ADVERTISEMENT

ಆಳ ಅಗಲ: ರಾಷ್ಟ್ರೀಯ ಪೌರತ್ವ ನೋಂದಣಿಗೆ ಕೇಂದ್ರ ಸರ್ಕಾರದ ರಹಸ್ಯ ಸಿದ್ಧತೆ

ತೀಸ್ತಾ ಸೆಟಲ್ವಾಡ್‌
Published 8 ಮಾರ್ಚ್ 2024, 23:26 IST
Last Updated 8 ಮಾರ್ಚ್ 2024, 23:26 IST
   
ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ಹೊರಗೆ ಉಳಿದವರನ್ನು ದೇಶದಿಂದ ಗಡಿಪಾರು ಮಾಡಲು ಅವಕಾಶವಿದೆ. ಎನ್‌ಆರ್‌ಸಿಯಿಂದ ಹೊರಗುಳಿದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲು ಸಿಎಎ ಅವಕಾಶ ಮಾಡಿಕೊಡುತ್ತದೆ. ಮುಸ್ಲಿಮರು ಮಾತ್ರ ಗಡಿಪಾರಿನ ಭೀತಿ ಎದುರಿಸಬೇಕಾಗುತ್ತದೆ. ಎನ್‌ಆರ್‌ಸಿಯನ್ನು ರೂಪಿಸಲು ಮನೆ–ಮನೆಗೆ ಭೇಟಿ ನೀಡಿ, ಮಾಹಿತಿ ಕಲೆಹಾಕಿ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್‌) ರಚಿಸಬೇಕು. ಆದರೆ ಕೇಂದ್ರ ಸರ್ಕಾರವು ಆಧಾರ್ ದತ್ತಾಂಶಗಳನ್ನು ಬಳಸಿಕೊಂಡು ರಹಸ್ಯವಾಗಿ ಎನ್‌ಆರ್‌ಸಿಯನ್ನು ರೂಪಿಸಲು ಹೊರಟಿದೆ ಎನ್ನುತ್ತಿದೆ ಮಿಟಿಯಾಬುರ್ಜ್‌ ಕೋಲ್ಕತ್ತಾ ಮತ್ತು ಸಿಟಿಜನ್‌ ಫಾರ್‌ ಜಸ್ಟೀಸ್‌ ಆ್ಯಂಡ್‌ ಪೀಸ್‌ ನಡೆಸಿದ ತನಿಖಾ ವರದಿ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತು ಕೇಂದ್ರ ಗೃಹ ಸಚಿವಾಲಯವು ರಹಸ್ಯವಾದ, ಬಹುದೊಡ್ಡ ಹೆಜ್ಜೆಯೊಂದನ್ನು ಈಗಾಗಲೇ ಇಟ್ಟಿರುವ ಸಾಧ್ಯತೆ ಇದೆ ಎಂಬುದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ಮಾಹಿತಿಗಳು ಹೇಳುತ್ತವೆ. ನಿಯಮಗಳ ಪ್ರಕಾರ ಮನೆ–ಮನೆಗೆ ಭೇಟಿ ನೀಡಿ ಎನ್‌ಪಿಆರ್‌ಗೆ ದತ್ತಾಂಶಗಳನ್ನು ಕಲೆ ಹಾಕಬೇಕಿತ್ತು ಮತ್ತು 2010ರಲ್ಲಿ ಅಂತಹ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಕೂಡ. ಹಲವು ತೊಡಕುಗಳು ಇದ್ದ ಕಾರಣ ಆ ಕಾರ್ಯವನ್ನು ಆಗಲೇ ಕೈಬಿಡಲಾಗಿತ್ತು. ಆದರೆ ಈಗಿನ ಸರ್ಕಾರವು ಎನ್‌ಪಿಆರ್ ಅನ್ನು ಪರಿಷ್ಕರಿಸುವ ಕಾರ್ಯಕ್ಕೆ 2015ರಲ್ಲೇ ಚಾಲನೆ ನೀಡಿದೆ. ಅದೂ ಆಧಾರ್‌ ದತ್ತಾಂಶಗಳನ್ನು ಎನ್‌ಪಿಆರ್‌ನೊಂದಿಗೆ ರಹಸ್ಯವಾಗಿ ಜೋಡಿಸುವ ಮೂಲಕ.

