ಕ್ರೀಡಾ ಚಟುವಟಿಕೆಗಳಿಗೆ ನೀತಿ ನಿಯಮಗಳಿವೆ. ಆಟಗಾರರಿಗೂ ಇರುವ ನೀತಿ ಸಂಹಿತೆಯಂತೆ. ವಾಲಿಬಾಲ್ ಕಬಡ್ಡಿ ಕೊಕ್ಕೊ ಸೇರಿದಂತೆ ಹೊರ ಮತ್ತು ಒಳಾಂಗಣ ಕ್ರೀಡಾ ಅಂಕಣಗಳಿಗೂ ಇಂತಿಷ್ಟೇ ಉದ್ದ ಅಗಲ ಇರಬೇಕೆಂಬ ನಿಯಮಗಳಿವೆ.
ಪ್ರತಿಯೊಂದು ಆಟದ ಅಂಕಣಗಳಿಗೆ ಎಚ್ಚರಿಕೆಯಿಂದ ಮಾರ್ಕಿಂಗ್ ಅವಶ್ಯ. ಇಂತಹ ಮಾರ್ಕಿಂಗ್ ಕೆಲಸವನ್ನು ಹಲವು ವರ್ಷಗಳಿಂದ ಸದ್ದಿಲ್ಲದೆ ನಿರಂತರವಾಗಿ ಮಾಡುತ್ತಿದ್ದಾರೆ ಮಾರ್ಕರ್ ಕೃಷ್ಣಪ್ಪ.
ಬೆಂಗಳೂರಿನ ಉತ್ತರ ತಾಲ್ಲೂಕಿನ ಲೊಟ್ಟಗೊಲ್ಲಹಳ್ಳಿ ಕೃಷ್ಣಪ್ಪ ಅವರ ಊರು. 1983 ರಲ್ಲಿ ಬೆಂಗಳೂರಿನ ಬಿ.ಇ.ಎಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕ್ರೀಡಾ ಅಂಕಣದ ಮಾರ್ಕರ್ ಆಗಿ ವೃತ್ತಿ ಆರಂಭಿಸಿ ಕಳೆದ 29 ವರ್ಷಗಳಿಂದ ವಿವಿಧ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಯಾವುದೇ ಟೂರ್ನಿಗಳಲ್ಲಿ ಆಟದ ಅಂಕಣಗಳನ್ನು ಸಿದ್ಧಗೊಳಿಸುತ್ತಿದ್ದಾರೆ ಹಾಗಾಗಿ ಇವರು `ಮಾರ್ಕರ್~ ಕೃಷ್ಣಪ್ಪ ಎಂದೇ ಪ್ರಸಿದ್ಧ.
ಅಂಕಣದ ಅಳತೆಗಳು ಕರಗತ : ಕೃಷ್ಣಪ್ಪ ಸತತ 29 ವರ್ಷಗಳಿಂದ ಅಥ್ಲೆಟಿಕ್ಸ್ ಟ್ರ್ಯಾಕ್ ಗುಂಪು ಆಟಗಳಾದ ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಕ್ರಿಕೆಟ್, ಫುಟ್‌ಬಾಲ್ ಸೇರಿದಂತೆ ಒಳಾಂಗಣ ಕ್ರೀಡಾ ಅಂಕಣಗಳ ಆಯಿಲ್ ಪೈಂಟ್ ಮಾರ್ಕ್ ಮತ್ತು ಕ್ರೀಡೆಗಳ ಮಣ್ಣಿನ ಅಂಕಣಗಳ ಉದ್ದ ಅಗಲ ಹಾಗೂ ಅಂಕಣದೊಳಗಿನ ಪ್ರತಿ ಗೆರೆಯ ಅಳತೆ ಮತ್ತು ನಿಯಮಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಅಂಕಣದ ಸಿದ್ದತೆ ಹೇಗೆ : ಕ್ರೀಡಾಕೂಟ ನಡೆಯುವ ಮೊದಲು ಸ್ಥಳ ಪರಿಶೀಲಿಸುತ್ತೇನೆ ಕೆಲವು ಆಟಗಳು ಸೂರ್ಯನಿಗೆ ಅಭಿಮುಖ ಮತ್ತು ವಿಮುಖದಲ್ಲಿ ನಡೆಯುತ್ತಿವೆ. ಇದು ಕ್ರೀಡಾ ನಿಯಮವೂ ಸಹ ಆದ್ದರಿಂದ ಪೂರ್ವ, ಪಶ್ವಿಮ, ಉತ್ತರ ದಕ್ಷಿಣ ದಿಕ್ಕುಗಳನ್ನು ಅನುಸರಿಸಿ ಕ್ರೀಡಾ ಮಾರ್ಕಿಂಗ್ ಅಳವಡಿಸಲಾಗುತ್ತದೆ.
