ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದು ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದಿದ್ದರೂ ಸರ್ಕಾರ ರಚನೆ ಸಾಧ್ಯವಾಗಿಲ್ಲ. 14ನೇ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೇ ಮುಗಿದಿದ್ದರೂ ಇನ್ನೂ ಹೊಸ ಸರ್ಕಾರ ರಚನೆಯಾಗದಿರುವುದರಿಂದ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗಿದ್ದು, ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ವಿಶೇಷ ಅಂದರೆ, ರಾಜ್ಯದಲ್ಲಿ ಈ ಹಿಂದೆ ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ನಿದರ್ಶನಗಳಿವೆ. ಅದೇ ರೀತಿ, ವಿಧಾನಸಭೆಯ ಅವಧಿ ಮುಗಿದ ನಂತರವೂ ಹೊಸ ಸರ್ಕಾರಗಳು ರಚನೆಯಾಗಿವೆ
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಪೂರ್ಣ ಬಹುಮತ ಪಡೆದಿದ್ದರೂ ಸರ್ಕಾರ ಇನ್ನೂ ರಚನೆಯಾಗಿಲ್ಲ. ಹೀಗಾಗಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಶಿವಸೇನಾದ (ಉದ್ಧವ್ ಠಾಕ್ರೆ ಬಣ) ಮುಖಂಡರಾದ ಸಂಜಯ್ ರಾವುತ್, ಆದಿತ್ಯ ಠಾಕ್ರೆ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು ನವೆಂಬರ್ 23ರಂದು. ಮುಖ್ಯಮಂತ್ರಿ ಆಗಿದ್ದ ಏಕನಾಥ್ ಶಿಂದೆ ನವೆಂಬರ್ 26ಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 14ನೇ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಅಂತ್ಯವಾಗಿತ್ತು. ಸಾಮಾನ್ಯವಾಗಿ, ವಿಧಾನಸಭೆಯ ಅವಧಿ ಅಂತ್ಯವಾಗುವುದರ ಒಳಗೇ ಹೊಸ ಸರ್ಕಾರ ರಚನೆಯಾಗುತ್ತದೆ. ಶಿಷ್ಟಾಚಾರದ ಪ್ರಕಾರ, ಅಂದೇ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ನಡೆಯಬೇಕಿತ್ತು. ಆದರೆ, ನಿರೀಕ್ಷೆಯಂತೆ ಸರ್ಕಾರ ರಚನೆ ಮಾಡಲು ಮಹಾಯುತಿ ಕೂಟವು ಮುಂದೆ ಬರಲಿಲ್ಲ. ಕಾರಣ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಿಕ್ಕಟ್ಟು.
ಫಲಿತಾಂಶ ಬಂದು ವಾರ ಕಳೆದರೂ ಸರ್ಕಾರ ರಚನೆಯಾಗದಿರುವುದರಿಂದ ರಾಜಕೀಯ ಅಸ್ಥಿರತೆ ತಲೆದೋರಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರಪತಿ ಆಡಳಿತ ಹೇರಬೇಕು ಎನ್ನುವುದು ಮಹಾ ವಿಕಾಸ ಆಘಾಡಿ (ಎಂವಿಎ) ಮುಖಂಡರ ವಾದ. ಸದ್ಯಕ್ಕೆ, ಏಕನಾಥ್ ಶಿಂದೆ ಅವರನ್ನೇ ಉಸ್ತುವಾರಿ ಮುಖ್ಯಮಂತ್ರಿ ಆಗಿ ಮುಂದುವರಿಯುವಂತೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಸೂಚಿಸಿದ್ದಾರೆ.
1990ರ ನಂತರ ಮಹಾರಾಷ್ಟ್ರದಲ್ಲಿ ಯಾವ ಪಕ್ಷವೂ ಏಕಾಂಗಿಯಾಗಿ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಪಡೆದಿಲ್ಲ. ಮೈತ್ರಿ ಮಾಡಿಕೊಳ್ಳುವುದು ಸರ್ಕಾರ ರಚನೆಗೆ ಅಲ್ಲಿ ಅನಿವಾರ್ಯವಾಗಿದೆ. ಹೀಗೆ ಮೈತ್ರಿ ಅನಿವಾರ್ಯವಾಗಿರುವುದರಿಂದ ಹಲವು ಬಾರಿ ಸಮಸ್ಯೆ ತಲೆದೋರಿ, ವಿಧಾನಸಭೆ ಅವಧಿ ಮುಗಿದರೂ ಹೊಸ ಸರ್ಕಾರಗಳು ರಚನೆಯಾಗದೇ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ.
