ADVERTISEMENT

ಕ್ರೀಡಾಸ್ಪರ್ಧೆ ವೀಕ್ಷಣೆಗೆ ಮಹಾನವಮಿ ದಿಬ್ಬ

ದಸರಾ ಕ್ರೀಡೆ ನಡೆದು ಬಂದ ಹಾದಿ...

ಜೆ.ಪಿ.
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ವಿಜಯನಗರ ಸಾಮ್ರಾಜ್ಯವು ಭಾರತದ ಶಕ್ತಿ ಸಾಮರ್ಥ್ಯವನ್ನು, ಸಮೃದ್ಧತೆಯನ್ನು ಜಗತ್ತಿಗೆ ತೋರಿಸಿದ ಹೆಗ್ಗಳಿಕೆ ಹೊಂದಿದೆ.
ಈ ಸಾಮ್ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡಲಾಗಿತ್ತು.

ಪ್ರತಿ ವರ್ಷವೂ ಪ್ರಜೆಗಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ನೀಡುವ ಪರಿಪಾಠ ಇತ್ತು. ದಸರಾ ಉತ್ಸವ ಬಂದಿತೆಂದರೆ ನಾಡಿನಾದ್ಯಂತ ಕ್ರೀಡಾ ಪಟುಗಳಿಗೆ ಇನ್ನಿಲ್ಲದ ಸಂಭ್ರಮ.

ಆ ಒಂಬತ್ತು ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೇ ಹೆಚ್ಚು ಒತ್ತು ನೀಡಲಾಗುತಿತ್ತು. ಇವುಗಳ ನಡುವೆ ಕ್ರೀಡಾ ಚಟುವಟಿಕೆಗಳು ಜನಪ್ರಿಯಗೊಳ್ಳುತ್ತಾ ಬಂದವು.

ಮಲ್ಲಯುದ್ಧ, ಕುದುರೆ ಸವಾರಿ, ಕತ್ತಿವರಸೆ, ಮಲ್ಲಕಂಭ ಸೇರಿದಂತೆ ವಿವಿಧ ಬಗೆಯ ಕಸರತ್ತುಗಳು, ಇವೇ ಮುಂತಾದವು ಆ ಕಾಲಕ್ಕೆ ಪ್ರೋತ್ಸಾಹ ಪಡೆದುಕೊಂಡ ದೇಸೀಯ ಕ್ರೀಡೆಗಳು.

ನಾಡಿನಾದ್ಯಂತ ಕ್ರೀಡೆಗಳಲ್ಲಿ ಆಸಕ್ತರಾದವರಿಗೆ ಸ್ಪರ್ಧಾಕೂಟಗಳನ್ನು ನವರಾತ್ರಿ ಸಂದರ್ಭದಲ್ಲಿ ಏರ್ಪಡಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ ವಿಜಯನಗರದ ಅರಸರಲ್ಲಿ ಶ್ರೀಕೃಷ್ಣದೇವರಾಯರು ಪ್ರಮುಖರು.

ವಿಜಯನಗರ ಸಾಮ್ರಾಜ್ಯಕ್ಕೆ ಆಗ ಭೇಟಿ ನೀಡಿದ್ದ ಪ್ರವಾಸಿಗರು ದಾಖಲಿಸಿರುವ ವಿಷಯಗಳಲ್ಲಿ ಕ್ರೀಡೆಗಳೂ ಪ್ರಮುಖವಾಗಿ ಕಾಣಿಸುತ್ತವೆ.  ಅಂಗಸಾಧನೆಗೆ, ಪ್ರತಿಯೊಬ್ಬ ಪುರುಷನ ಕಟ್ಟುಮಸ್ತಾದ ದೇಹದ ಬೆಳವಣಿಗೆಗೆ ವಿಜಯನಗರ ಪ್ರಭುತ್ವ ನೀಡುತ್ತಿದ್ದ ಆದ್ಯತೆಯ ಮುಖ್ಯ ಅಂಶಗಳು ಬೆಳಕಿಗೆ ಬಂದಿರುವುದೇ ವಿದೇಶಿಯರ ಪ್ರವಾಸ ಕಥನಗಳಲ್ಲಿ.

ಕ್ರಿ.ಶ.1531ರ ಆಸುಪಾಸಿನಲ್ಲಿ ದಸರಾ ಕ್ರೀಡಾ ಕೂಟದ ವಿಭಿನ್ನ ಸ್ಪರ್ಧೆಗಳು ಹೊಸ ರಂಗು ಪಡೆದುಕೊಂಡಿದ್ದವು.

ಆ ದಿನಗಳಲ್ಲಿ ಇಂತಹ ಸ್ಪರ್ಧಾಕೂಟಗಳನ್ನು ವೀಕ್ಷಿಸಲಿಕ್ಕಾಗಿಯೇ ಎತ್ತರವಾದ ವೇದಿಕೆಯೊಂದನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ಅರಸರು, ಆಮಂತ್ರಿತರು, ನಾಡ ಪ್ರಮುಖರು ಕುಳಿತು ಸ್ಪರ್ಧೆಗಳನ್ನು ವೀಕ್ಷಿಸುತ್ತಿದ್ದರು. ಅದನ್ನೇ ಮಹಾನವಮಿ ದಿಬ್ಬ ಎಂದು ಕರೆಯಲಾಯಿತು. ಈ ಬಗ್ಗೆ ಶಿಲಾಶಾಸನಗಳಲ್ಲಿ, ಶಿಲ್ಪಕಲೆಗಳಲ್ಲಿ ಸಾಕಷ್ಟು ವಿವರಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.