ADVERTISEMENT

ಮಹಾರಾಷ್ಟ್ರದಲ್ಲಿ ಗರಿಗೆದರಿದ ರಾಜಕೀಯ, ಹರಿಯಾಣದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಮತ ಎಣಿಕೆ 8ಕ್ಕೆ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೂಟ ಮತ್ತು ಹರಿಯಾಣದಲ್ಲಿ ಬಿಜೆಪಿ ನಿಚ್ಚಳ ಬಹುಮತ ಸಾಧಿಸಲಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಆದರೆ ಒಟ್ಟಾರೆ ಸ್ಥಾನಗಳ ಸಂಖ್ಯೆ ಏರುಪೇರಾಗುವ ನಿರೀಕ್ಷೆಯೂ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯ ನಂತರ ನಡೆದ ಮೊದಲ ವಿಧಾನಸಭೆ ಚುನಾವಣೆಗಳು ಇವು. ಎರಡೂ ರಾಜ್ಯಗಳ ಫಲಿತಾಂಶ ಮುಂದಿನ ಹಲವು ಚುನಾವಣೆಗಳಿಗೆ ರಾಜಕೀಯ ಪಕ್ಷಗಳ ಕಾರ್ಯತಂತ್ರ ನಿರ್ಧರಿಸಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ ಸರಳ ಬಹುಮತ ಪಡೆದಿದೆ. ಹರಿಯಾಣದಲ್ಲಿ ಬಿಜೆಪಿ 40 ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 12:09 IST
Last Updated 24 ಅಕ್ಟೋಬರ್ 2019, 12:09 IST

ಹರಿಯಾಣದಲ್ಲಿ ಪಕ್ಷೇತರರ ಜೊತೆಗೂಡಿ ಸರ್ಕಾರ ರಚನೆ: ಬಿಜೆಪಿ

ಹರಿಯಾಣದಲ್ಲಿ ಪಕ್ಷೇತರ ಶಾಸಕರ ಜೊತೆಗೂಡಿ ಸರ್ಕಾರ ರಚನೆ ಮಾಡುವುದಾಗಿ ಬಿಜೆಪಿಯ ಹಿರಿಯ ನಾಯಕರು ಸುಳಿವು ನೀಡಿದ್ದಾರೆ. ಬಿಜೆಪಿ 40 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸರಳ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇರುವುದರಿಂದ ಪಕ್ಷೇತರ ಶಾಸಕರ ಜೊತೆ ಸೇರಿ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. 

ಮುಖ್ಯಮಂತ್ರಿ ಹುದ್ದೆ ಕುರಿತಂತೆ ಬಿಜಿಪಿ ಜೊತೆ ಚರ್ಚೆ: ಶಿವಸೇನೆ ಮುಖ್ಯಸ್ಥ ಉದ್ದವ್‌ ಠಾಕ್ರೆ 

ಬಿಜೆಪಿ ಜೊತೆ ಈ ಹಿಂದೆ ಮಾಡಿಕೊಂಡ ಒಪ್ಪಂದಕ್ಕೆ ನಾವು ಬದ್ಧರಾಗಿದ್ದು ಮುಖ್ಯಮಂತ್ರಿ ಹುದ್ದೆ ಕುರಿತಂತೆ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ದವ್‌ ಠಾಕ್ರೆ ಹೇಳಿದ್ದಾರೆ. 

ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ: ಶರದ್‌ ಪವಾರ್‌

ಮಹಾರಾಷ್ಟ್ರದಲ್ಲಿ 55 ಸ್ಥಾನಗಳನ್ನು ಪಡೆದಿರುವ ಎನ್‌ಸಿಪಿ ಪಕ್ಷ ಇತರರು ಹಾಗೂ ಶಿವಸೇನೆ ನೆರವಿನಿಂದ ಸರ್ಕಾರ ರಚಿಸುವ ವದಂತಿಗಳನ್ನು ತಳ್ಳಿ ಹಾಕಿರುವ ಶರದ್‌ ಪವಾರ್‌ ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 

ADVERTISEMENT

ವಿರೋಧ ಪಕ್ಷದಲ್ಲಿ ಕೂರಲು ಜನರ ಆದೇಶ

'ಅಧಿಕಾರ ವಹಿಸಲು ಅವಕಾಶ ಸಿಗುತ್ತದೆ, ಆದರೆ ನೆಲದ ಮೇಲೆ ಕಾಲೂರಿರುವುದು ಮುಖ್ಯ' ಎಂದು ಬಿಜೆಪಿ ವಿರುದ್ಧ ಶರದ್‌ ಪವಾರ್‌ ಆಕ್ರೋಶ ವ್ಯಕ್ತಪಡಿಸಿ್ದರು. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಲು ಆದೇಶಿಸಿದ್ದಾರೆ; ನಾವು ಅದನ್ನು ನಿರ್ವಹಿಸುತ್ತೇವೆ ಎಂದರು. 