`ಅಂಕಣದಲ್ಲಿರುವ ಪ್ರತಿಯೊಂದು ಸೂಕ್ಷ್ಮ ಕಲ್ಲುಗಳನ್ನು ಗಮನಿಸಿ ಹೊರಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮಾತ್ರ ಹಾಕಲಾಗುತ್ತದೆ. ನಂತರ ಮರದ ಹೊಟ್ಟನ್ನು ಬಣ್ಣದ ಪುಡಿಯೊಂದಿಗೆ ಬೆರೆಸಿ ಸಮನಾಂತರವಾಗಿ ಹರಡಿ ಬಿಳಿ ಶುದ್ಧ ಮಣ್ಣಿನ ಪೌಡರ್ ಬಳಸಿ ಮಾರ್ಕ್ ಮಾಡುತ್ತೇನೆ~ ಎನ್ನುತ್ತಾರೆ ಕೃಷ್ಣಪ್ಪ,
ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪುದುಚೇರಿ, ಆಂಧ್ರಪ್ರದೇಶ, ಗೋವಾ, ಒಡಿಸ್ಸಾ ರಾಜ್ಯದ ಕ್ರೀಡಾಕೂಟಗಳಲ್ಲಿ ಮಾರ್ಕಿಂಗ್ ಕೈಚಳಕ ತೋರಿರುವ ಕೃಷ್ಣಪ್ಪ ದಾರದ ನೆರವಿಲ್ಲದೇ ಸ್ಪಷ್ಟವಾಗಿ ಮಾರ್ಕಿಂಗ್ ಮಾಡಬಲ್ಲೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಕೊಟ್ಟಷ್ಟು ಸಂಭಾವನೆ: ಎರಡರಿಂದ ಹತ್ತು ಹನ್ನೆರಡು ದಿನಗಳವರೆಗೂ ಕೆಲವು ಕ್ರೀಡಾಕೂಟಗಳು ನಡೆಯುತ್ತವೆ ಪಂದ್ಯದ ಮಧ್ಯ ಆಗಿಂದಾಗ್ಗೆ ಅಳಿಸಿ ಹೋದ ಗೆರೆಗಳನ್ನು ಸಿದ್ಧಗೊಳಿಸುತ್ತಿರಬೇಕು ಕ್ರೀಡಾಪಟುಗಳಿಗೆ, ಸಂಘಟಕರಿಗೆ ಮತ್ತು ಪೋಷಕರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಮಾರ್ಕಿಂಗ್ ಸ್ಫೂರ್ತಿದಾಯಕವಾಗಿ ಗಮನ ಸೆಳೆಯಬೇಕು ಮಾರ್ಕಿಂಗ್ ಕೆಲಸಕ್ಕೆ ಇಂತಿಷ್ಟೇ ದರ ಇಲ್ಲವಾದರೂ 5 ರಿಂದ 15, 20 ಸಾವಿರ ವರೆಗೂ ನೀಡುತ್ತಾರೆ.
ಪಂದ್ಯ ನಡೆಯುವ ದಿನದ ನಿಗದಿಯಂತೆ, ನೀಡುತ್ತಾರೆ ಈಗ ಚಾಮರಾಜಪೇಟೆ ಉದಯಬಾನು ಕ್ರೀಡಾಂಗಣದಲ್ಲಿ ವಾಲಿಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಕ್ರೀಡಾಕೂಟ 8 ದಿನಗಳ ಕಾಲ ನಡೆಯಲಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಷ್ಟೇ ಕೊಡಿ ಎನ್ನುವ ಬಲವಂತವಿಲ್ಲ ಎನ್ನುತ್ತಾರೆ.
ಮಳೆಗಾಲದಲ್ಲಿ ಕೆಲಸ ಕಡಿಮೆ ಶಾಲಾ ಕಾಲೇಜು ಆರಂಭದಲ್ಲೇ ಶಿಕ್ಷಣ ಇಲಾಖೆಗೆ ಜುಲೈನಿಂದ ಅಕ್ಟೋಬರ್‌ನಲ್ಲಿ ನಡೆಸುವ ಕ್ರೀಡಾಕೂಟದ ಸಂದರ್ಭಗಳಲ್ಲಿ ಮಾರ್ಕಿಂಗ್‌ಗೆ ಬೇಡಿಕೆ ಇರುತ್ತದೆ. ನಂತರ ಸಂಘ ಸಂಸ್ಥೆಗಳು ನಡೆಸುವ ಕ್ರೀಡಾಕೂಟಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಮಾರ್ಕರ್ ಕೃಷ್ಣಪ್ಪರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 7829771907.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.