ADVERTISEMENT

ಸಂಪುಟ ವಿಸ್ತರಣೆ: ನೂತನ ಸಚಿವರಿಗೆ ಶನಿವಾರದೊಳಗೆ ಖಾತೆ ಹಂಚಿಕೆ

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಕಾಂಗ್ರೆಸ್‌–ಜೆಡಿಎಸ್‌ನಿಂದ ಬಂಡೆದ್ದು ಬಿಜೆಪಿಗೆ ವಲಸೆ ಬಂದ ಬಳಿಕ ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ರಾದ 10 ಶಾಸಕರು ಸಚಿವರಾಗಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:20 IST
Last Updated 6 ಫೆಬ್ರುವರಿ 2020, 10:20 IST

ಸಂಪುಟ ವಿಸ್ತರಣೆ: ನೂತನ ಸಚಿವರಿಗೆ ಶನಿವಾರದೊಳಗೆ ಖಾತೆ ಹಂಚಿಕೆ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಿದ್ದು 10 ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಎಲ್ಲರಿಗೂ ಶನಿವಾರದೊಳಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. 

ಶೀಘ್ರ ಸಂಪುಟ ಪುನರ್ ರಚನೆ: ಕಟೀಲ್

ಮುಖ್ಯಮಂತ್ರಿ ಅವರ ನಿರ್ಧಾರದಂತೆ ಮಂತ್ರಿಮಂಡಲ ವಿಸ್ತರಣೆ ಆಗಿದೆ. ಶೀಘ್ರ ಸಂಪುಟ ಪುನರ್ ರಚನೆಯಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಪಕ್ಷದ ಶಾಸಕರು ಅಸಮಾಧಾನಗೊಳ್ಳುವ ಅಗತ್ಯ ಇಲ್ಲ, ಎಲ್ಲರಿಗೂ ಅವಕಾಶ ಸಿಗಲಿದೆ, ಶೀಘ್ರವಾಗಿ ಸಂಪುಟ ಪುನರ್ ರಚನೆಗೊಳ್ಳಲಿದೆ ಎಂದರು.

ಚಿತ್ರದುರ್ಗದಲ್ಲಿ ಶಾಸಕ ತಿಪ್ಪಾರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿಗೆ ಸಂಪುಟದಲ್ಲಿ ಹೆಚ್ಚಿನ ಪಾತಿನಿದ್ಯ ದೊರೆತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿರಿಯ ಶಾಸಕರಾದ ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ ಹಾಗೂ ಸಿ.ಪಿ.ಯೋಗೇಶ್ವರ್‌ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ರಾಷ್ಟ್ರಗೀತೆ ನುಡಿಸುವ ಮೂಲಕ ಪದಗ್ರಹಣ ಕಾರ್ಯಕ್ರಮ ಮುಕ್ತಾಯ

ಶ್ರೀಮಂತ ಪಾಟೀಲ್‌ ಪ್ರಮಾಣವಚನ

ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶ್ರೀಮಂತ ಪಾಟೀಲ್‌

ADVERTISEMENT

ನಾರಾಯಣಗೌಡ ಪದಗ್ರಹಣ

ಮಂಡ್ಯದ ಕೆ.ಆರ್. ಪೇಟೆಯ ಕೈಗೋವನ ಹಳ್ಳಿಯ ಪುಟ್ಟಮ್ಮ ಚಿಕ್ಕೆಗೌಡನ ಮಗನಾದ ನಾರಾಯಣಗೌಡ ಆದ ನಾನು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇನೆ

ಕೆ. ಗೋಪಾಲಯ್ಯ ಪ್ರಮಾಣವಚನ ಸ್ವೀಕಾರ

ದೇವರು ಮತ್ತು ತಂದೆ ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಮಾಕ್ಷಿಪಾಳ್ಯ ಕೆ ಗೋಪಾಲಯ್ಯ

ಬಿ.ಸಿ. ಪಾಟೀಲ್‌ ಪದಗ್ರಹಣ

ದೇವರು, ನನ್ನ ಕ್ಷೇತ್ರದ ಜನತೆ, ತಂದೆ ತಾಯಿ ಹಾಗೂ ಬಸವಣ್ಣನವರ ಹೆಸರಿನಲ್ಲಿ ಬಿ.ಸಿ.ಪಾಟೀಲ್‌ ಪ್ರಮಾಣವಚನ ಸ್ವೀಕಾರ ಮಾಡಿದರು.

