ADVERTISEMENT

ಸಂಖ್ಯೆ–ಸುದ್ದಿ: ಸಹಾಯಧನ ಕಡಿತ, ಬೆಲೆ ಏರಿಕೆ; ಎಲ್‌ಪಿಜಿ ಬಳಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 21:20 IST
Last Updated 14 ಜನವರಿ 2024, 21:20 IST
<div class="paragraphs"><p>ಎಲ್‌ಪಿಜಿ ಬಳಕೆ ಇಳಿಕೆ</p></div>

ಎಲ್‌ಪಿಜಿ ಬಳಕೆ ಇಳಿಕೆ

   

ಬಡಕುಟುಂಬಗಳಿಗೂ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯನ್ನು ಆರಂಭಿಸಿತ್ತು. ಈ ಯೋಜನೆ ಅಡಿಯಲ್ಲಿ ಸಂಪರ್ಕ ಪಡೆದ ಕುಟುಂಬಗಳಿಗೆ ಸಹಾಯಧನ ಸಹಿತವಾಗಿ ಎಲ್‌ಪಿಜಿ ಸಿಲಿಂಡರ್‌ ಒದಗಿಸಲಾಗುತ್ತಿತ್ತು. ಯೋಜನೆಯ ಕಾರಣದಿಂದ ದೇಶದಾದ್ಯಂತ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಈ ಯೋಜನೆಗೆ ನೀಡಲಾಗುತ್ತಿದ್ದ ಸಹಾಯಧನವನ್ನು ಕಡಿತ ಮಾಡಿದ್ದರಿಂದ ಮತ್ತು ಸಿಲಿಂಡರ್‌ ದರ ಏರಿಕೆಯ ಕಾರಣದಿಂದ, ಉಜ್ವಲ ಸಂಪರ್ಕ ಪಡೆದಿದ್ದವರಲ್ಲಿ 1 ಕೋಟಿಗೂ ಹೆಚ್ಚು ಜನರು ಎಲ್‌ಪಿಜಿಯನ್ನು ಬಳಸುತ್ತಲೇ ಇಲ್ಲ.

‘ಸಿಲಿಂಡರ್ ಬೆಲೆ ಏರಿಕೆಯಾಗಿದೆ ಮತ್ತು ಸಬ್ಸಿಡಿ ನಮ್ಮ ಖಾತೆಗೆ ಬರುತ್ತಿಲ್ಲ. ಹಲವು ಬಾರಿ ಸಾಲ ಮಾಡಿ ಸಿಲಿಂಡರ್ ತಂದಿದ್ದೆವು. ಸಬ್ಸಿಡಿ ಬರದೇ ಇರುವುದರಿಂದ, ಸಾಲ ತೀರಿಸುವುದೂ ಕಷ್ಟವಾಯಿತು. ಹೀಗಾಗಿ ಸಿಲಿಂಡರ್‌ ಖಾಲಿಯಾದರೂ ಪೂರ್ತಿ ದುಡ್ಡು ಹೊಂಚಿಕೊಳ್ಳುವವರೆಗೆ ಹೊಸ ಸಿಲಿಂಡರ್ ತರುವುದಿಲ್ಲ’ ಎನ್ನುತ್ತಾರೆ ರಾಮನಗರ ಜಿಲ್ಲೆಯ ಸೋಲೂರು ಹೋಬಳಿಯ ಮೈಲನಹಳ್ಳಿ ನಿವಾಸಿ ಶಿವಣ್ಣಾಚಾರ್. ತಮ್ಮ ಅಕ್ಕ–ಪಕ್ಕದ ಮನೆಯವರ ಸ್ಥಿತಿಯೂ ಅದೇ ಎನ್ನುವುದು ಅವರ ಮಾತು.