ಎನ್‌ಪಿಆರ್ ಮತ್ತು ಆಧಾರ್‌ ಕಾರ್ಡ್‌ ಅನ್ನು ಜೋಡಿಸಲು ಪ್ರತಿಯೊಬ್ಬ ಭಾರತೀಯನ ಅನುಮತಿ ಅಗತ್ಯ. ಜತೆಗೆ ಯಾವುದೇ ನಾಗರಿಕನ ಎನ್‌ಪಿಆರ್‌ ದತ್ತಾಂಶಗಳನ್ನು ಆಧಾರ್ ದತ್ತಾಂಶದೊಂದಿಗೆ ಹೋಲಿಸಿ ನೋಡಲಾಗುತ್ತಿದೆ ಮತ್ತು ಪರಸ್ಪರ ಜೋಡಿಸಲಾಗುತ್ತಿದೆ ಎಂಬುದರ ಕುರಿತು ಸರ್ಕಾರವು ಆತನಿಗೆ ಮಾಹಿತಿ ನೀಡಲೇಬೇಕು. ಹೀಗೆ ಮಾಹಿತಿ ನೀಡಿ ಮತ್ತು ಒಪ್ಪಿಗೆ ಪಡೆದರೆ ಮಾತ್ರ ಅದು ಕಾನೂನುಬದ್ಧ ಪ್ರಕ್ರಿಯೆ ಆಗುತ್ತದೆ. ಆದರೆ ಈಗ ಸರ್ಕಾರವು ಜನರಿಗೆ ಮಾಹಿತಿಯನ್ನೂ ನೀಡದೆ ಮತ್ತು ಅವರ ಒಪ್ಪಿಗೆಯನ್ನೂ ಪಡೆಯದೆ ಎನ್‌ಪಿಆರ್‌ ಮತ್ತು ಆಧಾರ್ ಜೋಡಣೆ ಕಾರ್ಯ ನಡೆಸುತ್ತಿದೆ. 

ಈ ವಿಷಯಕ್ಕೆ ಮತ್ತೊಂದು ಮಹತ್ವದ ಆಯಾಮವಿದೆ ಅಥವಾ ಅದನ್ನು ಟ್ವಿಸ್ಟ್‌ ಅನ್ನಬಹುದು. ಅದು 2020. ಆಗ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)–ಎನ್‌ಆರ್‌ಸಿ–ಎನ್‌ಪಿಆರ್‌ ಕುರಿತು ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು. ಅದೇ ಹೊತ್ತಿನಲ್ಲೇ ಕೇಂದ್ರ ಸರ್ಕಾರವು ಜನಗಣತಿ ನಡೆಸುವುದಾಗಿ ಘೋಷಣೆ ಮಾಡಿತು (ಕಳೆದ ಜನಗಣತಿಯು 2011ರಲ್ಲಿ ನಡೆದಿತ್ತು. 2021ರಲ್ಲಿ ಜನಗಣತಿ ನಡೆಯಬೇಕಿತ್ತು) ಮತ್ತು ಜನಗಣತಿ ಒಟ್ಟೊಟ್ಟಿಗೇ ಎನ್‌ಪಿಆರ್‌ ಪ್ರಕ್ರಿಯೆಯನ್ನು ನಡೆಸುವುದಾಗಿಯೂ ಹೇಳಿತು. ಕೇಂದ್ರ ಸರ್ಕಾರದ ಈ ಘೋಷಣೆಯ ನಂತರ ದೊಡ್ಡ ಮಟ್ಟದ ಮತ್ತೊಂದು ಪ್ರತಿಭಟನೆ, ಪ್ರತಿರೋಧವೂ ಆರಂಭವಾಯಿತು. ಹಲವು ರಾಜ್ಯ ಸರ್ಕಾರಗಳೇ ಎನ್‌ಪಿಆರ್ ದತ್ತಾಂಶ ಸಂಗ್ರಹಕ್ಕೆ ಕಟು ವಿರೋಧ ವ್ಯಕ್ತಪಡಿಸಿದವು. ‘ಜನಗಣತಿ ನಡೆಸಲು ಬರುವ ಅಧಿಕಾರಿಗಳು ಎನ್‌ಪಿಆರ್‌ ಸಂಬಂಧಿತ ಪ್ರಶ್ನೆಗಳನ್ನು ಕೇಳಿದರೆ, ನೀವು ಉತ್ತರಿಸಬೇಡಿ’ ಎಂದು ಹಲವು ರಾಜ್ಯ ಸರ್ಕಾರಗಳು ಜನರಿಗೆ ಹೇಳಿದವು. 

