ಗೆ ನ್ಯಾ.ನಾಗಮೋಹನದಾಸ್ ಆಯೋಗದ ವರದಿ ಬೆಳಕು ಚೆಲ್ಲಿದೆ. ಕರ್ನಾಟಕದಲ್ಲಿ ಹೊಲೆಯ/ಮಾದಿಗ ಪದಗಳಿಗೆ ಬದಲಾಗಿ ಆದಿ ಕರ್ನಾಟಕ ಎಂದು ನಮೂದಿಸುವ ಪದ್ಧತಿ ಜಾರಿಗೆ ಬಂದಿದ್ದು 1921ರ ಜನಗಣತಿಯ ವೇಳೆ. ಅಂದಿನಿಂದಲೂ ಪರಿಶಿಷ್ಟ ಜಾತಿಗಳಲ್ಲಿ ತೆಲುಗು ಮಾತನಾಡುವವರು ಮತ್ತು ಇತರ ಕೆಲವರು ಆದಿ ಆಂಧ್ರ ಎಂದು ಬರೆಸಿದರೆ, ತಮಿಳು ಮಾತನಾಡುವವರು ಮತ್ತು ಇತರ ಕೆಲವರು ಆದಿ ದ್ರಾವಿಡ ಎಂದು, ಕನ್ನಡ ಮಾತನಾಡುವವರು ಮತ್ತು ಇತರ ಕೆಲವರು ಆದಿ ಕರ್ನಾಟಕ ಎಂದು ತಮ್ಮನ್ನು ಗುರುತಿಸಿ ಕೊಳ್ಳುತ್ತಿದ್ದಾರೆ. ಇವು ಹಲವು ಜಾತಿಗಳ ಗುಂಪುಗಳಾಗಿವೆ. ಹೀಗೆ ಗುರುತಿಸಿಕೊಳ್ಳುತ್ತಿರು ವವರಲ್ಲಿ ಹೊಲೆಯರು, ಮಾದಿಗರು ಮತ್ತು ಇತರ ಕೆಲವು ಉಪಪಂಗಡಗಳ ಜನರು ಸೇರಿದ್ದಾರೆ.
ನ್ಯಾ.ಸದಾಶಿವ ಆಯೋಗದ ವರದಿಗಾಗಿ ಸಮೀಕ್ಷೆ ನಡೆಸುವ ವೇಳೆ (2011), ಈ ಗುಂಪುಗಳ ಜನರಿಗೆ ತಮ್ಮ ಒಳಜಾತಿಯನ್ನು ಸ್ಪಷ್ಟವಾಗಿ ನಮೂದಿಸಬೇಕೆಂದು ಸೂಚಿಸಲಾಗಿತ್ತು. ಆದರೂ, 24,22,864 ಮಂದಿ ತಮ್ಮ ಒಳಜಾತಿಯನ್ನು ನಮೂದಿಸದೇ ಈ ಗುಂಪುಗಳ ಹೆಸರನ್ನೇ ಹೇಳಿದ್ದರು. ಈ ಬಗ್ಗೆ ಸ್ಪಷ್ಟತೆ ಪಡೆಯಲು ನ್ಯಾ.ನಾಗಮೋಹನದಾಸ್ ಆಯೋಗವು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಪ್ರಯತ್ನ ನಡೆಸಿದೆ. ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜನರು ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿ/ಒಳಜಾತಿಯನ್ನು ನಮೂದಿಸಬೇಕೆಂದು ಸೂಚಿಸಲಾಗಿತ್ತು. ಆದರೆ, ಈ ಬಾರಿಯೂ 4,75,954 ಜನರು ತಮ್ಮ ಒಳಜಾತಿಯನ್ನು ನಮೂದಿಸದೇ ಗುಂಪುಗಳನ್ನೇ ಹೆಸರಿಸಿದ್ದಾರೆ. ಏಕೆ ಅವರು ತಮ್ಮ ನಿರ್ದಿಷ್ಟ ಜಾತಿ/ಉಪಜಾತಿ ಉಲ್ಲೇಖಿಸಿಲ್ಲ ಎನ್ನುವುದಕ್ಕೆ ಇರಬಹುದಾದ ಹಲವು ಕಾರಣಗಳನ್ನೂ ವರದಿಯಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಮೂರು ಗುಂಪು/ಜಾತಿಗಳನ್ನು ಒಂದು ಪ್ರತ್ಯೇಕ ಪ್ರವರ್ಗವಾಗಿ ವಿಂಗಡಿಸಿ, ಅರ್ಹತೆಯ ಮೇರೆಗೆ ಮೀಸಲಾತಿ ಪ್ರಮಾಣವನ್ನು ನೀಡುವುದು ಸಮಂಜಸ ಎಂದು ಆಯೋಗವು ಅಭಿಪ್ರಾಯ ಪಟ್ಟಿದೆ.
