ADVERTISEMENT

ಹೊಸ ವರ್ಷದಲ್ಲೂ ಹಳೆಯ ನಿರೀಕ್ಷೆ...!

ಪ್ರಮೋದ ಜಿ.ಕೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST
ಹೊಸ ವರ್ಷದಲ್ಲೂ ಹಳೆಯ ನಿರೀಕ್ಷೆ...!
ಹೊಸ ವರ್ಷದಲ್ಲೂ ಹಳೆಯ ನಿರೀಕ್ಷೆ...!   

ಹೊಸ ವರ್ಷದ ಸಂಭ್ರಮದಲ್ಲಿದ್ದರೂ, ಹಳೆಯ ವರ್ಷದ ನೆನಪುಗಳು ಇನ್ನೂ ಮಾಸಿಲ್ಲ. ಏಕೆಂದರೆ, ಆ ನೆನಪುಗಳೇ ಅಷ್ಟೊಂದು ಮಧುರ. 2011 ಟೆನಿಸ್ ಲೋಕಕ್ಕೆ ಕೆಲ ಅನಿರೀಕ್ಷಿತ ಅಚ್ಚರಿಗಳನ್ನು ನೀಡಿ ಹೋಗಿದೆ. ಈ ವರ್ಷವೂ ಅಂತಹುದೇ ಅಚ್ಚರಿ ಎದುರಾಗುವ ನಿರೀಕ್ಷೆಯೂ ಇದೆ.

ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ಇದಕ್ಕೆ ವೇದಿಕೆ ಕಲ್ಪಿಸಿದೆ. ಆದ್ದರಿಂದ ಹೊಸ ವರ್ಷದಲ್ಲೂ ಹಳೆಯ ನಿರೀಕ್ಷೆ ಗರಿಗೆದರಿವೆ.

ಸಿಂಗಲ್ಸ್‌ನಲ್ಲಿ `ಈ ವರ್ಷದ ಚಾಂಪಿಯನ್ ಯಾರು~ ಎನ್ನುವ ಪ್ರಶ್ನೆಗೆ `ರಫೆಲ್ ನಡಾಲ್ ಇಲ್ಲವೇ ರೋಜರ್ ಫೆಡರರ್~ ಎನ್ನುವ ಸಿದ್ದ ಉತ್ತರ ಕಳೆದ ವರ್ಷ ಟೆನಿಸ್ ಪಂಡಿತರ ಗರಡಿಯಲ್ಲಿ ಸುಳಿದಾಡಿತ್ತು.

ಆದರೆ, ಈ ಲೆಕ್ಕಾಚಾರವನ್ನು ಸುಳ್ಳಾಗುವಂತೆ ಮಾಡಿ ಅಚ್ಚರಿ ಮೂಡಿಸಿದವರು ಈಗ ಕಣ್ಣ ಮುಂದೆ ಬರುತ್ತಿದ್ದಾರೆ. ಆದ್ದರಿಂದ ಈ ವರ್ಷವೂ ಮತ್ತೊಂದಿಷ್ಟು ಅನಿರೀಕ್ಷಿತ ಫಲಿತಾಂಶಗಳು ಎದುರಾಗುವುದೇ ಎನ್ನುವ ಕುತೂಹಲ ಟೆನಿಸ್ ಪ್ರೇಮಿಗಳ ಮುಂದಿದೆ.

ಆಸ್ಟ್ರೇಲಿಯಾದಲ್ಲಿ ಒಂದೆಡೆ ಭಾರತ ವಿರುದ್ಧದ ಕ್ರಿಕೆಟ್ ಪಂದ್ಯಗಳ ಜ್ವರ ಕ್ರೀಡಾ ಪ್ರೇಮಿಗಳನ್ನು ಆವರಿಸಿಕೊಂಡಿದ್ದರೆ, ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪಂದ್ಯಗಳು ನಡೆಯುವ ಮೆಲ್ಬರ್ನ್ ಪಾರ್ಕ್ ಕ್ರೀಡಾಂಗಣದಲ್ಲಿನ ವಾತಾವರಣವೂ ರಂಗೇರುತ್ತಿದೆ.

