ADVERTISEMENT

ಎಷ್ಟೊಂದು ಬದಲಾವಣೆ ಅಲ್ಲವೇ...?

ಕೆ.ಓಂಕಾರ ಮೂರ್ತಿ
Published 11 ಮೇ 2014, 19:30 IST
Last Updated 11 ಮೇ 2014, 19:30 IST
ಡೇಲ್‌ ಸ್ಟೇಯ್ನ್‌ (ಮಧ್ಯದಲ್ಲಿ) ಜೊತೆ ಕೆ.ಎಲ್‌.ರಾಹುಲ್‌ ಹಾಗೂ ಇರ್ಫಾನ್‌ ಪಠಾಣ್‌ ಸಂಭ್ರಮ
ಡೇಲ್‌ ಸ್ಟೇಯ್ನ್‌ (ಮಧ್ಯದಲ್ಲಿ) ಜೊತೆ ಕೆ.ಎಲ್‌.ರಾಹುಲ್‌ ಹಾಗೂ ಇರ್ಫಾನ್‌ ಪಠಾಣ್‌ ಸಂಭ್ರಮ   

‘ತವರೂರು ಜಮೈಕಾದ ಬೀದಿಗಳಲ್ಲಿ ನಾನು ಸುಲಭವಾಗಿ ತಿರುಗಾಡಬಹುದು. ಆದರೆ ಬೆಂಗಳೂರಿನ ಎಂ.ಜಿ ರಸ್ತೆಗೆ ಇಳಿಯಲು ಕಷ್ಟಪಡ ಬೇಕಾಗುತ್ತದೆ. ಬ್ರಿಗೇಡ್‌ ರಸ್ತೆಯಲ್ಲಿ ಒಂದು ಅಂಗಡಿಗೆ ಭೇಟಿ ನೀಡಿದಾಗ ಅಭಿಮಾನಿಗಳಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಡಬೇಕಾಯಿತು. ಆಟೋಗ್ರಾಫ್‌ಗಾಗಿ ಮುತ್ತಿಕೊಳ್ಳುತ್ತಾರೆ.

ವೆಸ್ಟ್‌ಇಂಡೀಸ್‌ಗಿಂತ ಇಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎನಿಸುತ್ತಿದೆ. ನಿಜ ಹೇಳಬೇಕೆಂದರೆ ಉದ್ಯಾನ ನಗರಿ ನನಗೆ ಎರಡನೇ ಮನೆ ಇದ್ದಂತೆ’
-ವೆಸ್ಟ್‌ಇಂಡೀಸ್‌ನ ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌ ಒಮ್ಮೆ ಹೇಳಿದ ಮಾತಿದು.

ಇರ್ಫಾನ್‌ ಪಠಾಣ್ ಎಸೆತವನ್ನು ಎಬಿ ಡಿವಿಲಿಯರ್ಸ್‌ ಸಿಕ್ಸರ್‌ಗೆ ಎತ್ತುತ್ತಿದ್ದಂತೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆ ಭೋರ್ಗರೆತ ನೋಡಬೇಕಿತ್ತು. ಮಿಷೆಲ್‌ ಜಾನ್ಸನ್‌ ಬೌಲಿಂಗ್‌ನಲ್ಲಿ ದೋನಿ ಔಟ್‌ ಆಗುತ್ತಿದ್ದಂತೆ ಗ್ಯಾಲರಿಯಲ್ಲಿ ಖುಷಿ ಅಲೆ. ಹೌದು, ಐಪಿಎಲ್‌ ಬಂದ ಮೇಲೆ ಕ್ರಿಕೆಟ್‌ ನೋಡುವ ರೀತಿಯೇ ಬದಲಾಗಿದೆ.

