ADVERTISEMENT

ಜಗತ್ತಿನಂಗಳದಲ್ಲಿ ಮಿನುಗುತಿರುವ ತಾರೆ...

ಕೆ.ಓಂಕಾರ ಮೂರ್ತಿ
Published 13 ನವೆಂಬರ್ 2011, 19:30 IST
Last Updated 13 ನವೆಂಬರ್ 2011, 19:30 IST
ಜಗತ್ತಿನಂಗಳದಲ್ಲಿ ಮಿನುಗುತಿರುವ ತಾರೆ...
ಜಗತ್ತಿನಂಗಳದಲ್ಲಿ ಮಿನುಗುತಿರುವ ತಾರೆ...   

ಅಶ್ವಿನಿ-ಜ್ವಾಲಾ...! 
 -ವಿಶ್ವ ಬ್ಯಾಡ್ಮಿಂಟನ್‌ನ  ಡಬಲ್ಸ್‌ನಲ್ಲಿ ಸುದ್ದಿಮಾಡುತ್ತಿರುವ ಜೋಡಿ ಇದು. ಹೋದಲೆಲ್ಲಾ ಯಶಸ್ಸಿನ ಹೆಜ್ಜೆ ಇಡುತ್ತಿದೆ. ಈ ಜೋಡಿಯ ಪ್ರಮುಖ ಗುರಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವುದು. ಅವರಲ್ಲಿ ಅಶ್ವಿನಿ ಪೊನ್ನಪ್ಪ ಕರ್ನಾಟಕದ ಹುಡುಗಿ ಎಂಬುದು ಹೆಮ್ಮೆಯ ವಿಚಾರ.

ಎರಡೂವರೆ ವರ್ಷದಿಂದ ಮಹಿಳೆಯರ ಡಬಲ್ಸ್ ನಲ್ಲಿ ಜೊತೆಗೂಡಿ ಆಡುತ್ತಿರುವ ಅಶ್ವಿನಿ ಹಾಗೂ ಹೈದರಾಬಾದ್‌ನ ಜ್ವಾಲಾ ಗುಟ್ಟಾ ಮೂಡಿಸಿರುವ ಭರವಸೆ ಅದ್ಭುತ.  ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಈ ಜೋಡಿ ಈಗ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ.

ಲಂಡನ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಮರೆಯಲಾಗದ ಕ್ಷಣ.

ಏಕೆಂದರೆ 28 ವರ್ಷಗಳ ಬಳಿಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆ ಅದು. ಅದಕ್ಕೂ ಮೊದಲು 1983ರಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಜಯಿಸಿದ್ದರು. ಅಷ್ಟು ವರ್ಷಗಳ ಪದಕದ ಬರವನ್ನು ಅಶ್ವಿನಿ ಹಾಗೂ ಜ್ವಾಲಾ ಮರೆಯಾಗಿಸಿದ್ದರು.

22 ವರ್ಷ ವಯಸ್ಸಿನ ಅಶ್ವಿನಿ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಶ್ವಿನಿ ಒಲಿಂಪಿಕ್ಸ್ ಕನಸು ಹಾಗೂ ಜ್ವಾಲಾ ಗುಟ್ಟಾ ಅವರೊಂದಿಗಿನ ಹೊಂದಾಣಿಕೆ ಬಗ್ಗೆ ಮಾತನಾಡಿದ್ದಾರೆ.

ಜ್ವಾಲಾ ಗುಟ್ಟಾ ಹಾಗೂ ನಿಮ್ಮ ನಡುವಿನ ಯಶಸ್ಸಿನ ಗುಟ್ಟೇನು?
ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅತ್ಯುತ್ತಮ ಹೊಂದಾಣಿಕೆ ಇದೆ. ಅಭ್ಯಾಸದ ವೇಳೆ ಕೂಡ ನಾವು ಹೊಂದಾಣಿಕೆಯ ಆಟಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಪ್ರತಿ ಪಂದ್ಯಕ್ಕೆ ಮುನ್ನ ಸೂಕ್ತ ಯೋಜನೆ ರೂಪಿಸುತ್ತೇವೆ. ಖುಷಿಯಿಂದ ಆಡುತ್ತೇವೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆಯೇ?
ಖಂಡಿತ ಇದೆ. ಅದೇ ಈಗ ನಮ್ಮ ಪ್ರಮುಖ ಗುರಿ. ಅದಕ್ಕಾಗಿ ನಾವಿನ್ನೂ ಅರ್ಹತೆ ಗಿಟ್ಟಿಸಬೇಕಾಗಿದೆ. ಒಲಿಂಪಿಕ್ಸ್‌ಗೂ ಮುನ್ನ ನಾವು ಹಲವು ಟೂರ್ನಿಗಳಲ್ಲಿ ಆಡುತ್ತಿದ್ದೇವೆ. ವಿಶ್ವ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ 10ರೊಳಗೆ ಸ್ಥಾನ ಗಿಟ್ಟಿಸಿದರೆ ದಾರಿ ಸುಗಮವಾಗಲಿದೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಕ್ಷಣ ಹೇಗಿತ್ತು?
ಇಂತಹ ಸಾಧನೆ ಮಾಡಲು ನನಗೆ ಸಾಧ್ಯವಾಯಿತಲ್ಲ ಎಂಬುದೇ ದೊಡ್ಡ ಖುಷಿ. ಇದು ನನಗೆ ಸ್ಫೂರ್ತಿ ನೀಡಿದ ಕ್ಷಣ ಕೂಡ. ಆ ಕ್ಷಣವನ್ನು ನಾನು ಯಾವತ್ತೂ ಮರೆಯಲಾರೆ.

ಹೊಸ ಪ್ರಯೋಗ ಎನಿಸಿರುವ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಬಗ್ಗೆ ಹೇಳಿ?
ಇದೊಂದು ವಿಶೇಷ ಲೀಗ್. ಯುವ ಪ್ರತಿಭೆಗಳು ತಮ್ಮ ಪ್ರದರ್ಶನ ತೋರಲು ಇದೊಂದು ಅತ್ಯುತ್ತಮ ವೇದಿಕೆ. ಇದೊಂದು ಅವಕಾಶ ಕೂಡ. ಜೊತೆಗೆ ರಾಜ್ಯದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಐಪಿಎಲ್ ಹಾಗೂ ಕೆಪಿಎಲ್ ರೀತಿ ಬ್ಯಾಡ್ಮಿಂಟನ್ ಲೀಗ್ ಯಶಸ್ವಿಯಾಗುತ್ತಾ?
ಯಶಸ್ವಿಯಾಗುತ್ತೆ ಎಂಬ ವಿಶ್ವಾಸ ನನ್ನಲ್ಲಿದೆ. ಆಟಗಾರರು ಈ ಲೀಗ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಇದು ಯಾವುದೇ ಟೂರ್ನಿಯ ಯಶಸ್ಸಿಗೆ ಮೊದಲ ಮೆಟ್ಟಿಲು.

ನೀವು ಪಾಲ್ಗೊಳ್ಳುತ್ತಿರುವ ಮುಂದಿನ ಅಂತರರಾಷ್ಟ್ರೀಯ ಟೂರ್ನಿ?
ಹಾಂಕಾಂಗ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದೆ. ಹಾಗಾಗಿ ನಾನು ಕೆಬಿಎಲ್‌ನ ಎಲ್ಲಾ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. 
 

             
    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT