ಶಿವಮೊಗ್ಗದ ಒಬ್ಬ ಭಾಗಶಃ ಅಂಧ ಆಟಗಾರ ಚೆಸ್ ಮೇಲಿನ ಪ್ರೀತಿಯಿಂದ ಆರಂಭಿಸಿದ್ದು ನಳಂದ ಚೆಸ್ ಅಕಾಡೆಮಿ. 14 ವರ್ಷಗಳ ಹಿಂದೆ ಶ್ರೀಕೃಷ್ಣ ಉಡುಪ ಅವರು ಶಿವಮೊಗ್ಗ ನಗರದಲ್ಲಿ ಆರಂಭಿಸಿದ ಈ ಅಕಾಡೆಮಿ ಇಂದು ನೂರಕ್ಕಿಂತ ಅಧಿಕ ರೇಟೆಡ್ ಆಟಗಾರರನ್ನು ಬೆಳಕಿಗೆ ತಂದಿದೆ. ಇಂಟರ್‌ನ್ಯಾಷನಲ್ ಮಾಸ್ಟರ್ ಜಿ.ಎ.ಸ್ಟ್ಯಾನಿ, ವಿವಿಧ ಟೂರ್ನಿಗಳಲ್ಲಿ ಯಶಸ್ಸು ಕಂಡಿರುವ ಡಿ.ಯಶಸ್, ಶ್ರೀಶನ್, ಕಿಶನ್ ಗಂಗೊಳ್ಳಿ, ಸೃಷ್ಟಿ ಶೆಟ್ಟಿ ಮೊದಲಾದ ಆಟಗಾರರು ಬೆಳಕಿಗೆ ಬಂದಿದ್ದು ಈ ಅಕಾಡೆಮಿ ಮೂಲಕವೇ.
ವಿಶೇಷ ಎಂದರೆ ಅಕಾಡೆಮಿಯಲ್ಲಿ ತರಬೇತಿ ಪಡೆದ ಕಿಶನ್ ಗಂಗೊಳ್ಳಿ, ಮೇ ತಿಂಗಳ ಆರಂಭದಲ್ಲಿ ಗ್ರೀಸ್ ದೇಶದಲ್ಲಿ ಮೇ 4 ರಿಂದ ನಡೆಯಲಿರುವ ವಿಶ್ವ ಅಂಧರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. , ಶೇ. 75ರಷ್ಟು ದೃಷ್ಟಿದೋಷ ಹೊಂದಿರುವ ಅವರು ಮುಂಬೈ ಬಳಿಯ ವಸೈಯಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ‘ಎ’ ಅಂಧರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಪಡೆದು ಈ ಅರ್ಹತೆ ಸಂಪಾದಿಸಿದ್ದಾರೆ. ಇನ್ನೂ ವಿಶೇಷ ಎಂದರೆ ಅಕಾಡೆಮಿ ಆರಂಭಿಸಿದ್ದ ಶ್ರೀಕೃಷ್ಣ ಉಡುಪ ಅವರೂ ಗ್ರೀಸ್‌ನ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು. 46 ವರ್ಷದ ಉಡುಪ ವಸೈಯ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು! ಇನ್ನೊಂದು ಗಮನಾರ್ಹ ವಿಷಯ ಎಂದರೆ ವಸೈನಲ್ಲಿ ಚೀಫ್ ಆರ್ಬಿಟರ್ (ಮುಖ್ಯ ತೀರ್ಪುಗಾರ) ಆಗಿದ್ದ ಮಂಜುನಾಥ ಎಂ. ಕೂಡ ಶಿವಮೊಗ್ಗದವರೇ.
ಕಿಶನ್ ಗಂಗೊಳ್ಳಿ
ಶಿವಮೊಗ್ಗ ವಿನೋಬನಗರದ ಕಿಶನ್ ಗಂಗೊಳ್ಳಿ 2054ರ ಫಿಡೆ ರೇಟಿಂಗ್ ಹೊಂದಿದ್ದು ಅಂಧರ ಚೆಸ್‌ನಲ್ಲಿ ದೇಶದಲ್ಲೇ ಮೊದಲ ಕ್ರಮಾಂಕ ಹೊಂದಿದ್ದಾರೆ. ಕುಂದಾಪುರ ಸಮೀಪದ ಗಂಗೊಳ್ಳಿ ಅವರ ಕುಟುಂಬದ ಮೂಲ. ಆದರೆ ಶಿವಮೊಗ್ಗದಲ್ಲೇ ಹುಟ್ಟಿ (ಜನನ: 2–1–1992) ಬೆಳೆದವರು. ಹುಟ್ಟಿನಿಂದಲೇ ದೃಷ್ಟಿದೋಷ. ಹಗಲಿನಲ್ಲಿ ಕಷ್ಟಪಟ್ಟು ಓದಬಲ್ಲ ಅವರು ಪರೀಕ್ಷೆಗಳನ್ನು ಬರೆಯುವುದು ಸಹಾಯಕರ ನೆರವಿನಿಂದ.
