ಗ್ರಾಮೀಣ ಭಾಗದಲ್ಲಿ ಬಡಕುಟುಂಬಗಳಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಜೀವನೋಪಾಯಕ್ಕೆ ನೆರವು ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ನರೇಗಾ) ದೇಶದ ಒಂದು ಪ್ರಮುಖ ಯೋಜನೆಯಾಗಿದೆ. ಇದರ ಅನುಷ್ಠಾನದಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಪ್ರತಿಪಾದಿಸಿದೆ. ನರೇಗಾ ಯೋಜನೆಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಕೂಲಿಯನ್ನು ಹಣದುಬ್ಬರಕ್ಕೆ ತಕ್ಕಂತೆ ಹೆಚ್ಚಳ ಮಾಡುವುದು, ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ನೀಡುತ್ತಿರುವ ‘ಮಾನವ ದಿನ’ಗಳನ್ನು ಹೆಚ್ಚಳ ಮಾಡುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರದ ಮುಂದಿಟ್ಟಿದೆ.
–––––
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅನುದಾನ ಬೇಡಿಕೆಯನ್ನು ಪರಿಶೀಲಿಸಲು ಮತ್ತು ಯೋಜನೆಗಳ ಜಾರಿಯಲ್ಲಾಗಿರುವ ಲೋಪಗಳನ್ನು ತಿಳಿಯಲು ಸಂಸತ್ತಿನಲ್ಲಿ ವಿವಿಧ ಸಂಸದೀಯ ಸ್ಥಾಯಿ ಸಮಿತಿಗಳನ್ನು ನೇಮಿಸಲಾಗಿತ್ತು. ಹೀಗೆ ಲೋಕಸಭೆಯಲ್ಲಿ ನೇಮಿಸಲಾಗಿದ್ದ 16 ಸ್ಥಾಯಿ ಸಮಿತಿಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಸಮಿತಿಯೂ ಒಂದು. ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಕಾ ಈ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರು. ಸಮಿತಿಯು ನೀಡಿದ್ದ ವರದಿಯನ್ನು ಗುರುವಾರ (12.12.2024) ಲೋಕಸಭೆಯಲ್ಲಿ ಮಂಡಿಸಲಾಗಿದೆ.
ನರೇಗಾ ಸೇರಿದಂತೆ ಸಚಿವಾಲಯದ ಅಡಿಯಲ್ಲಿ ಬರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (ಪಿಎಂಎವೈ–ಜಿ), ದೀನದಯಾಳ್ ಅಂತ್ಯೋದಯ ಯೋಜನೆ (ಡಿಎವೈ–ಎನ್ಆರ್‌ಎಲ್‌ಎಂ), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು (ಪಿಎಂಜಿಎಸ್‌ವೈ) ಸ್ಥಾಯಿ ಸಮಿತಿಯು ಅಧ್ಯಯನ ಮಾಡಿ, ವರದಿ ಸಲ್ಲಿಸಿದೆ.
ಗ್ರಾಮೀಣ ಭಾಗದ ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ನರೇಗಾ ಪರಿಣಾಮಕಾರಿ ಅನುಷ್ಠಾನದ ದೃಷ್ಟಿಯಿಂದ ಈ ವರದಿ ಮಹತ್ವದ್ದು. ನರೇಗಾ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಮುಖ ಯೋಜನೆಯಾಗಿದೆ. ಶೇ 100ರಷ್ಟು ನಗರ ಪ್ರದೇಶ ಎಂದು ಪರಿಗಣಿತವಾದ ಜಿಲ್ಲೆಗಳನ್ನು ಹೊರತುಪಡಿಸಿದರೆ, ದೇಶದ ಎಲ್ಲ ಭಾಗಗಳಲ್ಲೂ ಇದನ್ನು ಜಾರಿ ಮಾಡಲಾಗಿದೆ.