ದೀಪಾವಳಿ ನಂತರ ರಾಜ್ಯ ಸಂಚಾರ– ಶರದ್‌ ಪವಾರ್‌

'ಮಹಾರಾಷ್ಟ್ರದಲ್ಲಿ ಬಿಜೆಪಿಯ 220+ ಸ್ಥಾನಗಳನ್ನು ಗಳಿಸುವ ಯೋಜನೆಯನ್ನು ಜನರು ಒಪ್ಪಿಲ್ಲ. ದೀಪಾವಳಿಯ ಬಳಿಕ ವೈಯಕ್ತಿವಾಗಿ ರಾಜ್ಯದಲ್ಲಿ ಸಂಚಾರ ನಡೆಸಿ ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸುತ್ತೇನೆ.' – ಶರದ್‌ ಪವಾರ್‌

ರಣದೀಪ್‌ ಸುರ್ಜೇವಾಲಾಗೆ ಸೋಲು

ಕೈಥಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಣದೀಪ್‌ ಸುರ್ಜೇವಾಲಾ ಸೋಲು ಕಂಡಿದ್ದಾರೆ. 

ಸತಾರಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿ ಗೆಲುವು

ಸತಾರಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಉದಯನ್‌ರಾಜೇ ಭೋಸಲೇ ವಿರುದ್ಧ ಎನ್‌ಸಿಪಿಯ ಶ್ರೀನಿವಾಸ್‌ ಪಾಟಿಲ್‌ ಗೆಲುವು ಸಾಧಿಸಿದ್ದಾರೆ.

ಮತದಾರರಿಗೆ ಶರದ್‌ ಪವಾರ್‌ ಧನ್ಯವಾದ

'ನಮ್ಮನ್ನು ಬಿಟ್ಟು ಹೋದವರನ್ನು ಜನರು ಸ್ವೀಕರಿಸಿಲ್ಲ ಎಂಬುದು ಮುಖ್ಯವಾದ ಸಂಗತಿ.  ಪಕ್ಷಾಂತರ ಬಿಟ್ಟು ಹೋದವರ ಪರವಾಗಿ ಕೆಲಸ ಮಾಡಿಲ್ಲ' - ಶರದ್‌ ಪವಾರ್‌, ಎನ್‌ಸಿಪಿ ಅಧ್ಯಕ್ಷ 

ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುತ್ತೆ: ಭೂಪಿಂದರ್‌ ಸಿಂಗ್‌ ಹೂಡಾ

ರಾಜ್ಯದ ಜನ ಬಿಜೆಪಿ ವಿರುದ್ಧ ಮತ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಿದೆ. ಪಕ್ಷೇತರರು ಮತ್ತು ಜೆಜೆಪಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡುತ್ತೇವೆ. ಅಧಿಕಾರ ಅವಕಾಶ ವಿಲ್ಲದ ಬಿಜೆಪಿ ಪಕ್ಷೇತರ ಶಾಸಕರಿಗೆ ಬೆದರಿಕೆ ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್ ಹೂಡಾ ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಮುಂಬೈ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಆರಂಭಿಸಿದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ–ಶಿವಸೇನೆ ಮೈತ್ರಿಕೂಟ ಅಂದುಕೊಂಡಷ್ಟು ಸ್ಥಾನಗಳಲ್ಲಿ ಜಯಗಳಿಸಿಲ್ಲ.

ಈವರೆಗೆ ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದೆ. ಶಿವಸೇನೆ 64, ಕಾಂಗ್ರೆಸ್ 40, ಎನ್‌ಸಿಪಿ 50 ಮತ್ತು ಇತರರು 16 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದ್ದಾರೆ.

