ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ದಶಕಗಳಿಂದ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಈ ಪೈಕಿ ಹೆಚ್ಚು ದಾಳಿಗಳು ನಡೆದದ್ದು, ಸಾವು–ನೋವು ಸಂಭವಿಸಿದ್ದು ಕಾಶ್ಮೀರದಲ್ಲಿ. ಆದರೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಕೇಂದ್ರಾಡಳಿತ ಪ್ರದೇಶವಾದ ಕಣಿವೆ ಪ್ರದೇಶದಲ್ಲಿ ಉಗ್ರರ ಉಪಟಳ ಕಡಿಮೆಯಾಗಿ ಸಹಜ ಸ್ಥಿತಿ ಮರುಕಳಿಸುತ್ತಿದೆ ಎಂಬಂತೆ ಭಾಸವಾಗಿತ್ತು. ಅದಕ್ಕೆ ಪೂರಕವೆಂಬಂತೆ ಅಲ್ಲಿ ಆರ್ಥಿಕ, ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದವು.
ಆದರೆ, ವಿಶೇಷ ಸ್ಥಾನಮಾನ ರದ್ದಾದ ಬಳಿಕ ಭಯೋತ್ಪಾದಕರು ತಮ್ಮ ಕಾರ್ಯತಂತ್ರ ಬದಲಿಸಿದ್ದರು. ಕಾಶ್ಮೀರವನ್ನು ಬಿಟ್ಟು ಜಮ್ಮುವಿನಲ್ಲಿ ದಾಳಿಗಳನ್ನು ನಡೆಸತೊಡಗಿದರು. 2021ರಿಂದ ಜುಲೈ 2024ರವರೆಗೆ ಜಮ್ಮುವಿನ ವಿವಿಧ ಭಾಗಗಳಲ್ಲಿ 33 ಉಗ್ರ ದಾಳಿಗಳು ನಡೆದಿದ್ದವು. 2024ರ ಮಧ್ಯಭಾಗದವರೆಗೆ ಜಮ್ಮುವಿನಲ್ಲಿ ಎಂಟು ದಾಳಿಗಳು ನಡೆದು, 11 ಮಂದಿ ಸಾವಿಗೀಡಾಗಿದ್ದರು; ವರ್ಷದ ಮೊದಲ ಆರು ತಿಂಗಳಲ್ಲಿ ನಡೆದ ದಾಳಿಗಳಿಂದ 12 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಕೆಲವು ಸೈನಿಕರನ್ನು ಚೀನಾದ ಗಡಿಗೆ ಕಳಿಸಿದ್ದು ಕೂಡ ಇಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿತ್ತು.
ಭದ್ರತಾ ಪಡೆಗಳನ್ನು ತಪ್ಪು ದಾರಿಗೆಳೆಯುವುದು, ಗುಪ್ತಚರ ಅಧಿಕಾರಿಗಳ ದಿಕ್ಕುತಪ್ಪಿಸುವುದು ಸೇರಿದಂತೆ ಉಗ್ರರ ಹಲವು ತಂತ್ರಗಾರಿಕೆ ಇದರ ಹಿಂದಿತ್ತು. ಕಾಶ್ಮೀರಕ್ಕೆ ಹೋಲಿಸಿದರೆ, ಜಮ್ಮುವಿನಲ್ಲಿ ಕಡಿಮೆ ಸೇನಾ ನಿಯೋಜನೆ ಇದ್ದದ್ದು ಕೂಡ ಅಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿತ್ತು. ಆದರೆ, ಈಗ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ದಾಳಿಯು, ಉಗ್ರರು ಮತ್ತೆ ಕಾಶ್ಮೀರದತ್ತ ದೃಷ್ಟಿ ನೆಟ್ಟಿರಬಹುದೇ ಎನ್ನುವ ಅನುಮಾನ ಮೂಡಿಸುತ್ತಿದೆ.
ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಇರಬಹುದಾದ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ವಾರ, ಏ.17ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡುತ್ತಾ, ಹಿಂದೂ ಹಾಗೂ ಮುಸ್ಲಿಂ ಧರ್ಮಗಳು ಹೇಗೆ ಭಿನ್ನ ಎಂದು ವಿವರಿಸಿದ್ದರು. ಕಾಶ್ಮೀರ ಎಂದೆಂದಿಗೂ ಪಾಕಿಸ್ತಾನದ ‘ಕಂಠನಾಳ’ ಎಂದಿದ್ದರು. ಅವರ ಈ ಮಾತುಗಳಿಗೂ ಪಹಲ್ಗಾಮ್ ದಾಳಿಗೂ ನಂಟು ಇದೆ ಎನ್ನಲಾಗುತ್ತಿದೆ. ಪಾಕಿಸ್ತಾನವು ಆಂತರಿಕ ಸಂಘರ್ಷ ಮತ್ತು ಆರ್ಥಿಕ ಕುಸಿತದಂತಹ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ಜನರ ವಿಶ್ವಾಸ ಗಳಿಸುವ ಸಲುವಾಗಿ ಸೇನೆ ಮತ್ತು ರಾಜಕಾರಣಿಗಳು ಕಾಶ್ಮೀರ ವಿವಾದವನ್ನು ಜೀವಂತವಾಗಿಡಲು ಬಯಸುತ್ತಿದ್ದು, ಅದರ ಭಾಗವಾಗಿಯೇ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎನ್ನಲಾಗಿದೆ.
ಅದರ ಮಾರನೇ ದಿನ, ಏ. 18ರಂದು ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿ ಭಾರತದ ಸೇನೆಯಿಂದ ಹತರಾದ ಇಬ್ಬರು ಉಗ್ರರ ಸ್ಮರಣಾರ್ಥ ನಡೆದ ರ್‍ಯಾಲಿಯಲ್ಲಿ ಲಷ್ಕರ್ ಕಮಾಂಡರ್ ಅಬು ಮೂಸಾ, ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಬೇಕು; ಕಾಶ್ಮೀರದಲ್ಲಿ ರಕ್ತಪಾತ ನಡೆಸಬೇಕು’ ಎಂದು ಕರೆ ನೀಡುವ ಮೂಲಕ ಪ್ರಚೋದನಕಾರಿಯಾಗಿ ಮಾತನಾಡಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಥ ಮಾತುಗಳೇ ಪಹಲ್ಗಾಮ್ ದಾಳಿಗೆ ಪ್ರೇರಣೆಯಾಗಿರಬಹುದು ಎನ್ನಲಾಗುತ್ತಿದೆ.
ಲಷ್ಕರ್ ಎ ತಯಬಾ ಉಗ್ರ ಸಂಘಟನೆಗೆ ನಿಷ್ಠವಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಕೇಂದ್ರವು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೆಲವೇ ತಿಂಗಳಲ್ಲಿ (2019ರ ಅಕ್ಟೋಬರ್) ಹುಟ್ಟಿಕೊಂಡ ಸಂಘಟನೆ ಇದು.
‘ಸುಮಾರು 85 ಸಾವಿರ ಹೊರಗಿನವರಿಗೆ ಪ್ರಾದೇಶಿಕ ಪ್ರಮಾಣ ಪತ್ರ ವಿತರಿಸಲಾಗಿದ್ದು, ಅವರಿಂದ ಇಲ್ಲಿನ ಜನಸಂಖ್ಯೆಯ ಸ್ವರೂಪ ಬದಲಾಗುತ್ತಿದೆ. ಅಂತಹ ಅಕ್ರಮ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗುತ್ತದೆ’ ಎಂದು ಟಿಆರ್‌ಎಫ್ ಹೇಳಿದೆ.
ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ಈ ಸಂಘಟನೆ ನಾಗರಿಕರು ಮತ್ತು ಸೈನಿಕರ ಹತ್ಯೆ ಮಾಡುತ್ತಿದೆ. ಶಸ್ತಾಸ್ತ್ರ, ಮಾದಕ ದ್ರವ್ಯ ಸಾಗಣೆಯಲ್ಲಿಯೂ ತೊಡಗಿದೆ. ಜತೆಗೆ, ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಈ ಕಾರಣಕ್ಕೆ ಕೇಂದ್ರ ಗೃಹ ಇಲಾಖೆಯು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ 2023ರಲ್ಲಿ ಇದನ್ನು ನಿಷೇಧಿಸಿದೆ.