‘ನನ್ನ ಮಾವನಿಗೆ ಚೆಸ್‌ನಲ್ಲಿ ತುಂಬ ಆಸಕ್ತಿ. ಅವರೇ ನನಗೆ ಚೆಸ್‌ನಲ್ಲಿ ಆಸಕ್ತಿ ಮೂಡಿಸಿದ್ದರು. ಆರನೇ ತರಗತಿಯಲ್ಲಿದ್ದಾಗ ನನ್ನನ್ನು ನಳಂದ ಚೆಸ್ ಅಕಾಡೆಮಿಗೆ ಸೇರಿಸಿದ್ದರು’ ಎಂದು ಅವರು ಹೇಳುತ್ತಾರೆ. ಅಲ್ಲಿ 10ನೇ ತರಗತಿಯವರೆಗೆ ಕಲಿತ ಕಿಶನ್ ನಂತರ ಸ್ವಂತವಾಗಿ ಅಭ್ಯಾಸ ನಡೆಸತೊಡಗಿದರು. ಕಣ್ಣಿನ ದೋಷವಿದ್ದರೂ ಅವರು ಮುಕ್ತ ಚೆಸ್ ಟೂರ್ನಿಗಳಲ್ಲಿ ಆಡುತ್ತ ಬೆಳೆದವರು. ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನ ಚೆಸ್ ಸ್ಪರ್ಧೆಯಲ್ಲಿ ಎರಡು ಬಾರಿ ಬೆಳ್ಳಿಯ ಪದಕ ಪಡೆದಿದ್ದಾರೆ. ರಾಜ್ಯ ಮಟ್ಟದ ಟೂರ್ನಿ ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಅಂಧರ ಟೂರ್ನಿಗಳಲ್ಲಿ ಅವರ ಸಾಧನೆ ಮೆಚ್ಚುವಂಥದ್ದೇ. 2012ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಅವರು ಮೂರನೇ ಬೋರ್ಡ್‌ನಲ್ಲಿ ಉತ್ತಮ ಸಾಧನೆಗಾಗಿ ಚಿನ್ನದ ಪದಕ ಪಡೆದಿದ್ದರು.
ರಾಷ್ಟ್ರೀಯ ಅಂಧರ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಪ್ರಶಸ್ತಿ ಗೆಲ್ಲುತ್ತಿರುವುದು ಇದು ಸತತ ಎರಡನೇ ಬಾರಿ. ಕಳೆದ ವರ್ಷ ಭುವನೇಶ್ವರದಲ್ಲೂ ಅಗ್ರಸ್ಥಾನ ಪಡೆದಿದ್ದರು. ಈ ವರ್ಷ ವಸೈಯಲ್ಲಿ ಅವರು 12 ಸುತ್ತುಗಳಲ್ಲಿ 10 ಅಂಕ ಗಳಿಸಿ, ಪ್ರಶಸ್ತಿಗೆ ನೆಚ್ಚಿನ ಆಟಗಾರನಾಗಿದ್ದ ಗುಜರಾತಿನ ದರ್ಪಣ್ ಇನಾನಿ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಆದರೆ ಉತ್ತಮ ಟೈಬ್ರೇಕ್‌ನಿಂದಾಗಿ ಕಿಶನ್‌ಗೆ ಅಗ್ರಪಟ್ಟ ಒಲಿದಿತ್ತು.