ಶಿವಸೇನೆಯ ಹಿರಿಯ ನಾಯಕ ಮನೋಹರ್‌ ಜೋಶಿ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನೆಯವರೇ ಆಗುತ್ತಾರೆ ಎಂದು ಹೇಳಿದ್ದಾರೆ. ಶಿವಸೇನೆಯ ವಕ್ತಾರ ಸಂಜಯ್ ರೌತ್, 50:50 ಸೂತ್ರದಂತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.

ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಈವರೆಗೆ ಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ಪವಾರ್ ಮಧ್ಯಾಹ್ನ 1.30ಕ್ಕೆ ಮಾಧ್ಯಮಗೋಷ್ಠಿ ನಡೆಸುವ ನಿರೀಕ್ಷೆ ಇದೆ.

ಈ ನಡುವೆ ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್‌, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಎಲ್ಲ ಪ್ರಯತ್ನ ಮಾಡಲಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಇಲ್ಲಿದೆ ಸಮಗ್ರ ಮಾಹಿತಿ

ಹರಿಯಾಣ ಚುನಾವಣೆ: ಇಲ್ಲಿದೆ ಸಂಪೂರ್ಣ ವಿವರ

2014ರ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಫಲಿತಾಂಶ

ಮಹಾರಾಷ್ಟ್ರ: ಗುರಿ ಮುಟ್ಟದ ಮೈತ್ರಿ: ಬಿಜೆಪಿ ಆತ್ಮಾವಲೋಕನ

ಬಿಜೆಪಿ–ಶಿವಸೇನೆ ಮೈತ್ರಿಗೆ ರಾಜ್ಯದಲ್ಲಿ ಬಹುಮತ ಸಿಕ್ಕಿರಬಹುದು. ಆದರೆ ನಾವು ಗುರಿಯಿರಿಸಿಕೊಂಡಿದ್ದ 220 ಕ್ಷೇತ್ರಗಳ ಗೆಲುವು ಸಾಧ್ಯವಾಗಲಿಲ್ಲ. ಏಕೆ ಎಂದು ವಿಶ್ಲೇಷಿಸುತ್ತೇವೆ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಮತ್ತು ಬಿಜೆಪಿ ನಾಯಕ ಸುಧೀರ್ ಮುನ್‌ಗಂಟಿವಾರ್ ಹೇಳಿದ್ದಾರೆ.

ಧಾರಾವಿಯಲ್ಲಿ ಯಾರಿಗೆ ಮುನ್ನಡೆ

ಹರಿಯಾಣ: ಕಾಂಗ್ರೆಸ್‌–ಬಿಜೆಪಿ: ಯಾರಿಗೆ ಸೈ ಅನ್ತಾರೆ ಚೌಟಾಲಾ

ಹರಿಯಾಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸುವ ಕಿಂಗ್‌ಮೇಕರ್‌ ಎಂದೇ ಬಿಂಬಿಸಲಾಗುತ್ತಿರುವ ಜೆಜೆಪಿ ಪಕ್ಷದ ನಾಯಕ ದುಶ್ಯಂತ್ ಚೌಟಾಲಾ ‘ನಾನು ಈವರೆಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿದ್ದಾರೆ.

ಬಿಜೆಪಿ ಅಥವಾ ಕಾಂಗ್ರೆಸ್ ನನ್ನೊಂದಿಗೆ ಮಾತನಾಡಿದ್ದಾರೆ ಎನ್ನುವುದು ಸುಳ್ಳು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಪಕ್ಷವು ಈಗಾಗಲೇ ದುಶ್ಯಂತ್‌ ಜೊತೆಗೆ ಮಾತನಾಡಿದೆ ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಈ ವರದಿಗಳನ್ನು ದುಶ್ಯಂತ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನಾನು ಈವರೆಗೆ ಯಾರೊಂದಿಗೂ ಮಾತನಾಡಿಲ್ಲ, ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಂದ ನಂತರ ನಾನು ಒಂದು ನಿರ್ಧಾರ ತೆಗೆದುಕೊಳ್ಳುವೆ’ ಎಂದು ಚೌಟಾಲಾ ಹೇಳಿದ್ದಾರೆ.

ನವದೆಹಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಚೌಟಾಲಾ ನಾಳೆ ದೆಹಲಿಯಲ್ಲಿ ಕರೆದಿದ್ದಾರೆ.