ಪ್ರವಾಸಕ್ಕೆ ಬಂದವರು, ಹೊರಗಿನವರು, ಕಾಶ್ಮೀರಿ ಪಂಡಿತರು ಸೇರಿದಂತೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರೇ ಇದರ ಗುರಿ. 2021ರಲ್ಲಿ ನಡೆದಿದ್ದ ವಿಜ್ಞಾನಿ ಮಖಾನ್ ಲಾಲ್ ಪಂಡಿತ ಮತ್ತು ಶಾಲಾ ಪ್ರಾಂಶುಪಾಲರಾದ ಸುಪೀಂದರ್ ಕೌರ್ ಅವರ ಹತ್ಯೆ; 2023ರ ಅನಂತನಾಗ್ ಎನ್‌ಕೌಂಟರ್; ಗಂದೆರ್‌ಬಲ್‌ನಲ್ಲಿ 2024ರಲ್ಲಿ ನಡೆದಿದ್ದ ಕಟ್ಟಡ ಕಾರ್ಮಿಕರ ಹತ್ಯೆ; ರಿಯಾಸಿಯಲ್ಲಿ ನಡೆದಿದ್ದ ಪ್ರವಾಸಿಗಳ ಹತ್ಯಾ ಪ್ರಕರಣಗಳ ಹಿಂದೆ ಟಿಆರ್‌ಎಫ್ ಕೈವಾಡ ಇದೆ. ಭಯೋತ್ಪಾದನೆ, ಕಾಶ್ಮೀರದ ಪ್ರತ್ಯೇಕತೆಯ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿದ್ದ ಬಾಬರ್ ಖಾದ್ರಿ ಎನ್ನುವವರನ್ನೂ ಟಿಆರ್‌ಎಫ್ 2020ರಲ್ಲಿ ಕೊಂದಿತ್ತು.
ಬಾಡಿ ಕ್ಯಾಮೆರಾಗಳನ್ನು ಧರಿಸಿಕೊಂಡು, ಸೇನಾ ಸಿಬ್ಬಂದಿಯ ಮೇಲೆ ದಾಳಿ ನಡೆಸುವುದು, ನಂತರ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿ, ಯುವಕರನ್ನು ಸಂಘಟನೆಯತ್ತ ಸೆಳೆಯುವುದು ಇದರ ಕಾರ್ಯತಂತ್ರ; ಟಿಆರ್‌ಎಫ್ ಕೇಡರ್‌ಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ. 2021ರ ಆಗಸ್ಟ್‌ನಲ್ಲಿ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾ ಪಡೆಗಳು ಟಿಆರ್‌ಎಫ್ ಕಮಾಂಡರ್ ಅಬ್ಬಾಸ್ ಶೇಖ್‌ನನ್ನು ಹತ್ಯೆ ಮಾಡಿದ್ದವು. ಸಂಘಟನೆಯ ಪ್ರಮುಖ ಮುಖಂಡನಾಗಿದ್ದ ಬಾಸಿತ್ ಧರ್ ಎನ್ನುವವನನ್ನು 2024ರ ಮೇನಲ್ಲಿ ಸೇನೆ ಹೊಡೆದುರುಳಿಸಿತ್ತು.
ಕಾಡುವ ಪ್ರಶ್ನೆಗಳು...
* ಗುಪ್ತಚರ, ಭದ್ರತಾ ವೈಫಲ್ಯದಿಂದ ಉಗ್ರರ ದಾಳಿ ನಡೆದಿದೆಯೇ?
* ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಸರ್ಕಾರ, ಸೇನೆ, ಭದ್ರತಾ ಪಡೆಗಳು ನಿರ್ಲಕ್ಷ್ಯ ವಹಿಸಿದವೇ?
* ಕಡಿದಾದ ಪ್ರವಾಸಿ ತಾಣದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿರಲಿಲ್ಲವೇ?
* ಭದ್ರತೆಗೆ ಸೇನಾ ಸಿಬ್ಬಂದಿ ಕೊರತೆ ಕಾಡಿತೇ?