ಬೇಡ ಜಂಗಮ ಮತ್ತು ಬುಡ್ಗ ಜಂಗಮ ವಿವಾದಕ್ಕೂ ವರದಿಯಲ್ಲಿ ಪರಿಹಾರ ಸೂಚಿಸಲಾಗಿದೆ. 2011ರ ಜನಗಣತಿಯ ಪ್ರಕಾರ, ಬೇಡಜಂಗಮ ಮತ್ತು ಬುಡ್ಗ ಜಂಗಮ ಸಮುದಾಯಗಳ ಒಟ್ಟು ಜನಸಂಖ್ಯೆ 1,17,426. 2025ರ ಸಮೀಕ್ಷೆಯಲ್ಲಿ ಈ ಸಮುದಾಯಗಳ ಜನಸಂಖ್ಯೆ 3,22,049. 2011ರ ಜನಸಂಖ್ಯೆಗೆ ಹೋಲಿಸಿದರೆ ಶೇ 123ರಷ್ಟು ಹೆಚ್ಚಳವಾಗಿದೆ. ಭಾರತದ ಫಲವಂತಿಕೆ ದರದ (2.0) ಆಧಾರದಲ್ಲಿ ಲೆಕ್ಕ ಹಾಕಿದರೆ, ಕರ್ನಾಟಕದ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜನಸಂಖ್ಯೆ 1,44,387 ಇರಬೇಕು. ಅಂದರೆ, ಈ ಸಮುದಾಯಗಳ ಜನಸಂಖ್ಯೆಯ ಏರಿಕೆಯು ಕೃತಕವಾಗಿದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ.
16 ಜಿಲ್ಲೆಗಳಲ್ಲಿ ಈ ಜಾತಿಗಳ ಜನಸಂಖ್ಯೆ ಕೃತಕವಾಗಿ ಏರಿದ್ದರೆ, ಉಳಿದ ಜಿಲ್ಲೆಗಳಲ್ಲಿ ಸ್ವಾಭಾವಿಕವಾಗಿಯೇ ಹೆಚ್ಚಳವಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಪರಿಶಿಷ್ಟ ಜಾತಿಗೆ ಸೇರದೇ ಇರುವವರು ಸುಳ್ಳು ಮಾಹಿತಿ ನೀಡಿ ಪಟ್ಟಿಗೆ ಸೇರ್ಪಡೆ ಆಗಿರುವುದೇ ಕೃತಕ ಹೆಚ್ಚಳಕ್ಕೆ ಕಾರಣ. ಬೇರೆ ಜಾತಿಯವರೂ ಬೇಡ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಮತ್ತು ರವೀಂದ್ರ ಸ್ವಾಮಿ ಪ್ರಕರಣದಲ್ಲಿ ‘ಲಿಂಗಾಯತ ರಲ್ಲಿನ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ’ ಎಂದು ತೀರ್ಪು ನೀಡಿದೆ. ಹೀಗಾಗಿ, ಬೇಡ ಮತ್ತು ಬುಡ್ಗ ಜಂಗಮರ 1,44,387 ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಒಳಮೀಸಲಾತಿ ನೀಡಬೇಕಿದೆ ಎಂದು ವರದಿ ಸೂಚಿಸಿದೆ. ಜತೆಗೆ, ಬೇಡ ಜಂಗಮ ಮತ್ತು ಬುಡ್ಗ ಜಂಗಮರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಪರಿಶಿಷ್ಟ ಜಾತಿಗೆ ಸೇರಿದವರು ಯಾರು ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇದರಿಂದ ಇತರೆ ಜಾತಿಯವರು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ, ಮೀಸಲಾತಿ ದುರುಪಯೋಗಪಡಿಸಿಕೊಳ್ಳುವುದು ತಪ್ಪುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಪರಿಶಿಷ್ಟ ಜಾತಿಗಳ ಸಾಕ್ಷರತೆ ಪ್ರಮಾಣ ಉತ್ತಮವಾಗಿದೆ. 1.07 ಕೋಟಿಯಷ್ಟಿರುವ ಜನಸಂಖ್ಯೆಯಲ್ಲಿ 86.54 ಲಕ್ಷದಷ್ಟು ಜನರು ಅಕ್ಷರಸ್ಥರಾಗಿದ್ದಾರೆ. 2011ರ ಜನಗಣತಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯವರ ಸಾಕ್ಷರತಾ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 101 ಜಾತಿಗಳಲ್ಲಿ 83 ಜಾತಿಗಳ ಸಾಕ್ಷರತಾ ಪ್ರಮಾಣ ಶೇ 80ಕ್ಕಿಂತ ಹೆಚ್ಚಿದೆ. ಈ ಜಾತಿಗಳ ಸಾಕ್ಷರತೆಯು ರಾಜ್ಯಮಟ್ಟದ ಸರಾಸರಿ ಸಾಕ್ಷರತಾ ಪ್ರಮಾಣಕ್ಕಿಂತಲೂ ಅಧಿಕವಾಗಿದೆ ಎಂದು ವರದಿ ಹೇಳಿದೆ.
ಪದವಿ ಪೂರ್ವ ಶಿಕ್ಷಣ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವೈದ್ಯಕೀಯ ಪದವಿ ಸೇರಿದಂತೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಪಡೆಯುತ್ತಿರುವವರಲ್ಲಿ ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಜಾತಿಗಳಿಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಉದಾಹರಣೆಗೆ, ಪದವಿ ಪೂರ್ವ ಶಿಕ್ಷಣ ಪಡೆದ ಈ ನಾಲ್ಕು ಜಾತಿಗಳ ಅಭ್ಯರ್ಥಿಗಳ ಪ್ರಮಾಣ ಶೇ 72.47ರಷ್ಟಿದ್ದರೆ, ಉಳಿದ 97 ಜಾತಿಗಳ ಅಭ್ಯರ್ಥಿಗಳ ಪ್ರಮಾಣ ಶೇ 27.53ರಷ್ಟು ಮಾತ್ರ. ಪದವಿ ಶಿಕ್ಷಣ ಪಡೆದ ಈ ನಾಲ್ಕು ಜಾತಿಯವರ ಪ್ರಮಾಣ ಶೇ 71ರಷ್ಟಿದೆ. ಉಳಿದ 97 ಜಾತಿಗಳ ಅಭ್ಯರ್ಥಿಗಳ ಪ್ರಮಾಣ ಶೇ 29. ವೈದ್ಯಕೀಯ ಪದವಿ ಪಡೆದ ನಾಲ್ಕು ಜಾತಿಗಳ ಅಭ್ಯರ್ಥಿಗಳ ಪ್ರಮಾಣ ಶೇ 69.67ರಷ್ಟಿದೆ. ಉಳಿದ 97 ಜಾತಿಗಳ ಅಭ್ಯರ್ಥಿಗಳ ಪ್ರಮಾಣ ಶೇ 30.43ರಷ್ಟು ಮಾತ್ರ.
ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆಯುತ್ತಿರುವವರಲ್ಲೂ ಹೊಲೆಯ, ಮಾದಿಗ, ಬಂಜಾರ ಮತ್ತು ಭೋವಿ ಜಾತಿಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದ ‘ವಿದ್ಯಾಸಿರಿ’, ‘ಪ್ರಬುದ್ಧ’ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಫಲಾನುಭವಿಗಳಲ್ಲಿ ಸಿಂಹಪಾಲನ್ನು ಈ ನಾಲ್ಕು ಜಾತಿಗೆ ಸೇರಿದವರು ಪಡೆದುಕೊಂಡಿದ್ದಾರೆ. ಇವರ ನಂತರದಲ್ಲಿ ಭಾಂಬಿ, ಛಲವಾದಿ, ಚೆನ್ನದಾಸರಿ, ಕೊರಚ, ಕೊರಮ, ಮಹಾರ್, ಮೋಗೆರ್, ಮುಂಡಾಲಾ, ಸಮಗಾರ ಮತ್ತು ಸಿಳ್ಳೇಕ್ಯಾತ ಜಾತಿಗೆ ಸೇರಿದ ವಿದ್ಯಾರ್ಥಿಗಳು ಈ ಯೋಜನೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಸಾಕ್ಷರತೆ ಶೇ 90ಕ್ಕಿಂತ ಹೆಚ್ಚು ಇರುವ ಜಾತಿಗಳು:ಆದಿ ಆಂಧ್ರ, ಆದಿ ದ್ರಾವಿಡ, ಅಗೇರ್, ಅರ್ವ ಮಾಲಾ, ಬೈರಾ, ಬಾಕುಡಾ, ಬಂಟ, ಬೇಡ/ಬುಡ್ಗ ಜಂಗಮ, ಚಾಂಡಾಳ, ಗೊಡ್ಡ, ಹಲ್‌ಸಾರ್,ಕಡೈಯನ್, ಕ್ಯಾಪ್‌ಮರೀಸ್, ಕುಟುಂಬನ್, ಲಿಂಗಾಡೇರ್, ಮಚಲಾ , ಮಾಲಾ ಹನ್ನಾಯ್, ಮಾಲಾಮಸ್ತಿ, ಮನ್ನೆ, ಮುಂಡಾಲಾ, ನಲ್ಕದಯಾ, ನಲ್‌ಕೆಯವಾ, ಪಂಬದ, ಪರವನ್, ಸಂಬನ್ ಮತ್ತು ವಲ್ಲುವನ್
ಶೇ 80ರಿಂದ ಶೇ 90ರಷ್ಟು ಸಾಕ್ಷರತೆ ಹೊಂದಿರುವ ಜಾತಿಗಳು: ಆದಿ ಕರ್ನಾಟಕ, ಅದಿಯಾ, ಅಜಿಲಾ, ಅನಾಮುಕ್, ಅರುಂಧತಿಯಾರ್, ಆರ್ಯಮಾಲಾ, ಬಾಕಡ, ಭಳಗಿ, ಬಂಡಿ, ಬಥಡಾ, ಬೆಲ್ಲಾ, ಭಾಂಬೀ, ಭಂಗಿ, ಭೋವಿ, ಚಕ್ಕಿಲಿಯನ್, ಛಲವಾದಿ, ಡೋರ್ ಕಕ್ಕಯ್ಯ, ಡೊಮ್‌ಡೊಂಬರ, ಎಲ್ಲಮ್ಮಲವಾರ್, ಗಂಟಿ ಚೋರ್ಸ, ಹಲ್ಲರ್, ಹಸಲ, ಹೊಲರ್, ಹೊಲೆಯ, ಜಂಬುವುಲು, ಕೂಸ, ಕೊರಚ, ಕೊರಮ, ಕೋಟೆಗಾರ್, ಕುರುವನ್, ಮದರಿ, ಮಹಾರ್, ಮಹ್ಯಾವಂಶಿ, ಮೈಲಾ, ಮಾಲಾ, ಮಾಲಾದಾಸರಿ, ಮಾಲಾಜಂಗಮ, ಮಾಲಾಸಾಲೆ, ಮಾಂಗ್ ಮಾತಂಗ್, ಮಸ್ತಿ, ಮಾವಿಲನ್, ಮೋಗೆರ್, ಮುಕ್ರಿ, ನಾಡಿಯಾ ಹಾಡಿ, ನಯಾಡಿ, ಪಾಲೆ, ಪಲ್ಲನ್, ಪನ್ನಿಯಂಡಿ, ಪಂಚಮ, ಪರವನ್, ರಾನೆಯಾರ್, ಸಮಗಾರ, ಸಪಾರಿ, ಥೋಟಿ ಮತ್ತು ಟ್ರಿಗ್ಗರ್