ಹರಿಯಾಣದಲ್ಲಿ ಅಧಿಕಾರದ ಕೀಲಿ ಹಿಡಿದ ಜೆಜೆಪಿ ಬಗ್ಗೆ ನೀವು ತಿಳಿಯಬಯಸುವ ಮಾಹಿತಿ ಇಲ್ಲಿದೆ

ಹರಿಯಾಣದಲ್ಲಿ ನಾವೇ ಸರ್ಕಾರ ಮಾಡ್ತೀವಿ: ಬಿಜೆಪಿ ವಿಶ್ವಾಸ

‘ಹರಿಯಾಣದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ. ಕೆಲ ಉಮೇದುವಾರರ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರಬಹುದು. ಇದರಿಂದ ನಮ್ಮ ಸಂಖ್ಯೆ ಕಡಿಮೆ ಆಗಿರಬಹುದು’ ಎಂದು ಬಿಜೆಪಿ ಹರಿಯಾಣ ಘಟಕದ ಉಸ್ತುವಾರಿ ಅನಿಲ್ ಜೈನ್ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

ಹರಿಯಾಣದ ಫಲಿತಾಂಶ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರನ್ನು ಬಿಜೆಪಿ ಹೈಕಮಂಡ್ ದೆಹಲಿಗೆ ಕರೆಸಿಕೊಂಡಿತು.

‘ಈಗಾಗಲೇ ದೆಹಲಿ ತಲುಪಿರುವ ಖಟ್ಟರ್, ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಫರೀದಾಬಾದ್‌ ಸಂಸದ ಕೃಷ್ಣಪಾಲ್ ಹೇಳಿದ್ದಾರೆ.

‘ಹರಿಯಾಣದ ಜನರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಖಟ್ಟರ್ ನಾಯಕತ್ವದಲ್ಲಿ ನಾವೇ ಹರಿಯಾಣದಲ್ಲಿ ಸರ್ಕಾರ ರಚಿಸುತ್ತೇವೆ. ಆದರೆ ಕೆಲ ಸಮಯ ಕಾಯಬೇಕಾಗಬಹುದು’ ಎಂದು ಕೃಷ್ಣಪಾಲ್ ತಿಳಿಸಿದ್ದಾರೆ.

ನಮಗೇ ಮುಖ್ಯಮಂತ್ರಿ ಹುದ್ದೆ, ಮೈತ್ರಿ  ಮುಂದುವರಿಕೆ ಖಚಿತವೆಂದ ಶಿವಸೇನೆ

ಚುನಾವಣೆಗೆ ಮೊದಲು ಮಾಡಿಕೊಂಡಿದ್ದ ಒಪ್ಪಂದದಂತೆಯೇ  ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಿವಸೇನೆ ನಾಯಕ ಸಂಜಯ್‌ ರಾವುತ್ ಹೇಳಿದ್ದಾರೆ. 

ಚುನಾವಣೆಗೂ ಮೊದಲೇ ನಾವು ಸರ್ಕಾರದಲ್ಲಿ ಸಮಪಾಲು ಕೋರಿದ್ದೆವು. 50:50 ಸೂತ್ರದಂತೆ ಸರ್ಕಾರ ರಚನೆ ಆಗುತ್ತದೆ. ಉದ್ಧವ್ ಠಾಕ್ರೆ ಅವರನ್ನು ಬೇಟಿಯಾಗಿ ಚರ್ಚಿಸುತ್ತೇನೆ. ನಮ್ಮ ಪಕ್ಷದ ಸಾಧನೆಯು ತೆಗೆದುಹಾಕುವಂಥದ್ದಲ್ಲ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆಗೆ ಸಿಗಲಿದೆ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಡಾ.ಮನೋಹರ್ ಜೋಶಿ ಘೋಷಿಸಿದ್ದಾರೆ.

ಹರಿಯಾಣ: ಅಂಬಾಲದಲ್ಲಿ ಕಾಂಗ್ರೆಸ್‌ಗೆ ಬಂಡಾಯವೇ ಉರುಳು

ಅಂಬಾಲಾ ನಗರ ಮತ್ತು ಅಂಬಾಲಾ ಕಂಟೋನ್ಮೆಂಟ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪಕ್ಷದ ಒಳಜಗಳವೇ ಈ ಎರಡೂ ಸ್ಥಾನ ಕೈತಪ್ಪಲು ಮುಖ್ಯ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂಬಾಲಾ ಕಂಟೋನ್ಮೆಂಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ವೇಣು ಸಿಂಗ್ಲಾ ಅವರಿಗೆ ಟಿಕೆಟ್ ಕೊಟ್ಟಿತ್ತು. ಇವರು ಹರಿಯಾಣದ ಮಹಿಳಾ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಆಪ್ತರು.