2019ರಲ್ಲಿಯೂ ಇಂಥದ್ದೇ ಸ್ಥಿತಿ ಉದ್ಭವವಾಗಿತ್ತು. ಬಿಜೆಪಿ 105 ಸ್ಥಾನಗಳನ್ನು ಗಳಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನಾ (56) ಸ್ಥಾನ ಪಡೆದಿತ್ತು. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಒಮ್ಮತ ಮೂಡದೇ ಹಲವು ದಿನ ಅನಿಶ್ಚಿತತೆ ಮುಂದುವರಿದಿತ್ತು. ಕೊನೆಗೆ ರಾಜ್ಯಪಾಲರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಅಲ್ಪಾವಧಿಯ (11 ದಿನ) ರಾಷ್ಟ್ರಪತಿ ಆಡಳಿತದ ನಂತರ ದಿಢೀರ್ ಬೆಳವಣಿಗೆಯಲ್ಲಿ 2019ರ ನವೆಂಬರ್ 23ರಂದು ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಆಗಿ, ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಸರ್ಕಾರ ರಚನೆಯಾಗಿತ್ತು. ಆದರೆ, ಕೇವಲ ಐದೇ ದಿನಗಳಲ್ಲಿ ಆ ಸರ್ಕಾರ ಪತನಗೊಂಡಿತು.
ನಂತರ ರಚನೆಯಾಗಿದ್ದು ಎಂವಿಎ ಕೂಟದ ಸರ್ಕಾರ. ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆದರು. ಅದರೊಂದಿಗೆ ರಾಜಕೀಯ ಅಸ್ಥಿರತೆ ಕೊನೆಗೊಂಡಿತ್ತು. ಮತ್ತೆ, ಮೇ 2022ರಲ್ಲಿ ಮತ್ತೊಂದು ಬಿಕ್ಕಟ್ಟು ಕಾಣಿಸಿಕೊಂಡಿತು. ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದು ಬಿಜೆಪಿ ತನ್ನ ಸಾಮರ್ಥ್ಯಕ್ಕಿಂತ ಒಂದು ಸ್ಥಾನವನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿತ್ತು. ಶಿವಸೇನಾ ಶಾಸಕರಾಗಿದ್ದ ಏಕನಾಥ್ ಶಿಂದೆ ಕೆಲವು ಶಾಸಕರೊಂದಿಗೆ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದರು. ಪರಿಣಾಮವಾಗಿ, ಉದ್ಧವ್ ರಾಜೀನಾಮೆ ನೀಡಿ, ಏಕನಾಥ್ ಶಿಂದೆ ಅವರೇ ಮುಖ್ಯಮಂತ್ರಿ ಆಗಿ ಜೂನ್ 30 2022ರಂದು ಪ್ರಮಾನ ವಚನ ಸ್ವೀಕರಿಸಿದರು. ಜುಲೈ //02023ರಲ್ಲಿ// ಎನ್‌ಸಿಪಿಯಿಂದ ಹೊರಬಂದ ಅಜಿತ್ ಪವಾರ್, ಶಿಂದೆ ನೇತೃತ್ವದ ಸರ್ಕಾರ ಸೇರುವ ಮೂಲಕ ಉಪಮುಖ್ಯಮಂತ್ರಿ ಆಗಿದ್ದರು.