ಶೇ 70ರಿಂದ 80ರಷ್ಟು ಸಾಕ್ಷರತೆ ಹೊಂದಿರುವ ಜಾತಿಗಳು: ಬಂಜಾರ, ಬಿಂಡ್ಲಾ, ಬ್ಯಾಗೆರಾ, ಚೆನ್ನದಾಸರಿ, ದಕ್ಕಲ್, ದಕ್ಕಲಿಗ, ಗೊಸಾನ್ಯಿ, ಹಂದಿಜೋಗಿ, ಹೊಲೆಯ ದಾಸರಿ, ಕಲ್ಲಡಿ, ಕೊಲ್ಲುಪುಲ್ಲುವಂಡು, ಮಾದಿಗ, ಮಾಲಾಸನ್ಯಾಸಿ, ಮಾಂಗ್ ಗರುಡಿ, ಮೇಘವಾಲ್, ಸಿಳ್ಳೇಕ್ಯಾತಾಸ್, ಸುಡುಗಾಡು ಸಿದ್ಧ
ಶೇ 60ಕ್ಕಿಂತ ಕಡಿಮೆ ಸಾಕ್ಷರತೆ ಹೊಂದಿರುವವರು: ಗಾರೋಡಾ ಗಾರೋ, ಜಗ್ಗಲಿ ಮತ್ತು ಸಿಂದೊಳ್ಳು
ರಾಜ್ಯ ಸರ್ಕಾರದ 45 ಇಲಾಖೆಗಳಲ್ಲಿ ‘ಎ’ ‘ಬಿ’ ‘ಸಿ’ ಮತ್ತು ‘ಡಿ’ ಶ್ರೇಣಿಯ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ 1.47 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಗ್ರೂಪ್ ‘ಸಿ’ ಮತ್ತು ‘ಡಿ’ಗಳಲ್ಲಿ ಅವರಿಗೆ ಮೀಸಲಿಟ್ಟ ಸ್ಥಾನಗಳಿ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಗ್ರೂಪ್ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳಲ್ಲಿ ಈ ಸಮುದಾಯದವರು ಮೀಸಲು (ಕೋಟಾ) ಇಟ್ಟಿರುವಷ್ಟು ಪ್ರಮಾಣದಲ್ಲಿಲ್ಲ.
ಪರಿಶಿಷ್ಟ ಜಾತಿಗೆ ಸೇರಿದ 101 ಉಪಜಾತಿಗಳ ಪೈಕಿ 12 ಜಾತಿಗಳು ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯವನ್ನೇ ಪಡೆದಿಲ್ಲ. ಬಿಂಡ್ಲಾ, ಚಾಂಡಾಲ, ಗಾರೋಡಾ ಗಾರೋ, ಕ್ಯಾಪ್‌ಮರೀಸ್, ಕೋಲುಪುಲುವಂದ್ಲು, ಕುಟುಂಬನ್, ಮಹ್ಯಾವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಲಾ ಜಂಗಮ, ಮಾಲಾ ಮಸ್ತಿ, ಮನ್ನೆ, ಮಸ್ತಿ, ಸಿಂದೊಳ್ಳು–ಚಿಂದೊಳ್ಳು ಜಾತಿಗಳಿಗೆ ಸೇರಿದವರು ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿಲ್ಲ.
