ADVERTISEMENT

Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 12:24 IST
Last Updated 24 ಜುಲೈ 2025, 12:24 IST
   

ನವದೆಹಲಿ: ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ(ಸಿಇಟಿಎ) ಎಂದು ಕರೆಯಲಾಗುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಭಾರತ ಮತ್ತು ಬ್ರಿಟನ್ ದೇಶಗಳು ಸಹಿ ಹಾಕಿವೆ. ದೇಶದ ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರದ ದೃಷ್ಟಿಯಿಂದ ಭಾರತ ಈವರೆಗೆ ಮಾಡಿಕೊಂಡ 16ನೇ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ.

2014ರಿಂದ ದೇಶವು ಮಾರಿಷಸ್, ಯುಎಇ, ಆಸ್ಟ್ರೇಲಿಯಾ, ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ ಮತ್ತು ಬ್ರಿಟನ್ ಜೊತೆ ಐದು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಎಫ್‌ಟಿಎ ಎಂದರೇನು?

ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ಒಂದು ವ್ಯವಸ್ಥೆಯಾಗಿದ್ದು, ಅಲ್ಲಿ ಅವರು ತಮ್ಮ ನಡುವೆ ವ್ಯಾಪಾರದ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣ ತೆಗೆದುಹಾಕಲು ಅಥವಾ ಕಡಿಮೆ ಮಾಡಲು ಒಪ್ಪಂದ ಮಾಡಿಕೊಂಡಿರುತ್ತಾರೆ. ಜೊತೆಗೆ ಪಾಲುದಾರ ದೇಶಗಳಿಂದ ಆಮದುಗಳ ಗಮನಾರ್ಹ ಮೌಲ್ಯದ ಮೇಲಿನ ವ್ಯಾಪಾರೇತರ ಅಡೆತಡೆಗಳನ್ನು ಕಡಿತಗೊಳಿಸುತ್ತಾರೆ. ಸರಕು ಸೇವೆಗಳ ರಫ್ತು ಮತ್ತು ದ್ವಿಪಕ್ಷೀಯ ಹೂಡಿಕೆಗಳನ್ನು ಉತ್ತೇಜಿಸಲು ಮಾನದಂಡಗಳನ್ನು ಸಡಿಲಗೊಳಿಸುತ್ತಾರೆ.

ADVERTISEMENT

ಜಗತ್ತಿನಾದ್ಯಂತ ಸದ್ಯ 350 ಮುಕ್ತ ವ್ಯಾಪಾರ ಒಪ್ಪಂದಗಳು ಪ್ರಗತಿಯಲ್ಲಿವೆ. ಬಹುತೇಕ ದೇಶಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ದೇಶಗಳ ಜೊತೆ ಈ ಒಪ್ಪಂದ ಮಾಡಿಕೊಂಡಿವೆ.

ಎಫ್‌ಟಿಎ ಅನುಕೂಲಗಳೇನು?

* ಈ ಒಪ್ಪಂದದ ಮೂಲಕ ಪಾಲುದಾರ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಶೂನ್ಯ ಸುಂಕದ ಪ್ರವೇಶ ಸಿಗಲಿದೆ. ರಫ್ತು ಮಾರುಕಟ್ಟೆಗಳ ವೈವಿಧ್ಯೀಕರಣ ಮತ್ತು ವಿಸ್ತರಣೆಗೆ ಸಹಾಯ ಮಾಡುತ್ತದೆ.

* ಎಫ್‌ಟಿಎಗೆ ಒಳಪಡದ ದೇಶಗಳ ಜೊತೆಗಿನ ವಹಿವಾಟಿಗೆ ಹೋಲಿಸಿದರೆ ಎಫ್‌ಟಿಎ ಒಪ್ಪಂದ ಮಾಡಿಕೊಂಡ ಪಾಲುದಾರ ದೇಶದ ಜೊತೆಗಿನ ವಹಿವಾಟು ಮುಕ್ತವಾಗಿರುತ್ತದೆ.

* ಇಂತಹ ಒಪ್ಪಂದಗಳು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತವೆ. ಮೌಲ್ಯವರ್ಧಿತ ಉತ್ಪಾದನೆಗಾಗಿ ಕಚ್ಚಾ ವಸ್ತುಗಳು ಮತ್ತು ಬಂಡವಾಳ ಸರಕುಗಳಿಗೆ ಪ್ರವೇಶವನ್ನು ಅನುಮತಿಸುತ್ತವೆ.

* ದೀರ್ಘಕಾಲೀನ ದಕ್ಷತೆ ಮತ್ತು ಗ್ರಾಹಕ ಕಲ್ಯಾಣ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತವೆ.