‘ಜಾಗತಿಕ ಕ್ರಿಕೆಟ್‌ ಕುಟುಂಬ’ ಎಂಬ ಪರಿಕಲ್ಪನೆ ಸೃಷ್ಟಿಯಾಗಿದೆ. ಗಡಿ, ಭಾಷೆ, ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ದೇಶದ ನಡುವಿನ ಗೆರೆಯನ್ನೇ ಅಳಿಸಿ ಹಾಕಿದಂತೆ ಭಾಸವಾಗುತ್ತಿದೆ.
ವಿದೇಶಿ ಕಂಪೆನಿಗಳಾದ ನೋಕಿಯಾ, ಸ್ಯಾಮ್‌ಸಂಗ್‌ ಮೊಬೈಲ್‌ ಸೆಟ್‌ಗಳನ್ನು ಪ್ರೀತಿಸುವಂತೆ ಕ್ರಿಸ್‌ ಗೇಲ್‌, ಡಿವಿಲಿಯರ್ಸ್‌, ಲಸಿತ್‌ ಮಾಲಿಂಗ, ಸುನಿಲ್‌ ನಾರಾಯಣ್‌ ಅವರನ್ನು ಇಲ್ಲಿನ ಕ್ರಿಕೆಟ್‌ ಪ್ರೇಮಿಗಳು ನಮ್ಮವರು ಎಂದು ಒಪ್ಪಿಕೊಂಡು ಬಿಟ್ಟಿದ್ದಾರೆ.

ಡೇವಿಡ್‌ ಮಿಲ್ಲರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಯಾವ ದೇಶದ ಆಟಗಾರರು ಎಂದು ಕೇಳಿನೋಡಿ. ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವರೆಲ್ಲಾ ಐಪಿಎಲ್‌ನಲ್ಲಿ ಯಾವ ತಂಡದಲ್ಲಿ ಆಡುತ್ತಾರೆ ಎಂಬುದು ಬಾಯಿಪಾಠವಾಗಿದೆ. ಅವರು ಪ್ರತಿ ಪಂದ್ಯದಲ್ಲಿ ಗಳಿಸಿರುವ ಸಿಕ್ಸರ್‌, ಬೌಂಡರಿಗಳ ಲೆಕ್ಕಾಚಾರ ನಾಲಿಗೆ ತುದಿಯಲ್ಲಿರುತ್ತದೆ.

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಐಪಿಎಲ್ ಎಂಬ ‘ಮೋಹಕ ಕ್ರಿಕೆಟ್’ನೊಳಗೆ ಬಂದಿಯಾಗಿದ್ದಾರೆ. ಪ್ರಮುಖವಾಗಿ ಯುವ ಜನಾಂಗಕ್ಕೆ ಈ ಮಾದರಿಯ ಕ್ರಿಕೆಟ್ ತುಂಬಾ ಇಷ್ಟವಾಗುತ್ತಿದೆ. ರಾತ್ರಿ ಊಟ ಮುಗಿಸಿ ಅತ್ತೆ ಸೊಸೆ ಕಿತ್ತಾಟದ ಧಾರಾವಾಹಿಗಳನ್ನು ನೋಡುತ್ತಿದ್ದ ಮಹಿಳೆಯರ ಚಿತ್ತ ಕ್ರಿಕೆಟ್‌ನತ್ತ ಹರಿದಿದೆ.

ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ‘ಐಪಿಎಲ್‌ ನಿಂದಾಗಿ ಭಾರತದ ಕ್ರಿಕೆಟ್‌ ಬದಲಾಗಿದೆ’ ಎಂದು      ಯುವರಾಜ್‌ ಸಿಂಗ್‌ ಹೇಳಿದ್ದು ಇದೇ ಕಾರಣಕ್ಕಾಗಿ ಇರಬಹುದು. ಅಷ್ಟೇ ಏಕೆ? ಐಪಿಎಲ್ ಟೂರ್ನಿಯು ‘ಬಡ’ ಕ್ರಿಕೆಟಿಗರ ಹೊಟ್ಟೆ ತುಂಬಿಸಿದ್ದು ಮಾತ್ರವಲ್ಲ; ಮರಳುಗಾಡಿನಲ್ಲಿ ಬಿದ್ದ ಸುವಾಸನೆ ಭರಿತ ಹೂವಿನಂತಾಗಿದ್ದ ಅದೆಷ್ಟೊ ಕ್ರಿಕೆಟಿಗರ ಪ್ರತಿಭೆಯನ್ನು ಹೊರ ಚೆಲ್ಲಿದೆ.