ಪಹಲ್ಗಾಮ್‌ನಿಂದ ಆರು ಕಿ.ಮೀ ದೂರದಲ್ಲಿರುವ ಬೈಸರನ್ ಕಣಿವೆ ‘ಮಿನಿ ಸಿಟ್ಜರ್‌ಲೆಂಡ್’ ಎಂದೇ ಖ್ಯಾತಿ. ಪೈನ್ ಮರಗಳಿಂದಾವೃತವಾದ ದಟ್ಟ ಕಾಡಿನ ಮಧ್ಯದಲ್ಲಿರುವ ಹುಲ್ಲುಗಾವಲು, ಸುತ್ತಲೂ ಕಾಣುವ ಹಿಮಚ್ಛಾದಿತ ಬೆಟ್ಟಗಳ ಸಾಲು ದೃಶ್ಯಕಾವ್ಯವನ್ನೇ ಸೃಷ್ಟಿಸುತ್ತವೆ. ತಾಣ ಮನಮೋಹಕವಾಗಿದ್ದರೂ ಅಲ್ಲಿಗೆ ನೇರ ರಸ್ತೆ ಸಂಪರ್ಕ ಇಲ್ಲ. ಕಡಿದಾದ ದಾರಿಯಲ್ಲಿ ನಡೆದು ಅಥವಾ ಕುದುರೆಯ ಮೇಲೆ ಕುಳಿತು ಸಾಗಬೇಕು. ಅಲ್ಲಿನ ಸೌಂದರ್ಯ ಸವಿಯುವ ಉದ್ದೇಶದಿಂದ ಪ್ರತಿ ದಿನ ಸಾವಿರಾರು ಪ್ರವಾಸಿಗರು ಎಷ್ಟೇ ಕಷ್ಟವಾದರೂ ಈ ಕಣಿವೆಗೆ ದಾಂಗುಡಿ ಇಡುತ್ತಿದ್ದರು.
ಉಗ್ರರು ಅಟ್ಟಹಾಸ ಮೆರೆಯಲು ಅದೇ ತಾಣವನ್ನು ಆಯ್ಕೆ ಮಾಡಿಕೊಂಡಿದ್ದರು. ಸುತ್ತಲೂ ದಟ್ಟ ಕಾಡು ಇರುವುದು, ರಸ್ತೆ ಸಂಪರ್ಕ ಇಲ್ಲದಿರುವುದು, ಸೇನೆ ಅಥವಾ ಭದ್ರತಾ ಸಿಬ್ಬಂದಿಗೆ ತಕ್ಷಣಕ್ಕೆ ಸ್ಥಳಕ್ಕೆ ಬರಲು ಸಾಧ್ಯವಾಗದಿರುವುದು ಮತ್ತು ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರಿಗೆ ಅವಿತು ಕುಳಿತುಕೊಳ್ಳುವ ಸ್ಥಳ ಅಲ್ಲಿ ಇಲ್ಲದಿರುವುದನ್ನೇ ಉಗ್ರರು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ, ಅದರಲ್ಲೂ ವಿಶೇಷವಾಗಿ ಕಾಶ್ಮೀರದಲ್ಲಿ ಈಗ ಪ್ರವಾಸೋದ್ಯಮದ ಋತು. ದೇಶ, ವಿದೇಶದ ಲಕ್ಷಾಂತರ ಜನರು ಭಾರತದ ಭೂಶಿರದ ಸೌಂದರ್ಯ ಸವಿಯಲು ತಂಡೋಪತಂಡವಾಗಿ ಬರುವ ಸಮಯ. ಕೆಲವು ವಾರಗಳಿಂದೀಚೆಗೆ ಶ್ರೀನಗರ, ಪಹಲ್ಗಾಮ್ ಸೇರಿದಂತೆ ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಜನವೋ ಜನ. ಮಾಧ್ಯಮಗಳ ವರದಿ ಪ್ರಕಾರ, ಮಾರ್ಚ್ 26ರಂದು ಶ್ರೀನಗರದ ಟ್ಯುಲಿಪ್ ಉದ್ಯಾನ ಪ್ರವಾಸಿಗರಿಗೆ ಮುಕ್ತವಾದ ನಂತರ ಈವರೆಗೆ 8.14 ಲಕ್ಷ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. 3000ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರೂ ಈ ಉದ್ಯಾನವನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು. ಅಲ್ಲಿನ ಜಿಎಸ್‌ಡಿಪಿಗೆ ಪ್ರವಾಸೋದ್ಯಮ ಶೇ 8.47ರಷ್ಟು ಕೊಡುಗೆ ನೀಡುತ್ತದೆ. ಭಯೋತ್ಪಾದನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕುಸಿದಿತ್ತು. 2021ರಿಂದ ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಂತೆ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡುಬಂದಿತ್ತು. ಕಳೆದ ವರ್ಷ 2.36 ಕೋಟಿಯಷ್ಟು ಪ್ರವಾಸಿಗರು ಭೇಟಿ ನೀಡಿದ್ದರು.