ಇದೇ ಟೂರ್ನಿಯಲ್ಲಿ ಕಳೆದ ವರ್ಷ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಚಾಂಪಿಯನ್ ಆಗಿದ್ದರು. ಇದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ವರ್ಷದ ಆರಂಭದಲ್ಲಿ ಪ್ರಶಸ್ತಿ ಜಯಿಸಿದ ಅದೃಷ್ಟವೋ ಏನೋ ಅದೇ ವರ್ಷ (2011ರಲ್ಲಿ) ವಿಂಬಲ್ಡನ್ ಹಾಗೂ ಯು.ಎಸ್. ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದರು. ನೊವಾಕ್ 2008ರಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ನಂತರ ಒಂದೇ ವರ್ಷದಲ್ಲಿ ಮೂರು ಗ್ರ್ಯಾನ್ ಸ್ಲಾಮ್ ಟ್ರೋಫಿಯ ಒಡೆಯರಾದರು.

ಜನವರಿ 16ರಿಂದ 29ರ ವರೆಗೆ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಘಟಾನುಘಟಿ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇಲ್ಲಿಯೂ ರೋಚಕ ಹೋರಾಟ. ಆದ್ದರಿಂದ ಕದನ ಕುತೂಹಲ ಹೆಚ್ಚಾಗಿದೆ.

ಯು.ಎಸ್. ಓಪನ್ ಟೂರ್ನಿಯಲ್ಲಿ ಕಳೆದ ವರ್ಷ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಸಿಂಗಲ್ಸ್‌ನಲ್ಲಿ `ಚಾಂಪಿಯನ್~ ಕಿರೀಟ ತೊಟ್ಟುಕೊಂಡಿದ್ದರು. ಈ ಸಾಧನೆಗೆ ಇಡೀ ದೇಶವೇ ಸಂಭ್ರಮಿಸಿತ್ತು. ಟೆನಿಸ್ ಜಗತ್ತು ಬೆಚ್ಚಿ ಬಿದ್ದಿತ್ತು. 31 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಸ್ಟಾಸರ್ ಆಸೀಸ್‌ಗೆ ಈ ಪ್ರಶಸ್ತಿ ತಂದುಕೊಟ್ಟಿದ್ದರು. 1980ರಲ್ಲಿ ಇವೊನೆ ಗೂಲಾಗೊಂಗ್ ಈ ಪ್ರಶಸ್ತಿ ಜಯಿಸಿದ್ದರು. ಇವರ ನಂತರ ಸ್ಟಾಸರ್ ಈ ಸಾಧನೆ ಮಾಡಿದ್ದರು.

ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚೀನಾದ ಲೀ ನಾ, ವಿಂಬಲ್ಡನ್ ಟೂರ್ನಿಯಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಚೊಚ್ಚಲ ಗ್ರ್ಯಾನ್ ಪ್ರಿ ಟ್ರೋಫಿ  ಗೆದ್ದುಕೊಂಡಿದ್ದರು. ಈ ಎಲ್ಲಾ ಅನಿರೀಕ್ಷಿತ ಫಲಿತಾಂಶಗಳು ಈ ಟೂರ್ನಿಯಲ್ಲೂ ಮರುಕಳಿಸುವ ಸಾಧ್ಯತೆ ಇದೆ. ಈ ಸಲದ ಆಸ್ಟ್ರೇಲಿಯಾದ ಟೂರ್ನಿಯ ಪ್ರಶಸ್ತಿ ಮೊತ್ತವೂ ಹೆಚ್ಚಿದೆ. ಸಿಂಗಲ್ಸ್‌ನಲ್ಲಿ ವಿಜೇತರಾಗುವವರು 11.44 ಕೋಟಿ ರೂಪಾಯಿ ಬಹುಮಾನದ ಒಡೆಯರಾಗಲಿದ್ದಾರೆ.

