ADVERTISEMENT

ಅಂಥ ಸಂಭ್ರಮ ಮತ್ತೆ ಯಾವಾಗ...?

ಕೆ.ಓಂಕಾರ ಮೂರ್ತಿ
Published 21 ಆಗಸ್ಟ್ 2011, 19:30 IST
Last Updated 21 ಆಗಸ್ಟ್ 2011, 19:30 IST
ಅಂಥ ಸಂಭ್ರಮ ಮತ್ತೆ ಯಾವಾಗ...?
ಅಂಥ ಸಂಭ್ರಮ ಮತ್ತೆ ಯಾವಾಗ...?   

ಅವತ್ತು ಅಡಾಲ್ಫ್ ಹಿಟ್ಲರ್‌ನ ಅಹಂ ಅಡಗಿ ಹೋಗಿತ್ತು!
ಆತನಲ್ಲಿದ್ದ ಆ ಆವೇಶ ಭಾರತ ತಂಡದ ಆಟ ಕಂಡು ಮರೆಯಾಗಿ ಹೋಗಿತ್ತು. ಕೆಳಗಿಳಿದು ಬಂದ ಆತ ನಾಯಕ ಧ್ಯಾನ್ ಚಂದ್ ಕೈಕುಲುಕಿ  ತಮ್ಮ ದೇಶದ ಪೌರತ್ವ ಹಾಗೂ ಕರ್ನಲ್ ಹುದ್ದೆ ನೀಡಲು ಮುಂದಾಗಿದ್ದ...

ಕಾರಣ ಅಟ್ಟಹಾಸದಿಂದ ಮೆರೆಯುತ್ತಿದ್ದ ಸರ್ವಾಧಿಕಾರಿ ಹಿಟ್ಲರ್ ಕಣ್ಣೆದುರು ಭಾರತ ತಂಡ ಬರ್ಲಿನ್ ಒಲಿಂಪಿಕ್ಸ್‌ನ ಹಾಕಿ ಫೈನಲ್‌ನಲ್ಲಿ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಅದು ನಡೆದಿದ್ದು ಆಗಸ್ಟ್ 15, 1936.

ಅದಾಗಿ ಈ ಆಗಸ್ಟ್ 15ಕ್ಕೆ ಭರ್ತಿ 75 ವರ್ಷಗಳು ತುಂಬಿ ಹೋಗಿವೆ. ಅದು ಅಮೃತ ಮಹೋತ್ಸವದ ಸಂಭ್ರಮ. ಇದೇ 29ರಂದು ಧ್ಯಾನ್ ಚಂದ್ ಅವರ 106ನೇ ಜನ್ಮದಿನದ ಸಂಭ್ರಮಕ್ಕೂ ಸಿದ್ಧತೆಗಳು ನಡೆಯುತ್ತಿವೆ.

ವಿಪರ್ಯಾಸವೆಂದರೆ ಅಮೃತ ಮಹೋತ್ಸವ ಸಂಭ್ರಮಕ್ಕೆ ಕಾರಣವಾದ ಆ ದಿನವನ್ನು `ಹಾಕಿ ಇಂಡಿಯಾ~ ನೆನಪಿಸಿಕೊಳ್ಳಲೇ ಇಲ್ಲ. ಒಂದು ಸಣ್ಣ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಲಿಲ್ಲ. ಈ ವಿಷಯ ಹೆಚ್ಚಿನ ಹಾಕಿ ಆಟಗಾರರಿಗೆ ಗೊತ್ತೇ ಇಲ್ಲ ಬಿಡಿ. ಆದರೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಂಬಂಧ ಒಂದು ಸಮಾರಂಭ ಆಯೋಜಿಸಿದ್ದರು.
 
ಈ ಸಮಾರಂಭದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದು ಕೊಟ್ಟ ಆಟಗಾರರನ್ನು ನೆನಪಿಸಿಕೊಳ್ಳಲಾಯಿತು. ಜೊತೆಗೆ ಕೆಲ ಮಾಜಿ ಹಾಕಿ ಆಟಗಾರರನ್ನು ಸನ್ಮಾನಿಸಲಾಯಿತು. ಖಂಡಿತ, ಇದೊಂದು ಅತ್ಯುತ್ತಮ ಕೆಲಸ.

ಆ ಐತಿಹಾಸಿಕ ಒಲಿಂಪಿಕ್ಸ್‌ನಲ್ಲಿ ಆಡಿದ ಯಾರೊಬ್ಬರೂ ಈಗ ಬದುಕಿಲ್ಲ. ಆ ತಂಡದಲ್ಲಿದ್ದ ಆಟಗಾರ ಜೋಸೆಫ್ ಗಾಲಿಬಾರ್ಡಿ ಎರಡು ತಿಂಗಳ ಹಿಂದೆಯಷ್ಟೇ ಲಂಡನ್‌ನಲ್ಲಿ ಅಸುನೀಗಿದರು.

ಬರ್ಲಿನ್‌ನಲ್ಲಿ ಸಿಕ್ಕಿದ ಆ ಗೆಲುವು ಭಾರತ ಹಾಕಿ ಮಟ್ಟಿಗೆ ಐತಿಹಾಸಿಕ ಕ್ಷಣ. ಸೋಲು ಎಂದರೆ ಬೆಂಕಿ ಉಂಡೆಯಾಗುತ್ತಿದ್ದ ಹಿಟ್ಲರ್‌ನ ಸೊಕ್ಕು ಅಡಗಿಸಿತ್ತು. ಆತನ ಕಣ್ಣೆದುರು ಭಾರತ ಆಡಿದ ಪರಿ ಅದ್ಭುತ. 8-1 ಗೋಲುಗಳಿಂದ ಆತನ ತವರು ದೇಶ ಜರ್ಮನಿಯನ್ನು ಬಗ್ಗು ಬಡಿದಿತ್ತು. ತಮ್ಮ ದೇಶದ ಆಟಗಾರರ ಮುಖ ನೋಡಲು ಕೂಡ ಅವತ್ತು ಹಿಟ್ಲರ್‌ಗೆ ಇಷ್ಟವಿರಲಿಲ್ಲ!

ವಿಶೇಷವೆಂದರೆ ಆ ಇಡೀ ಒಲಿಂಪಿಕ್ಸ್‌ನಲ್ಲಿ ಭಾರತ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದು ಏಕೈಕ ಗೋಲು. ಫೈನಲ್‌ನಲ್ಲಿ ಧ್ಯಾನ್ ಚಂದ್ ಆರು ಗೋಲು ದಾಖಲಿಸಿದ್ದರು. 1926-59ರ ಅವಧಿಯಲ್ಲಿ ಭಾರತ ಯಾವುದೇ ಪಂದ್ಯ ಸೋತಿರಲಿಲ್ಲ ಎನ್ನುವುದು ವಿಶೇಷ. ನೀವೇ ಯೋಚಿಸಿ ಭಾರತ ಎಷ್ಟು ಅದ್ಭುತ ತಂಡವಾಗಿತ್ತು ಎಂಬುದನ್ನು.

ಆ ಗೆಲುವಿನ ಬಳಿಕ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್‌ಗೆ ಹಿಟ್ಲರ್ ಸೆಲ್ಯೂಟ್ ಹೊಡೆದ್ದ್ದಿದ ಎಂಬ ಸುದ್ದಿಯೂ ಇದೆ. ಆದರೆ ಆ ದೇಶದ ಪೌರತ್ವ ಹಾಗೂ ಕರ್ನಲ್ ಹುದ್ದೆಯ ಕೊಡುಗೆಯನ್ನು ಧ್ಯಾನ್ ಚಂದ್ ನಯವಾಗಿ ತಿರಸ್ಕರಿಸಿದ್ದರು. `ಹೋಗಲಿ ದುಡ್ಡು ಕೊಡುತ್ತೇನೆ ಹಾಕಿ ಸ್ಟಿಕ್ ಕೊಡು~ ಎಂದು ಹಿಟ್ಲರ್ ಬೇಡಿಕೊಂಡಿದ್ದನಂತೆ!

ಧ್ಯಾನ್ ಚಂದ್ ನಡೆದು ಬಂದ ಹಾದಿ ಅಮೋಘ, ಅದ್ಭುತ, ಅಪೂರ್ವ. ಅವರು ಭಾರತಕ್ಕೆ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗ್ದ್ದೆದು ಕೊಟ್ಟಿದ್ದಾರೆ. 1928, 1932 ಹಾಗೂ 1936ರ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿ ಹ್ಯಾಟ್ರಿಕ್ ಚಿನ್ನದ ಗೌರವ ತಂದುಕೊಟ್ಟಿದ್ದರು.

ಹಾಗಾಗಿ ಅವರು ಭಾರತದ ಮಟ್ಟಿಗೆ `ಹಾಕಿ ದೇವರು~. ಅವರ ಜನ್ಮದಿನವನ್ನು ಪ್ರತಿ ಆಗಸ್ಟ್ 29ರಂದು ಭಾರತದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ, `ಜೀವಮಾನ ಸಾಧನೆ~ ಮಾಡಿದವರಿಗೆ ಧ್ಯಾನ್ ಚಂದ್ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನೂ ನೀಡಲಾಗುತ್ತದೆ.

ಭಾರತ ರತ್ನ ನೀಡಲು ಮುಂದಾದರೆ ಅದು ಮೊದಲು ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್‌ಗೆ ಸಲ್ಲಬೇಕು ಎಂದು ಮಾಜಿ ಹಾಕಿ ಆಟಗಾರರು ಆಗ್ರಹಿಸಿದ್ದಕ್ಕೆ ಕಾರಣವಿದೆ.

ಆದರೆ ಭಾರತದ ಹಾಕಿಯ ಈಗಿನ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ರಾಷ್ಟ್ರೀಯ ಕ್ರೀಡೆ ಎನಿಸಿಕೊಂಡಿರುವ ಹಾಕಿಯಲ್ಲಿ ಸುಧಾರಣೆ ಕಾಣುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಇತ್ತೀಚೆಗೆ ನಡೆದ ಅಜ್ಲನ್ ಷಾ ಹಾಕಿ ಟೂರ್ನಿಯಲ್ಲೂ ಹೀನಾಯ ಸೋಲು ಕಂಡಿದೆ.  ಕತ್ತಲ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ಈ ಕ್ರೀಡೆಯ ಮೇಲೆ ಬೆಳಕಿನ ಕಿರಣಗಳು ಬೀಳುವುದು ಯಾವಾಗ?

ಎಂಟು ಚಿನ್ನದ ಪದಕ ಗೆದ್ದಿದ್ದ ಭಾರತ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಕಳೆದುಕೊಂಡು ಮೂರು ವರ್ಷಗಳಾದರೂ  ಬುದ್ಧಿ ಬಂದಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ಗೆ ಇನ್ನೂ ಅರ್ಹತೆ ಪಡೆದಿಲ್ಲ. ಆದರೆ ಭಾರತದ ಹಾಕಿಯ ಮೇಲೆ ಹಿಡಿತ ಸಾಧಿಸಲು `ಹಾಕಿ ಇಂಡಿಯಾ~ ಹಾಗೂ ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಎಂಬ ಎರಡು ಬಣಗಳು ಕಿತ್ತಾಟದಲ್ಲಿ ತೊಡಗಿವೆ.

ಐಎಚ್‌ಎಫ್ ಬಣದ ಕಾರ್ಯಕ್ರಮಕ್ಕೆ ಹೋದರೆ ಆಟಗಾರರ ಮೇಲೆ ಶಿಸ್ತು ಕ್ರಮ ಜರುಗಿಸುತ್ತಾರೆ. ಐದು ಮಂದಿ ಆಟಗಾರರಿಗೆ ಶೋಕಾಸ್ ನೋಟಿಸ್ ನೀಡಿರುವುದೇ ಅದಕ್ಕೊಂದು ಸಾಕ್ಷಿ.