ಮಾಜಿ ಕಾಂಗ್ರೆಸ್ ಸಚಿವ ಮತ್ತು ಐದು ಬಾರಿ ಶಾಸಕರೂ ಆಗಿದ್ದ ನಿರ್ಮಲ್ ಸಿಂಗ್‌ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಪಕ್ಷವು ಅವಕಾಶ ನೀಡದ ಹಿನ್ನೆಲೆಯಲ್ಲಿ ತಮ್ಮ ಮಗಳು ಚಿತ್ರ ಸರ್ವಾರಾ ಅವರನ್ನು ಅಂಬಾಲಾ ಕಂಟೋನ್ಮೆಂಟ್‌ನಿಂದ ಕಣಕ್ಕಿಳಿಸಿ, ತಾವು ಅಂಬಾಲಾ ನಗರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರು.

ಈ ಎರಡೂ ಕ್ಷೇತ್ರಗಳಲ್ಲಿ ಇವರಿಬ್ಬರೂ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಒಳಜಗಳದಿಂದ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಾಯಿತು.

ಹರಿಯಾಣದಲ್ಲಿ ಅತಂತ್ರ

ಹರಿಯಾಣ: ಮುಖ್ಯಮಂತ್ರಿಯಾಗ್ತಾರಾ ಚೌಟಾಲಾ

ಜೆಜೆಪಿ ನಾಯಕ ದುಶ್ಯಂತ್‌ ಚೌಟಾಲಾ ಹರಿಯಾಣದ ಮುಖ್ಯಮಂತ್ರಿ ಗಾದಿಯನ್ನು ಕೋರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್‌ ಸಿಂಗ್ ಬಾದಲ್ ಅವರು ಚೌಟಾಲಾ ಪರವಾಗಿ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರ: ಯಾರು ಮುಖ್ಯಮಂತ್ರಿ

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತದತ್ತ ದಾಪುಗಾಲು ಇರಿಸಿದೆ. ಆದರೆ ಇದೀಗ ಕಥೆಯಲ್ಲಿ ಟ್ವಿಸ್ಟ್‌ ಬಂದಿದೆ. ಮುಖ್ಯಮಂತ್ರಿ ಗಾದಿ ನಮಗೇ ಇರಲಿ ಎಂದು ಶಿವಸೇನೆ ಬೇಡಿಕೆ ಮುಂದಿಟ್ಟಿದೆ. ಬಿಜೆಪಿಯ ಮುಂದಿನ ನಡೆಯ ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದೆ.

ಧರ್ಮಶಾಲಾ ಉಪಚುನಾವಣೆ: ಬಿಜೆಪಿಗೆ ಗೆಲುವು

ಹಿಮಾಚಲ ಪ್ರದೇಶದ ಧರ್ಮಶಾಲಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಮಹಾರಾಷ್ಟ್ರ: ಪ್ರಣತಿ ಶಿಂಧೆಗೆ ಹಿನ್ನಡೆ

ಸೊಲ್ಲಾಪುರ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲ್‌ ಕುಮಾರ್‌ ಶಿಂಧೆ ಪುತ್ರಿ ಪ್ರಣತಿ ಸಿಂಧೆಗೆ ಹಿನ್ನಡೆ.

ನೀವಿನ್ನು ಯಮುನೆಯ ಆಚೆ ದಡಕ್ಕೆ ಓಡಿ: ಬಿಜೆಪಿ ಟೀಕಿಸಿದ ಚೌಟಾಲಾ

‘ಹರಿಯಾಣದ ಶೇ 75ರಷ್ಟು ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇದು ಬದಲಾವಣೆಯ ಮುನ್ಸೂಚನೆ. ನೀವಿನ್ನು ಯಮುನೆಯ ಆಚೆ ದಡದಲ್ಲಿ ಇರಬೇಕು’ ಎಂದು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಟೀಕಿಸಿದ್ದಾರೆ.

