ADVERTISEMENT

Indian Army Day 2026: ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳಿವು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 11:24 IST
Last Updated 15 ಜನವರಿ 2026, 11:24 IST
   

ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಅಗ್ನಿ-5

ಅತ್ಯಂತ ನಿಖರವಾಗಿ 5 ಸಾವಿರ ಕಿ.ಮೀ. ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಮಧ್ಯಮ ಶ್ರೇಣಿಯ ’ಅಗ್ನಿ–5’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ 2025ರ ಆಗಸ್ಟ್ 20ರಂದು ಯಶಸ್ವಿಯಾಗಿ ನಡೆಸಿದೆ. ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ಐಟಿಆರ್‌) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಲಾಗಿತ್ತು.

ಚೀನಾದ ಉತ್ತರ ಭಾಗ, ಯುರೋಪಿನ ಕೆಲವು ವಲಯಗಳು ಸೇರಿದಂತೆ ಇಡೀ ಏಷ್ಯಾವನ್ನೇ ತನ್ನ ದಾಳಿಯ ವ್ಯಾಪ್ತಿಯೊಳಗೆ ತರುವ ಸಾಮರ್ಥ್ಯವನ್ನು ‘ಅಗ್ನಿ–5’ ಕ್ಷಿಪಣಿ ಹೊಂದಿದೆ. ಹಲವು ಗುರಿಗಳನ್ನು ಸ್ವತಂತ್ರವಾಗಿ ಭೇದಿಸಿ ಮತ್ತೆ ವಾಪಸ್ಸಾಗುವ ಕ್ಷಿಪಣಿ ವಾಹಕ ತಂತ್ರಜ್ಞಾನವನ್ನು (ಎಂಐಆರ್‌ವಿ) ‘ಅಗ್ನಿ–5’ ಹೊಂದಿದೆ.

ADVERTISEMENT
2. ಬ್ರಹ್ಮೋಸ್‌ ಕ್ಷಿಪಣಿ

ಬ್ರಹ್ಮೋಸ್‌ ಒಂದು ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಜಲಾಂತರ್ಗಾಮಿಗಳು, ಹಡಗುಗಳು, ವಿಮಾನಗಳು ಅಥವಾ ಭೂ-ಆಧಾರಿತ ವೇದಿಕೆಗಳಿಂದ ಉಡಾಯಿಸಬಹುದು. ಬ್ರಹ್ಮೋಸ್‌ ಕ್ಷಿಪಣಿಯ ಕಾರ್ಯತಂತ್ರದ ಬಳಕೆಗಳು ಅಸಾಧಾರಣವಾಗಿದ್ದು, ಇದರ ಸಾಮರ್ಥ್ಯ 2025ರ ಮೇ ಅಲ್ಲಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಸಾಬೀತಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ, ಭಾರತ ಸಂಘಟಿತ ಮಿಲಿಟರಿ ಕಾರ್ಯಾಚರಣೆ ನಡೆಸಿ, ಕಲಾಂ ದಶಕಗಳ ಹಿಂದೆ ಕನಸು ಕಂಡಿದ್ದ ಆಯುಧ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಮೇ 7, 2025ರಂದು ಆಪರೇಷನ್‌ ಸಿಂಧೂರ ಭಾರತದ ಬಹುಮುಖಿ ಆಕ್ರಮಣದ ರೂಪದಲ್ಲಿ ಆರಂಭಗೊಂಡು, ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತದ ಪ್ರತ್ಯಾಕ್ರಮಣ ಸಾಮರ್ಥ್ಯದ ಕೇಂದ್ರದಲ್ಲಿರಿಸಿತ್ತು. ವಿಮಾನಗಳಿಂದ ಮತ್ತು ಭೂಮಿಯಿಂದ ಉಡಾವಣೆಗೊಳ್ಳುವ ಬ್ರಹ್ಮೋಸ್‌ ಆವೃತ್ತಿಗಳು ಈ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ಪಡೆಗಳ ಪ್ರಮುಖ ಆಯುಧವಾದವು.