ADVERTISEMENT

ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ರೂಪಿಸಲು ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ‘ಪೌರತ್ವ (ನಾಗರಿಕ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ನಿಯಮಗಳು–2003’ರ ಅನ್ವಯ ಮಾತ್ರವೇ ನಡೆಸಬೇಕು. ಆದರೆ, 2021ರ ಜನಗಣತಿಗೆ ಸಿದ್ಧತೆ ನಡೆಸಿದ್ದ ಕೇಂದ್ರ ಸರ್ಕಾರವು ಎನ್‌ಪಿಆರ್‌–ಎನ್‌ಆರ್‌ಸಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಲು ಜನಗಣತಿಯ ಅರ್ಜಿ ನಮೂನೆಯಲ್ಲಿಯೇ ಅವಕಾಶ ಮಾಡಿತ್ತು. ಇದಕ್ಕಾಗಿ ಹೆಚ್ಚುವರಿಯಾಗಿ ನಾಲ್ಕು ಪ್ರಶ್ನೆಗಳನ್ನು ಸೇರಿಸಿತ್ತು. ವ್ಯಕ್ತಿಯ ಪೋಷಕರ ಮೂಲ ಊರಿನ ಕುರಿತ ಮಾಹಿತಿ ಹಾಗೂ ಅವರ ಹುಟ್ಟಿದ ದಿನಾಂಕವನ್ನು ಪಡೆದುಕೊಳ್ಳುವಂಥ ಪ್ರಶ್ನೆಯೂ ಅವುಗಳಲ್ಲಿ ಒಂದಾಗಿತ್ತು. ಇಂಥ ಪ್ರಶ್ನೆಗಳನ್ನು ಕೇಳುವುದನ್ನೇ ಹಲವು ರಾಜ್ಯ ಸರ್ಕಾರಗಳು ವಿರೋಧಿಸಿದ್ದವು. ಈ ವಿರೋಧಕ್ಕೆ ಮಣಿದು, ‘ಎನ್‌ಪಿಆರ್‌ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಲ್ಲ. ಅದು ಐಚ್ಛಿಕವಾದುದು’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತು. ಆದರೆ, ಜನಗಣತಿ ಕಾಯ್ದೆ–1948ರ ಅನ್ವಯ, ಜನಗಣತಿ ಪ್ರಕ್ರಿಯೆಗಾಗಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಜನರು ಉತ್ತರಿಸಲೇಬೇಕಿರುವುದು ಕಡ್ಡಾಯ. ಜನಗಣತಿ ನಡೆದಿದ್ದರೆ, ಆ ಎಲ್ಲಾ ಮಾಹಿತಿಯನ್ನು ಸರ್ಕಾರವು ಕಲೆಹಾಕುತ್ತಿತ್ತು. ಆದರೆ ಕೋವಿಡ್‌ ಕಾರಣದಿಂದ ಜನಗಣತಿ ನಡೆಯಲಿಲ್ಲ. 

2023ರಲ್ಲಿ ಬಿಡುಗಡೆಯಾದ ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಸರ್ಕಾರವು, ‘ಎಲ್ಲ ಭಾರತೀಯರ ಖಾಸಗಿ ವಿವರಗಳನ್ನು ಪಡೆದುಕೊಂಡು ಎನ್‌ಪಿಆರ್‌ ಅನ್ನು ಪರಿಷ್ಕರಿಸಲಾಗಿದೆ’ ಎಂದು ಘೋಷಿಸಿಬಿಟ್ಟಿತು. ಎನ್‌ಪಿಆರ್ ಅನ್ನು ಪರಿಷ್ಕರಿಸಲು ಅಧಿಕಾರಿಗಳು ಮನೆಮನೆಗೆ ಹೋಗಿ ಮಾಹಿತಿಗಳನ್ನು ಪಡೆದುಕೊಳ್ಳಬೇಕಿತ್ತು. ಆದರೆ ಇಲ್ಲಿ ಮನೆ ಮನೆ ಭೇಟಿ ನೀಡದೆಯೇ, ರಹಸ್ಯವಾಗಿ ಆಧಾರ್ ಅನ್ನು ಜೋಡಿಸುವ ಮೂಲಕ ಎನ್‌ಪಿಆರ್ ಅನ್ನು ಪರಿಷ್ಕರಿಸಲಾಯಿತು. ದೇಶದ ಪ್ರತಿಯೊಬ್ಬ ನಾಗರಿಕನ ಆಧಾರ್ ವಿವರ, ಪಡಿತರ ಚೀಟಿ ವಿವರ ಮತ್ತು ಮೊಬೈಲ್‌ ಸಂಖ್ಯೆಯ ವಿವರಗಳನ್ನು ಅವರ ಅರಿವಿಗೆ ಬಾರದಂತೆ ಮತ್ತು ಅವರ ಒಪ್ಪಿಗೆ ಇಲ್ಲದೆಯೇ ಬಳಸಿಕೊಳ್ಳಲಾಗಿದೆ. ಆ ಮೂಲಕ ಎನ್‌‍ಪಿಆರ್‌ ಅನ್ನು ಪರಿಷ್ಕರಿಸಲಾಗಿದೆ. ಆರ್‌ಟಿಐ ಮೂಲಕ ಪಡೆದುಕೊಳ್ಳಲಾದ ಹಲವು ದಾಖಲಾತಿಗಳು ಇದನ್ನೇ ಹೇಳುತ್ತವೆ.

ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಳ್ಳಲು ಈ ಕೇಂದ್ರ ಸರ್ಕಾರವು ಹಿಂದೇಟು ಹಾಕುತ್ತದೆ ಎಂಬುದಕ್ಕೆ ಹತ್ತಾರು ನಿದರ್ಶನಗಳಿವೆ. ಹೀಗಾಗಿ ಈ ಸರ್ಕಾರ ಸಂಗ್ರಹಿಸಲು ಹೊರಟಿರುವ ದತ್ತಾಂಶಗಳು ಮತ್ತು ಅವುಗಳ ನಿರ್ವಹಣೆಯಲ್ಲಿ, ಸರ್ಕಾರದ ಉದ್ದೇಶವನ್ನು ಅನುಮಾನದಿಂದಲೇ ನೋಡಬೇಕಾಗಿದೆ. ಈ ಅನುಮಾನಗಳನ್ನು ಕೇಂದ್ರ ಸರ್ಕಾರದ್ದೇ ದಾಖಲೆಗಳು ಮತ್ತು ವರದಿಗಳು ಮತ್ತಷ್ಟು ಗಟ್ಟಿಯಾಗಿಸುತ್ತವೆ. ಮತ್ತು ಸರ್ಕಾರದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತವೆ.

ಭಾರತೀಯರನ್ನೂ ಗಡೀಪಾರು ಮಾಡುವ ಅಪಾಯ

ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವ ‘ಪೌರತ್ವ ತಿದ್ದುಪಡಿ ಕಾಯ್ದೆ–ಸಿಎಎ’ 2019ರ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿತು. ಆದರೆ ಅದರ ವಿರುದ್ಧ ದೇಶದಾದ್ಯಂತ ದೊಡ್ಡ ಹೋರಾಟವೂ ನಡೆಯಿತು. ಸಿಎಎ–ಎನ್‌ಪಿಆರ್‌–ಎನ್‌ಆರ್‌ಸಿ ಒಂದರ ನಂತರ ಒಂದು ಬರುತ್ತದೆ, ಅವುಗಳ ‘ಕ್ರೊನಾಲಜಿಯನ್ನು ಅರ್ಥಮಾಡಿಕೊಳ್ಳಿ’ ಎಂದು ಬಿಜೆಪಿ ಸರ್ಕಾರದ ಹಿರಿಯ ನಾಯಕರು ಹೇಳಿದ್ದು, ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತು. ಈ ‘ಕ್ರೊನಾಲಜಿ’ಯನ್ನು ಬಳಸಿಕೊಂಡು, ಸರ್ಕಾರದ ಬಳಿ ಇರುವ ದಾಖಲಾತಿಗಳ ಆಧಾರದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿರುವ ಅಸಾಹಯಕ ನಾಗರಿಕರನ್ನು ದೇಶದಿಂದ ಗಡಿಪಾರು ಮಾಡಲಾಗುತ್ತದೆ ಎಂಬ ಆತಂಕ ಜನರಲ್ಲಿ ಮನೆಮಾಡಿತು. ಜನರಲ್ಲಿನ ಈ ಭಯವನ್ನು ಸಿಎಎ ನಿಯಮಗಳನ್ನು ರೂಪಿಸುವ ಮೂಲಕ ನಿಜ ಮಾಡುವಂತಹ ಕ್ರಿಯೆಗಳು ಚಾಲ್ತಿಯಲ್ಲಿವೆ ಮತ್ತು ಅವು ಯಾವಾಗ ಬೇಕಾದರೂ ನಿಜವಾಗಬಹುದು. 

