ADVERTISEMENT

ವಿಳಂಬವಾದರೂ ಉತ್ತಮ ಗುಣಮಟ್ಟ

ಶ್ರೀಪಾದ ಯರೇಕುಪ್ಪಿ
Published 3 ಫೆಬ್ರುವರಿ 2013, 19:59 IST
Last Updated 3 ಫೆಬ್ರುವರಿ 2013, 19:59 IST
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಂಡಿದ್ದರೂ, ಉಳಿದ ಕಡೆಗೆ ಹುಲ್ಲು ಬೆಳೆದಿರುವುದು 	ಚಿತ್ರ- ಚೇತನ ಕುಲಕರ್ಣಿ
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಂಡಿದ್ದರೂ, ಉಳಿದ ಕಡೆಗೆ ಹುಲ್ಲು ಬೆಳೆದಿರುವುದು ಚಿತ್ರ- ಚೇತನ ಕುಲಕರ್ಣಿ   

ಬೆಳಗಾವಿಯ ಕ್ರೀಡಾಪಟುಗಳ `ಸಿಂಥೆಟಿಕ್ ಟ್ರ್ಯಾಕ್' ಕನಸು ಕೊನೆಗೂ ನನಸಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ಬೆಳಗಾವಿ ಕೊಡುಗೆ ಅಪಾರ. ಮೊದಲಿನಿಂದಲೂ ಅಥ್ಲೆಟಿಕ್ಸ್ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಲೇ ಬರಲಾಗಿದೆ. ಕೆಎಲ್‌ಇ ಸಂಸ್ಥೆಯ ಮೈದಾನ, ಯೂನಿಯನ್ ಜಿಮ್ಖಾನಾ, ಸಿಪಿಇಡಿ, ಲೇಲೆ ಮೈದಾನ, ಸರ್ಕಾರಿ ಸರ್ದಾರ್ ಪ್ರೌಢಶಾಲೆ ಮೈದಾನ... ಹೀಗೆ ಹಲವು ಮೈದಾನಗಳಲ್ಲಿ ನಿತ್ಯ ಕ್ರೀಡಾ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಇವೆಲ್ಲ ಮೈದಾನಗಳಿಗಿಂತ ಮುಖ್ಯವಾಗಿ ಗುರುತಿಸಿಕೊಂಡಿರುವುದು ನೆಹರು ಜಿಲ್ಲಾ ಕ್ರೀಡಾಂಗಣ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಈ ಕ್ರೀಡಾಂಗಣ ಮಳೆಗಾಲದ ಸಂದರ್ಭದಲ್ಲಿ ಸಣ್ಣ ಕೆರೆಯಂತೆ ಕಾಣುತ್ತಿತ್ತು. ಮೂರು ವರ್ಷಗಳ ಹಿಂದೆ ಇದಕ್ಕೆ ಕಾಯಕಲ್ಪ ನೀಡಲಾಗಿದೆ. ಇದೀಗ ಸಿಂಥೆಟಿಕ್ ಹಾಸು ಹೊದಿಸಲಾಗಿದೆ.

ಇದೇ ಕ್ರೀಡಾಂಗಣದಲ್ಲಿ ನಿತ್ಯ ಅಭ್ಯಾಸ ನಡೆಸಿದ ರಾಜಶ್ರೀ ಪಾಟೀಲ, ನಾಗರಾಜ, ಅರ್ಜುನ ದೇವಯ್ಯ, ಗುರುದೇವ ಹಿರೇಮಠ, ಸಂಜಯ ಲಿಂಗದಳ್ಳಿ, ಮಧು ದೇಸಾಯಿ, ಸಂಜೀವಕುಮಾರ ನಾಯಕ್, ರೋಹಿತ್ ಹವಳ, ಜ್ಯೋತಿ ಕೋಲೇಕಾರ ಮೊದಲಾದವರು ಎತ್ತರದ ಸಾಧನೆ ತೋರಿದ್ದಾರೆ. ಉದಯೋನ್ಮುಖ ಅಥ್ಲೀಟ್‌ಗಳಾದ ಪೂನಂ ಕೋಲೆ, ಅಕ್ಷಯ ಕರಾಳೆ, ಫರೀನಾ ಶೇಖ್, ಆಕಾಶ ಮಂಡೋಳ್ಕರ್, ಸುನೀಲ ಜಾಧವ, ಸತ್ಯನಾರಾಯಣ ವೆರ್ಣೇಕರ, ಅಭಿಷೇಕ ಪಾತ್ರೆ ಈಗಾಗಲೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಗಳಿಸಿದ್ದಾರೆ.