ಸೋಲು-ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಯುವ ಕ್ರಿಕೆಟಿಗರಿಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಈ ಟೂರ್ನಿ ಅವಕಾಶ ಮಾಡಿಕೊಟ್ಟಿದೆ.

ಸಂಜು ಸ್ಯಾಮ್ಸನ್‌, ಯಜುವೇಂದ್ರ ಚಾಹಲ್‌, ಮೋಹಿತ್‌ ಶರ್ಮ, ಜಸ್‌ಪ್ರಿತ್‌ ಬುಮ್ರಾ, ಪುಣೆಯ ಆಟೊ ಚಾಲಕನ ಪುತ್ರ ಯೋಗೇಶ್‌ ಟಕವಾಲೆ ಅವರ ಬಗ್ಗೆ ಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲವೇನೋ? ಗೂಗಲ್‌ ಸರ್ಚ್‌ ನಲ್ಲೂ ಅವರ ಒಂದೇಒಂದು ಫೋಟೊ ಸಿಗುತ್ತಿರಲಿಲ್ಲ. ಆದರೆ ಐಪಿಎಲ್‌ನಿಂದಾಗಿ ಅವರೀಗ ಮನೆಮಾತಾಗಿದ್ದಾರೆ.

ಐಪಿಎಲ್‌ನಿಂದ ಕ್ರಿಕೆಟ್‌ ಗುಣಮಟ್ಟ ಕುಸಿದು ಹೋಗಿದೆ ಎಂದು ಕೆಲವರು ಟೀಕಿಸುತ್ತಾರೆ. ಆ ಸಾಧ್ಯತೆ ಕಡಿಮೆ ಎಂಬುದಕ್ಕೆ ಒಂದು ಉದಾಹರಣೆ ನೀಡಲೇಬೇಕು. ಮುಂಬೈ ಇಂಡಿಯನ್ಸ್‌ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲು ಕ್ರಿಕೆಟ್‌ ದಿಗ್ಗಜರಾದ ಸಚಿನ್‌, ರಿಕಿ ಪಾಂಟಿಂಗ್‌, ಕುಂಬ್ಳೆ ಇದ್ದಾರೆ. ಜಾನ್‌ ರೈಟ್‌ ಈ ತಂಡದ ಮುಖ್ಯ ಕೋಚ್. ವಿಶ್ವ ಶ್ರೇಷ್ಠ ಫೀಲ್ಡರ್‌ ಜಾಂಟಿ ರೋಡ್ಸ್‌ ಈ ತಂಡದ ಫೀಲ್ಡಿಂಗ್‌ ಕೋಚ್‌.

ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರು ಎಷ್ಟೊಂದು ಪುಣ್ಯವಂತರು ಅಲ್ಲವೇ? ಈ ತಂಡದಲ್ಲಿರುವ ಕರ್ನಾಟಕದ ಸಿ.ಎಂ.ಗೌತಮ್‌ ಭಾರತ ತಂಡದಲ್ಲಿ ಆಡಿದ್ದರೂ ರೀತಿ ಮಾರ್ಗದರ್ಶನ ಸಿಗುತ್ತಿರಲಿಲ್ಲವೇನೊ? ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿರುವ ಆರ್‌.ವಿನಯ್‌ ಕುಮಾರ್‌ ಅವರಿಗೆ ಮಾರ್ಗದರ್ಶನ ನೀಡಲು ವಾಸೀಂ ಅಕ್ರಂ ಇದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬೌಲರ್‌ಗಳಿಗೆ ಅಲನ್‌ ಡೊನಾಲ್ಡ್‌ ತರಬೇತಿ ನೀಡುತ್ತಿದ್ದಾರೆ.

