`ಶೂಟಿಂಗ್‌ಗೆ ವಿದಾಯ ಹೇಳಲು ಮುಂದಾಗುತ್ತೀರಾ?~
ಲಂಡನ್ ಒಲಿಂಪಿಕ್ಸ್‌ನ ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್‌ನಲ್ಲಿ ಸೋತ ಕೆಲವೇ ನಿಮಿಷಗಳಲ್ಲಿ ಅಭಿನವ್ ಬಿಂದ್ರಾ ಅವರನ್ನು ಮುತ್ತಿಕೊಂಡ ಪತ್ರಕರ್ತರು ಪದೇಪದೇ ಕೇಳಿದ ಪ್ರಶ್ನೆ ಇದು.
10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಹಿಂದಿನ ದಿನದವರೆಗೆ ಬಿಂದ್ರಾ ಅವರನ್ನು `ಇಂದ್ರ ಚಂದ್ರ~ ಎಂದು ಹೊಗಳಿದ್ದವರು ಏಕಾಏಕಿ ತೆಗಳಲು ಶುರು ಮಾಡಿದರು.
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಬಿಂದ್ರಾ ಎಂಬುದನ್ನು ಆ ಆವೇಶದಲ್ಲಿ ಮರೆತೇಬಿಟ್ಟರು. ಜೊತೆಗೆ ಈ ಒಂದು ಸೋಲಿನಿಂದ `ಚಿನ್ನದ ಹುಡುಗ~ ಬಿಂದ್ರಾ ಅವರ ಕ್ರೀಡಾ ಜೀವನವೇ ಮುಗಿಯಿತು ಎಂಬಂತೆ ಬಿಂಬಿಸಲಾಯಿತು. ಇದೊಂದು ಕ್ರೀಡಾ ಲೋಕದ ದುರಂತಮಯ ಸಂಗತಿ. ಒಲಿಂಪಿಕ್ಸ್ ಧ್ಯೇಯಕ್ಕೆ ವಿರುದ್ಧವಾದ ವರ್ತನೆ ಇದು.
ಆದರೆ ಬಿಂದ್ರಾ ಹೇಳಿದ್ದು ಒಂದೇ ಮಾತು. `ನಾನು ಕೇಳಿದ್ದನ್ನೆಲ್ಲಾ ಶೂಟಿಂಗ್ ನನಗೆ ನೀಡಿದೆ. ಈ ಕ್ರೀಡೆಯನ್ನು ನಾನು ಸದಾ ಪ್ರೀತಿಸುತ್ತೇನೆ. ವಿದಾಯ ಹೇಳಬೇಕೆಂದಿದ್ದರೆ ಚಿನ್ನ ಗೆದ್ದಾಗಲೇ ಆ ತೀರ್ಮಾನ ಕೈಗೊಳ್ಳುತ್ತಿದ್ದೆ~ ಎಂದರು. ಅವರಿಗಿನ್ನೂ 29 ವರ್ಷ ವಯಸ್ಸು ಅಷ್ಟೆ.
ಬೀಜಿಂಗ್ ಒಲಿಂಪಿಕ್ಸ್‌ಗೂ ಮುನ್ನ ಬೆನ್ನು ನೋವಿನಿಂದಾಗಿ ಸುಮಾರು ಒಂದು ವರ್ಷ ಬಿಂದ್ರಾ ರೈಫಲ್ ಎತ್ತುವಂತಹ ಸ್ಥಿತಿಯಲ್ಲಿಯೇ ಇರಲಿಲ್ಲ. ಅವರ ಕಥೆ ಮುಗಿದೇ ಹೋಯಿತು ಎಂದು ಟೀಕಾಕಾರರು ಆಗಲೇ ಷರಾ ಬರೆದಿದ್ದರು. ಪುಟಗಟ್ಟಲೇ ಟೀಕೆಗಳು ಹರಿದು ಬಂದಿದ್ದವು.
ಆದರೆ ಬೀಜಿಂಗ್‌ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲು ಕಾರಣರಾಗಿದ್ದು ಬಿಂದ್ರಾ. ಅದು ಅವರಿಗೆ ಮೂರನೇ ಒಲಿಂಪಿಕ್ಸ್ ಆಗಿತ್ತು. ಅದಕ್ಕೂ ಮುನ್ನ ಅಥೆನ್ಸ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಾಗ ಅವರಿಗೆ 18 ವರ್ಷ ವಯಸ್ಸು ಅಷ್ಟೆ.
`ಪದಕ ಗೆದ್ದರೂ ನನ್ನ ವೈಯಕ್ತಿಕ ಬದುಕಿನ ಸ್ಥಿತಿಗತಿ ಬದಲಾಗುವುದಿಲ್ಲ. ಅದು ಯಥಾ ಪ್ರಕಾರ ಸಾಗುತ್ತಿರುತ್ತದೆ. ನಾನು ಗೆದ್ದ ಚಿನ್ನದ ಪದಕ ಉಳಿದ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಪ್ರಭಾವ ಬೀರಿದರೆ ಅದೇ ಸಂತೋಷ~ ಎಂದು ಅಭಿನವ್ ಬೀಜಿಂಗ್‌ನಲ್ಲಿ ಚಿನ್ನ ಗೆದ್ದಾಗ ನುಡಿದಿದ್ದರು.