ಪಹಲ್ಗಾಮ್‌ನಲ್ಲಿ ಉಗ್ರರು ಕ್ರೌರ್ಯ ಮೆರೆದ ತಕ್ಷಣವೇ ಸಾವಿರಾರು ಸಂಖ್ಯೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರು ಅಲ್ಲಿಂದ ಊರಿಗೆ ವಾಪಸ್ ಆಗಿದ್ದಾರೆ. ಅಂದಾಜಿನ ಪ್ರಕಾರ ಮುಂದಿನ ಮೂರು ತಿಂಗಳಿಗೆ ಕೊಠಡಿಗಳನ್ನು ಕಾಯ್ದಿರಿಸಿದ್ದ ಶೇ 90ರಷ್ಟು ಪ್ರವಾಸಿಗರು, ತಮ್ಮ ಬುಕ್ಕಿಂಗ್ ರದ್ದು ಮಾಡಿದ್ದಾರೆ. ಇದು ದಾಳಿಯಿಂದಾಗಿ ಆದ ತಕ್ಷಣದ ಪರಿಣಾಮ. ಆದರೆ, ಈ ಪರಿಣಾಮ ಸುದೀರ್ಘ ಕಾಲ ಇರಲಿದ್ದು, ಜನರ ಬದುಕಿಗೆ ಬರೆ ಎಳೆಯಲಿದೆ.
2019ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತ ಶ್ರಮ ವಹಿಸಿತ್ತು. ಜತೆಗೆ, ಕೆಲವು ವರ್ಷಗಳಿಂದೀಚೆಗೆ ಅಲ್ಲಿನ ಅರ್ಥವ್ಯವಸ್ಥೆ ಸುಧಾರಿಸಿತ್ತು. ಜನರ ತಲಾ ಆದಾಯ ಏರುಮುಖವಾಗಿತ್ತು.
2023ರಲ್ಲಿ ಭಾರತವು ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿದ್ದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೃಂಗಸಭೆಯನ್ನು ಏರ್ಪಡಿಸಿ, ಹಿಂಸಾಚಾರ ಪೀಡಿತ ನೆಲದಲ್ಲಿ ಈಗ ಸಹಜತೆ ಮರಳಿದೆ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಿತ್ತು. ಈ ಶೃಂಗಸಭೆಯು ಪ್ರವಾಸೋದ್ಯಮ, ಕೈಗಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ವೇದಿಕೆಯನ್ನೂ ಸೃಷ್ಟಿಸಿತ್ತು. 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, 2024ರ ಡಿಸೆಂಬರ್‌ವರೆಗೆ ₹1.63 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳು ಬಂದಿದ್ದವು. 5.90 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ ಎನ್ನಲಾಗಿತ್ತು.
ಈ ದಾಳಿಯು ಈ ಎಲ್ಲ ಪ್ರಯತ್ನಗಳಿಗೂ ಹಿನ್ನಡೆ ಉಂಟುಮಾಡಲಿದೆ ಎಂದು ಹೇಳಲಾಗಿದೆ.
ಗುಪ್ತಚರ ಭದ್ರತಾ ವೈಫಲ್ಯದಿಂದ ಉಗ್ರರ ದಾಳಿ ನಡೆದಿದೆಯೇ?
l ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಸರ್ಕಾರ ಸೇನೆ ಭದ್ರತಾ ಪಡೆಗಳು ನಿರ್ಲಕ್ಷ್ಯ ವಹಿಸಿದವೇ?
l ಕಡಿದಾದ ಪ್ರವಾಸಿ ತಾಣದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿರಲಿಲ್ಲವೇ?
l ಭದ್ರತೆಗೆ ಸೇನಾ ಸಿಬ್ಬಂದಿ ಕೊರತೆ ಕಾಡಿತೇ?
ಆಧಾರ: ಪಿಟಿಐ, ಬಿಬಿಸಿ, ಜಮ್ಮು ಮತ್ತು ಕಾಶ್ಮೀರ ಆರ್ಥಿಕ ಸಮೀಕ್ಷೆ 2024–25, ರಾಯಿಟರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.