ಹೊಲಯ, ಹೊಲರ್, ಹೊಲೆಯ, ಮಾದಿಗ, ಬಂಜಾರ, ಲಂಬಾಣಿ, ಭೋವಿ, ಛಲವಾದಿ, ಭಾಂಬಿ, ಬೇಡ ಜಂಗಮ, ಕೊರಮ, ಸಮಗಾರ, ಆದಿ ದ್ರಾವಿಡ ಸೇರಿದಂತೆ ಪ್ರಮುಖ 10 ಜಾತಿಗಳಿಗೆ ಸೇರಿದವವರು ಗರಿಷ್ಠ ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದಾರೆ.
ಚೆನ್ನದಾಸರಿ, ಹೊಲಯ ದಾಸರಿ, ಪರೈಯನ್, ಕೊರಚ, ಆದಿಕರ್ನಾಟಕ, ಮೊಗೇರ್, ಮಾಲಾ, ಭಂಗಿ, ಸುಡುಗಾಡು ಸಿದ್ಧ ಸೇರಿದಂತೆ 28 ಜಾತಿಗಳಿಗೆ ಸೇರಿದವರು ಮಧ್ಯಮ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ಹೊಂದಿದ್ದಾರೆ. ಆದಿ ಆಂಧ್ರ, ಅದಿಯಾ, ಪರವನ್, ಅಜಿಲಾ ಸೇರಿದಂತೆ 51 ಜಾತಿಗಳ ಜನರು ಕಡಿಮೆ ಸಂಖ್ಯೆಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ.
101 ಒಳಜಾತಿಗಳಲ್ಲಿ ಹಲವು ಜಾತಿಗಳಿಗೆ ಇನ್ನೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವರದಿ ಹೇಳಿದೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದವರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾತಿವಾರು ರಾಜಕೀಯ ಪ್ರಾತಿನಿಧ್ಯದ ವಿವರಗಳನ್ನು ಉಲ್ಲೇಖಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 21,917 ಸದಸ್ಯರಿದ್ದಾರೆ. ಆದರೆ, 101 ಒಳ ಜಾತಿಗಳ ಪೈಕಿ 41 ಜಾತಿಗಳಿಗೆ ಇಲ್ಲಿ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸಿಕ್ಕ ಪ್ರಾತಿನಿಧ್ಯದಲ್ಲಿ ಹೊಲೆಯರು ಮೊದಲ ಸ್ಥಾನದಲ್ಲಿದ್ದರೆ, ಮಾದಿಗರು ಎರಡನೇ ಸ್ಥಾನದಲ್ಲಿದ್ದಾರೆ. ಬಂಜಾರ ಸಮುದಾಯದವರು ಮೂರನೇ, ಆದಿ ಕರ್ನಾಟಕ ನಾಲ್ಕನೇ ಮತ್ತು ಭೋವಿಗಳು ಐದನೇ ಸ್ಥಾನದಲ್ಲಿದ್ದಾರೆ.