ಭಾರತವು ಇಲ್ಲಿಯವರೆಗೆ ಸಹಿ ಮಾಡಿದ ಎಫ್‌ಟಿಎಗಳು

ಭಾರತವು ಶ್ರೀಲಂಕಾ, ಭೂತಾನ್, ಥೈಲ್ಯಾಂಡ್, ಸಿಂಗಪುರ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯುಎಇ, ಮಾರಿಷಸ್, 10 ರಾಷ್ಟ್ರಗಳ ಆಸಿಯನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಒಕ್ಕೂಟ ಮತ್ತು ನಾಲ್ಕು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ಎಎಫ್‌ಟಿಎ(ಲಿಚ್ಟೆನ್‌ಸ್ಟೈನ್, ಐಸ್‌ಲ್ಯಾಂಡ್, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್) ನೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಇದರ ಜೊತೆಗೆ, ಭಾರತವು ಪ್ರಸ್ತುತ ತನ್ನ ಹಲವು ವ್ಯಾಪಾರ ಪಾಲುದಾರ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳ ಮಾತುಕತೆ ನಡೆಸುತ್ತಿದೆ. ಅಮೆರಿಕ, ಓಮನ್, ಯುರೋಪಿಯನ್ ಯೂನಿಯನ್, ಪೆರು ಮತ್ತು ಇಸ್ರೇಲ್ ಜೊತೆ ಮಾತುಕತೆ ನಡೆಯುತ್ತಿದೆ.

ಕೆಲವು ರಾಜಕೀಯ ಕಾರಣಗಳಿಂದಾಗಿ ಕೆನಡಾ ಜೊತೆಗಿನ ಎಫ್‌ಟಿಎ ಒಪ್ಪಂದವು ಸ್ಥಗಿತಗೊಂಡಿದೆ.

ಈ ವ್ಯಾಪಾರ ಒಪ್ಪಂದಗಳು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು, ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡಲು, ಕಾರ್ಯತಂತ್ರದ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಸಮತೋಲಿತ ವ್ಯಾಪಾರ ಸೌಲಭ್ಯದ ಮೂಲಕ ದೇಶೀಯ ಉದ್ಯಮವನ್ನು ಬೆಂಬಲಿಸಲು ಕೊಡುಗೆ ನೀಡಿವೆ.

ಒಟ್ಟಾರೆಯಾಗಿ, ಈ ಎಫ್‌ಟಿಎಗಳು ಭಾರತದ ದೇಶೀಯ ಉತ್ಪಾದನೆ, ಸೇವೆಗಳ ರಫ್ತು ಮತ್ತು ಸ್ಥಿತಿಸ್ಥಾಪಕ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಏಕೀಕರಣವನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಸಮಗ್ರ ವ್ಯಾಪಾರ ಒಪ್ಪಂದಗಳ ಕಡೆಗೆ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ.

ಭಾರತ-ಬ್ರಿಟನ್ ಸಿಇಟಿಎ

ಭಾರತ ಮತ್ತು ಬ್ರಿಟನ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿವೆ. ಇದು ಚರ್ಮ, ಪಾದರಕ್ಷೆಗಳು ಮತ್ತು ಬಟ್ಟೆಗಳಂತಹ ಅಧಿಕ ಕಾರ್ಮಿಕರು ಅಗತ್ಯವಿರುವ ಉತ್ಪನ್ನಗಳ ರಫ್ತಿನ ಮೇಲಿನ ತೆರಿಗೆಗಳನ್ನು ತೆಗೆದುಹಾಕುತ್ತದೆ. ಬ್ರಿಟನ್‌ನಿಂದ ವಿಸ್ಕಿ ಮತ್ತು ಕಾರುಗಳ ಆಮದುಗಳನ್ನು ಅಗ್ಗವಾಗಿಸುತ್ತದೆ. 2030 ರ ವೇಳೆಗೆ ಎರಡು ಆರ್ಥಿಕತೆಗಳ ನಡುವೆ ಸದ್ಯ ನಡೆಯುತ್ತಿರುವ 56 ಶತಕೋಟಿ ಡಾಲರ್‌ ವ್ಯಾಪಾರ ಮೌಲ್ಯವನ್ನು ದ್ವಿಗುಣಗೊಳಿಸುವ ಪ್ರಯತ್ನವಾಗಿದೆ.

ಭಾರತವು ಬ್ರಿಟನ್‌ನಿಂದ ಸ್ಕಾಚ್ ವಿಸ್ಕಿ ಮತ್ತು ಜಿನ್ ಮೇಲಿನ ಆಮದು ಸುಂಕವನ್ನು ಆರಂಭದಲ್ಲಿ ಶೇ 75ಕ್ಕೆ ಕಡಿತಗೊಳಿಸುತ್ತಿದ್ದು, 10 ವರ್ಷಗಳ ಬಳಿಕ ಶೇ 40ಕ್ಕೆ ಇಳಿಸುತ್ತದೆ. ಪ್ರಸ್ತುತ, ಈ ಸುಂಕ ಶೇ 150ರಷ್ಟಿದೆ.

ಎರಡೂ ಕಡೆಯ ವಾಹನ ಆಮದುಗಳ ಮೇಲಿನ ಸುಂಕ ಕಡಿಮೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.