ಶ್ರೀಕೃಷ್ಣ ಉಡುಪ
ಶ್ರೀಕೃಷ್ಣ ಉಡುಪ ಅವರಿಗೂ ಹುಟ್ಟಿನಿಂದಲೇ ದೃಷ್ಟಿದೋಷ. ಸಾಲದ್ದಕ್ಕೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಎಡಗಣ್ಣಿಗೆ ತಾಗಿದ ಕಾರಣ ಇನ್ನಷ್ಟು ಸಮಸ್ಯೆ ಉಂಟಾಗಿತ್ತು. ಈ ಇತಿಮಿತಿಗಳ ನಡುವೆ ಕುವೆಂಪು ವಿ.ವಿ.ಯಲ್ಲಿ ಕಾನೂನು ಪದವಿ ಪಡೆದ ಅವರು ಕೆಲಕಾಲ ವಕೀಲಿ ವೃತ್ತಿ ನಡೆಸಿದ್ದರು. ಆ ಮಧ್ಯೆ ಮಕ್ಕಳಿಗೂ ಚೆಸ್ ಹೇಳಿಕೊಡುತ್ತಿದ್ದರು. 1997ರ ನಂತರ ವಕೀಲಿ ವೃತ್ತಿ ಕೈಬಿಟ್ಟು ಪೂರ್ಣಾವಧಿ ಚೆಸ್ ಕೋಚಿಂಗ್ ಆಯ್ದುಕೊಂಡರು. ನಳಂದ ಅಕಾಡೆಮಿ ಆರಂಭಿಸುವ ಮೊದಲು ಕೊಣಂದೂರಿನ ಶ್ರೀರಾಮ್ ಸರ್ಜಾ ಮೊದಲಾದ ಆಟಗಾರರು ತರಬೇತಾಗಿದ್ದು ಉಡುಪ ಅವರಿಂದಲೇ.
ಕುವೆಂಪು ವಿಶ್ವವಿದ್ಯಾಲಯದ ಮೊದಲ ಚೆಸ್ ಚಾಂಪಿಯನ್ ಆಗಿದ್ದ (1988–89) ಉಡುಪ, ಕೆಲವು ಮಕ್ಕಳನ್ನು ರಾಷ್ಟ್ರೀಯ ಟೂರ್ನಿಗಳಿಗೆ ಕರೆದುಕೊಂಡು ಹೋಗುವಾಗ ತಾವೂ ಅಲ್ಲಿ ಆಡಿದ್ದು ಇದೆ. ಮೊದಲ ಬಾರಿ ಅವರು ರಾಷ್ಟ್ರೀಯ ಅಂಧರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದು 2006ರಲ್ಲಿ. ಅದೇ ವರ್ಷ ಗೋವಾದಲ್ಲಿ ನಡೆದ ವಿಶ್ವ ಅಂಧರ ವೈಯಕ್ತಿಕ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು.
ಗ್ರೀಸ್‌ನಲ್ಲಿ 2008ರಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಅವರು ನಾಲ್ಕನೇ ಬೋರ್ಡ್‌ನ ಉತ್ತಮ ಸಾಧನೆಗಾಗಿ ಚಿನ್ನದ ಪದಕ ಜಯಿಸಿದ್ದರು. ಪ್ರಸ್ತುತ 1865ರ ರೇಟಿಂಗ್ ಹೊಂದಿದ್ದಾರೆ.
ಅವರ ನೆನಪಿನಲ್ಲಿ ಉಳಿಯುವುದು ಒಡಿಶಾದ ಭುವನೇಶ್ವರದಲ್ಲಿ ನಡೆದ ಅಂತರರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ. ಅದು ಓಪನ್ ಟೂರ್ನಿ ಬೇರೆ. ‘ನಾನು ಆ ಟೂರ್ನಿಯ ಮೊದಲ ಸುತ್ತಿನಲ್ಲ್ಲೇ 2525 ರೇಟಿಂಗ್ ಹೊಂದಿದ್ದ ವಿದೇಶಿ ಜಿಎಂ ಆಟಗಾರರೊಬ್ಬರ ವಿರುದ್ಧ ಡ್ರಾ ಮಾಡಿಕೊಂಡಿದ್ದೆ. ಆ ಟೂರ್ನಿಯಲ್ಲಿ ನನಗೆ 2100 ಒಳಗಿನ ರೇಟಿಂಗ್ ಆಟಗಾರರಲ್ಲಿ ಉತ್ತಮ ಸಾಧನೆಗಾಗಿ ಎರಡನೇ ಸ್ಥಾನ ಬಂತು’ ಎಂದು ಅವರು ಖುಷಿಯಿಂದ ಹೇಳುತ್ತಾರೆ.
‘ನಾನು ಮತ್ತು ಕಿಶನ್, ಗ್ರೀಸ್‌ನ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರಲು ಪ್ರಯತ್ನ ನಡೆಸುತ್ತಿದ್ದೇವೆ. ಈಗ ಪರೀಕ್ಷೆಗಳ ಸಮಯವಾಗಿದ್ದರಿಂದ ಮಕ್ಕ ಳಿಗೆ ತರಬೇತಿ ನಡೆಯುತ್ತಿಲ್ಲ. ಇದರಿಂದ ಸಿದ್ಧತೆ ನಡೆಸಲು ಅನುಕೂಲವಾಗಿದೆ’ ಎನ್ನುತ್ತಾರೆ ಉಡುಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.