ADVERTISEMENT

ಕೆಂಪು ಕೋಟ್‌ನಿಂದ ಡಿಜಿಟಲ್ ಪಿಕ್ಸೆಲ್‌; ಭಾರತೀಯ ಸೇನೆಯ ಸಮವಸ್ತ್ರ ಪರಿಷ್ಕರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 1:02 IST
Last Updated 15 ಜನವರಿ 2026, 1:02 IST
<div class="paragraphs"><p>ಕೆಂಪು ಕೋಟ್‌ನಿಂದ ಡಿಜಿಟಲ್ ಪಿಕ್ಸೆಲ್‌; ಭಾರತೀಯ ಸೇನೆಯ ಸಮವಸ್ತ್ರ ಪರಿಷ್ಕರಣೆ</p></div>

ಕೆಂಪು ಕೋಟ್‌ನಿಂದ ಡಿಜಿಟಲ್ ಪಿಕ್ಸೆಲ್‌; ಭಾರತೀಯ ಸೇನೆಯ ಸಮವಸ್ತ್ರ ಪರಿಷ್ಕರಣೆ

   

ಚಿತ್ರ: ಎಕ್ಸ್‌

ಶೌರ್ಯ, ಸಾಹಸ ಹಾಗೂ ಆಧುನಿಕ ಯುದ್ಧನೀತಿಯಿಂದ ಜಗತ್ತಿನಲ್ಲೇ ವಿಶಿಷ್ಟ ಸ್ಥಾನ ಹೊಂದಿರುವ ಭಾರತೀಯ ಸೇನೆಯು ತನ್ನ ಸಮವಸ್ತ್ರದ ಮೂಲಕವೂ ಮೇರುಸ್ಥಾನವನ್ನು ಹೊಂದಿದೆ. ಬ್ರಿಟಿಷ್ ಕಾಲದ ಕೆಂಪು ಕೋಟು, ಸ್ವಾತಂತ್ರ್ಯ ಪೂರ್ವದ ಖಾಕಿ ಬದಲಾಗಿ ಈಗ ಪಿಕ್ಸೆಲ್‌ ವಿನ್ಯಾಸದ ಆಲೀವ್ ಹಸಿರು ಭಾರತೀಯ ಸೇನೆಯ ಹೆಮ್ಮೆಯ ಸಮವಸ್ತ್ರವಾಗಿದೆ.

ಭಾರತೀಯ ಸೇನೆಯ ಶೌರ್ಯ, ಪರಾಕ್ರಮವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಜನವರಿ 15ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ.

ADVERTISEMENT

ಔಪಚಾರಿಕ ಉಡುಗೆಗಿಂತಲೂ ಮಿಲಿಟರಿ ಸಮವಸ್ತ್ರ ಎನ್ನುವುದು ಬದಲಾಗುತ್ತಿರುವ ಯುದ್ಧಭೂಮಿಯ ರಣತಂತ್ರ, ಹವಾಮಾನ ಹಾಗೂ ತಮ್ಮ ಐಕ್ಯತೆಯ ಪ್ರದರ್ಶನದ ಮೂಲಕ ಪರಿಸ್ಥಿತಿಗೆ ಹೊಂದಿಕೊಳ್ಳುವುದರ ಸೂಚಕವಾಗಿದೆ. 

ಬ್ರಿಟಿಷರ ವಸಾಹತುಶಾಹಿ ಯುಗದಲ್ಲಿ ಕೆಂಪು ಕೋಟು ತೊಡುತ್ತಿದ್ದ ಭಾರತದ ಸೈನಿಕರು, ಆಧುನಿಕ ಯುಗದಲ್ಲಿ ಡಿಜಿಟಲ್‌ ಕಣ್ಣಿಗೂ ಗೋಚರಿಸದಂಥ ಮತ್ತು ತಮ್ಮದೇ ಗುರುತನ್ನು ಸ್ಥಾಪಿಸುವ ವಿಶಿಷ್ಟ ಬಗೆಯ ಸಮವಸ್ತ್ರದವರೆಗೂ ತಂತ್ರಜ್ಞಾನಕ್ಕೆ ತಕ್ಕಂತೆ ರೂಪಾಂತರಗೊಂಡಿದೆ. ಭಾರತೀಯ ಸೇನೆಯ ಸಮವಸ್ತ್ರದ ವಿಕಸನವು ಉಪಖಂಡದಲ್ಲಿನ ಯುದ್ಧದ ರೂಪಾಂತರ ಮತ್ತು ಸಾಮ್ರಾಜ್ಯಶಾಹಿ ಮುಕ್ತ ಸ್ವಾವಲಂಬಿ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿದ ಭಾರತದ ಪಯಣವನ್ನು ಸಾಕ್ಷೀಕರಿಸಿದೆ.