ದಾಖಲಾತಿಗಳ ಆಧಾರದಲ್ಲಿ ಜನರನ್ನು ಹೊರಗಟ್ಟುವ ಇಂಥದ್ದೇ ಕಾರ್ಯಕ್ಕಾಗಿ ಅಸ್ಸಾಂ ಸರ್ಕಾರ ₹1,700 ಕೋಟಿ ವ್ಯಯ ಮಾಡಿದೆ. ಇದು ಸರ್ಕಾರದ ಮೇಲಿನ ಹೊರೆ ಮಾತ್ರವಲ್ಲ 3.3 ಕೋಟಿಯಷ್ಟಿರುವ ಅಸ್ಸಾಂನ ಜನರ ಮೂರನೇ ಒಂದು ಭಾಗದಷ್ಟು ಜನರ ಮೇಲಿನ ಹೊರೆಯೂ ಹೌದು. ಈ ಕಾರ್ಯದ ಭಾಗವಾಗಿ ಅಸ್ಸಾಂ ಗಡಿ ಪೊಲೀಸರು ಮತ್ತು ವಿದೇಶಿಯರ ನ್ಯಾಯಮಂಡಳಿಗಳು ಅಸ್ಸಾಂನ ಜನರಿಗೆ ‘ನೋಟಿಸ್‌’ಗಳನ್ನು ನೀಡುತ್ತಿವೆ. 2.22 ಲಕ್ಷ ಜನರು ಮತ್ತು ಅವರ ಕುಟುಂಬದ ಸದಸ್ಯರು ಈಗ ಎನ್‌ಆರ್‌ಸಿಯಿಂದ ಹೊರಗುಳಿಯುವ ಆತಂಕದಲ್ಲಿದ್ದಾರೆ. ಅಥವಾ ಅವರನ್ನು ಶಂಕಿತ ವಿದೇಶಿ ವಲಸಿಗ ಎಂದೂ ಘೋಷಿಸುವ ಅಪಾಯಗಳಿವೆ. ಆದರೆ ವಾಸ್ತವದಲ್ಲಿ ಅವರಲ್ಲಿ ಶೇ 99ರಷ್ಟು ಜನರು ಭಾರತೀಯರೇ ಆಗಿದ್ದಾರೆ.

ಜನರ ಒಪ್ಪಿಗೆ ಇಲ್ಲದೆ ಮತ್ತು ಜನರಿಗೆ ಅರಿವಿಗೆ ಬರದಂತೆ ಎನ್‌ಪಿಆರ್ ಮತ್ತು ಆಧಾರ್‌ ದತ್ತಾಂಶಗಳನ್ನು ರಹಸ್ಯವಾಗಿ ಜೋಡಣೆ ಮಾಡುತ್ತಿರುವುದು ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಜತೆಗೆ ಈಗಾಗಲೇ ಇರುವ ಆತಂಕಗಳನ್ನು ಇಮ್ಮಡಿ ಮಾಡುತ್ತದೆ. ಈ ದತ್ತಾಂಶಗಳು ಹೊಂದಾಣಿಕೆ ಆಗದೇ ಇದ್ದಲ್ಲಿ, ಅವು ಸರಿಯಾಗಿವೆ ಎಂದು ಸಾಬೀತುಮಾಡುವ ಹೊರೆ ನಾಗರಿಕರ ಮೇಲೆಯೇ ಬೀಳುತ್ತದೆ. ತಾವು ಭಾರತೀಯರೇ ಹೌದು ಎಂದು ಸ್ವತಃ ನಾಗರಿಕರೇ ಸಾಬೀತು ಮಾಡಬೇಕು ಎಂಬ  ಹೊಣೆಗಾರಿಕೆಯನ್ನು 2003ರ ಪೌರತ್ವ ನಿಯಮ ನಾಗರಿಕರ ಮೇಲೆಯೇ ಹೊರಿಸಿದೆ. ಇದು ದೊಡ್ಡ ಮಟ್ಟದ ಸಾಮಾಜಿಕ ತಲ್ಲಣಕ್ಕೆ ಎಡೆಮಾಡಿಕೊಡಲಿದೆ. 