ರಾಜಸ್ತಾನ ರಾಯಲ್ಸ್‌ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಯುವ ಆಟಗಾರರಾದ ಸಂಜು ಸ್ಯಾಮ್ಸನ್‌, ಕರುಣ್‌ ನಾಯರ್‌ ಅವರಿಗೆ ರಾಹುಲ್ ದ್ರಾವಿಡ್‌ ಮಾರ್ಗದರ್ಶನ ನೀಡುತ್ತಿದ್ದಾರೆ. ಡೇಲ್‌ ಸ್ಟೇಯ್ನ್‌, ಡೇವಿಡ್‌ ವಾರ್ನರ್‌ ಅವರಂಥ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ಕೋಣೆ ಹಂಚಿಕೊಳ್ಳುತ್ತಿರುವ ಕೆ.ಎಲ್‌.ರಾಹುಲ್‌ ಎಂಬ ಪ್ರತಿಭೆಗೆ ಎಂಥ ಅವಕಾಶ ಲಭಿಸಿದೆ ನೋಡಿ.

ಹಣಕಾಸಿನ ವಿಷಯದಲ್ಲೂ ಆಟಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ರಣಜಿ ಆಟಗಾರರಿಗೂ ಲಕ್ಷಗಟ್ಟಲೇ ಹಣ ಸಿಗುತ್ತಿದೆ. ವಿದೇಶಿ ಆಟಗಾರರೂ ಐಪಿಎಲ್‌ ಆಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆ ದೇಶಗಳಲ್ಲಿ ವರ್ಷವಿಡೀ ಆಡಿದರೂ ಇಷ್ಟು ದುಡ್ಡು ಸಿಗುವುದಿಲ್ಲ.
1960ರಲ್ಲಿ ಒಬ್ಬ ಕ್ರಿಕೆಟಿಗ ಒಂದು ಟೆಸ್ಟ್ ಪಂದ್ಯ ಆಡಿದ್ರೆ ಅಬ್ಬಬ್ಬಾ ಎಂದರೆ 500 ರೂಪಾಯಿ ದುಡಿಯುತ್ತಿದ್ದರು.

ಆದರೆ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡುತ್ತಿರುವ ದಿನೇಶ್‌ ಕಾರ್ತಿಕ್‌ ಐಪಿಎಲ್ ಟೂರ್ನಿಯ 14 ಪಂದ್ಯಗಳಿಂದ ₨ 12.5 ಕೋಟಿ ಸಂಪಾದಿಸಲಿದ್ದಾರೆ. ಒಟ್ಟು 98 ಗಂಟೆ ಆಟ ಅಷ್ಟೆ! ಬೌಲರ್‌ ವಿನಯ್‌ ಕುಮಾರ್‌ ಒಂದು ಎಸೆತ ಹಾಕಿ ಒಂದು ಲಕ್ಷ ದುಡಿಯುತ್ತಿದ್ದಾರೆ. ರಾಬಿನ್‌ ಉತ್ತಪ್ಪ ಫಾರ್ಮ್‌ ಕಂಡುಕೊಳ್ಳಲು ಈ ಟೂರ್ನಿ ಕಾರಣವಾಗಿದೆ. ಭಾರತ ತಂಡದಲ್ಲಿ ಆಡಲು ಅವರಿಗೆ ಮತ್ತೆ ಅವಕಾಶ ಸಿಗುವಂತಿದೆ.

ಬಿಸಿಸಿಐ ಲಾಭ ಕೂಡ ದುಪ್ಪಟ್ಟಾಗಿದೆ. 2007ರಲ್ಲಿ ಬಿಸಿಸಿಐನ ಒಟ್ಟು ಆದಾಯ ₨ 235 ಕೋಟಿ. ಆದರೆ ಐಪಿಎಲ್‌ನಿಂದಾಗಿ ಈಗ ಮಂಡಳಿಯ ಒಟ್ಟು ಆದಾಯ     ₨ 1000 ಕೋಟಿ ದಾಟಿದೆ. ಉದಾಹರಣೆಗೆ 1993ರಲ್ಲಿ ಇಂಗ್ಲೆಂಡ್ ತಂಡದವರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದ್ದಿದರು. ಆ ಸರಣಿಯನ್ನು ಪ್ರಸಾರ ಮಾಡಲು ಪ್ರಸಾರದ ಹಕ್ಕನ್ನು ₨ 24 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈಗ ಒಂದು ಪಂದ್ಯದ ಪ್ರಸಾರಕ್ಕೆ ಬಿಸಿಸಿಐ ₨ 32 ಕೋಟಿ ಪಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ₨ 300 ಕೋಟಿ ತೆರಿಗೆ ಕಟ್ಟುತ್ತಿದೆ. 