ADVERTISEMENT

ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ಉಜ್ವಲ ಯೋಜನೆ ಅಡಿಯಲ್ಲಿ ಹೊಸದಾಗಿ 9.58 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ. ಆದರೆ ಅವುಗಳಲ್ಲಿ ಸಕ್ರಿಯವಾಗಿರುವ ಅಥವಾ ಎಲ್‌ಪಿಜಿ ಬಳಸುತ್ತಿರುವ ಸಂಪರ್ಕಗಳ ಸಂಖ್ಯೆ 8.41 ಕೋಟಿಯಷ್ಟು ಮಾತ್ರ. ಅಂದರೆ ಈ ಯೋಜನೆ ಅಡಿ ಸಂಪರ್ಕ ಪಡೆದವರಲ್ಲಿ ಶೇ 12.30ರಷ್ಟು ಜನರು ಎಲ್‌ಪಿಜಿಯನ್ನು ಬಳಸುತ್ತಲೇ ಇಲ್ಲ. ವರ್ಷದಲ್ಲಿ ಕನಿಷ್ಠ ಒಂದು ಸಿಲಿಂಡರ್‌ ಬಳಸುವ ಕುಟುಂಬವನ್ನೂ ಸಕ್ರಿಯ ಗ್ರಾಹಕ ಎಂದು ಕೇಂದ್ರ ಸರ್ಕಾರವು ಪರಿಗಣಿಸುತ್ತದೆ. ಅಂದರೆ 1.18 ಕೋಟಿ ಕುಟುಂಬಗಳಿಗೆ ವರ್ಷದಲ್ಲಿ ಒಂದು ಸಿಲಿಂಡರ್‌ ಅನ್ನೂ ಖರೀದಿಸಲು ಸಾಧ್ಯವಾಗಿಲ್ಲ.

ಈ ಯೋಜನೆ ಅಡಿಯಲ್ಲಿ ವರ್ಷದಲ್ಲಿ 12 ಸಿಲಿಂಡರ್‌ಗಳನ್ನು ಸಹಾಯಧನ ಸಹಿತವಾಗಿ ಖರೀದಿಸಲು ಅವಕಾಶವಿದೆ. ಹೀಗಿದ್ದೂ, ಯೋಜನೆಯ ಬಹುತೇಕ ಫಲಾನುಭವಿಗಳು ವರ್ಷದಲ್ಲಿ ಒಂದು ಸಿಲಿಂಡರ್ ಅನ್ನಷ್ಟೇ ಬಳಸುತ್ತಿದ್ದಾರೆ. ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಹೆಚ್ಚಾಗಿದ್ದರೂ, ಬಳಕೆ ಗಣನೀಯ ಪ್ರಮಾಣದಲ್ಲಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ.

ಎಲ್‌ಪಿಜಿ ಸಹಾಯಧನ ಕಡಿಮೆಯಾಗಿದ್ದಕ್ಕೂ, ಎಲ್‌ಪಿಜಿ ಸಿಲಿಂಡರ್‌ಗಳ ಸಂಖ್ಯೆ ಏರಿಕೆಯಾಗಿದ್ದೂ ನೇರ ಸಂಬಂಧವಿದೆ. ಸಹಾಯಧನ ಕಡಿಮೆಯಾಗಿದ್ದರ ಜತೆಗೆ, ಸಿಲಿಂಡರ್‌ ದರ ಏರಿಕೆಯೇ ಆಗಿದೆ. ಈಚಿನ ವರ್ಷಗಳಲ್ಲಿ ಸಿಲಿಂಡರ್ ದರ ಗರಿಷ್ಠ ಮಟ್ಟ ಮುಟ್ಟಿದ್ದು 2023ರಲ್ಲಿ. 2022–23ನೇ ಆರ್ಥಿಕ ವರ್ಷದಲ್ಲಿ ಖರೀದಿಸಲಾದ ಸಿಲಿಂಡರ್‌ಗಳ ಸಂಖ್ಯೆ, ಅದರ ಹಿಂದಿನ ವರ್ಷಕ್ಕಿಂತ ಕಡಿಮೆ ಆಗಿದೆ. ಸಿಲಿಂಡರ್‌ ದರ ವಿಪರೀತ ಏರಿಕೆಯಾಗಿದ್ದೇ ಬಳಕೆ ಕಡಿಮೆಯಾಗಲು ಕಾರಣ ಎಂಬುದನ್ನು ಈ ಎಲ್ಲಾ ಅಂಶಗಳೂ ಸೂಚಿಸುತ್ತವೆ.

ಆಧಾರ: ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯವು ಲೋಕಸಭೆಗೆ ನೀಡಿದ ಲಿಖಿತ ಉತ್ತರಗಳು, ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಬೆಲೆ ವಿಶ್ಲೇಷಣಾ ಘಟಕದ ದತ್ತಾಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.