ಇಂಥಹ ಸಂಕೀರ್ಣತೆಗಳು ಇದ್ದ ಕಾರಣಕ್ಕೇ, 2010ರಲ್ಲಿ ಆರಂಭಿಸಿದ್ದ ಇಂತಹ ಕಾರ್ಯವನ್ನು ಸರ್ಕಾರ ಕೈಬಿಟ್ಟಿತ್ತು. ಇಲ್ಲಿ ಹೇಳುತ್ತಿರುವ ಸಂಕೀರ್ಣತೆ ಅಂದರೆ ಜನರ ಬಳಿ ದಾಖಲಾತಿಗಳು ಇಲ್ಲದೇ ಇರುವುದು. ನಿಜವಾದ ಭಾರತೀಯರ ಬಳಿಯೂ ಈ ಎಲ್ಲಾ ಅಗತ್ಯ ದಾಖಲೆಗಳು ಇಲ್ಲ ಮತ್ತು ಸ್ಥಳೀಯ ಸಂಸ್ಥೆಗಳ ಜತೆಗೆ ಅಂತಹ ಸಾಮಾನ್ಯ ಜನರು ವ್ಯವಹರಿಸುವುದು ಸುಲಭವಲ್ಲ. ಅಸ್ಸಾಂನಲ್ಲಿ ಇಂತಹ ತೊಡಕುಗಳಿಂದ ಎದುರಾಗಿರುವ ಬಿಕ್ಕಟ್ಟನ್ನು ನಿಜವಾದ ಜನಸರ್ಕಾರವು ಅರ್ಥಮಾಡಿಕೊಳ್ಳಬೇಕಿತ್ತು, ಅರ್ಥಮಾಡಿಕೊಳ್ಳುತ್ತದೆ ಕೂಡ. ಆದರೆ ಯಾವುದೇ ಹೊಣೆಗಾರಿಕೆ ಇಲ್ಲದ ಸರ್ಕಾರದಿಂದ ಮಾತ್ರ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಎನ್‌ಪಿಆರ್‌–ಆಧಾರ್‌ ಜೋಡಣೆ ಅಕ್ರಮ

ಎನ್‌ಪಿಆರ್‌ನಲ್ಲಿನ ಮಾಹಿತಿಯೇ ಬೇರೆ, ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳೇ ಬೇರೆ. ನಾಗರಿಕರಿಗೆ ಗುರುತಿನ ಚೀಟಿ ನೀಡಬಹುದು ಎಂದು ಕಾಯ್ದೆ ಇರುವುದರಿಂದ ಎನ್‌ಪಿಆರ್‌ಗೆ ಬಲ ಬಂದಿದೆ. ಆಧಾರ್‌ ಕಾರ್ಡ್‌ ಎನ್ನುವುದು ವ್ಯಕ್ತಿಯೊಬ್ಬರ ವಿಳಾಸಕ್ಕೆ ಇರುವ ಸಾಕ್ಷ್ಯ ಮಾತ್ರ. ಇದರಲ್ಲಿ ವ್ಯಕ್ತಿಗಳ ಬಯೋಮೆಟ್ರಿಕ್‌ ದತ್ತಾಂಶಗಳೂ ಇರುತ್ತವೆ. ಯಾವುದೇ ನಿರ್ದಿಷ್ಟ ಉದ್ದೇಶಕ್ಕಾಗಿಯಾದರೂ ಸರಿ, ಜನರ ಅನುಮತಿ ಪಡೆದುಕೊಂಡೇ ಆಧಾರ್‌ ಸಂಖ್ಯೆಯನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು 2016ರಲ್ಲಿ ತಂದ ಆಧಾರ್‌ ಕಾಯ್ದೆ ಹೇಳುತ್ತದೆ.

ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಎನ್‌ಪಿಆರ್‌ ಹಾಗೂ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಡಿಯಲ್ಲಿ ಬರುವ ಆಧಾರ್‌ ಕಾರ್ಡ್‌ ಅನ್ನು ಪರಸ್ಪರ ಜೋಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಎರಡೂ ಪರಸ್ಪರ ಭಿನ್ನವಾದ ದತ್ತಾಂಶಗಳು. ನಿಯಮಗಳ ಪ್ರಕಾರ ಎನ್‌ಪಿಆರ್ ಅನ್ನು ಮನೆ–ಮನೆಗೆ ಭೇಟಿ ನೀಡಿಯೇ ಸಿದ್ಧಪಡಿಸಬೇಕು ಮತ್ತು ಪರಿಷ್ಕರಿಸಬೇಕು. ಜನರೇ ಯಾವುದೋ ಏಜೆನ್ಸಿಗೆ ಹೋಗಿ ನೀಡಿದ ಮಾಹಿತಿಯಿಂದ ರೂಪುಗೊಂಡ ಆಧಾರ್‌ನ ಮೂಲಕ ಎನ್‌ಪಿಆರ್ ಅನ್ನು ಪರಿಷ್ಕರಿಸುವಂತಿಲ್ಲ. ಆದರೆ ಈ ಎಲ್ಲಾ ನಿಯಮ ಮತ್ತು ನಿರ್ಬಂಧಗಳನ್ನು ಮೀರಿ ಗೃಹ ಸಚಿವಾಲಯವು ಎನ್‌ಪಿಆರ್ ಮತ್ತು ಆಧಾರ್ ಮಾಹಿತಿಯನ್ನು ಜೋಡಿಸಿದೆ. ಮತ್ತು ಎನ್‌ಪಿಆರ್‌ ಅನ್ನು ಪರಿಷ್ಕರಿಸಿದೆ.   

