ADVERTISEMENT

ಕುಸ್ತಿಯ ಗತವೈಭವದ ಕನವರಿಕೆ

ಗಿರೀಶದೊಡ್ಡಮನಿ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

63 ಹರೆಯದ ಪುಟ್ಟಸ್ವಾಮಿ ಮಣಭಾರದ ಹೂವಿನ ಹಾರ ಕೊರಳಿಗೆ ಹಾಕಿಕೊಂಡು, ಕೈಯಲ್ಲಿ ಕ್ರೀಡಾ ಜ್ಯೋತಿ ಹಿಡಿದುಕೊಂಡು ಕುಸ್ತಿ ಅಖಾಡದ ಮೂರ‌್ನಾಲ್ಕು ಸುತ್ತು ಓಡಿಬಂದಿದ್ದರೂ ಒಂದಿಷ್ಟೂ ದಣಿವು ಇರಲಿಲ್ಲ. ಅವರ ಮಾತುಗಳಲ್ಲಿ ಹೆಮ್ಮೆಯಿತ್ತು. ಸಂಭ್ರಮದ ನಗುವಿತ್ತು.

ಆದರೂ ಮಾತಿಗೆ ನಿಂತಾಗ `ಆಗಿನ ಕಾಲದ ಕುಸ್ತಿಗೂ, ಈಗಿನ ಕುಸ್ತಿಗೂ ಅಜಗಜಾಂತರ ವ್ಯತ್ಯಾಸವಿದೆ~ ಎಂಬ ನಿಟ್ಟುಸಿರೂ ಅವರಿಂದ ಬಂದಿತ್ತು.
ಮೈಸೂರಿನ ಕೆ.ಜಿ. ಕೊಪ್ಪಲಿನ ಪುಟ್ಟಸ್ವಾಮಿಯವರಿಗೆ ಈ ಬಾರಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ದಸರಾ ಕುಸ್ತಿ ಪಂದ್ಯಾವಳಿಯ ಕ್ರೀಡಾಜ್ಯೋತಿಯನ್ನು ಹಿಡಿಯುವ ಗೌರವ ಸಿಕ್ಕಿತ್ತು. 

ಇದೇ ಜ್ಯೋತಿಯನ್ನು 45 ವರ್ಷಗಳ ಹಿಂದೆ ಪುಟ್ಟಸ್ವಾಮಿಯವರ ತಂದೆ ಪೈಲ್ವಾನ್ ಚಿಕ್ಕವೀರಪ್ಪನವರು ಪ್ರಜ್ವಲಿಸಿದ್ದರು. 15 ವರ್ಷಗಳ ಹಿಂದಷ್ಟೇ ಅವರ ಚಿಕ್ಕಪ್ಪ ಪೈಲ್ವಾನ್ ಸಿದ್ಧಯ್ಯ ಕೂಡ ಜ್ಯೋತಿಯ ಗೌರವ ಪಡೆದಿದ್ದರು. ರಾಷ್ಟ್ರೀಯ ಮಾಜಿ ಕುಸ್ತಿಪಟುವಾಗಿರುವ ಪುಟ್ಟಸ್ವಾಮಿಯವರ ವಂಶದಲ್ಲಿ ಹಲವರು ಕುಸ್ತಿಪಟುಗಳು ಇದ್ದಾರೆ.
`ಗರಡಿಗಳ ನಗರಿ~ ಮೈಸೂರಿನ  ಕುಸ್ತಿ ಪರಂಪರೆಯೇ ಹಾಗೆ. ಇಲ್ಲಿಯ ಬಹುತೇಕ ಎಲ್ಲ ರಸ್ತೆಗಳೂ ಗರಡಿ ಬೀದಿಗಳೇ. ಪ್ರತಿಯೊಬ್ಬ ಪೈಲ್ವಾನನ ಮನೆಯೂ ಕುಸ್ತಿ ಪರಂಪರೆಯ ಅರಮನೆಯೇ. ಏಕೆಂದರೆ ತಾತ, ಮುತ್ತಾತಂದಿರಿಂದ ವಂಶಪಾರಂಪರ‌್ಯದಿಂದಲೂ ಕುಸ್ತಿ ಕಲೆ ಒಲಿದು ಬಂದಿದೆ. ಇದಕ್ಕೆ ಕಾರಣ ಮೈಸೂರು ಸಂಸ್ಥಾನ ಆಳಿದ ರಾಜ-ಮಹಾರಾಜರು ಸಮರ ಕಲೆಗಳಿಗೆ ನೀಡಿದ ಪ್ರೋತ್ಸಾಹ ಅದ್ಭುತವಾದದ್ದು. 