ಅಂತಹ ವಾತಾವರಣ ಸೃಷ್ಟಿಸಿರುವ ಬಿಸಿಸಿಐ ಜಾಣ್ಮೆ ಮೆಚ್ಚುವಂಥದ್ದೆ. ಐಪಿಎಲ್ ಯಶಸ್ಸು ಈಗ ನಿಂತಿರುವುದು ಪ್ರೇಕ್ಷಕರಿಂದ. ಜನರು ಬಂದರೆ ಜಾಹೀರಾತುದಾರರು ಒಲವು ತೋರಿಸುತ್ತಾರೆ. ಚಾನೆಲ್‌ನ ಟಿಆರ್‌ಪಿ ಹೆಚ್ಚಾಗುತ್ತದೆ. ಬೆಟ್ಟಿಂಗ್‌, ಕಳ್ಳಾಟ, ಅವ್ಯವಹಾರ ಆರೋಪಗಳ ನಡುವೆಯೂ ಈ ರೀತಿ ಯಶಸ್ಸು ಲಭಿಸಿದೆ.

ಐಪಿಎಲ್ ಸಂಘಟಕರು, ಆಟಗಾರರು, ಕಂಪೆನಿಗಳು ಮಾತ್ರ ಲಾಭ ಗಳಿಸುತ್ತಿಲ್ಲ. ಅದೆಷ್ಟೊ ಮಂದಿಗೆ ಉದ್ಯೋಗ ಲಭಿಸಿದೆ. ಪಂದ್ಯಗಳು ಕ್ರೀಡಾಂಗಣದೊಳಗೆ ನಡೆಯುವಾಗ ಹೊರಗೆ ಕ್ರಿಕೆಟ್‌ ಪ್ರೇಮಿಗಳ ಮುಖಕ್ಕೆ ಬಣ್ಣ ಬಳಿದು, ಬಣ್ಣ ಬಣ್ಣದ ವಿಗ್‌, ಟಿ-ಶರ್ಟ್‌ ಮಾರಿ ಜನರು ಬದುಕುತ್ತಿದ್ದಾರೆ. ಜನರ ಕ್ರಿಕೆಟ್ ಪ್ರೀತಿ ಇವರ ಊಟಕ್ಕೆ ದಾರಿ ಮಾಡಿಕೊಟ್ಟಿದೆ. ಇವರು ಮುಖದ ಮೇಲೆ ಬಿಡಿಸುವ ಚಿತ್ರ, ಬಣ್ಣಬಣ್ಣದ ತಲೆಕೂದಲಿನ ವಿಗ್, ಬಾವುಟ ಕ್ರಿಕೆಟ್‌ಗೆ ಭಾವನೆಗಳನ್ನು ತುಂಬುತ್ತಿವೆ.

ಹಾಗಾಗಿ ಕ್ರಿಕೆಟ್‌ ಎಂದರೆ ಬರೀ ಆಟಗಾರ ಹಾಗೂ ಪ್ರೇಕ್ಷಕ ಮಾತ್ರವಲ್ಲ; ಇಲ್ಲಿ ತರಹೇವಾರಿ ಪಾತ್ರಧಾರಿಗಳೂ ಇದ್ದಾರೆ. ಇವರೆಲ್ಲಾ ಒಟ್ಟಿಗೆ ಸೇರಿದ ಕಾರಣ ಭಾರತದಲ್ಲಿ ಕ್ರಿಕೆಟ್ ಈ ಪರಿ ಯಶಸ್ಸು ಕಾಣಲು ಸಾಧ್ಯವಾಗಿದೆ. ಅದಕ್ಕೆ ಮುಖ್ಯ ಕಾರಣವಾಗಿರುವುದು ಐಪಿಎಲ್‌ ಪ್ರವೇಶ. ಯುವಿ ಮಾತನ್ನು ಒಪ್ಪಿಕೊಳ್ಳಲೇಬೇಕು. l

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT