ADVERTISEMENT

ಸುಪ್ರೀಂ ತೀರ್ಪು: ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ 17 ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ. ಸ್ಪೀಕರ್‌ ಅದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 10:45 IST
Last Updated 13 ನವೆಂಬರ್ 2019, 10:45 IST

ನಾನು ಪ್ರತಿನಿಧಿಸುತ್ತಿದ್ದ ಕೆಪಿಜೆಪಿ ಪಕ್ಷದ ವಿಲೀನ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ಹೇಳಿದ್ದ ಸ್ಪೀಕರ್ ಅವರು, ನಾನು ರಾಜೀನಾಮೆ ನೀಡದಿದ್ದರೂ ಅನರ್ಹಗೊಳಿಸಿ‌ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಅಸಮಾಧಾನ ತಂದಿದೆ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದಾರೆ.

ಬಿಜೆಪಿ ಜತೆ ಒಳ ಒಪ್ಪಂದ ಆಗಿದೆ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ಮತ್ತೆ ಬಿಜೆಪಿಗೆ ಶಕ್ತಿ ತುಂಬುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಕೇಂದ್ರ ಸರ್ಕಾರ ಪಕ್ಷಾಂತರ ನಿಷೇಧ ಕಾಯ್ದೆ ರದ್ದು ಮಾಡಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು. 

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದು ಕೊಂಡು ಚುನಾವಣೆ ಎದುರಿಸಲಾಗುವುದು. ಇಂದು ಸಂಜೆ ಅಥವಾ ನಾಳೆಯೊಳಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್ 14 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಬೆಂಬಲ ನೀಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಿಂದ ಅನರ್ಹ ಶಾಸಕರ ಕುರಿತು ತೀರ್ಪು ಹಿನ್ನೆಲೆ, ಸಿಎಂ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಯಚೂರಿನಲ್ಲಿ ಆಗ್ರಹಿಸಿದ್ದಾರೆ. 

ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುನಾರಸ್ವಾಮಿ, ಅನರ್ಹರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ಕೊಡಬಾರದಿತ್ತು ಎಂದು ಅವರು ಬುಧವಾರ ಮಾಧ್ಯಮದ ರಿಗೆ ತಿಳಿಸಿದ್ದಾರೆ.

ಉಪಚುನಾವಣೆ ಬಳಿಕ ಕಾಂಗ್ರೆಸ್ ಜತೆ ಮೈತ್ರಿ ಮಾಡುವುದು ಸಾಧ್ಯವೇ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಡಕಾಯಿತರೇ ಸಚಿವರಾಗುತ್ತಾರೆ, ಅಂಥದ್ದರಲ್ಲಿ ನಾವು ಸಚಿವರಾಗುವುದು ಬೇಡವೇ. ನಮ್ಮನ್ನ ಅನರ್ಹಗೊಳಿಸಿದ್ದ ಸ್ಪೀಕರ್‌ ಅವರದ್ದು ಹುಚ್ಚುತನದ ಆದೇಶ ಎಂದು ರಮೇಶ ಜಾರಕಿಹೊಳಿ ಸುದ್ದಿಗಾರರಿಗೆ ಹೇಳಿದರು.

ನವದೆಹಲಿಯ ಅಶೋಕ ರಸ್ತೆಯಲ್ಲಿ ಇರುವ ನಂಬರ್ 9ರಲ್ಲಿರುವ ಸಂತೋಷ್ ನಿವಾಸದಲ್ಲಿ ಕುಮಠಳ್ಳಿ, ಜಾರಕಿಹೊಳಿ, ವಿಶ್ವನಾಥ, ಬಿ.ಸಿ. ಪಾಟೀಲ, ಹೆಬ್ಬಾರ್, ಪ್ರತಾಪಗೌಡ, ಶಂಕರ್, ನಾರಾಯಣಗೌಡ, ಶ್ರೀಮಂತ ಪಾಟೀಲ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಬಿ.ಎಲ್. ಸಂತೋಷ್ ದೆಹಲಿ ನಿವಾಸದಲ್ಲಿ ಮಾತುಕತೆ‌ ನಡೆಸಿದ ಅನರ್ಹರು. ನಾಳೆ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಎಲ್ಲರೂ ಬಿಜೆಪಿ ಸೇರ್ಪಡೆ ಸಾಧ್ಯತೆ.

ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿ ಇರುತ್ತಾರೆ–ದೇವೇಗೌಡ

ಬಿಜೆಪಿಗೆ ನೈತಿಕತೆ ಇದ್ದರೆ ಈ ಅನರ್ಹರಿಗೆ ಟಿಕೆಟ್ ನೀಡಬಾರದು ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಅನರ್ಹರ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುವುದಾಗಿ ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಮುರುಳೀಧರ ರಾವ್‌ ಟ್ವೀಟ್‌ ಮಾಡಿದ್ದಾರೆ.

ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು “ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು “ತ್ರಪ್ತ”ಶಾಸಕರು ಎಂದು ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ಸುಪ್ರೀಂ ಕೊರ್ಟ್ ತೀರ್ಪು ನಮಗೆ ಮಾಧಾನ ತಂದಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಸುಪ್ರೀಂ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಿಜೆಪಿ ನಡೆಸಿದ ಕುದುರೆ ವ್ಯಾಪಾರ ಬಯಲಾಗಿದ್ದು ರಾಜ್ಯದ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು‌ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಪಕ್ಷ‌ದ್ರೋಹ ಮಾಡಿದ ಅನರ್ಹ ಶಾಸಕರಿಗೆ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಬಿಜೆಪಿಗೆ ಕಪಾಳಮೋಕ್ಷ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದ ಆಧಾರದ ಮೇಲೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಮವಾರ (ನ.18) ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ವಿಧಾನಸಭಾಧ್ಯಕ್ಷರ ಹುದ್ದೆಯ ಗೌರವವನ್ನು ಸುಪ್ರೀಂ ಕೋರ್ಟ್ ಎತ್ತಿ‌ ಹಿಡಿದಿದೆ. ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತ ಮಾಡಲೇಬೇಕಾಗುತ್ತದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಇಂತಹದೇ ತೀರ್ಪು ಬರಬಹುದು ಎಂಬ ನಿರೀಕ್ಷೆ ಇತ್ತು. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತಡೆಯುವಂತಿಲ್ಲ ಎಂದು ಚುನಾವಣಾ ಆಯೋಗವೇ ಹೇಳಿತ್ತು. ನಮ್ಮನ್ನು ಇದುವರೆಗೆ ಮುಖ್ಯಮಂತ್ರಿ ಸಹಿತ ಯಾರೂ ಸಂಪರ್ಕಿಸಿಲ್ಲ. ನಾಳೆಯಿಂದಲೇ ಚುನಾವಣಾ ಕಣಕ್ಕೆ ಇಳಿಯಲಿದ್ದೇವೆ ಎಂದು ಶಿವರಾಮ್‌ ಹೆಬ್ಬಾರ್‌ ಹೇಳಿದ್ದಾರೆ. 

ಸುಪ್ರೀಂಕೋರ್ಟ್‌ ತೀರ್ಪನ್ನು ನಾನು ಗೌರವಿಸ್ತೀನಿ. ಪ್ರಕರಣವನ್ನು ನ್ಯಾಯಮೂರ್ತಿಗಳು ಹೇಗೆ? ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು 17 ಶಾಸಕರನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಹೀಗಾಗಿ ಜನರ ಆದೇಶ ಇದೆಯಲ್ಲಾ ಅದು ಫೈನಲ್ ಆಗುತ್ತೆ. ಜನರ ಆದೇಶ ಫೈನಲ್. ಪಕ್ಷಾಂತರ ನೈತಿಕ ವಿಚಾರ ಅಂತ ಹೇಳಿದ್ಯಾ ಸುಪ್ರೀಂಕೋರ್ಟ್‌? ನಾನು ಪೂರ್ಣ ತೀರ್ಪನ್ನು ಒಪ್ಪಿಕೊಳ್ತೀನಿ. ಪಕ್ಷಾಂತರ ನಿಷೇಧ ಕಾಯ್ದೆಯನ್ನುಇನ್ನೂ ಗಟ್ಟಿಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. 

ಅನರ್ಹ ಅಂದ್ರೆ ಹಿನ್ನಡೆ ಅಲ್ವಾ? ನೀವು ಮಾಡಿರುವುದು ಸರಿಯಿದೆ ಅಂತ್ಲೂ ಸುಪ್ರೀಂಕೋರ್ಟ್ ಹೇಳಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಒಂದು ಥರ, ಆಡಳಿತ ಪಕ್ಷದಲ್ಲಿದ್ದಾಗ ಇನ್ನೊಂದು ಥರ ಅಂತ ಹೇಳಿದೆ. ಇದು ಬಿಜೆಪಿಗೂ ಹಿನ್ನಡೆ–ಸಿದ್ದರಾಮಯ್ಯ

ಶರತ್ ಬಚ್ಚೇಗೌಡ ವಿಚಾರ ನಾನು ಏನೂ ಮಾತನಾಡಲ್ಲ. ನನ್ನ ಜೊತೆಯಲ್ಲಿರುವವರ ಬಗ್ಗೆ ಮಾತ್ರ ನಾನು ಏನಾದ್ರೂ ಹೇಳ್ತೀನಿ, ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚಿಸ್ತೇವೆ. ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇವತ್ತು ಕೋರ್ ಕಮಿಟಿ ಮೀಟಿಂಗ್ ಇದೆ. ಅಲ್ಲಿ ಚರ್ಚಿಸಿ ಟಿಕೆಟ್ ವಿತರಣೆ ಬಗ್ಗೆ ಮುಂದಿನ ನಿರ್ಧಾರ ಘೋಷಿಸುತ್ತೇವೆ. ಸಂಜೆ ಎಲ್ಲ ಅನರ್ಹರ ಜೊತೆಗೆ ಚರ್ಚಿಸಿ ಮುಂದಿನ ಘೋಷಣೆ ತಿಳಿಸ್ತೀವಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾವು ಎಲ್ಲ ಸ್ಥಾನ ಗೆಲ್ತೀವಿ. ಒಂದೊಂದು ಸ್ಥಾನಕ್ಕೆ ಒಬ್ಬೊಬ್ಬ ಸಚಿವರನ್ನು ನಿಯೋಜಿಸುತ್ತೇವೆ. ನೂರಕ್ಕೆ ನೂರ ಒಂದರಷ್ಟು ನಾವು ಗೆಲ್ತೀವಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇಡೀ ದೇಶ ತೀರ್ಮಾನಕ್ಕಾಗಿ ಕಾಯ್ತಾ ಇತ್ತು. ಹಿಂದಿನ ಸ್ಪೀಕರ್ ರಮೇಶ್‌ಕುಮಾರ್ ಅವರು ಸಿದ್ದರಾಮಯ್ಯ ನವರ ಜೊತೆಗೆ ಸೇರಿಕೊಂಡು ತಪ್ಪು ನಿರ್ಧಾರ ತಗೊಂಡಿದ್ದರು. 17 ಶಾಸಕರು ಚುನಾವಣೆ ಸ್ಪರ್ಧೆಗೆ ಅವಕಾಶ ನಾನು ಸ್ವಾಗತಿಸ್ತೀವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಅನರ್ಹರ ವಿಚಾರದಲ್ಲಿ ಅದು ಸ್ವಯಂ ಪ್ರೇರಣೆಯೂ ಅಲ್ಲ, ವಾಸ್ತವಿಕವಾಗಿಯೂ ಇಲ್ಲ. ಇಂಥವರ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಈ ವಿಚಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದೆ. ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಮನಸೋ ಇಚ್ಚೆ ನಡೆದುಕೊಳ್ಳಲು ಆಗಲ್ಲ.

ಬೇರೊಂದ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ ಅಂತ ಹೇಳಿದ್ರು. ಮೊದಲ ಭಾಗವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದೆ. ಎರಡನೇ ಭಾಗದಲ್ಲಿ ಸ್ಪೀಕರ್‌ ಆರ್ಡರ್‌ ಸುಪ್ರೀಂಕೋರ್ಟ್‌ ಬದಲಿಸಿದೆ. ಅನರ್ಹ ಶಾಸಕರಿಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ– ಸಿದ್ದರಾಮಯ್ಯ

17 ಜನರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಅದರಲ್ಲಿ ಎರಡು ಭಾಗವಿದೆ. ಪಕ್ಷಾಂತರ ಮಾಡಿರೋದರಿಂದ ಅನರ್ಹರಾಗಿದ್ದಾರೆ ಅನ್ನೋದು ಒಂದು ಭಾಗ. ಚುನಾವಣೆಗೆ ಈ ಅವಧಿಯಲ್ಲಿ (2023) ಪೂರ್ಣ ನಿಲ್ಲಬಾರದು ಅನ್ನೋದು ಇನ್ನೊಂದು ಭಾಗ–ಸಿದ್ದರಾಮಯ್ಯ

ವಿಪ್ ಉಲ್ಲಂಘನೆಯ ಆಧಾರದ ಮೇಲೆ ಸ್ಪೀಕರ್‌ ಮುಂದೆ ಅರ್ಜಿ ಸಲ್ಲಿಸಿದ್ದೆವು. ಅದರ ಆಧಾರದ ಮೇಲೆ ವಿಚಾರಣೆ ನಡೆಸಿದ ಸ್ಪೀಕರ್ ಅವರು ರಾಜೀನಾಮೆ ಸ್ವಯಂಪ್ರೇರಣೆಯಿಂದ ಇಲ್ಲ, ವಾಸ್ತವಿಕತೆಯಿಂದ ಕೂಡಿಲ್ಲ ಅಂತ ಹೇಳಿ ಅರ್ನರ್ಹತೆ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು

ಸರ್ವೋಚ್ಛ ನ್ಯಾಯಾಲಯ ಸ್ಪೀಕರ್‌ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ನಾನು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಿಸುತ್ತೆನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಎಲ್ಲರೂ ಸ್ವಂತ ಬಲದಿಂದಲೇ ಗೆದ್ದು ಬರುವ ವಿಶ್ವಾಸ ಇದೆ ಎಂದು ಮುನಿರತ್ನ ಪ್ರತಿಕ್ರಿಯಿಸಿದ್ದಾರೆ. ನನ್ನ ಮತ್ತು ಪ್ರತಾಪ ಗೌಡ ಅವರ ತೀರ್ಪಿನ ಪ್ರತಿ ಓದಿ ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ. 

ಬಿಜೆಪಿಯದು ಅಕ್ರಮ ಸರಕಾರ ಎಂಬುದು ಸುಪ್ರೀಂ ಕೋರ್ಟಿನ ತೀರ್ಪಿನಿಮದ ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಟ್ವೀಟ್‌ ಮಾಡಿದ್ದಾರೆ. 

ಅನರ್ಹ ಶಾಸಕರು ಬಿಜೆಪಿಯನ್ನು ಅಧಿಕೃತವಾಗಿ ಸೇರಿದ ನಂತರವಷ್ಟೇ ಅವರಿಗೆ ಟಿಕೆಟ್ ಕೊಡಬೇಕೋ ಬೇಡವೋ ಎನ್ನುವುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಪ್ರಭಾಕರ ಕೋರೆ ತಿಳಿಸಿದ್ದಾರೆ.

ಚುನಾವಣೆ ಸ್ಫರ್ಧೆ ಬಗ್ಗೆ ನಾವು ಕೂತು ಚರ್ಚಿಸುತ್ತೇವೆ, ಯಾವ ಪಕ್ಷದಿಂದ ಸ್ಪರ್ಧಿಸುತ್ತೇವೆ ಎಂಬುದನ್ನು ಆಮೇಲೆ ನಿರ್ಧರಿಸುತ್ತೇವೆ ಎಂದು ಬೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.

ನಾನು ರಾಜೀನಾಮೆಯನ್ನೇ ಕೊಟ್ಟಿರಲಿಲ್ಲ. ನಮ್ಮ ಶಾಸಕ ಸ್ಥಾನ ಉಳಿಯಬೇಕಿತ್ತು ಎಂದು ಆರ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಅರ್ನಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ನನ್ನ ರಾಜೀನಾಮೆಯ ನಂತರ ನಾನು ಕಳೆದ 123 ದಿನಗಳ ಸೂರ್ಯಾಸ್ತಮ ಮುಗಿಯುತ್ತಿದ್ದು ನೂತನ ಸೂರ್ಯೋದಯಕ್ಕೆ ನಾನು ಕಾಯುತ್ತಿದ್ದೇನೆ ಎಂದು ಕೆ.ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ. ಸ್ಪೀಕರ್ ಅವರು ನಮ್ಮನ್ನು ಮೂರೂವರೆ ವರ್ಷ ರಾಜಕೀಯದಿಂದ ದೂರ ಇಡಲು ಪ್ರಯತ್ನಿಸಿದ್ದರು. ಅದನ್ನು ಕೋರ್ಟ್ ತಳ್ಳಿಹಾಕಿದೆ. ಇದರಿಂದ ನಮಗೆಲ್ಲ ಖುಷಿಯಾಗಿದೆ ಎಂದು ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಯಲ್ಲಿ ನಿಲ್ಲುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಸಮಾಧಾನವಿದೆ. ನನ್ನ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ನನ್ನ ಜತೆಗೆ ಈಗ ಬಿಜೆಪಿ ಶಕ್ತಿ ಇದೆ. ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಪಕ್ಷದ ಹೈಕಮಾಂಡ್ ಅದನ್ನು ನಿಭಾಯಿಸುತ್ತದೆ. ನಾನು ಮಾಡಿದ ಕೆಲಸ ನನ್ನ ಕೈಹಿಡಿಯಲಿದೆ ಎಂದು ಗೋಪಾಲಯ್ಯ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಸಾರಾಂಶ: 5) ಶಾಸಕರು ರಾಜೀನಾಮೆ ಪತ್ರ ತಂದರೆ ಸ್ಪೀಕರ್ ಅದನ್ನು ಅಂಗೀಕರಿಸಬೇಕು. ವ್ಯಾಖ್ಯಾನ ಮಾಡುವಂತಿಲ್ಲ.

ಸುಪ್ರೀಂಕೋರ್ಟ್‌ ತೀರ್ಪಿನ ಸಾರಾಂಶ: 4) ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್‌ಗೆ ಇದೆ. ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ.

ಸುಪ್ರೀಂಕೋರ್ಟ್‌ ತೀರ್ಪಿನ ಸಾರಾಂಶ: 3) ಅನರ್ಹತೆ ಚುನಾವಣೆಗೆ ಅಡ್ಡಿಯಲ್ಲ

ಸುಪ್ರೀಂಕೋರ್ಟ್‌ ತೀರ್ಪಿನ ಸಾರಾಂಶ: 2) ಚುನಾವಣೆ ಗೆಲ್ಲುವವರೆಗೆ ಅನರ್ಹತೆ ಇರುತ್ತೆ

ಸುಪ್ರೀಂಕೋರ್ಟ್‌ ತೀರ್ಪಿನ ಸಾರಾಂಶ: 1) ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು

ನಾಳೆ ಅನರ್ಹರ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

ಅನರ್ಹತೆಯ ಆದೇಶ ಎತ್ತಿ ಹಿಡಿದರೂ ಅವಧಿ ಮಿತಿಗೊಳಿಸಿ ಸುಪ್ರೀಂ ತೀರ್ಪು

ಉಪ ಚುನಾವಣೆಯಲ್ಲಿ ಎಲ್ಲ 17 ಅನರ್ಹ ಶಾಸಕರು ಸ್ಪರ್ಧಿಸಬಹುದು

ಖಾಲಿ ಇರುವ ಕ್ಷೇತ್ರಗಳ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಉಪ ಚುನಾವಣೆಗೆ ಸ್ಪರ್ಧಿಸಲು ‌ಅವಕಾಶ ನೀಡಬಹುದೇ ಎಂಬುದನ್ನು ಪರಿಶೀಲಿಸಲಾಗಿದೆ.

ಸ್ಪೀಕರ್‌ಗೆ ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಇಲ್ಲ.

ಸ್ಪೀಕರ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌.

ಅನರ್ಹತೆಯ‌ನ್ನು ನಾವು ಒಪ್ಪಿದ್ದೇವೆ. ಆದರೆ ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ ಅನರ್ಹ ಎನ್ನುವಂತಿಲ್ಲ

ಸ್ಪೀಕರ್‌ ನಡೆ ಸರಿಯಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು. ಶಾಸಕರ ನಡೆಯನ್ನು ಪ್ರೋತ್ಸಾಹಿಸಲು ಆಗುವುದಿಲ್ಲ ಎಂದ ನ್ಯಾಯಾಧೀಶರು.

ಅನರ್ಹತೆ ಪ್ರಶ್ನಿಸಿದ್ದ ಪ್ರಕರಣವನ್ನು ಮೊದಲು ಹೈಕೋರ್ಟ್ ವಿಚಾರಣೆಗೆ ಒಳಪಡಿಸಬೇಕಿತ್ತು. ಎರಡೆರಡು ಕಡೆ ವಿಚಾರಣೆ ಬೇಡ ಎಂದು ಪೀಠ ಇಲ್ಲೇ ವಿಚಾರಣೆ ನಡೆಸುತ್ತಿದೆ.

ಶಾಸಕರ ನಡೆಯನ್ನು ಪ್ರೋತ್ಸಾಹಿಸುವುದು ಸರಿ ಅಲ್ಲ, ಎರೆಡೆರಡು ವಿಚಾರಣೆ ಬೇಡ ಎಂದು ನ್ಯಾಯಮೂರ್ತಿ ರಮಣ ತೀರ್ಪನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.

ತೀರ್ಪು ಓದುತ್ತಿರುವ ನ್ಯಾಯಮೂರ್ತಿ ಎನ್.ವಿ. ರಮಣ

ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ನ್ಯಾಯಾಂಗ ಈ ತೀರ್ಪಿನ ಮೂಲಕ ತನ್ನ ನಿಲುವು ಸ್ಪಷ್ಟಪಡಿಸಲಿದೆ. ಈ ಹಿನ್ನೆಲೆಯಲ್ಲಿ ಇದು ದೇಶದ ಭವಿಷ್ಯದ ದೃಷ್ಟಿಯಿಂದ ದಿಕ್ಸೂಚಿ ತೀರ್ಪು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪು ನೀಡಲಿದೆ.

ಕೋರ್ಟ್‌ ಹಾಲ್‌ಗೆ ಆಗಮಿಸಿದ ನ್ಯಾಯಮೂರ್ತಿಗಳು

ಕೋರ್ಟ್‌ ಹಾಲ್‌ಗೆ ಆಗಮಿಸಿದ ಅನರ್ಹ ಶಾಸಕರ ಪರ ವಕೀಲರು

ಅನರ್ಹರ ವಿಚಾರಣೆ: ಕಲಾಪಕ್ಕೆ ಕ್ಷಣಗಣನೆ

ವಿವಿಧ ರಾಜಕೀಯ ಪಕ್ಷಗಳು ಮತ್ತು ಸ್ಪೀಕರ್‌ ಪರ ವಕೀಲರು ಕೋರ್ಟ್‌ಗೆ ಆಗಮಿಸಿದ್ದಾರೆ. ವಿಚಾರಣೆಗೆ ಕ್ಷಣಗಣನೆ ಆರಂಭವಾಗಿದೆ.

ಅನರ್ಹ ಶಾಸಕರ ತೀರ್ಪಿಗೆ ಕ್ಷಣಗಣನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.