ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕರ್ನಾಟಕ ತೋರಿದ ಸಾಧನೆ ಅಮೋಘವಾದುದು. ಪುರುಷರ ಹಾಗೂ ಮಹಿಳೆಯರ ತಂಡಗಳು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಹಲವು ಸಲ ಪ್ರಶಸ್ತಿ ಗೆದ್ದುಕೊಂಡಿವೆ. ಈ ಕ್ರೀಡೆಯಲ್ಲಿ ಪಳಗಿದ ಸಾಕಷ್ಟು ಸ್ಪರ್ಧಿಗಳನ್ನು ನಮಗೆ ಕಾಣಲು ಸಾಧ್ಯ.
ಆದರೆ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ತಕ್ಕಮಟ್ಟಿನ ಪ್ರಚಾರ ದೊರೆಯುತ್ತಿಲ್ಲ. ಇದರಿಂದ ಈ ಕ್ರೀಡೆಯಲ್ಲಿ ಎಷ್ಟೇ ಸಾಧನೆ ಮಾಡಿದರೂ, ಸ್ಪರ್ಧಿಗಳು ಬೆಳಕಿಗೆ ಬರುತ್ತಿಲ್ಲ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಚಾಂಪಿಯನ್ ಆಗಿತ್ತು.
ಟೂರ್ನಿಯುದ್ದಕ್ಕೂ ಸೊಗಸಾದ ಪ್ರದರ್ಶನ ನೀಡಿದ ಕರ್ನಾಟಕ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಜಯ ಪಡೆದಿತ್ತು. ರಾಜ್ಯ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರರಲ್ಲಿ ತುಮಕೂರಿನ ಎಸ್. ದಿವಾಕರ್ ಒಬ್ಬರು. ಅರ್ಹವಾಗಿ ಅವರು `ಸ್ಟಾರ್ ಆಫ್ ಇಂಡಿಯಾ~ ಗೌರವ ತಮ್ಮದಾಗಿಸಿಕೊಂಡಿದ್ದರು.
ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿರುವ ದಿವಾಕರ್ ರಾಜ್ಯದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಪ್ರತಿಭೆ. ತುಮಕೂರಿನ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಲ್ಯಾಬ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯ ಮೇಲೆ ಎಲ್ಲಿಲ್ಲದ ಪ್ರೀತಿ.
ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ `ಸ್ಟಾರ್ ಆಫ್ ಇಂಡಿಯಾ~ ಗೌರವ ಪಡೆದುಕೊಂಡದ್ದು ಅವರ ಇತ್ತೀಚಿಗಿನ ಸಾಧನೆ. ತಮ್ಮ 16ರ ಹರೆಯದಲ್ಲಿ ಬಾಲ್ ಬ್ಯಾಡ್ಮಿಂಟನ್ ಆಡಲು ಶುರುಮಾಡಿದ ದಿವಾಕರ್ ಅಲ್ಪ ಸಮಯದಲ್ಲೇ ಈ ಕ್ರೀಡೆಯ ಎಲ್ಲ ಕಲೆಗಳನ್ನು ಕರಗತಮಾಡಿಕೊಂಡರು.
ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ರಾಜ್ಯ ಜೂನಿಯರ್ ತಂಡದಲ್ಲಿ ಬಹಳ ಬೇಗನೇ ಸ್ಥಾನ ಲಭಿಸಿತು. ಎರಡು ಸಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ದೊರೆಯಿತು. 1990-2000 ರಲ್ಲಿ ಜೈಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಜೂನಿಯರ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ `ಸ್ಟಾರ್ ಆಫ್ ಇಂಡಿಯಾ~ ಪ್ರಶಸ್ತಿಯನ್ನೂ ಪಡೆದಿದ್ದರು.
ಇದೀಗ ಸೀನಿಯರ್ ವಿಭಾಗದಲ್ಲಿ ಅಂತಹದೇ ಸಾಧನೆ ಪುನರಾವರ್ತಿಸಿದ ಸಂಭ್ರಮದಲ್ಲಿದ್ದಾರೆ. ದಿವಾಕರ್ ಕಳೆದ ಐದು ವರ್ಷಗಳಿಂದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಜೂನಿಯರ್ ವಿಭಾಗದಲ್ಲಿ ನಾಲ್ಕು ಸಲ ರಾಜ್ಯ ತಂಡದ ಪರ ಆಡಿದ್ದರು.
ಇವರು `ಗೆಸ್ಟ್ ಪ್ಲೇಯರ್~ ಆಗಿ ಹಿಂದೂಸ್ತಾನ್ ಮೆಷಿನ್ ಟೂಲ್ಸ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅದರ ಜೊತೆಗೆ ತುಮಕೂರು ಜಿಲ್ಲಾ ತಂಡದ ಪರ ಆಡಿದ್ದಾರೆ. ರಾಜ್ಯಮಟ್ಟದಲ್ಲಿ ನಡೆದ ಟೂರ್ನಿಗಳಲ್ಲಿ `ಶ್ರೇಷ್ಠ ಆಟಗಾರ~ ಎಂಬ ಗೌರವ ಇವರನ್ನು ಹಲವು ಸಲ ಹುಡುಕಿಕೊಂಡು ಬಂದಿದೆ.
ಇದರ ಜೊತೆಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಇವರ ಗರಡಿಯಲ್ಲಿ ಪಳಗಿದ್ದ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ವಿಟಿಯು ಅಂತರ ಕಾಲೇಜು ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕು ಸಲ ಕಿರೀಟ ಮುಡಿಗೇರಿಸಿಕೊಂಡಿದೆ.
ಇನ್ನಷ್ಟು ವರ್ಷ ಈ ಕ್ರೀಡೆಯಲ್ಲಿ ಮುಂದುವರಿಯಬೇಕೆಂಬ ಹಂಬಲ ದಿವಾಕರ್ ಅವರದ್ದು. `ಸ್ಟಾರ್ ಆಫ್ ಇಂಡಿಯಾ~ ಗೌರವ ಆ ನಿಟ್ಟಿನಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.