ಷೇರುಮಾರುಕಟ್ಟೆ ನೀರಸ

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನೀರಸವಾಗಿತ್ತು. ಮುಂಬೈ ಪೇಟೆಯು 250 ಅಂಶಗಳ ಜಿಗಿತದೊಂದಿಗೆ ವಹಿವಾಟು ಆರಂಭಿಸಿತಾದರೂ, ಸ್ವಲ್ಪ ಹೊತ್ತಿನಲ್ಲಿಯೇ 39,026 ಅಂಶಗಳಿಗೆ ಮರಳಿಬಂತು. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 30 ಅಂಶಗಳ ಜಿಗಿತ ಕಂಡಿತ್ತು. ಇದೀಗ 11,634 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ಎಚ್‌ಡಿಎಫ್‌ ಮತ್ತು ಎಲ್‌ ಅಂಡ್‌ ಟಿ ಷೇರುಗಳು ಲಾಭ ಗಳಿಸುತ್ತಿವೆ.

ಮಹಾರಾಷ್ಟ್ರ: 179 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೋಟ ನಿಚ್ಚಳ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿಗಳು 106 ಕ್ಷೇತ್ರಗಳಲ್ಲಿ, ಶಿವಸೇನೆ ಅಭ್ಯರ್ಥಿಗಳು 73 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದಾರೆ. ಕಳೆದ ಬಾರಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಆದರೆ ಹಲವು ವಿಚಾರಗಳಲ್ಲಿ ಮೈತ್ರಿಯಲ್ಲಿ ಭಿನ್ನಮತ ಕಾಣಿಸಿಕೊಂಡಿತ್ತು. ಕೊನೆಯ ಗಳಿಗೆಯಲ್ಲಿ ದೇವೇಂದ್ರ ಫಡಣವಿಸ್ ಚಾಣಾಕ್ಷತನದಿಂದ ಮೈತ್ರಿಯ ಬಿರುಕು ಮುಚ್ಚಿ ಚುನಾವಣೆಯತ್ತ ಮುನ್ನಡೆದಿದ್ದರು. ಫಡಣವೀಸ್‌ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯುವುದು ನಿಚ್ಚಳವಾಗಿದೆ. ಆದರೆ ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದೀಗ ಮುಂಬೈನ ವರ್ಲಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಶಿವಸೇನೆಯ ಆದಿತ್ಯ ಠಾಕ್ರೆ ಈ ಸ್ಥಾನಕ್ಕೆ ಬರಬಹುದು ಎಂಬ ಮಾತುಗಳಿವೆ.

2014ರಲ್ಲಿ ಬಿಜೆಪಿ 122 ಮತ್ತು ಶಿವಸೇನೆ 63 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಲೋಕಸಭಾ ಚುನಾವಣೆಯ ನೆರಳು

ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳ ಮೇಲೆ ಲೋಕಸಭಾ ಚುನಾವಣೆ ಫಲಿತಾಂಶದ ಪ್ರಭಾಗ ಗಾಢವಾಗಿ ಕಾಣಿಸುತ್ತಿದೆ.

ಸಾಮಾನ್ಯವಾಗಿ ಲೋಕಸಭೆಯಲ್ಲಿ ಅಧಿಕಾರಕ್ಕೆ ಬಂದ ಪಕ್ಷವೇ ಮಹಾರಾಷ್ಟ್ರ ವಿಧಾನಸಭೆಯಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವುದು ವಾಡಿಕೆ. ಈ ಬಾರಿಯೂ ಇದೇ ವಾಡಿಕೆ ಮುಂದುವರಿದಿದೆ. ಆದರೆ ಹರಿಯಾಣದಲ್ಲಿ ಪರಿಸ್ಥಿತಿ ತುಸು ಭಿನ್ನವಾಗಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗುವವರೆಗೆ ಹೀಗೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಹರಿಯಾಣದಲ್ಲಿ ನಿರ್ಮಾಣವಾಗಿದೆ.

ಮಹಾರಾಷ್ಟ್ರ: 180 ಕ್ಷೇತ್ರಗಳಲ್ಲಿ ಬಿಜೆಪಿ–ಶಿವಸೇನೆ ಮೈತ್ರಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಗಳು ಒಟ್ಟು 180 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮುನ್ನಡೆಗಳು ಗೆಲುವಾದರೆ ಬಿಜೆಪಿ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚಳ.