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಸದ್ಯ 52 ಮಂದಿ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದು, 101 ಒಳಜಾತಿಗಳಲ್ಲಿ 12 ಜಾತಿಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿವೆ. ಇಲ್ಲೂ ಕ್ರಮವಾಗಿ ಮಾದಿಗ, ಭೋವಿ, ಹೊಲೆಯ, ಬಂಜಾರ ಮತ್ತು ಛಲವಾದಿ ಜಾತಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರಸಭೆಗಳಲ್ಲಿ 82 ಒಳಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಪುರಸಭೆಗಳಲ್ಲಿ 27 ಜಾತಿಗಳಿಗೆ ಸೇರಿದವರು ಮಾತ್ರ ಸದಸ್ಯರಾಗಿದ್ದಾರೆ. ಪಟ್ಟಣ ಪಂಚಾಯಿತಿಗಳಲ್ಲಿ 23 ಜಾತಿಗಳಿಗೆ ಸೇರಿದವರು ಮಾತ್ರ ಸದಸ್ಯರಾಗಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ, 101 ಉಪ ಜಾತಿಗಳಲ್ಲಿ 60 ಜಾತಿಗಳಿಗೆ ಸೇರಿದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. 42 ಜಾತಿಗಳ ಜನರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. 51 ಜಾತಿಗಳು ಕಡಿಮೆ ಪ್ರಾತಿನಿಧ್ಯ ಪಡೆದಿವೆ. ಹೊಲೆಯ, ಮಾದಿಗ, ಆದಿ ಕರ್ನಾಟಕ, ಬಂಜಾರ ಮತ್ತು ಭೋವಿ ಜಾತಿಗಳಿಗೆ ಸೇರಿದವರು ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದ್ದಾರೆ.
42 ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗದೇ ಇರಲು ಬಡತನ, ಅನಕ್ಷರತೆ, ಕಡಿಮೆ ಜನಸಂಖ್ಯೆ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ರಾಜಕೀಯದ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮತ್ತು ಸಂಘಟನೆಗಳು ದುರ್ಬಲವಾಗಿರುವುದು ಕಾರಣವಾಗಿರಬಹುದು ಎಂದು ವರದಿ ಹೇಳಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಕುಟುಂಬಗಳ ಪೈಕಿ ಸ್ವಂತ ವಾಸದ ಮನೆಯನ್ನು ಹೊಂದಿದವರ ಪ್ರಮಾಣ ಶೇ 79.10. ಗುಡಿಸಲಿನಲ್ಲಿ ವಾಸಿಸುತ್ತಿರುವ ಕುಟುಂಬಗಳ ಪ್ರಮಾಣ ಶೇ 18.69. ವಿವಿಧ ಜಾತಿಗಳಲ್ಲಿ ಈ ಪರಿಸ್ಥಿತಿಯು ಭಿನ್ನವಾಗಿದೆ. ಬಂಜಾರರಲ್ಲಿ ಸ್ವಂತ ವಾಸದ ಮನೆ ಹೊಂದಿದವರ ಪ್ರಮಾಣ
ಶೇ 83.10. ಹೊಲೆಯರಲ್ಲಿ ಈ ಪ್ರಮಾಣವು ಶೇ 83.90 ಆಗಿದ್ದರೆ, ಮಾದಿಗರಲ್ಲಿ ಶೇ 80.11 ಆಗಿದೆ. ಆದರೆ, ಪರಿಶಿಷ್ಟ ಜಾತಿಗಳ ಪೈಕಿ ಸಣ್ಣ ಜಾತಿಗಳ ಪರಿಸ್ಥಿತಿ ಉತ್ತಮವಾಗಿಲ್ಲ. ಸಿಳ್ಳೇಕ್ಯಾತರಲ್ಲಿ ಸ್ವಂತ ಮನೆಯನ್ನು ಹೊಂದಿದವರ ಪ್ರಮಾಣ ಶೇ 73.19. ಸುಡುಗಾಡು ಸಿದ್ಧರಲ್ಲಿ ಈ ಪ್ರಮಾಣವು ಶೇ 66.82 ಆಗಿದ್ದರೆ, ಮಾಲ ಜಾತಿಯಲ್ಲಿ ಶೇ 61.98, ಚೆನ್ನದಾಸರಿ ಜಾತಿಯಲ್ಲಿ ಶೇ 75.64ರಷ್ಟಿದೆ.
ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಜಾತಿಗಳಲ್ಲಿ ಗುಡಿಸಲಿನಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆ ಕಡಿಮೆ. ಈ ನಾಲ್ಕು ಜಾತಿಗಳಲ್ಲಿ ಗುಡಿಸಲು ವಾಸಿಗಳ ಸರಾಸರಿ ಪ್ರಮಾಣ ಶೇ 3ಕ್ಕಿಂತ ಕಡಿಮೆ. ಸಣ್ಣ ಜಾತಿಗಳಲ್ಲಿ ಗುಡಿಸಲಿನಲ್ಲಿ ವಾಸಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಸಿಳ್ಳೇಕ್ಯಾತ ಜಾತಿಯಲ್ಲಿ ಗುಡಿಸಲಿನಲ್ಲಿ ವಾಸಿಸುವವರ ಪ್ರಮಾಣ ಶೇ 32.73.
ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ ಒಳಜಾತಿಗಳು ಸಮಾನರೂಪದ ಜಾತಿಗಳಲ್ಲ. ಇವುಗಳ ನಡುವೆ ಭಿನ್ನರೂಪ ಇದೆ. ಪರಿಶಿಷ್ಟ ಜಾತಿಗಳ ಸ್ಪೃಶ್ಯರು, ಅಸ್ಪೃಶ್ಯರು ಮತ್ತು ಇತರರಿಗಿಂತ ಶ್ರೇಷ್ಠರೆಂದೂ ಉಳಿದವರು ಅವರಿಗಿಂತ ಕೆಳಗಿನವರೆಂದೂ ಪರಿಗಣಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಅಲೆಮಾರಿಗಳನ್ನು ಅತ್ಯಂತ ಕೆಳಗಿನವ ರನ್ನಾಗಿ ನೋಡಲಾಗುತ್ತಿದೆ. ಹೊಲೆಯರಿಗಿಂತ ಮಾದಿಗರು ಕೆಳಗಿನವರಾಗಿದ್ದರೆ, ದಕ್ಕಲರು ಮಾದಿಗರಿಗಿಂತ
ಕೆಳಗಿನವರಾಗಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಜಾತಿಗಳೂ ಒಂದೇ ಕೇರಿಯಲ್ಲಿ ವಾಸ ಮಾಡುವುದಿಲ್ಲ. ಒಂದೇ ಬಾವಿಯಿಂದ ನೀರು ತೆಗೆಯುವುದಿಲ್ಲ. ಒಬ್ಬರ ಮನೆಯೊಳಗೆ ಮತ್ತೊಬ್ಬರಿಗೆ ಪ್ರವೇಶವಿಲ್ಲ. ಒಬ್ಬರು ಮಾಡಿದ ಅಡುಗೆಯನ್ನು ಮತ್ತೊಬ್ಬರು ತಿನ್ನುವುದಿಲ್ಲ. ಒಂದು ಉಪಜಾತಿ ಮತ್ತೊಂದು ಉಪಜಾತಿ ನಡುವೆ ಮದುವೆ ಸಂಬಂಧವಿಲ್ಲ. ಇದೇ ರೀತಿ ಜಾತಿ ಹಾಗೂ ಕಸುಬುಗಳೂ ನಿಗದಿಗೊಂಡಿವೆ. ಇವೆರಡೂ ವಂಶಪಾರಂಪರ್ಯ ಆಗಿದ್ದು, ಬದಲಾಯಿಸುವಂತಿಲ್ಲ. ಅವರು ಮಾಡುವ ಕಸುಬಿನ ಆಧಾರದಲ್ಲಿ ಅವರನ್ನು ಮೇಲುಕೀಳೆಂದು ಗುರುತಿಸಲಾಗುತ್ತಿದೆ. ಈ ಎಲ್ಲ ಉಪಜಾತಿಗಳಿಗೂ ಸಮಾನ ಅವಕಾಶಗಳನ್ನು ದೊರಕಿಸಿಕೊಡುವ ಅಗತ್ಯ ಅನಿವಾರ್ಯ ಇದ್ದು, ಈ ದಿಕ್ಕಿನಲ್ಲಿ ಒಳಮೀಸಲಾತಿಯು ಒಂದು ಸಣ್ಣ ಪ್ರಯತ್ನವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.