2023–24ಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ನರೇಗಾ ಅನುಷ್ಠಾನಕ್ಕಾಗಿ ನಿಗದಿಪಡಿಸಲಾಗಿರುವ ಅನುದಾನದಲ್ಲಿ ಶೇ 43.33ರಷ್ಟು ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ₹ 60 ಸಾವಿರ ಕೋಟಿ ಮೀಸಲಿಟ್ಟಿದ್ದರೆ, ಈ ಬಾರಿ ₹86 ಸಾವಿರ ಕೋಟಿ ಮೀಸಲಿಡಲಾಗಿದೆ. ನರೇಗಾ ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಬೇಡಿಕೆಗೆ ಅನುಗುಣವಾಗಿ ಪರಿಷ್ಕೃತ ಅಂದಾಜು ಮೌಲ್ಯವನ್ನು ನಿರ್ಧರಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ನರೇಗಾ ಯೋಜನೆಗೆ ನಿಗದಿಯಾಗಿದ್ದ ಒಟ್ಟು ಮೊತ್ತದಲ್ಲಿ ಗಣನೀಯ ಪಾಲು ವೆಚ್ಚವಾಗದೇ ಉಳಿದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಯೋಜನೆಗೆ ನಿಗದಿಪಡಿಸಿದ್ದ ಅನುದಾನದ ಪೈಕಿ 2021-22ರಲ್ಲಿ ₹6,545 ಕೋಟಿ, 2022-23ರಲ್ಲಿ ₹2,311 ಕೋಟಿ ಮತ್ತು 2023-24ರಲ್ಲಿ ₹1,110 ಕೋಟಿ ಹಣ ವೆಚ್ಚ ಮಾಡಲಾಗಿಲ್ಲ. ಅನುದಾನ ಬಳಕೆಯಾಗದೇ ಉಳಿದಿರುವ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಗೆ ಉತ್ತರ ನೀಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು, ಆರ್ಥಿಕ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಹಣವು ಹಲವು ಕಾರಣಗಳಿಂದ ವೆಚ್ಚವಾಗದೇ ಉಳಿದಿರುವುದಾಗಿ ತಿಳಿಸಿದೆ. ಜತೆಗೆ, ವಿವಿಧ ಹಂತಗಳಲ್ಲಿ ಹಣ ಬಿಡುಗಡೆಯಲ್ಲಿ ವಿಳಂಬವಾಗಿರುವುದೂ ಒಂದು ಕಾರಣ ಎಂದು ಉಲ್ಲೇಖಿಸಿದೆ.
ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ನೀಡಬೇಕು. ಒಂದು ವೇಳೆ ನಿಗದಿತ ಅವಧಿಗಿಂತ ಕೂಲಿ ಪಾವತಿ ವಿಳಂಬವಾದರೆ, ದಿನಕ್ಕೆ ಶೇ 0.05ರಂತೆ ವಿಳಂಬ ಪರಿಹಾರ ನೀಡಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.
ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹಣಕಾಸು ಹೊಂದಿಸುತ್ತವೆ. ಕಾರ್ಮಿಕರಿಗೆ ಕೂಲಿ ನೀಡುವುದು, ಕುಶಲ ಮತ್ತು ಅರೆಕುಶಲ ಕಾರ್ಮಿಕರ ಕೂಲಿ ಮೊತ್ತ ಸೇರಿದಂತೆ ಯೋಜನೆಯಲ್ಲಿ ಬಳಸಲಾಗುವ ಸಾಮಗ್ರಿಗಳ ವೆಚ್ಚದ ನಾಲ್ಕನೇ ಮೂರರಷ್ಟು ಮೊತ್ತ ಹಾಗೂ ಯೋಜನೆಯ ಒಟ್ಟು ಆಡಳಿತಾತ್ಮಕ ವೆಚ್ಚದ ಶೇ 6ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ.
ಯೋಜನೆಯ ಅಡಿಯಲ್ಲಿ ನೀಡಲಾಗುವ ನಿರುದ್ಯೋಗ ಭತ್ಯೆ, ಕುಶಲ ಮತ್ತು ಅರೆಕುಶಲ ಕಾರ್ಮಿಕರ ಕೂಲಿ ಸೇರಿದಂತೆ ಮೂರನೇ ಒಂದರಷ್ಟು ಸಾಮಗ್ರಿ ವೆಚ್ಚ ಹಾಗೂ ರಾಜ್ಯ ಪರಿಷತ್‌ನ ಆಡಳಿತಾತ್ಮಕ ವೆಚ್ಚಗಳನ್ನು ರಾಜ್ಯವು ಭರಿಸುತ್ತದೆ.