ಮೂರು ಬಾರಿ ರಾಷ್ಟ್ರಪತಿ ಆಡಳಿತ
ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರುವುದು, ವಿಧಾನಸಭೆಯ ಅವಧಿ ಮುಗಿದ ನಂತರ ಹೊಸ ಸರ್ಕಾರ ರಚನೆಯಾಗುವುದು, ರಾಷ್ಟ್ರಪತಿ ಆಡಳಿತ ಜಾರಿಯಾಗುವುದು ಇದ್ಯಾವುದೂ ಹೊಸದಲ್ಲ. 1960ರಲ್ಲಿ ರಾಜ್ಯ ರಚನೆಯಾದಾಗಿನಿಂದ ಇದುವರೆಗೆ ಮೂರು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. 1980ರ ಫೆಬ್ರುವರಿ 17ರಂದು ಶರದ್ ಪವಾರ್ ಅವರ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿತ್ತು. //ಜೂನ್ ರವರೆಗೂ// ಅದು ಜಾರಿಯಲ್ಲಿತ್ತು. ತುರ್ತು ಪರಿಸ್ಥಿತಿಯ ನಂತರ ಅಧಿಕಾರಕ್ಕೆ ಏರಿದ್ದ ಇಂದಿರಾಗಾಂಧಿ ಕಾಂಗ್ರೆಸ್ಸೇತರ ಸರ್ಕಾರಗಳ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಶರದ್ ಪವಾರ್ ಸರ್ಕಾರ ವಜಾ ಮಾಡಿದ್ದರು ಎನ್ನಲಾಗಿತ್ತು. ಎರಡನೇ ಬಾರಿ 2014ರಲ್ಲಿ (ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 31) ಕಾಂಗ್ರೆಸ್ ಸರ್ಕಾರದಿಂದ ಎನ್‌ಸಿಪಿ ಹೊರನಡೆದ ಪರಿಣಾಮ ಪೃಥ್ವಿರಾಜ್ ಚೌಹಾಣ್ ಸರ್ಕಾರ ಪತನಗೊಂಡು ರಾಷ್ಟ್ರಪತಿ ಆಡಳಿತ ಜಾರಿ ಆಗಿತ್ತು. 2019ರಲ್ಲಿ (ನವೆಂಬರ್ 12ರಿಂದ 23ರವರೆಗೆ ) ಮೂರನೇ ಬಾರಿ ಹೇರಲಾಗಿತ್ತು. ಈಗ ಮತ್ತೆ ರಾಷ್ಟ್ರಪತಿ ಆಡಳಿತದ ಒತ್ತಾಯ ಕೇಳಿಬರುತ್ತಿದೆ.
ಮಹಾರಾಷ್ಟ್ರದಲ್ಲಿ ಈ ಹಿಂದೆ ಎರಡು ಬಾರಿ ವಿಧಾನಸಭೆಯ ಅವಧಿ ಅಂತ್ಯವಾದ ನಂತರ ಹೊಸ ಸರ್ಕಾರಗಳು ರಚನೆಯಾದ ನಿದರ್ಶನಗಳಿವೆ. ಆಗ ರಾಷ್ಟ್ರಪತಿ ಆಡಳಿತ ಹೇರಿರಲಿಲ್ಲ. ಆದರೆ, 2019ರಲ್ಲಿ ಸರ್ಕಾರ ರಚನೆ ತಡವಾದ ಕಾರಣಕ್ಕೆ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.
ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಹೆಚ್ಚು ಸ್ಥಾನ ಪಡೆದ ಪಕ್ಷಗಳು, ಹೆಚ್ಚು ಶಾಸಕರ ಬೆಂಬಲ ಇರುವವರು ಸರ್ಕಾರ ರಚನೆಗೆ ಶಕ್ತಿ ಇರುವುದಾಗಿ ಪ್ರತಿಪಾದನೆ ಮಾಡುತ್ತಾರೆ. ಆಗ ರಾಜ್ಯಪಾಲರು ತಮ್ಮ ವಿವೇಚನೆಯಂತೆ ಯಾವುದಾದರೊಂದು ಕೂಟಕ್ಕೆ ಅವಕಾಶ ನೀಡುತ್ತಾರೆ. ನಂತರ ಬಹುಮತ ಸಾಬೀತು ಮಾಡಲು ನಿರ್ದಿಷ್ಟ ಕಾಲಾವಕಾಶ ನೀಡುತ್ತಾರೆ. ಇಲ್ಲವೇ ರಾಜ್ಯಪಾಲರೇ ತಮ್ಮ ವಿವೇಚನಾಧಿಕಾರ ಬಳಸಿ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಸರ್ಕಾರ ರಚನೆ ಆಗುವುದು ಅನುಮಾನವಿದ್ದು, ಅಸ್ಥಿರ ಸ್ಥಿತಿ ಇದೆ ಎಂದು ಅವರಿಗೆ ಅನ್ನಿಸಿದರೆ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.