ಮಹಾರಾಷ್ಟ್ರ: 87 ಕ್ಷೇತ್ರಗಳಲ್ಲಿ ಕಾಂಗ್ರೆಸ್–ಎನ್‌ಸಿಪಿ ಮುನ್ನಡೆ

ಮಹಾರಾಷ್ಟ್ರದ 87 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 2014ರಲ್ಲಿ ಪಕ್ಷವು 83 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಹರಿಯಾಣ: ಅಧಿಕಾರದ ಕೀಲಿ ನಮ್ಮ ಬಳಿಯಿದೆ– ದುಶ್ಯಂತ್ ಚೌಟಾಲಾ

ಹರಿಯಾಣದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ 40 ಸ್ಥಾನ ಗಳಿಸುವುದು ಕಷ್ಟ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೂ ನಮ್ಮನ್ನು ಆಶ್ರಯಿಸಬೇಕಾದ್ದು ಅನಿವಾರ್ಯ. ಅಧಿಕಾರದ ಕೀಲಿ ನಮ್ಮ ಬಳಿಯೇ ಇರುತ್ತೆ ಎಂದು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಹೇಳಿದ್ದಾರೆ. ಹರಿಯಾಣದ ವಿವಿಧೆಡೆ ಜೆಜೆಪಿಯ ಎಂಟು ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಹರಿಯಾಣದಲ್ಲಿ ಅತಂತ್ರ ಸ್ಥಿತಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತದತ್ತ ದಾಪುಗಾಲಿಡುತ್ತಿವೆ. ಅದರೆ ಹರಿಯಾಣದಲ್ಲಿ ಯಾವುದೇ ಪಕ್ಷ ಅಧಿಕಾರ ಪಡೆಯಲು ಬೇಕಾಗುವಷ್ಟು ಬಹುಮತ ಪಡೆಯುವುದು ಅನುಮಾನ ಎನ್ನುವ ಪರಿಸ್ಥಿತಿ ರೂಪುಗೊಳ್ಳುತ್ತಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಜೆಜೆಪಿ ಕಿಂಗ್‌ ಮೇಕರ್ ಆಗಿ ಹೊರಹೊಮ್ಮಲಿದೆ.

ಟಿಕ್‌ಟಾಕ್ ಸ್ಟಾರ್ ಸೊನಾಲಿ ಪೊಗಟ್ ಹಿನ್ನಡೆ

ಹರಿಯಾಣದ ಅದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಟಿವಿ ನಟಿ, ಟಿಕ್‌ಟಾಕ್ ಸ್ಟಾರ್ ಸೊನಾಲಿ ಪೊಗಟ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್ ಅವರ ಮಗ ಕುಲ್‌ದೀಪ್ ಬಿಶ್ನೋಯ್ ಎದುರು ಸೊನಾಲಿ ಅವರನ್ನು ಬಿಜೆಪಿ ನಿಲ್ಲಿಸಿತ್ತು.

ಹರಿಯಾಣ: ಬಿಜೆಪಿ– ಕಾಂಗ್ರೆಸ್ ಸಮಬಲದ ಪೈಪೋಟಿ

ಹರಿಯಾಣದಲ್ಲಿ ಮುಂಜಾನೆ 9.57ರ ಮಾಹಿತಿಯಂತೆ ಬಿಜೆಪಿ 36, ಕಾಂಗ್ರೆಸ್ 34 ಸಾಧಿಸಿವೆ. ಇತರರು 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಕಿಂಗ್‌ಮೇಕರ್ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಜೆಜೆಪಿ ಈವರೆಗೆ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಜೆಜೆಪಿ ಎಲ್ಲೆಲ್ಲಿ ಮುನ್ನಡೆ: ಉಚ್ಚನಾ ಕಾಲನ್ ಕ್ಷೇತ್ರದಲ್ಲಿ ಪಕ್ಷದ ನಾಯಕ ದುಶ್ಯಂತ್ ಚೌಟಾಲಾ, ಬಾದ್ರಾ ಕ್ಷೇತ್ರದಲ್ಲಿ ನೈನಾ ಸಿಂಗ್, ನಾರ್‌ನೌಂಡ್‌ ಕ್ಷೇತ್ರದಲ್ಲಿ ರಾಮ್‌ ಕುಮಾರ್ ಗೌತಮ್ ಮುನ್ನಡೆ ಸಾಧಿಸಿದ್ದಾರೆ.