1905ರಲ್ಲಿ ಆರಂಭವಾದ ಈ ಟೂರ್ನಿಯ ಹಿಂದಿನದಕ್ಕಿಂತಲೂ ಹೆಚ್ಚಿನ ಬಹುಮಾನ ಮೊತ್ತ ಈ ಸಲವಿದೆ. ಸ್ಪೇನ್‌ನ ರಫೆಲ್ ನಡಾಲ್, ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್, ಅಮೆರಿಕದ ರ‌್ಯಾನ್ ಸ್ವೀಟಿಂಗ್, ಸ್ವೀಡನ್‌ನ ರಾಬಿನ್ ಸೊಡೆರ್‌ಲಿಂಗ್, ಲಕ್ಸೆಂಬರ್ಗ್‌ನ ಗಿಲ್ಲಿಸ್ ಮುಲ್ಲರ್, ಫ್ರಾನ್ಸ್‌ನ ಜೊ ವಿಲ್ಫ್ರೆಡ್ ಸೊಂಗಾ ಹಾಗೂ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ...
 
ಹೀಗೆ ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಜೋಡಿ ಕಳೆದ ವರ್ಷ ಚಾಂಪಿಯನ್ ಆಗಿತ್ತು. ಈ ಜೋಡಿ ಅದೇ ಪಟ್ಟ ಉಳಿಸಿಕೊಳ್ಳಲು ಮತ್ತೆ ಹೋರಾಟ ನಡೆಸಲಿದೆ.

ವರ್ಷದಲ್ಲಿ ನಡೆಯುವ ಪ್ರಮುಖ ನಾಲ್ಕು ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಇದು ಮೊದಲನೆಯದು. ವಿಂಬಲ್ಡನ್, ಫ್ರೆಂಚ್ ಓಪನ್, ಹಾಗೂ ಯು.ಎಸ್. ಓಪನ್ ಈ ವರ್ಷದಲ್ಲಿ ಬಾಕಿ ಇವೆ. ಕಳೆದ ವರ್ಷದ ಪ್ರದರ್ಶನವನ್ನು ಅವಲೋಕಿಸಿದರೆ, ಭಾರತ ಸಿಂಗಲ್ಸ್ ವಿಭಾಗ ತೀರಾ ದುರ್ಬಲವಾಗಿದೆ. ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಜೊತೆ ಕಣಕ್ಕಿಳಿಯಲಿರುವ ಮಹೇಶ್ ಭೂಪತಿ ಜೋಡಿಯ ಮೇಲೆ ಮಾತ್ರ ಭರವಸೆ ಇಡಬಹುದು.

ಭೂಪತಿ ಮಿಶ್ರ ಡಬಲ್ಸ್‌ನಲ್ಲಿ 2006 ಹಾಗೂ 2009ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆದರೆ, ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ.
 
ಮೂರು ಸಲ (1999, 2009 ಹಾಗೂ 2011) ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಕೈಗೆಟುಕಿಲ್ಲ. ಹೊಸ ವರ್ಷದ ಆರಂಭದಲ್ಲಿ ಈ ಹೊಸ ಜೋಡಿ ಈ ಸಾಧನೆ ಮಾಡಲಿದೆಯೇ ಎನ್ನುವು ಕುತಹೂಲವಿದೆ. ಜಗತ್ತಿನ ಕೋಟಿ ಕೋಟಿ ಟೆನಿಸ್ ಪ್ರೇಮಿಗಳ ಈ ಎಲ್ಲಾ ನಿರೀಕ್ಷೆ, ಕಾತರ, ಕನವರಿಕೆಗೆ ಉತ್ತರ ಹೇಳುವ ಕಾಲ ಈಗ ಬಂದಿದೆ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.