ADVERTISEMENT

ಕ್ರೀಡಾಪಟುಗಳೂ ರಾಜಕಾರಣವೂ...

ಎನ್.ಜಗನ್ನಾಥ ಪ್ರಕಾಶ್
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಕ್ರೀಡಾಪಟುಗಳೂ ರಾಜಕಾರಣವೂ...
ಕ್ರೀಡಾಪಟುಗಳೂ ರಾಜಕಾರಣವೂ...   

ರಾಜಕೀಯ ಎನ್ನುವುದು ಯಾರನ್ನೂ ಬಿಡದ ಮಾಯೆ.  ಆರಂಭದಲ್ಲಿ ರಾಜಮಹಾರಾಜರಿಗೆ ಮಾತ್ರ ಸೀಮಿತವಾಗಿದ್ದ ರಾಜಕಾರಣವನ್ನು ಈಗ ಎಲ್ಲರೂ      ಇಷ್ಟಪಡುತ್ತಾರೆ!  ಇದಕ್ಕೆ ಕಾರಣಗಳನ್ನು ವಿವರಿಸಬೇಕಿಲ್ಲ.  

ಕ್ರೀಡಾಪಟುಗಳೂ ಇದಕ್ಕೆ ಹೊರತಲ್ಲ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದವರು, ಪದಕ ಪಡೆದವರೂ ರಾಜಕೀಯಕ್ಕೆ ಇಳಿದ ನಿದರ್ಶನಗಳು ಹಲವು.  ಅವರಲ್ಲಿ ಸಾರ್ವಜನಿಕ ರಂಗದಲ್ಲಿ ಬಹಳ ಎತ್ತರಕ್ಕೇರಿದ್ದಾರೆ. ಒಲಿಂಪಿಕ್ಸ್ ಮಾತ್ರವಲ್ಲ ವಿಶ್ವ ಈಜು ಸ್ಪರ್ಧೆಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ವರ್ಷ ಪಾರಮ್ಯ ಸಾಧಿಸಿದ್ದ ಡಾನ್ ಫ್ರೇಸರ್‌ರಾಜಕೀಯ ರಂಗದಲ್ಲೂ ಛಾಪು ಮೂಡಿಸಿದಾಕೆ.

ಈಕೆ ತನ್ನ ಈಜು ವೃತ್ತಿ ಬದುಕಿನಲ್ಲಿ 39 ದಾಖಲೆಗಳನ್ನು  ಸ್ಥಾಪಿಸಿದ ದಿಟ್ಟೆ.  ಸತತವಾಗಿ ಮೂರು ಒಲಿಂಪಿಕ್ಸ್        ಕೂಟಗಳಲ್ಲಿ  ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ ಡಾನ್        ಫ್ರೇಸರ್ ತಲಾ 4 ಚಿನ್ನ, 4 ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದರು.  100 ಮೀಟರ್ಸ್ ಫ್ರಿ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಡಾನ್ ಮಾಡಿದ್ದ ದಾಖಲೆಯನ್ನು 15 ವರ್ಷ ಯಾರೂ ಮುರಿದಿರಲಿಲ್ಲ!

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಸಂಘಟಕರನ್ನು ಎದುರು ಹಾಕಿಕೊಂಡು ವಿವಾದಕ್ಕೆ ಸಿಕ್ಕಿಕೊಂಡ ಡಾನ್ ಫ್ರೇಸರ್ ಹತ್ತು ವರ್ಷ ನಿಷೇಧಕ್ಕೂ ಒಳಗಾದರು.  ಈಜು `ವೃತ್ತಿ~ಯಿಂದ ಸ್ವಲ್ಪ ಬೇಗ ನಿವೃತ್ತಿ ಘೋಷಿಸಿದ ಡಾನ್ ರಾಜಕಾರಣಕ್ಕೆ ಕಾಲಿಟ್ಟರು.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪಾರ್ಲಿಮೆಂಟಿನ ಸದಸ್ಯೆಯಾದ (1988-1991) ಈಕೆ ಸಿಡ್ನಿಯಲ್ಲಿ ಒಲಿಂಪಿಕ್ಸ್ ನಡೆದ ಸಂದರ್ಭದಲ್ಲಿ ಒಲಿಂಪಿಕ್ಸ್    ಜ್ಯೋತಿಯನ್ನು ಕ್ರೀಡಾಂಗಣಕ್ಕೆ ಹೊತ್ತು ತರುವ    ಗೌರವವನ್ನು ಪಡೆದುಕೊಂಡರು.

ರೋಮ್ ಒಲಿಂಪಿಕ್ಸ್ (1960)ನ ಸ್ಕೇಟಿಂಗ್ ಅಂಗಳದಲ್ಲಿ ಪ್ರೌಢಿಮೆ ತೋರಿದ್ದ ಕೆನಡಾದ ಒಟ್ಟೊ ಜಲಿನಿಕ್ ನಂತರದ ದಿನಗಳಲ್ಲಿ ರಾಜಕಾರಣಕ್ಕಿಳಿದು ಕೊನೆಗೆ ಕೆನಡಾ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು.

ಬಿಲ್ಲಿ ಬ್ರಾಡ್ಲೆ ಅಮೆರಿಕಾ ದೇಶದ ಅಗ್ರ ಮಾನ್ಯ       ಬಾಸ್ಕೆಟ್‌ಬಾಲ್ ಆಟಗಾರ.  1964ರಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಅಮೆರಿಕ ತಂಡದ ನಾಯಕ.  ಬಿಲ್ಲಿ 1979ರಿಂದ 1997ರ ವರೆಗೆ ಅಮೆರಿಕಾದ ಸೆನೆಟ್ ಸದಸ್ಯರಾಗಿದ್ದರು.

ಇನ್ನೂರೈವತ್ತಕ್ಕೂ ಹೆಚ್ಚು ಪೌಂಡ್ ತೂಕವಿದ್ದ     ಎದುರಾಳಿಯನ್ನು ಎತ್ತಿ ಒಗೆದು ಗ್ರೀಕೋ ರೋಮನ್ ಕುಸ್ತಿಯಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದ ರಷ್ಯಾದ ಅಲೆಗ್ಸಾಂಡರ್ ಕರೇಲಿನ್ 1980 ರಿಂದ ಸತತವಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವರು.  1987 ರಿಂದ       2000 ವರೆಗೆ ಇವರು ಯಾವುದೇ ಪಂದ್ಯದಲ್ಲೂ ಸೋತಿರಲಿಲ್ಲ! ರಷ್ಯಾದ ಪ್ರಧಾನಿಯಾಗಿದ್ದ ವಾಡ್ಲಿಮಿರ್ ಪುಟಿನ್ ಅವರ ಆಪ್ತ ಸ್ನೇಹಿತನಾದ ಕರೇಲಿನ್ ಈಗ ರಷ್ಯಾದ ದುಮಾ (ಶಾಸಕಾಂಗ)ದ ಸದಸ್ಯ.

ಸೆಬಾಸ್ಟಿನ್ ಕೊ ಪ್ರಸ್ತುತ ಲಂಡನ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಅಧ್ಯಕ್ಷರು.  ಕನ್ಸರ್‌ವೇಟೀವ್ ಪಕ್ಷದ            ಮುಖಂಡರಾಗಿರುವ ಇವರು ಬ್ರಿಟಿಷ್ ಪಾರ್ಲಿಮೆಂಟ್‌ನ ಮಾಜಿ ಸದಸ್ಯ ಕೂಡ.  ಇವರು

ಎರಡು ಒಲಿಂಪಿಕ್ಸ್‌ಗಳಲ್ಲಿ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.