ಏಕಕಾಲದಲ್ಲಿ ಸೇನೆಯ ಮೂರೂ ವಿಭಾಗಗಳಿಂದಲೂ ಯುದ್ಧ ಸಂದರ್ಭದಲ್ಲೂ ಉಡಾವಣೆಗೊಳ್ಳಬಲ್ಲ ಜಗತ್ತಿನ ಏಕೈಕ ಕ್ರೂಸ್‌ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಬ್ರಹ್ಮೋಸ್‌ ಭಾಜನವಾಗಿದೆ. ನಾಲ್ಕು ದಿನಗಳ ಆಪರೇಷನ್‌ ಸಿಂಧೂರ ಬ್ರಹ್ಮೋಸ್‌ ಕ್ಷಿಪಣಿಯನ್ನು ಬಳಸಿದ ಮೊದಲ ನೇರ ಚಕಮಕಿಯಾಗಿದ್ದು, ಅದು ಎಲ್ಲ ನಿರೀಕ್ಷೆಗಳನ್ನೂ ಮೀರಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು.

3. ಅಗ್ನಿ ಪ್ರೈಮ್‌’ ಕ್ಷಿಪಣಿ

2,000 ಕಿ.ಮೀ ವ್ಯಾಪ್ತಿಯಲ್ಲಿನ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ರೈಲು ಬೋಗಿಯ ಮೇಲೆ ಅಳವಡಿಸಿದ್ದ ಲಾಂಚರ್‌ನಿಂದ ಉಡಾಯಿಸುವ ಪರೀಕ್ಷಾರ್ಥ ಪ್ರಯೋಗವನ್ನು ಭಾರತ 2025ರ ಸೆಪ್ಟೆಂಬರ್‌ನಲ್ಲಿ ಯಶಸ್ವಿಯಾಗಿ ನಡೆಸಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ರೈಲು ಬೋಗಿಯ ಮೇಲಿನಿಂದ ಕ್ಷಿಪಣಿ ಉಡಾಯಿಸಲಾಗಿದೆ. ಯಾವುದೇ ಭಾಗಕ್ಕೆ ತ್ವರಿತವಾಗಿ ಕ್ಷಿಪಣಿ ಕೊಂಡೊಯ್ದು, ಉಡ್ಡಯನಕ್ಕೆ ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ‘ಅಗ್ನಿ ಪ್ರೈಮ್‌’ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವ ಕುರಿತು ಅಂದು ಮಾಹಿತಿ ಹಂಚಿಕೊಂಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ‘ಈ ಪರೀಕ್ಷೆಯಿಂದ, ರೈಲಿನ ಮೇಲಿಂದ ಕ್ಷಿಪಣಿಯನ್ನು ಉಡಾಯಿಸಬಲ್ಲ ಸಾಮರ್ಥ್ಯವಿರುವ ದೇಶಗಳ ಗುಂಪಿಗೆ ಭಾರತ ಸೇರಿತು’ ಎಂದಿದ್ದರು.

4. ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2024ರ ನವೆಂಬರ್ 12 ರಂದು ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ (LRLACM) ‘ನಿರ್ಭಯ್’ದ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿ 1,000 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಮೊಬೈಲ್ ಆರ್ಟಿಕ್ಯುಲೇಟೆಡ್ ಲಾಂಚರ್‌ನಿಂದ ಉಡಾವಣೆ ಮಾಡಲಾಯಿತು. LRLACM ದೂರದ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ಕ್ರೂಸ್ ಕ್ಷಿಪಣಿ ವ್ಯವಸ್ಥೆಯಾಗಿದೆ.