ರಣಧೀರ ಕಂಠೀರವ  ನರಸರಾಜ ಒಡೆಯರು, ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು,  ಕುಸ್ತಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯ. ದಸರಾ ಸಂದರ್ಭದಲ್ಲಿ ಬೇರೆ ಸಂಸ್ಥಾನಗಳಿಂದ ಪೈಲ್ವಾನರನ್ನು ಕರೆಸಿ ಒಂದು ತಿಂಗಳು ಅವರಿಗೆ ಊಟ, ವಸತಿ, ಉಪಚಾರಗಳನ್ನು ನೀಡುತ್ತಿದ್ದರು.

ದರ್ಬಾರ್ ಭಕ್ಷಿ. ಕಿಲ್ಲೇದಾರ್ ಭಕ್ಷಿ ಸ್ಥಾನಗಳಲ್ಲಿರುವವರು ಕುಸ್ತಿ ಮಾಡಬೇಕಾದ ಸೂಕ್ತ ಜೋಡಿಗಳನ್ನು  ನಿರ್ಧರಿಸುತ್ತಿದ್ದರು. ಅರಮನೆ ಮುಂದೆ ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೆ ಇಬ್ಬರಿಗೂ ಸಮಾನ ಗೌರವ ಸಿಗುತ್ತಿತ್ತು. 

ಇಲ್ಲಿ ಕ್ರೀಡಾ ಮನೋಭಾವವೇ ಶ್ರೇಷ್ಠ ಎಂದು ತಿಳಿದಿದ್ದ ಮಹಾರಾಜರು ಇಬ್ಬರಿಗೆ ಸಮಪ್ರಮಾಣದ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುತ್ತಿದ್ದರು.

ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ರಾಜರ ಕಾಲದಲ್ಲಿ ಸಿಗುತ್ತಿದ್ದ ಗೌರವಾದರಗಳು ಈಗ ಇಲ್ಲ. ಕುಸ್ತಿ ಮಾಡಬೇಕು, ಬಲಭೀಮರಾಗಬೇಕು ಎಂಬ ಆಸೆಯೂ ಈಗಿನ ಯುವಪೀಳಿಗೆಯಲ್ಲಿ ಇಲ್ಲ.
 
ಸಾಮು ಹೊಡೆಯುವ ಕೈಯಲ್ಲಿ ಮೊಬೈಲ್‌ಫೋನ್ ಬಂದಿದೆ, ಬೆಳಗಿನ ಜಾವ ಏಳುವ ರೂಢಿ ತಪ್ಪಿಸಿರುವ ಟಿ ವಿ, ಕಂಪ್ಯೂಟರ್‌ಗಳು ಮನೆಯ ಪಡಸಾಲೆಯಲ್ಲಿವೆ. ಮಣ್ಣಿನ ಅಂಕಣದ ಕುಸ್ತಿಗಿಂತ  ರಂಗುರಂಗಿನ ಕ್ರಿಕೆಟ್ ಆಕರ್ಷಕವಾಗಿ ಕಾಣುತ್ತಿದೆ.

ವೆುಸೂರಿನ ಕೀರ್ತಿ ಹೆಚ್ಚಿಸಿದ ಪೈಲ್ವಾನರಾದ  ಪಾಪಯ್ಯ, ಶ್ರೀಕಂಠು, ಶ್ರೀನಿವಾಸಣ್ಣನವರು, ದೊಡ್ಡತಿಮ್ಮಯ್ಯ,  ಚನ್ನಣ್ಣ, ಸಿದ್ಧಣ್ಣ ಆಚಾರ್, ಚಿನ್ನಕೃಷ್ಣಪ್ಪ, ನಾಗರಾಜ್, ಚಿರತೆಯಂತೆ ಚಾಕಚಕ್ಯತೆಯಿಂದ ಕುಸ್ತಿ ಮಾಡುತ್ತಿದ್ದ ಶಿವಣ್ಣ, ರುದ್ರ ಮೂಗರಂತಹವರ ಹೆಸರುಗಳು ಮಾತ್ರ ಈಗ ಉಳಿದಿವೆ.
 
ಅವರಂತೆ ದೇಹ ಕಟ್ಟಿ, ದೇಶದ ಹೆಸರನ್ನು ದಿಗಂತದಲ್ಲಿ ಬರೆಯುವ ಪೈಲ್ವಾನರನ್ನು ಹುಡುಕುವ ಕಾಯಕ ಪ್ರತಿ ನಾಡಹಬ್ಬದಲ್ಲಿಯೂ ನಡೆಯುತ್ತಲೇ ಇದೆ.
 
`ದೇವರು ಕಾಪಾಡುತ್ತಾನೆ. ಗರಡಿ ಮನೆಗೆ ಬರುವ ಹುಡುಗರು ಇವತ್ತೂ ಇದ್ದಾರೆ. ಮುಂದೆ ಇನ್ನೂ ಹೆಚ್ಚುತ್ತಾರೆ~ ಎನ್ನುವ ಪೈಲ್ವಾನ್ ಪುಟ್ಟಸ್ವಾಮಿಯವರ ಮಾತುಗಳು ಅಖಾಡಾದಲ್ಲಿ ರಿಂಗಣಿಸುತ್ತಲೇ ಇರುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.