ಸಂವಿಧಾನದ 356ನೇ ವಿಧಿಯು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕುರಿತಾಗಿ ಪ್ರಸ್ತಾಪಿಸುತ್ತದೆ. 1935ರ ಭಾರತ ಸರ್ಕಾರ ಕಾಯ್ದೆಯ 93ನೇ ಸೆಕ್ಷನ್‌ನಿಂದ ಸ್ಫೂರ್ತಿ ಪಡೆದು ಸಂವಿಧಾನದಲ್ಲಿ ಈ ವಿಧಿಯನ್ನು ಸೇರಿಸಲಾಗಿದೆ. ಅದರ ಪ್ರಕಾರ, ರಾಜ್ಯಗಳಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾದ ಸಂದರ್ಭದಲ್ಲಿ ರಾಜ್ಯಪಾಲರು ನೀಡುವ ವರದಿಯ ಆಧಾರದಲ್ಲಿ ಅಥವಾ ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಮನವರಿಕೆಯಾದಲ್ಲಿ ರಾಷ್ಟ್ರಪತಿ ಅವರು ರಾಷ್ಟ್ರಪತಿ ಆಡಳಿತವನ್ನು ಹೇರಬಹುದು.
ಸರ್ಕಾರ ರಚನೆಗೆ ಸಾಧ್ಯವಿರುವ ಎಲ್ಲ ಯತ್ನಗಳೂ ವಿಫಲವಾಗಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದರೆ ಮಾತ್ರ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.
ರಾಷ್ಟ್ರಪತಿ ಆಡಳಿತ ಹೇರಿದ ನಂತರ ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತದೆ.
ಸರ್ಕಾರದ ಅವಧಿ ಮುಕ್ತಾಯಗೊಂಡು ಹೊಸ ಸರ್ಕಾರ ರಚನೆಗೆ ಹೆಚ್ಚು ಸಮಯ ತೆಗೆದುಕೊಂಡಿದ್ದು ಮಹಾರಾಷ್ಟ್ರದಲ್ಲಿ ಇದೇ ಮೊದಲೇನಲ್ಲ
l ಮಹಾರಾಷ್ಟ್ರದ 10ನೇ ವಿಧಾನಸಭೆಯ ಅವಧಿ 2004ರ ಅಕ್ಟೋಬರ್ 19ಕ್ಕೆ ಮುಕ್ತಾಯವಾಗಿತ್ತು. ಆದರೆ, 11ನೇ ವಿಧಾನಸಭೆ ರಚನೆ ಆಗಿದ್ದು 15 ದಿನಗಳ ನಂತರ. ನವೆಂಬರ್ 1ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು
l 11ನೇ ವಿಧಾನಸಭೆ ಅವಧಿ 2009ರ ನವೆಂಬರ್ 3ರಂದು ಕೊನೆಗೊಂಡಿದ್ದರೂ ನಾಲ್ಕು ದಿನಗಳ ನಂತರ 12ನೇ ವಿಧಾನಸಭೆ ರಚನೆ ಆಯಿತು. ಅಂದರೆ, ನವೆಂಬರ್ 7ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು
ಅಂತಹ ಸನ್ನಿವೇಶ ಉದ್ಭವಿಸಿಲ್ಲ: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಸ್ಪಷ್ಟ ಬಹುಮತ ಇದೆ. ಸದ್ಯದ ಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತಹ ಯಾವುದೇ ಸನ್ನಿವೇಶ ಉದ್ಭವ ಆಗಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ ಎಂದಾಗ ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ರಾಜ್ಯಪಾಲರು ವರದಿಯನ್ನೂ ಕಳುಹಿಸಿಕೊಡಬೇಕು. ಎಸ್.ಪಿ.ಶಂಕರ್, ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ
ಸಂವಿಧಾನದ 356ನೇ ವಿಧಿ ದುರ್ಬಳಕೆ ಮಾಡುವುದರ ವಿರುದ್ಧ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ 1994ರಲ್ಲಿ ಸುಪ್ರೀಂ ಕೋರ್ಟ್ ಚಾರಿತ್ರಿಕ ತೀರ್ಪು ನೀಡಿದ್ದು, ‘ಸರ್ಕಾರ ರಚನೆಗೆ ಸಂಖ್ಯಾಬಲ ನಿರ್ಧಾರ ವಿಧಾನಸಭೆಯಲ್ಲೇ ಆಗಬೇಕೇ ವಿನಾ ಬೇರೆಲ್ಲೂ ಅಲ್ಲ. ಅದು ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರ ವೈಯಕ್ತಿಕ ಅಭಿಪ್ರಾಯ ಅಲ್ಲ. ಬಹುಮತ ಸಾಬೀತು ಪಡಿಸಲು ಅವಕಾಶ ಇದ್ದರೆ ಅದಕ್ಕೆ ತಡೆ ಒಡ್ಡಬಾರದು’ ಎಂದು ಸ್ಪಷ್ಟವಾಗಿ ಹೇಳಿತ್ತು.
ಆಧಾರ: ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.