ಬ್ರಿಟಿಷರ ಕಾಲದ ಕೆಂಪು ಕೋಟು

ಈಸ್ಟ್ ಇಂಡಿಯಾ ಕಂಪನಿಯ ಆರಂಭಿಕ ವರ್ಷಗಳಲ್ಲಿ ಭಾರತೀಯ ಸೈನಿಕರು ಗಾಢ ಕೆಂಪು ಬಣ್ಣದ ಸಮವಸ್ತ್ರ ಧರಿಸುತ್ತಿದ್ದರು. ಇದು ಬ್ರಿಟಿಷ್ ರೆಜಿಮೆಂಟ್‌ನ ಪರಂಪರೆಯನ್ನೇ ಪ್ರತಿನಿಧಿಸುತ್ತಿತ್ತು. ಇದು ಯುದ್ಧಭೂಮಿಗಿಂತಲೂ ಪರೇಡ್‌ಗಾಗಿಯೇ ವಿನ್ಯಾಸಗೊಳಿಸಿದ ವಸ್ತ್ರವಾಗಿತ್ತು. ಆದರೆ ಭಾರತದ ಹವಾಗುಣಕ್ಕೆ ಇದು ಹಾನಿಕಾರಕ ಎಂದು ಮುಂದೆ ಸಾಬೀತಾಯಿತು. ಗಾಢ ಬಣ್ಣವು ಶತ್ರುಗಳ ಕಣ್ಣಿಗೆ ಸುಲಭವಾಗಿ ಗೋಚರಿಸುವಂತಿತ್ತು.

ಸಂಪ್ರದಾಯದ ಎದುರು ಸೇನಾ ಕಾರ್ಯಾಚರಣೆಯ ಅಗತ್ಯವು ಅಂತಿಮವಾಗಿ ಮೇಲುಗೈ ಸಾಧಿಸಿತು. 19ನೇ ಶತಮಾನದ ಅಂತ್ಯದ ವೇಳೆಗೆ ಬ್ರಿಟಿಷ್ ಕಮಾಂಡರ್‌ಗಳು ಖಾಕಿಯನ್ನು ಸಮವಸ್ತ್ರವಾಗಿ ಅಳವಡಿಸಿಕೊಂಡರು. ಇದು ಭಾರತದ ಭೂಪ್ರದೇಶಕ್ಕೆ ಹೊಂದಿಕೊಳ್ಳುವ ಬಣ್ಣವಾಗಿದ್ದರಿಂದ ಇದರ ಬಳಕೆ ಆರಂಭವಾಯಿತು. ಯುದ್ಧತಂತ್ರದಲ್ಲಿ ಅತಿ ಅವಶ್ಯಕವಾದ ಗುರುತು ಮರೆಮಾಚುವಿಕೆಯಲ್ಲಿ ಭಾರತದ ಸೈನ್ಯದಲ್ಲಿ ಕೆಮೊಫ್ಲೇಜ್‌ನ ಮೊದಲ ಬಳಕೆ ಇದಾಗಿತ್ತು. ಖಾಕಿ ಚೆಡ್ಡಿ ಹಾಗೂ ಮೇಲಂಗಿಯು ಅವಿಭಜಿತ ಭಾರತದ ಸೈನ್ಯದ ಸಮವಸ್ತ್ರವಾಯಿತು. ಎರಡೂ ವಿಶ್ವಯುದ್ಧದಲ್ಲಿ ಪಾಲ್ಗೊಂಡ ಭಾರತೀಯ ಸೈನಿಕರು ಈ ಸಮವಸ್ತ್ರವನ್ನೇ ತೊಟ್ಟಿದ್ದರು. ಮರುಭೂಮಿ, ಅರಣ್ಯ ಪ್ರದೇಶದಲ್ಲೂ ಈ ಸಮವಸ್ತ್ರ ಸೂಕ್ತ ಎಂಬುದು ಸಾಬೀತಾಯಿತು.

ಕೆಂಪು, ಖಾಕಿಯಿಂದ ಆಲೀವ್ ಗ್ರೀನ್‌ನತ್ತ

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ದೇಶದ ರಾಜಕೀಯ ಸಾರ್ವಭೌಮತ್ಯ ಮಾತ್ರವಲ್ಲ ಮಿಲಿಟರಿಯಲ್ಲೂ ವಿಶಿಷ್ಟ ಗುರುತಿನೊಂದಿಗೆ ಹೊಸತನ ಉಂಟಾಯಿತು. ಆಲೀವ್‌ ಹಸಿರು ಬಣ್ಣದ ಸಮವಸ್ತ್ರವನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿತು. ಮತ್ತೊಂದೆಡೆ ಪಾಕಿಸ್ತಾನವು ಖಾಕಿಯನ್ನೇ ಉಳಿಸಿಕೊಂಡಿತು. 

ಆಲೀವ್ ಹಸಿರು ಬಣ್ಣವು ಭಾರತೀಯ ಸೈನ್ಯದ ಸಂಕೇತವಾಯಿತು. 1962ರ ಭಾರತ– ಚೀನಾ ಯುದ್ಧ, 1965 ಮತ್ತು 1971ರ ಭಾರತ – ಪಾಕ್ ಯುದ್ಧಗಳಲ್ಲೂ ಭಾರತೀಯ ಸೈನಿಕರು ಇದೇ ಸಮವಸ್ತ್ರವನ್ನು ತೊಟ್ಟಿದ್ದರು. 

ಆಧುನಿಕ ಯುದ್ಧತಂತ್ರ ಮತ್ತು ಕೆಮೊಫ್ಲೇಜ್

20ನೇ ಶತಮಾನದ ಅಂತ್ಯದ ಹೊತ್ತಿಗೆ ಜಗತ್ತಿನಲ್ಲಿ ಉಂಟಾದ ತಂತ್ರಜ್ಞಾನದ ಬದಲಾವಣೆಯು ಸೇನೆಯ ಸಮವಸ್ತ್ರದ ಮೇಲೂ ಸಾಕಷ್ಟು ಪರಿಣಾಮ ಬೀರಿತು. ಯುದ್ಧದಲ್ಲಿನ ಪ್ರಗತಿಗಳು ಮತ್ತಷ್ಟು ಬದಲಾವಣೆಗಳನ್ನು ಬಯಸಿದವು. 80ರ ದಶಕದ ಆರಂಭದಲ್ಲಿ, ಭಾರತೀಯ ಸೇನೆಯು ಯುದ್ಧ ಘಟಕಗಳಿಗೆ ಬ್ರಷ್‌ಸ್ಟ್ರೋಕ್ ಎಂಬ ಮರೆಮಾಚುವಿಕೆ (ಕೆಮೊಫ್ಲೇಜ್‌) ಮಾದರಿಗಳನ್ನು ಪರಿಚಯಿಸಿತು, ವಿಶೇಷವಾಗಿ ಕಾಡು ಮತ್ತು ಅರೆ-ಕಾಡಿನ ಪರಿಸರದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿತ್ತು. ಹೀಗಿದ್ದರೂ, ಆಲೀವ್ ಹಸಿರು ದೈನಂದಿನ ಕರ್ತವ್ಯದ ಸಮವಸ್ತ್ರವಾಗಿಯೇ ಮುಂದುವರಿಯಿತು.

ರಾಷ್ಟ್ರೀಯ ಫ್ಯಾಷನ್‌ ತಂತ್ರಜ್ಞಾನ ಸಂಸ್ಥೆ (NIFT) ನೆರವಿನೊಂದಿಗೆ ಭಾರತೀಯ ಸೇನೆಯು ಹೊಸ ಹಾಗೂ ಆಧುನಿಕ ರೀತಿಯ ಸಮವಸ್ತ್ರವನ್ನು ಸಿದ್ಧಪಡಿಸಿತು. ಇದನ್ನು 2022ರ ಸೇನಾ ದಿನದಂದು ಪ್ರದರ್ಶಿಸಿತು. ಭೂಪ್ರದೇಶ-ನಿರ್ದಿಷ್ಟ ಮಾದರಿಗಳಿಗಿಂತ ಭಿನ್ನವಾಗಿ, ಪಿಕ್ಸಲೇಟೆಡ್ ವಿನ್ಯಾಸವನ್ನು ಇದರಲ್ಲಿ ಅಳವಡಿಸಲಾಗಿತ್ತು. ಮರುಭೂಮಿ, ಅರಣ್ಯ, ಪರ್ವತ ಪ್ರದೇಶ ಮತ್ತು ನಗರ ಪ್ರದೇಶಗಳಿಗೂ ಸೂಕ್ತವೆಂದು ಪರಿಗಣಿಸಲಾಯಿತು.

ಭಾರತೀಯ ಸೇನೆಯ ಸಮವಸ್ತ್ರದಲ್ಲಿ ಫ್ಯಾಷನ್ ಕಡಿಮೆ ಹಾಗೂ ತಂತ್ರಜ್ಞಾನವೇ ಅಧಿಕವಾಗಿದೆ. ವಸಹಾತುಶಾಹಿಯ ಖಾಕಿ ಬಣ್ಣದಿಂದ ಆಧುನಿಕ ಸ್ವತಂತ್ರ ಭಾರತದ ಡಿಜಿಟಲ್ ಕೆಮೊಫ್ಲೇಜ್‌ವರೆಗೂ ಭಾರತೀಯ ಸೇನೆ ಮತ್ತು ಅದರ ಸಮವಸ್ತ್ರವು ಜಗತ್ತಿನಲ್ಲೇ ತನ್ನ ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಇಂದಿನ ಹೈಬ್ರಿಡ್ ಯುದ್ಧ ಮತ್ತು ನಿರಂತರ ಕಣ್ಗಾವಲಿನ ಯುಗದಲ್ಲಿ, ಸೈನಿಕನ ಸಮವಸ್ತ್ರವು ರಕ್ಷಣೆಯ ನಿರ್ಣಾಯಕವಾಗಿದೆ. ಯುದ್ಧದ ಸ್ವರೂಪವು ಬದಲಾಗುತ್ತಾ ಸಾಗಿದಂತೆ, ಸಮವಸ್ತ್ರದ ಸ್ವರೂಪವೂ ಪರಿಷ್ಕರಣೆಗೊಳ್ಳುತ್ತಲೇ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.