ADVERTISEMENT

ಗ್ರಾಮೀಣ ಪ್ರತಿಭೆಯ ದಿಟ್ಟ ಸಾಧನೆ

ಪವಿತ್ರ ಮೊತ್ತಹಳ್ಳಿ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST
ಗ್ರಾಮೀಣ ಪ್ರತಿಭೆಯ ದಿಟ್ಟ ಸಾಧನೆ
ಗ್ರಾಮೀಣ ಪ್ರತಿಭೆಯ ದಿಟ್ಟ ಸಾಧನೆ   

`ಪ್ರತಿಭೆ ಎಂಬುದು ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಬೇಕು ಮತ್ತು ಪ್ರೋತ್ಸಾಹಿಸಿ ಗುರಿ ಮುಟ್ಟುವ ತನಕ ಕೈಬಿಡದೆ ಪೋಷಿಸಿದರೆ ಭವಿಷ್ಯದಲ್ಲಿ ಮಹೋನ್ನತ ಸಾಧನೆ  ಮಾಡಲು ಸಾಧ್ಯವಾಗುತ್ತದೆ. ಅದಕ್ಕೆ ನಾನೇ ಸಾಕ್ಷಿ~ ಎಂದು ಅತ್ಯಂತ ಆತ್ಮ ವಿಶ್ವಾಸದಿಂದ ಹೇಳುತ್ತಲೇ `ಪ್ರಜಾವಾಣಿ~ ಯೊಂದಿಗೆ ಮಾತನಾಡಿದರು ವಾಲಿಬಾಲ್ ಪಟು ಕೆ.ಪಿ.ಶ್ರುತಿ.

ಕ್ಯಾತ ಘಟ್ಟದ  ಕೆ.ಪಿ.ಶ್ರುತಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ, ನಂತರ  ಪಿ.ಯು.ಸಿ. ದೊಡ್ಡಿ ಕಾಲೇಜಿನಲ್ಲಿ ಓದುತ್ತಾ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ ಅನುಭವ ಅವರದ್ದು. ಪ್ರಸ್ತುತ ಮಂಡ್ಯ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ.

`ಜೀವನದಲ್ಲಿ ಶಿಸ್ತು ಅಳವಡಿಸಿ  ಕೊಂಡರೆ, ಅದು ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಸತತ ಪರಿಶ್ರಮ ನನಗೆ ಗೆಲುವು ತಂದು ಕೊಟ್ಟಿದೆ. ಈ ಯಶಸ್ಸಿನ ಹಾದಿಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ನಿತ್ಯ ತರಬೇತಿ, ಕಠಿಣ ಪರಿಶ್ರಮ ಅಗತ್ಯ~ ಎನ್ನುವ ಸತ್ಯ ಮನವರಿಕೆಯಾಗಿದೆ ಎನ್ನುವುದು ಶ್ರುತಿ ಅವರ ಸ್ಪಷ್ಟ ನುಡಿ.

ಯಶಸ್ಸಿನ ಹಾದಿಯ ಹೆಜ್ಜೆಯಲ್ಲಿ ಬೆಂಬಲ ನೀಡಿದ್ದು ದೈಹಿಕ ಶಿಕ್ಷಕರಾದ ಮಲ್ಲಯ್ಯರವರ ಪ್ರೇರಕ ಮಾತುಗಳು. ಕೇವಲ ಕೊಕ್ಕೊ ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನನ್ನನ್ನು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಹಾದಿ ತೋರಿದರು ಎಂದು ಶ್ರುತಿ ಸಂತೋಷದಿಂದ ಹೇಳುತ್ತಾರೆ.
 
ಶ್ರುತಿ ವಾಲಿಬಾಲ್ ಜೊತೆಗೆ ಥ್ರೋಬಾಲ್‌ನಲ್ಲಿಯು ರಾಜ್ಯ ಹಾಗೂ ಕಾಲೇಜು ಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. 2008ರಲ್ಲಿ ಇಂದೋರ್‌ನಲ್ಲಿ ನಡೆದ ಥ್ರೋಬಾಲ್ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ಬೆಳ್ಳಿ. 2009-10ರಲ್ಲಿ ಮೈಸೂರಿನಲ್ಲಿ ನಡೆದ ವಾಲಿಬಾಲ್ ಟೂರ್ನಿ ಯಲ್ಲಿ ಮೂರು ಬೆಳ್ಳಿ. 2010-11 ಅಂತರ ರಾಜ್ಯ ಕಾಲೇಜು ಟೂರ್ನಿಯಲ್ಲಿ ಎರಡು ಬೆಳ್ಳಿ ಪದಕವನ್ನು ಅವರು ಜಯಿಸಿದ್ದಾರೆ.

 2008ರಲ್ಲಿ ನಡೆದ  ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಟೂರ್ನಿಯಲ್ಲಿ ಪ್ರಶಸ್ತಿ, ಕೇರಳದಲ್ಲಿ ನಡೆದ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ, 2009 ರಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದಲ್ಲಿ ಗೆಲುವು ಹೀಗೆ ಸಾಕಷ್ಟು ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಜಯಿಸಿದ್ದಾರೆ. ಅಖಿಲ ಭಾರತ ವಿಶ್ವ ವಾಲಿಬಾಲ್ ಟೂರ್ನಿಯಲ್ಲಿ ಸಹ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೇವಲ ಕ್ರೀಡಾ ಕ್ಷೇತ್ರ ಮಾತ್ರವಲ್ಲದೇ ಸಾಹಿತ್ಯ ಸಂಬಂಧಿತ ಓದು, ಚಾರಣ, ಬಿಡುವಿನ ಸಮಯದಲ್ಲಿ ಗ್ರಾಮೀಣ ಮಕ್ಕಳಿಗೆ ಕ್ರೀಡೆ ಹೇಳಿಕೊಡುವುದು ಹೀಗೆ ವಿವಿಧ ಚಟುವಟಿಕೆಗಳನ್ನು ಅವರು ರೂಢಿಸಿಕೊಂಡಿದ್ದಾರೆ. 

`ಗುರುಗಳೆಲ್ಲರ ನೆರವಿನಿಂದ ಕ್ರೀಡಾ ಕ್ಷೇತ್ರದಲ್ಲಿ ಅಲ್ಪ ಸಾಧನೆಯನ್ನಾದರೂ ಮಾಡಲು ನೆರವಾಯಿತು. ಪದವಿ ಮುಗಿಸಿ ದೈಹಿಕ ಶಿಕ್ಷಣ ಪಡೆದು ಮಕ್ಕಳಿಗೆ ತರಬೇತಿ ನೀಡಿ ಅವರಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು~ ಎನ್ನುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ಶ್ರುತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.