ADVERTISEMENT

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು 2.97 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದೆ. ಎಂಟು ಲೇನ್ ಟ್ರ್ಯಾಕ್ ಹಾಗೂ `ಡಿ' ಏರಿಯಾ ಸಹ ಸಿಂಥೆಟಿಕ್ ಹಾಸು ಹೊಂದಿದೆ. 1.90 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್, 77.51 ಲಕ್ಷ ರೂಪಾಯಿಯನ್ನು ಒಳಚರಂಡಿ ಹಾಗೂ ಮತ್ತಿತರ ದುರಸ್ತಿ ಕೆಲಸಗಳಿಗೆ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2009ರಲ್ಲಿಯೇ ಅನುಮತಿ ಸಿಕ್ಕಿತ್ತು. 2009ರ ಅಕ್ಟೋಬರ್ 5ರಂದು ಟೆಂಡರ್ ನೀಡಲಾಗಿತ್ತು. 2010ರ ಜನವರಿ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಬೇಕಿತ್ತು. ಆದರೆ, 2012ರ ಅಂತ್ಯಕ್ಕೆ  ಪೂರ್ಣಗೊಂಡಿದ್ದು, 2013ರ ಜನವರಿಯಿಂದ ಅಥ್ಲೀಟ್‌ಗಳಿಗೆ ಅಭ್ಯಾಸ ನಡೆಸುವ ಭಾಗ್ಯ ಸಿಕ್ಕಿದೆ.

`ವಿಶ್ವ ಕನ್ನಡ ಸಮ್ಮೇಳನ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು ಹಾಗೂ ಮಳೆಗಾಲದಲ್ಲಿ ತೊಂದರೆಯಾಗಿದ್ದರಿಂದ ಸಿಂಥೆಟಿಕ್ ಹೊದಿಕೆ ಅಳವಡಿಸುವಲ್ಲಿ ವಿಳಂಬವಾಯಿತು. ತಡವಾದರೂ ಅತ್ಯುತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಂಡಿದೆ' ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಸವರಾಜ್ ಎಚ್. ಹೇಳಿದರು.

ಈ ಮೊದಲು ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಸರ್ಕಾರದ ವಿವಿಧ ಕಾರ್ಯಕ್ರಮಗಳು ಸಮಾವೇಶಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದವು. ಇದರಿಂದ ಅಥ್ಲೀಟ್‌ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈಗ ವಾಯುವಿಹಾರಕ್ಕೆ ಬರುವವರಿಗೂ ಇಲ್ಲಿ ಪ್ರವೇಶವಿಲ್ಲ.

ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹೊರತು ಪಡಿಸಿದರೆ ಉಳಿದ ಕಡೆ ಹುಲ್ಲು ಬೆಳೆದು ನಿಂತಿದೆ. ಟ್ರ್ಯಾಕ್ ಬಿಟ್ಟು ಉಳಿದ ಕಡೆಗಳಲ್ಲಿ ತಗ್ಗು ದಿನ್ನೆಗಳು ಉದ್ಭವಿಸಿವೆ. ಅಥ್ಲೀಟ್‌ಗಳು ಟ್ರ್ಯಾಕ್ ಮತ್ತು `ಡಿ' ಏರಿಯಾದಲ್ಲಿ ಮಾತ್ರ ಅಭ್ಯಾಸ ನಡೆಸಬೇಕಾಗಿದೆ.

`ಕರ್ನಾಟಕ ಭೂ ಸೇನಾ ನಿಗಮವು ಕ್ರೀಡಾಂಗಣದ ಒಳ ಭಾಗವನ್ನು ಸಮತಟ್ಟಾಗಿ ಮಾಡುವ ಗುತ್ತಿಗೆ ಪಡೆದಿದೆ. ಆದರೆ ಈವರೆಗೂ ಯಾವುದೇ ಕೆಲಸ ನಡೆದಿಲ್ಲ. ಸಿಂಥೆಟಿಕ್ ಟ್ರ್ಯಾಕ್ ಮೇಲಿನ ಕಸಗುಡಿಸುವುದು ಹಾಗೂ  ಸರಿಯಾಗಿ ನೀರುಣಿಸುವ ಕೆಲಸ ನಡೆಯುತ್ತಿಲ್ಲ' ಎಂಬುದು ಕ್ರೀಡಾಪಟುಗಳ ಆರೋಪ.

ಈ ಕ್ರೀಡಾಂಗಣದ ಜಾಗೆ ಕೆಎಲ್‌ಇ ಸಂಸ್ಥೆಯ ಒಡೆತನದಲ್ಲಿದೆ. 1976ರ ಜನವರಿ 30ರಂದು 50 ವರ್ಷಗಳ ಅವಧಿಗೆ ಈ ಜಾಗೆಯನ್ನು ಸರ್ಕಾರ ಲೀಸ್ ಮೇಲೆ ಪಡೆದಿದೆ. ಲೀಸ್ ಅವಧಿ ಕಡಿಮೆಯದ್ದಾದ್ದರಿಂದ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.