ಶಿವರಾಮ್‌ ಹೆಬ್ಬಾರ್‌ ಪ್ರಮಾಣವಚನ ಸ್ವೀಕರಿಸಿದರು

ದೇವರು ಮತ್ತು ತಂದೆ ತಾಯಿ ಹೆಸರಿನಲ್ಲಿ ಶಿವರಾಮ್‌ ಹೆಬ್ಬಾರ್‌ ಪ್ರಮಾಣವಚನ ಸ್ವೀಕರಿಸಿದರು

ಬೈರತಿ ಬಸವರಾಜ್‌ ಪ್ರಮಾಣವಚನ

ಬೈರತಿ ಬಸವರಾಜ್‌ ಎಂಬ ಹೆಸರಿನವನಾದ ನಾನು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ.

ಕೆ. ಸುಧಾಕರ್‌ ಪ್ರಮಾಣವಚನ ಸ್ವೀಕಾರ

ಪೆರೆಸಂದ್ರ ಕೇಶವ್‌ ಸುಧಾಕರ್‌ ಎಂಬ ನಾನು ದೇವರ ಹೆಸರಿನಲ್ಲಿ ಪ್ರಮಾಣಚನ ಸ್ವೀಕರಿಸುತ್ತೇನೆ

ಆನಂದ್‌ ಸಿಂಗ್‌ ಪ್ರಮಾಣವಚನ ಸ್ವೀಕಾರ

ಆನಂದ್‌ ಸಿಂಗ್‌ ಎಂಬ ಹೆಸರಿನ ನಾನು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದರು

ರಮೇಶ್ ಜಾರಕಿಹೊಳಿ ಪ್ರಮಾಣವಚನ ಸ್ವೀಕಾರ

ಜಾರಕಿಹೊಳಿ ರಮೇಶ್‌ ಲಕ್ಷ್ಮಣರಾವ್‌ ಹೆಸರಿನವನಾದ ನಾನು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದರು.

ಮೊದಲಿಗೆ ಎಸ್‌.ಟಿ ಸೋಮಶೇಖರ್ ಪ್ರಮಾಣ ವಚನ

ಶೆಟ್ಟಿಹಳ್ಳಿ ಸೀತಮ್ಮ ತಿಮ್ಮೇಗೌಡ ಸೋಮಶೇಖರ್ ಆಗ ನಾನು ದೇವರ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾದಕ್ಕೆ ನಮಸ್ಕರಿಸಿದರು.

ಪ್ರಮಾಣವಚನ ಸಮಾರಂಭ ವೇದಿಕೆಗೆ ರಾಜ್ಯಪಾಲರು ಆಗಮಿಸಿದರು

ಮುಖ್ಯಮಂತ್ರಿ ಪರಮಾಧಿಕಾರದಂತೆ ಸಂಪುಟ ವಿಸ್ತರಣೆ: ಲಿಂಬಾವಳಿ

ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಅವರಿಗೆ ಇರುವ ಪರಮಾಧಿಕಾರವನ್ನು ಯಾರೂ ಪ್ರಶ್ನಿಸಲಾಗದು ಎಂದು ಅವರು ಗುರುವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಬೇಸರವಿದೆ, ಶೀಘ್ರ ಎಂಎಲ್‌ಸಿ ಮಾಡುವ ವಿಶ್ವಾಸ ಇದೆ: ಆರ್ ಶಂಕರ್

‘ಮಾತು ಕೊಟ್ಟಂತೆ ನನಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಬೇಸರವಿದೆ, ಆದರೆ ಶೀಘ್ರ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ ಬಳಿಕ ಸಚಿವ ಸ್ಥಾನ ನೀಡುವ ವಿಶ್ವಾಸ ಇದೆ’ ಎಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದರು.

‘ನೂತನ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ,  ಆದರೆ 10 ಜನರ ಜತೆಗೆ ಮಹೇಶ್ ಕುಮಠಳ್ಳಿ ಅವರಿಗೂ ಮಂತ್ರಿ ಸ್ಥಾನ ಸಿಗಬೇಕಿತ್ತು, ಪಕ್ಷ ಯಾಕೆ ಈ ನಿರ್ಧಾರ ಕೈಗೊಂಡಿದೆಯೋ ಗೊತ್ತಿಲ್ಲ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

ವೈದ್ಯನಾಗಿ ಬೇರೆ ಖಾತೆ ನಿಭಾಯಿಸುವ ಹಂಬಲ

ಯಡಿಯೂರಪ್ಪ ಅವರು ನನ್ನ ಮೇಲೆ ನಂಬಿಕೆ ಯಾವ ಖಾತೆ ಕೊಡುತ್ತಾರೊ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆ. 20 ವರ್ಷಗಳ ಸುಧೀರ್ಘ ಆಡಳಿತ ಅನುಭವ ನನಗಿದೆ ಹಾಗಾಗಿ ಯಾವುದೇ ಇಲಾಖೆಯಲ್ಲಿ ಹೊಸ ನೀತಿಯನ್ನು ತಂದು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಆಡಳಿತ ಮಾಡುತ್ತೇನೆ– ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌

ಡಾಕ್ಟರ್‌ ಆದವರು ವೈದ್ಯಕೀಯ ಸಚಿವರೇ ಆಗಬೇಕು ಎಂದೇನಿಲ್ಲ. ವೈದ್ಯಕೀಯ ಓದಿದವನಾಗಿ ಬೇರೆ ಇಲಾಖೆಯನ್ನು ನಿಭಾಯಿಸಬೇಕು ಎನ್ನುವುದು ನನ್ನ ಹಂಬಲ– ಸುಧಾಕರ್‌

ಪ್ರಥಮ ಬಾರಿಗೆ ಕ್ಯಾಬಿನೆಟ್‌ ದರ್ಜೆ ಸಿಕ್ಕಿದೆ: ಎಸ್‌.ಟಿ. ಸೋಮಶೇಖರ್‌

ಬಿಜೆಪಿಯ ಎಲ್ಲಾ ನಾಯಕರು ನನ್ನ ಕ್ಷೇತ್ರಕ್ಕೆ ಬಂದು ನನ್ನ ಗೆಲುವಿಗೆ ಪ್ರಯತ್ನಿಸಿದ್ದಾರೆ ಅವರೆಲ್ಲರಿಗೂ ನಾನು ‘ಆಭಾರಿಯಾಗಿದ್ದೇನೆ. ಖಾತೆ ಯಾವುದು ಕೇಳಿಲ್ಲ. ಯಡಿಯೂರಪ್ಪ ಅವರ ಬಳಿ ಯಾವ ಖಾತೆ ಇದೆ ಅದನ್ನೇ ಕೇಳಬೇಕು. ಬೆಂಗಳೂರು ನಗರಾಭಿವೃದ್ಧಿ ಖಾತೆ ಇದೆ. ನಾನು ಬೆಂಗಳೂರು ಶಾಸಕ ಆಗಿರುವುದರಿಂದ ಅದನ್ನೇ ಕೇಳಬೇಕು ಎಂದು ತೀರ್ಮಾನಿಸಿದ್ದೇನೆ. ಪ್ರಥಮ ಬಾರಿಗೆ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಿದ್ದಾರೆ ಬಿಜೆಪಿ ಎಲ್ಲಾ ಹಿರಿಯ ಮುಖಂಡರಿಗೆ ಅಭಿನಂದನೆ’ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು. 

ಸಚಿವರಾಗಲಿರುವ 10 ಶಾಸಕರು

ಗೋಕಾಕದ ರಮೇಶ ಜಾರಕಿಹೊಳಿ, ಕಾಗವಾಡದ ಶ್ರೀಮಂತ ಗೌಡ ಪಾಟೀಲ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರಿನ ಬಿ.ಸಿ.ಪಾಟೀಲ, ಹೊಸಪೇಟೆಯ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ, ಕೆ.ಆರ್‌.ಪುರದ ಭೈರತಿ ಬಸವರಾಜ್, ಯಶವಂತಪುರದ ಎಸ್‌.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್‌ನ ಗೋಪಾಲಯ್ಯ, ಕೆ.ಆರ್‌.ಪೇಟೆಯ ನಾರಾಯಣಗೌಡ ಸಚಿವರಾಗುತ್ತಿದ್ದಾರೆ.

ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. 

ಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ...

ರಾಜಭವನದ ಗಾಜಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಪ್ರಮಾಣವಚನ ಸ್ವೀಕಾರ ಮಾಡಲಿರುವ ಶಾಸಕರ ಆಪ್ತರು ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.