
ಮಹಾರಾಣಾ ಪ್ರತಾಪ್ ಸಾರಥಿ ‘ಚೇತಕ್’ ಪ್ರತಿಮೆ
ಚಿತ್ರ: ಎಕ್ಸ್
ಮಹಾರಾಣಾ ಪ್ರತಾಪ್ ಅವರ ಧೈರ್ಯದ ಬಗ್ಗೆ ಹೇಳುವಾಗ ನೆನೆಪಾಗುವುದೇ ‘ಚೇತಕ್’. ಭಾರತದ ಇತಿಹಾಸದಲ್ಲಿ, ರಜಪೂತ ಸಾಮ್ರಾಟ ಮಹಾರಾಣಾ ಪ್ರತಾಪ್ ಹೆಸರಿನೊಂದಿಗೆ ಸೇರಿಕೊಳ್ಳುವುದು ಅವರ ಕುದುರೆ ಚೇತಕ್.
ರಾಜಸ್ಥಾನದ ಉದಯಪುರದ ಹಲ್ದಿಘಾಟ್ ಕದನದ ಸಮಯದಲ್ಲಿ ಕೊನೆ ಉಸಿರಿನವರೆಗೂ ಮಹಾರಾಜ ಪ್ರತಾಪ್ ಅವರನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದ್ದು ಇದೇ ಚೇತಕ್. 1576ರ ಸಮಯದಲ್ಲಿ ಅರಾವಳಿ ಪರ್ವತ ಶ್ರೇಣಿಯ ಹಲ್ದಿಘಾಟ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಮೊಘಲ್ ಚಕ್ರವರ್ತಿ ಅಕ್ಬರನ ಸೈನ್ಯ ದಂಡೆತ್ತಿ ಬಂದಿತ್ತು. ಯುದ್ಧದಲ್ಲಿ ಚೇತಕ್‌ನ ಒಂದು ಕಾಲು ತೀವ್ರವಾಗಿ ಗಾಯಗೊಂಡಿದ್ದರೂ ಮಹಾರಾಜರ ರಕ್ಷಣೆಗಾಗಿ ಸುಮಾರು 22 ರಿಂದ 25 ಅಡಿ ಅಗಲದ ಹಳ್ಳವನ್ನು ಜಿಗಿದು ದಾಟಿ ಸಾಹಸ ಮಾಡಿತ್ತು ಎನ್ನುತ್ತದೆ ಇತಿಹಾಸ.
1597ರ ಜನವರಿ 19ರಂದು ಚಾವಂದ್‌ನಲ್ಲಿ ಬೇಟೆಗೆ ತೆರಳಿದ್ದ ವೇಳೆ ಅಪಘಾತಕ್ಕೀಡಾಗಿ ಮಹಾರಾಣಾ ಪ್ರತಾಪ್ ಅವರು ಮರಣ ಹೊಂದಿದರು. ಹೀಗಾಗಿ ಪ್ರತಿವರ್ಷ ಜನವರಿ 19ರಂದು ಮಹಾರಾಣಾ ಪ್ರತಾಪ್ ಅವರ ಪುಣ್ಯ ತಿಥಿಯನ್ನು ಆಚರಿಸಲಾಗುತ್ತದೆ.
ಚೇತಕ್ ರಾಜಸ್ಥಾನದ ಪ್ರಸಿದ್ಧ ಮಾರ್ವಾಡಿ ತಳಿಗೆ ಸೇರಿದ ಕುದುರೆ. ಈ ತಳಿಯ ಕುದುರೆಗಳು ತಮ್ಮ ಸೌಂದರ್ಯ, ಬಾಗಿರುವ ಕಿವಿಗಳಿಗೆ ಮತ್ತು ವೇಗಕ್ಕೆ ಹೆಸರುವಾಸಿ.
ನಿಷ್ಠೆ, ಶೌರ್ಯ ಮತ್ತು ತ್ಯಾಗದ ಸಂಕೇತವಾಗಿ ಇಂದಿಗೂ ಚೇತಕ್ ಹೆಸರು ಹಸಿರಾಗಿ ಉಳಿದಿದೆ. ಹಲ್ದಿಘಾಟ್‌ನಲ್ಲಿ ಚೇತಕ್ ಸಮಾಧಿಯನ್ನು ನಿರ್ಮಿಸಲಾಗಿದೆ. ‘ಚೇತಕ್ ಸ್ಮಾರಕ’ ಎಂದು ಕರೆಯಲ್ಪಡುವ ಈ ಜಾಗ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ.
ರಾಜಸ್ಥಾನದ ಪರಂಪರೆಯಲ್ಲಿ ಅನೇಕ ರೀತಿಯಲ್ಲಿ ಚೇತಕ್ ಜೀವಂತವಾಗಿದೆ. ರಾಜಸ್ಥಾನಿ ಹಾಡುಗಳಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ, ಸಾಕ್ಷ್ಯಚಿತ್ರ, ಟಿವಿ ಕಾರ್ಯಕ್ರಮಗಳಲ್ಲಿ, ಸಾಹಿತ್ಯ ಮತ್ತು ಕವಿತೆಗಳಲ್ಲೂ ಚೇತಕ್ ಹೆಸರು ಅಚ್ಚಳಿಯದೇ ಉಳಿದಿದೆ.
ಬಜಾಜ್ ಕಂಪನಿಯು ಭಾರತದಲ್ಲಿ ಸ್ಕೂಟರ್ ಪರಿಚಯಿಸಿದಾಗ ಇಟ್ಟ ಹೆಸರೂ ‘ಚೇತಕ್’ನದ್ದೇ ಎನ್ನುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.