ಲಂಡನ್ ಒಲಿಂಪಿಕ್ಸ್‌ಗೆ ಕೇವಲ 11 ತಿಂಗಳು ಬಾಕಿ ಇದೆ. ನೂತನ ಕೋಚ್ ಮೈಕಲ್ ನಾಬ್ಸ್ ಹೇಳಿರುವ ಪ್ರಕಾರ ಈ ಬಾರಿಯೂ ಅರ್ಹತೆ ಪಡೆಯುವುದು ಕಷ್ಟ. `ನನ್ನ ಗುರಿ ಭಾರತ ತಂಡವನ್ನು 2016ರ ಒಲಿಂಪಿಕ್ಸ್‌ಗೆ ಸಜ್ಜುಗೊಳಿಸುವುದು~ ಎಂದು ಅವರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ನಡೆದ ಶಿಬಿರದ ವೇಳೆ ನುಡಿದಿದ್ದರು.

ಭಾರತ ತಂಡ ಚೀನಾದ ಒರ್ಡೊಸ್‌ನಲ್ಲಿ ಸೆಪ್ಟೆಂಬರ್ ಮೂರರಿಂದ 11ರವರೆಗೆ ನಡೆಯಲಿರುವ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದೆ. ಮತ್ತೆ ರಾಜ್ಪಾಲ್ ಸಿಂಗ್‌ಗೆ ತಂಡದ ಸಾರಥ್ಯ ವಹಿಸಲಾಗಿದೆ. ಜೊತೆಗೆ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಈ ಟೂರ್ನಿಯಲ್ಲಿ ಭಾರತವಲ್ಲದೇ, ಚೀನಾ, ಪಾಕ್, ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳು ಪಾಲ್ಗೊಳ್ಳಲಿವೆ. ಈ ಟೂರ್ನಿ ಭಾರತ ತಂಡ ಹೊಸ ಹೆಜ್ಜೆ ಇಡಲು ಒಂದು ವೇದಿಕೆಯಾಗಲಿದೆಯಾ? ಕಾದು ನೋಡಬೇಕು. ಇಲ್ಲಿ ಸಿಗುವ ಗೆಲುವು ಖಂಡಿತ ಆಟಗಾರರಲ್ಲಿ ಹೊಸ ವಿಶ್ವಾಸ ತುಂಬಲಿದೆ.

ಆದರೆ ಆಟಗಾರರ ದೈಹಿಕ ಸಾಮರ್ಥ್ಯದ ಬಗ್ಗೆ ಇನ್ನೂ ಅನುಮಾನವಿದೆ. ಮೊದಲು ಫಿಟ್‌ನೆಸ್ ಮಟ್ಟದಲ್ಲಿ ಗಣನೀಯ ಸುಧಾರಣೆ ಆಗಬೇಕಾಗಿದೆ. ಜೊತೆಗೆ ಯೂರೋಪಿಯನ್ ಶೈಲಿಯ ಆಟಕ್ಕೆ ಭಾರತ ಹೊಂದಿಕೊಳ್ಳಬೇಕಾಗಿದೆ. ಜರ್ಮನಿ ಹಾಗೂ ಆಸ್ಟ್ರೇಲಿಯಾದವರ ಆಕ್ರಮಣಕಾರಿ ಆಟದ ಶೈಲಿಗೆ ಹೊಂದಿಕೊಳ್ಳಲು ಭಾರತದವರಿಗೆ ಸಾಧ್ಯವಾಗುತ್ತಿಲ್ಲ. 

 ಏನೇ ಆಗಲಿ, ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ಮತ್ತೆ ಬೆಳಗಬೇಕು. ಅದಕ್ಕೆ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಟ್ಟ ಆಟಗಾರರು ಸ್ಫೂರ್ತಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.