ಸಮಿತಿಯ ಮುಖ್ಯ ಪ್ರಶ್ನೆಗಳು
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿಯು ಎರಡು ಮುಖ್ಯ ಪ್ರಶ್ನೆಗಳನ್ನು ಎತ್ತಿದೆ. ಒಂದನೆಯದ್ದು, ನರೇಗಾ ಕೂಲಿಯ ಮೊತ್ತವನ್ನು ಹಣದುಬ್ಬರದ ವ್ಯತ್ಯಾಸಕ್ಕೆ ತಕ್ಕಂತೆ ಏರಿಕೆ ಮಾಡಲಾಗುತ್ತಿದೆಯೇ ಎನ್ನುವುದು. ವರದಿಯಲ್ಲಿ ಉಲ್ಲೇಖವಾಗಿರುವಂತೆ, ಮಹಾತ್ಮ ಗಾಂಧಿ ಎನ್‌ಆರ್‌ಇಜಿ ಕಾಯ್ದೆ 2005ರ ಕಲಂ 6(1) ಪ್ರಕಾರ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ನರೇಗಾ ಕೂಲಿಯ ಮೊತ್ತವನ್ನು ನಿಗದಿಪಡಿಸುತ್ತದೆ. ಕೃಷಿ ಕಾರ್ಮಿಕರ ಗ್ರಾಹಕರ ಬೆಲೆ ಸೂಚ್ಯಂಕದಲ್ಲಾಗುವ ಬದಲಾವಣೆಗಳನ್ನು ಆಧರಿಸಿ ನರೇಗಾ ಮೊತ್ತವನ್ನು ಹೆಚ್ಚಳ ಮಾಡುವುದಾಗಿ ಇಲಾಖೆಯು ಸ್ಥಾಯಿ ಸಮಿತಿಗೆ ತಿಳಿಸಿದೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವೇತನವನ್ನು ರಾಜ್ಯ ಸರ್ಕಾರಗಳು ನಿಗದಿಮಾಡಿಕೊಳ್ಳಬಹುದಾಗಿದೆ ಎಂದೂ ಇಲಾಖೆ ಹೇಳಿದೆ.
ಸ್ಥಾಯಿ ಸಮಿತಿ ಎತ್ತಿರುವ ಮತ್ತೊಂದು ಮುಖ್ಯ ಪ್ರಶ್ನೆ, ನರೇಗಾ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ನೀಡಲಾಗುವ ಮಾನವ ದಿನಗಳನ್ನು (ಎಂಟು ಗಂಟೆಗಳ ಕೆಲಸವನ್ನು ಒಂದು ಮಾನವ ದಿನ ಎಂದು ಲೆಕ್ಕ ಹಾಕಲಾಗುತ್ತದೆ) ಹೆಚ್ಚಳ ಮಾಡುವುದು ಸಾಧ್ಯವೇ ಎನ್ನುವುದು.
ಇಲಾಖೆಯ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ದೈಹಿಕ ಶ್ರಮದ ಉದ್ಯೋಗವನ್ನು ಒದಗಿಸುವ ಮೂಲಕ ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಖಾತರಿಪಡಿಸಲಾಗುತ್ತಿದೆ. ನೆರೆ/ಬರ, ಪ್ರಾಕೃತಿಕ ವಿಪತ್ತು ಸಂಭವಿಸಿದರೆ, ಅಂತಹ ವಿಶೇಷ ಸಂದರ್ಭಗಲ್ಲಿ 50 ಮಾನವ ದಿನಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಖಾತರಿಪಡಿಸಿದ್ದಕ್ಕಿಂತಲೂ 50 ದಿನ ಹೆಚ್ಚಿಗೆ ಕೆಲಸವನ್ನು ವಿಸ್ತರಿಸಿದರೆ, ಅದರ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು ಎಂದು ಕೇಂದ್ರ ಗ್ರಾಮೀಣಾಭಿವವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
ಸ್ಥಾಯಿ ಸಮಿತಿಯ ಮತ್ತೊಂದು ಮುಖ್ಯ ಪ್ರಶ್ನೆ, ನರೇಗಾ ಕೂಲಿಯಲ್ಲಿ ವಿವಿಧ ರಾಜ್ಯಗಳು/ಕೇಂದ್ರಾಡಳಿತ ನಡುವೆ ಇರುವ ಭಾರಿ ವ್ಯತ್ಯಾಸಕ್ಕೆ ಸಂಬಂಧಿಸಿದ್ದು. ಹರಿಯಾಣ, ಸಿಕ್ಕಿಂ ರಾಜ್ಯಗಳಲ್ಲಿ ನರೇಗಾ ವೇತನವು ಅತಿ ಹೆಚ್ಚು (ತಲಾ ₹374) ಇದ್ದರೆ, ಗೋವಾದಲ್ಲಿ ₹356, ಕರ್ನಾಟಕದಲ್ಲಿ ₹349, ಕೇರಳದಲ್ಲಿ ₹346 ಇದೆ. ಅರುಣಾಚಲ ಪ್ರದೇಶದಲ್ಲಿ ಅತಿ ಕಡಿಮೆ (₹234) ಇದ್ದರೆ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ತಲಾ ₹237 ಇದೆ. ತ್ರಿಪುರಾದಲ್ಲಿ ನರೇಗಾ ವೇತನ ₹242 ಆಗಿದೆ. ಅಂದರೆ, ಒಂದೇ ಯೋಜನೆಯಲ್ಲಿ ನೀಡಲಾಗುವ ವೇತನದಲ್ಲಿ ಕೆಲವು ರಾಜ್ಯಗಳ ನಡುವೆ ₹100ಕ್ಕಿಂತ ಹೆಚ್ಚು ವ್ಯತ್ಯಾಸ ಇರುವುದನ್ನು ಕಾಣಬಹುದಾಗಿದೆ.
ನರೇಗಾ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು, ನರೇಗಾ ಯೋಜನೆಯ ಉದ್ದೇಶಗಳ ಈಡೇರಿಕೆಗಾಗಿ ಹಲವು ಶಿಫಾರಸುಗಳನ್ನು ಮಾಡಿದೆ. ನರೇಗಾ ಕೂಲಿ ಹೆಚ್ಚಳ ಮಾಡುವುದು, ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ನಿಗದಿಪಡಿಸಿರುವ ಮಾನವ ದಿನಗಳನ್ನು ಹೆಚ್ಚಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಅದು ಮಾಡಿದೆ.
ಅನುದಾನ ಹೆಚ್ಚಳ
ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಹಿಂದಿನ ವರ್ಷಕ್ಕಿಂತ 2024–25ರಲ್ಲಿ ಸಚಿವಾಲಯಕ್ಕೆ ನಿಗದಿಪಡಿಸಿರುವ ಅನುದಾನದಲ್ಲಿ ಶೇ 17.5ರಷ್ಟು ಹೆಚ್ಚಳವಾಗಿದೆ. 2023–24ನೇ ಸಾಲಿನಲ್ಲಿ ಇಲಾಖೆಗೆ ₹157545 ಕೋಟಿ ಮೀಸಲಿಟ್ಟಿದ್ದರೆ 2024–25ನೇ ಸಾಲಿನಲ್ಲಿ ₹184566 ಕೋಟಿ ಮೀಸಲಿಡಲಾಗಿದೆ.
ಹರಿಯಾಣದಲ್ಲಿ ಹೆಚ್ಚು
ಈ ವರ್ಷದ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ನರೇಗಾ ಕೂಲಿಯನ್ನು ಶೇ 4ರಿಂದ ಶೇ 10ರವರೆಗೆ ಪರಿಷ್ಕರಿಸಿತ್ತು. ಹರಿಯಾಣದಲ್ಲಿ ಗರಿಷ್ಠ ಅಂದರೆ ₹374 ಕೂಲಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ₹349 ನೀಡಲಾಗುತ್ತಿದೆ. ಅತಿ ಕಡಿಮೆ ಕೂಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳಲ್ಲಿದ್ದು ಕಾರ್ಮಿಕರು ಪ್ರತಿ ದಿನದ ಕೆಲಸಕ್ಕೆ ₹234 ಕೂಲಿ ಪಡೆಯುತ್ತಿದ್ದಾರೆ. ಅನೂಪ್ ಸತ್ಪಥಿ ಅವರ ಅಧ್ಯಕ್ಷತೆಯ ತಜ್ಞರ ಸಮಿತಿಯು 2019ರಲ್ಲೇ ನರೇಗಾ ಅಡಿ ನೀಡಲಾಗುತ್ತಿರುವ ಕನಿಷ್ಠ ದಿನದ ಕೂಲಿಯನ್ನು ₹375ಕ್ಕೆ ಏರಿಸಬೇಕು ಎಂದು ಶಿಫಾರಸು ಮಾಡಿತ್ತು.
ಆಧಾರ: ಸಂಸದೀಯ ಸ್ಥಾಯಿ ಸಮಿತಿ ವರದಿ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.