ಎನ್‌ಪಿಆರ್‌ನ ಮುಖ್ಯ ಉದ್ದೇಶವು ಜನರ ವಿಳಾಸವನ್ನು ದಾಖಲೆಗಳ ಮೂಲಕ ಸಾಬೀತು ಮಾಡುವುದು. ಇದು ಸರ್ಕಾರವು ತನ್ನ ಜವಾಬ್ದಾರಿಯನ್ನು ಜನರ ಮೇಲೆ ಹಾಕಿದಂತಾಗಿದೆ. ಸರ್ಕಾರಗಳೇ ನಿಯಂತ್ರಿಸುವ ಸ್ಥಳೀಯ ಅಧಿಕಾರಿಗಳಿಂದ ಜನರು ದೌಜರ್ನ್ಯ ಅನುಭವಿಸುವಂತೆ ಎನ್‌ಪಿಆರ್‌ ಮಾಡುತ್ತದೆ. ದಾಖಲೆಗಳು ಇಲ್ಲದಿರುವುದು ಅಥವಾ ದಾಖಲೆಗಳು ಸರ್ಕಾರದ ದಾಖಲೆಯೊಂದಿಗೆ ಹೊಂದಿಕೆ ಆಗದೇ ಇರುವುದು ಜನರನ್ನು ‘ಸಾಮಾನ್ಯ ನಿವಾಸಿ’ (ಪೌರತ್ವ ಪಟ್ಟಿ) ಪಟ್ಟಿಯಿಂದ ಹೊರಹಾಕಿ ಬಿಡುತ್ತದೆ. ಅಸ್ಸಾಂನಲ್ಲಿ ಇಂಥ ಹಲವು ಘಟನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಈ ಪ್ರಕ್ರಿಯೆಗಳು ಮೂಲದಲ್ಲಿಯೇ ಅನ್ಯಾಯ ಪ್ರವೃತ್ತಿಯದ್ದಾಗಿದೆ ಮತ್ತು ಇಂಥ ನ್ಯಾಯಸಮ್ಮತ ವಲ್ಲದ ಪ್ರಕ್ರಿಯೆಗಳು ದುರ್ಬಲ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರಿ ನೌಕರರ ವಿವೇಚನೆಗೆ ನೀಡುತ್ತದೆ. ಅಂಥದ್ದರಲ್ಲಿ ಎನ್‌ಪಿಆರ್ ಅನ್ನು ಯಾವುದೋ ದತ್ತಾಂಶದ ಆಧಾರದಲ್ಲಿ ‍ಪರಿಷ್ಕರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ನಡೆಸಿದೆ.

ಅಪಾರದರ್ಶಕ ಮಾಹಿತಿ

ಎನ್‌ಪಿಆರ್ ಮತ್ತು ಆಧಾರ್ ಜೋಡಣೆ ಸಂಬಂಧ ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ 2010, 2015–16 ಹಾಗೂ 2020ರ  ಸಾಲಿನ ವಾರ್ಷಿಕ ವರದಿಗಳು ಯಾವುದೇ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವುದೇ ಇಲ್ಲ. 

2015–16ರಲ್ಲಿ ಕೈಗೊಂಡ ಎನ್‌ಪಿಆರ್‌ ಪರಿಷ್ಕರಣೆ (ಎನ್‌ಪಿಆರ್‌–ಆಧಾರ್‌ ಕಾರ್ಡ್‌ ಜೋಡಣೆಯ ಪ್ರಕ್ರಿಯೆ) ಮೂಲಕ ಎನ್‌ಪಿಆರ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಸೇರಿಸಲಾಗಿದೆ ಎಂದು 2020ರ ಎನ್‌ಪಿಆರ್‌ ಕೈಪಿಡಿಯಲ್ಲಿ ಹೇಳಲಾಗಿದೆ. ಯಾವ ಪ್ರಮಾಣದಲ್ಲಿ ಜೋಡಣೆ ಕಾರ್ಯ ನಡೆಸಿದೆ ಎಂಬ ಕುರಿತು ಆರ್‌ಟಿಐ ಮೂಲಕ ಎಷ್ಟೇ ಅರ್ಜಿಗಳನ್ನು ಸಲ್ಲಿಸಿದರೂ ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಮಾತ್ರ ಮೌನವಹಿಸಿದೆ.