ಅಷ್ಟೇ ಏಕೆ, ಚಿನ್ನದ ಪದಕದೊಂದಿಗೆ ವಿಜಯ ವೇದಿಕೆಯಲ್ಲಿ ನಿಂತಾಗ ಕೂಡ ಅವರ ಮುಖದ ಭಾವನೆಯಲ್ಲಿ ಅಂಥ ಬದಲಾವಣೆ ಇರಲಿಲ್ಲ. ಏಕೆಂದರೆ ಆ ಸಾಧನೆಯ ಮೆಟ್ಟಿಲೇರಲು ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ.
`ಯಾವುದೇ ವ್ಯಕ್ತಿಯ ಸಾಧನೆಯನ್ನು ಸಂಭ್ರಮಿಸಿ, ಆನಂದಿಸಿ. ಆದರೆ ಒಂದು ಮಾತು ನೆನಪಿರಲಿ; ಆ ವ್ಯಕ್ತಿ ಕೆಳಗೆ ಬಿದ್ದಾಗ ಅವರನ್ನು ಕಡೆಗಣಿಸಬೇಡಿ~ ಎಂದು ಅಂದು ತಮ್ಮನ್ನು ಮುತ್ತಿಕೊಂಡ ಪತ್ರಕರ್ತರನ್ನು ಉದ್ದೇಶಿಸಿ ಬಿಂದ್ರಾ ಹೇಳಿದ್ದರು. ತಮ್ಮ ಜೀವನ ಚರಿತ್ರೆ `ಎ ಶಾಟ್ ಅಟ್ ಹಿಸ್ಟರಿ~ ಎಂಬ ಪುಸ್ತಕದಲ್ಲೂ ಇದೇ ವಿಷಯ ಬರೆದಿದ್ದಾರೆ.
ಬಿಂದ್ರಾ ತಮ್ಮ ನಿವಾಸದಲ್ಲಿ ಶೂಟಿಂಗ್ ರೇಂಜ್ ಕಟ್ಟಿಸಿಕೊಂಡು ಬೆಳಿಗ್ಗೆ ಮೂರು ಗಂಟೆಗೆ ಎದ್ದು ಅಭ್ಯಾಸ ನಡೆಸಿ ಆ ಸಾಧನೆ ಮಾಡಿದ್ದರು. ವಿದೇಶದಲ್ಲಿ ತರಬೇತಿ ಪಡೆಯಲು ಸ್ವಂತ ಜೇಬಿನಿಂದ ದುಡ್ಡು ಖರ್ಚು ಮಾಡಿದ್ದರು. ಪೋಷಕರು ತಮ್ಮ ಉದ್ದಿಮೆಯನ್ನು ಕಡೆಗಣಿಸಿ ಮಗನ ಶೂಟಿಂಗ್‌ನತ್ತ ಗಮನ ಹರಿಸಿದ್ದರು.
ಆದರೆ ಅವರು ಚಿನ್ನ ಗೆದ್ದಿದ್ದು ಭಾರತದ ಕೋಟಿ ಕೋಟಿ ಜನರಲ್ಲಿ ಸ್ಫೂರ್ತಿ ತುಂಬಿತು. ಅದು ಕೇವಲ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ; ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಒಂದು ಚಿನ್ನ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹೀಯಾಳಿಸುತ್ತಿದ್ದವರಿಗೆ ನೀಡಿದ ಉತ್ತರವಾಗಿತ್ತು. ಜೊತೆಗೆ ಭಾರತೀಯರ ಮನಸ್ಥಿತಿಯನ್ನು ಬದಲಾಯಿಸಲು ಕಾರಣವಾಯಿತು.
ಈ ಬಾರಿ ಬಿಂದ್ರಾ ವಿಫಲವಾಗಿರಬಹುದು. ಆದರೆ ಗಗನ್ ನಾರಂಗ್ ಕಂಚು ಗೆದ್ದು ಶೂಟಿಂಗ್‌ನಲ್ಲಿ ಭಾರತ `ಹ್ಯಾಟ್ರಿಕ್~ ಪದಕದ ಸಾಧನೆ ಮಾಡಲು ಕಾರಣರಾಗಿದ್ದಾರೆ. ವಿಜಯ್ ಕುಮಾರ್ ಬೆಳ್ಳಿ ಜಯಿಸಿದ್ದಾರೆ. ಲಂಡನ್‌ನಲ್ಲಿ ಬಿಂದ್ರಾ ಸೋತರೂ ಅವರು ಸದಾ `ಚಿನ್ನದ ಹುಡುಗ~. ಏಕೆಂದರೆ ಅವರು ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಎಂದು ಇತಿಹಾಸದ ಪುಟಗಳಲ್ಲಿಯೂ ರಾರಾಜಿಸುತ್ತಿದ್ದಾರೆ. ಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.