5. ಎಸ್‌–400 ಕ್ಷಿಪಣಿ ವ್ಯವಸ್ಥೆ

ರಷ್ಯಾ ಅಭಿವೃದ್ಧಿಪಡಿಸಿರುವ ಎಸ್‌–400 ಕ್ಷಿಪಣಿ ವ್ಯವಸ್ಥೆಯು ಶತ್ರು ಪಾಳಯ ನಡೆಸುವ ವೈಮಾನಿಕ ದಾಳಿ ತಡೆಯುವ ಪ್ರಮುಖ ಆಯುಧವಾಗಿ ಹೊರಹೊಮ್ಮಿದೆ. ವಿಶಿಷ್ಟ ರೇಡಾರ್‌ ವ್ಯವಸ್ಥೆಯ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವ ಈ ಕ್ಷಿಪಣಿಯು 600 ಕಿ.ಮೀ ದೂರದ ವರೆಗಿನ ಗುರಿಯನ್ನು ನಾಶ ಮಾಡಬಲ್ಲದು. ಎದುರಾಗುವ ಅಪಾಯದ ಸ್ವರೂಪವನ್ನು ಆಧರಿಸಿ, 120 ಕಿ.ಮೀ., 200 ಕಿ.ಮೀ. 250 ಕಿ.ಮೀ. ಹಾಗೂ 380 ಕಿ.ಮೀ. ದೂರದ ವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯದ ಕ್ಷಿಪಣಿಗಳನ್ನು ಈ ವ್ಯವಸ್ಥೆ ಹೊಂದಿದೆ.

6. ಬರಾಕ್‌–8 ಕ್ಷಿಪಣಿ

ವಾಯು, ಭೂಮೇಲ್ಮೈ ಹಾಗೂ ಸಮುದ್ರದ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಡಿಜಿಟಲ್ ರೇಡಾರ್, ಲಾಂಚರ್‌ಗಳು, ಕಮಾಂಡ್ ಮತ್ತು ಕಂಟ್ರೋಲಿಂಗ್ ವ್ಯವಸ್ಥೆ, ಡಾಟಾ ಲಿಂಕ್ ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕ ವ್ಯವಸ್ಥೆ ಹೊಂದಿರುವ ಈ ಕ್ಷಿಪಣಿ ಯಾವುದೇ ವಾತಾವರಣದಲ್ಲಿ ಹಗಲು, ರಾತ್ರಿ ಎನ್ನದೇ ಏಕಕಾಲದಲ್ಲಿ ವಿವಿಧ ಕಡೆ ನಿಗಾ ವಹಿಸುವ ಸಾಮರ್ಥ್ಯವಿದೆ.

7.ಆಕಾಶ್‌ ಕ್ಷಿಪಣಿ

ಹೊಸ ತಲೆಮಾರಿನ ಆಕಾಶ್, ಭೂಮೇಲ್ಮೈಯಿಂದ ಆಕಾಶದತ್ತ ದಾಳಿ ಮಾಡುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಕಡಿಮೆ ಎತ್ತರದಲ್ಲಿ ಅತಿ ವೇಗದಿಂದ ಹಾರಾಟ ನಡೆಸುವ, ಮಾನವರಹಿತ ವೈಮಾನಿಕ ಗುರಿಯನ್ನು ಅತ್ಯಂತ ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಸೇನಾ ದಿನದ ಇತಿಹಾಸ

ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಇವರು ಕರ್ನಾಟಕದ ಕೊಡಗಿನವರು.ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ಬಚರ್ ಅವರಿಂದ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಗೌರವ ಸಮರ್ಪಿಸಲಾಗುತ್ತದೆ.

ಜನವರಿ 15ರಂದೇ ಏಕೆ?
1895ರ ಏಪ್ರಿಲ್ 1ರಂದೇ ಭಾರತೀಯ ಸೇನೆ ಅಸ್ತಿತ್ವಕ್ಕೆ ಬಂದಿದ್ದರೂ ಸ್ವಾತಂತ್ರ್ಯಾನಂತರ ತನ್ನ ಮೊದಲ ಕಮಾಂಡರ್ ಇನ್ ಚೀಫ್ ಅನ್ನು ಹೊಂದಿದ್ದು 1949ರ ಜನವರಿ 15ರಂದು. ಹೀಗಾಗಿ ಇದೇ ದಿನವನ್ನು ಸೇನಾ ದಿನವಾಗಿ ಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.