‘ಮಾಹಿತಿಗಳ ಡಿಜಿಟಲೀಕರಣ ಪ್ರಕ್ರಿಯೆ ಮುಗಿದಿದೆ ಮತ್ತು 119.19 ಕೋಟಿ ಜನರ ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ’ ಎಂದು 2014–15ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಹೇಳಲಾಗಿತ್ತು. ‘119.19 ಕೋಟಿ ಜನರ ಡೆಮೊಗ್ರಾಫಿಕ್‌ ಮಾಹಿತಿಯನ್ನು 2010ರಲ್ಲಿಯೇ ಸಂಗ್ರಹಿಸಲಾಗಿದೆ ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶ ಹಾಗೂ ಎಲ್ಲ ರಾಜ್ಯಗಳಲ್ಲಿನ (ಅಸ್ಸಾಂ ಹಾಗೂ ಮೇಘಾಲಯ ಹೊರತುಪಡಿಸಿ) ಜನರ ಮಾಹಿತಿಗಳನ್ನು 2015–16ರಲ್ಲಿ ಪರಿಷ್ಕರಿಸಲಾಗಿದೆ’ ಎನ್ನುವ ಮಾಹಿತಿಯನ್ನು 2017–18ರ ವಾರ್ಷಿಕ ವರದಿ ನೀಡುತ್ತದೆ. 

ಎನ್‌ಪಿಆರ್ ಹಾಗೂ ಆಧಾರ್‌ ಕಾರ್ಡ್‌ ಜೋಡಣೆಯು ಯಾವ ಪ್ರಮಾಣದಲ್ಲಿ ನಡೆದಿದೆ ಎನ್ನುವ ಮಾಹಿತಿಯನ್ನು ಗೃಹ ಸಚಿವಾಲಯದ ಹಲವು ವಾರ್ಷಿಕ ವರದಿಗಳೇ ನೀಡುತ್ತವೆ. 2015–16ರ ಜೋಡಣೆ ಪ್ರಕ್ರಿಯೆ ಆರಂಭವಾಗುವ ಮುನ್ನವೂ ಇಂಥ ಜೋಡಣೆ ಪ್ರಕ್ರಿಯೆಯು ನಡೆಯುತ್ತಿತ್ತು ಎನ್ನುವುದನ್ನೂ ಇದೇ ವರದಿಗಳು ಸಾದರ ಪಡಿಸುತ್ತವೆ. ಇದಕ್ಕೆ ಉದಾಹರಣೆ ನೀಡಬಹುದು. ‘23.51 ಕೋಟಿ ಜನರ ಎನ್‌ಪಿಆರ್‌ ಮಾಹಿತಿಗಳನ್ನು ಪರಿಷ್ಕರಿಸಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ನೀಡಲಾಗಿದೆ’ ಎಂದು 2014–15ರ ವಾರ್ಷಿಕ ವರದಿ ಹೇಳುತ್ತದೆ. ಈ ಮಟ್ಟದ ಪರಿಷ್ಕರಣೆಯು, 2015–16ರ ಪರಿಷ್ಕರಿಣೆ ಪ್ರಕ್ರಿಯೆಯ ಘೋಷಣೆಯ ನಂತರ ನಡೆಯಬೇಕಿತ್ತು. ಆದರೆ, ಈ ವರ್ಷಕ್ಕೂ ಮೊದಲೇ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡಿತ್ತು. ದೊಡ್ಡ ಮಟ್ಟದ ರಹಸ್ಯ ಹೆಜ್ಜೆಯನ್ನಂತೂ ಇಡಲಾಗಿತ್ತು. ಆದರೆ, ಎಷ್ಟು ದೊಡ್ಡ ಪ್ರಮಾಣದಲ್ಲಿ ಜೋಡಣೆ ಪ್ರಕ್ರಿಯೆ ನಡೆದಿದೆ ಎನ್ನುವುದರ ಕುರಿತು ಮಾತ್ರ ನಿಖರ ಮಾಹಿತಿಗಳಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.