ಹರಿಯಾಣದಲ್ಲಿ ಯಾವುದೆ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯದೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಚೌಟಾಲಾ ಕಿಂಗ್‌ಮೇಕರ್ ಆಗಿ ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆಯಲಿದ್ದಾರೆ.

ಮಹಾರಾಷ್ಟ್ರ: ಅಧಿಕಾರಕ್ಕೆ ಸನಿಹಕ್ಕೆ ಬಿಜೆಪಿ ಮೈತ್ರಿಕೂಟ

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೂಟ 168 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಧಿಕಾರದ ಹಾದಿಯತ್ತ ದಾಪುಗಾಲು ಹಾಕುತ್ತಿದೆ.

ಬೆಳಿಗ್ಗೆ 9.50ಕ್ಕೆ ಪ್ರಕಟವಾಗಿದ್ದ ಮಾಹಿತಿಯಂತೆ ಬಿಜೆಪಿ 103, ಶಿವಸೇನೆ 65, ಕಾಂಗ್ರೆಸ್ 40, ಎನ್‌ಸಿಪಿ 46, ಇತರರು 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಒಟ್ಟ ಸದಸ್ಯ ಬಲ 288. ಅಧಿಕಾರ ಒಲಿಯಲು 145 ಶಾಸಕ ಬಲ ಬೇಕು.

ಹರಿಯಾಣ: ಖಟ್ಟರ್, ಹೂಡಾ, ಸುರ್ಜೆವಾಲಾ ಮುನ್ನಡೆ

ಹರಿಯಾಣದ ಕರ್ನಾಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ , ಗರ್ಹಿ ಸಂಪ್ಲಾ ಕಿಲೊಯ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಕೈಥಲ್ ಕ್ಷೇತ್ರದಲ್ಲಿ ಮತ್ತೋರ್ವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮುನ್ನಡೆ ಸಾಧಿಸಿದ್ದಾರೆ.

ಹರಿಯಾಣ: ಕಾಂಗ್ರೆಸ್‌ಗೆ ಬಹುಮತ ನಿಶ್ಚಿತ ಎಂದ ಹೂಡಾ

‘ಹರಿಯಾಣದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಪಡೆಯಲಿದೆ, ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿವೆ’ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್‌ ಹೂಡಾ ಹೇಳಿದ್ದಾರೆ.

ಹರಿಯಾಣ: ಬಿಜೆಪಿಗೆ ಭಾರಿ ಮುನ್ನಡೆ, ಹಿಂದೆ ಬಿದ್ದ ಕಾಂಗ್ರೆಸ್

ಹರಿಯಾಣ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತಎಣಿಕೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ 53ರಲ್ಲಿ ಬಿಜೆಪಿ, 22ರಲ್ಲಿ ಕಾಂಗ್ರೆಸ್‌, 8 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ದಾಖಲಿಸಿದ್ದಾರೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.

ದೇವೇಂದ್ರ ಫಡಣವೀಸ್, ಆದಿತ್ಯ ಠಾಕ್ರೆ ಮುನ್ನಡೆ

ನಾಗಪುರ ದಕ್ಷಿಣ ಕ್ಷೇತ್ರದಲ್ಲಿ ದೇವೇಂದ್ರ ಫಡಣವೀಸ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿರುವ ದೇವೇಂದ್ರ ಫಡಣವೀಸ್‌ ಅವರಿಗೆ ಇದು ಅಗ್ನಿಪರೀಕ್ಷೆಯಂಥ ಚುನಾವಣೆ.

ಮುಂಬೈನ ವರ್ಲಿ ಕ್ಷೇತ್ರದಲ್ಲಿ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಮುನ್ನಡೆ ಸಾಧಿಸಿದ್ದಾರೆ. ಶಿವಸೇನೆಗೆ ಸೇರ್ಪಡೆಯಾದ ನಂತರ ಠಾಕ್ರೆ ಕುಟುಂಬದ ಕುಡಿಗೆ ಇದು ಮೊದಲ ಚುನಾವಣಾ ಸ್ಪರ್ಧೆ.

ಶಿವಸೇನೆಯ ಆದಿತ್ಯ ಠಾಕ್ರೆ 7020 ಮತಗಳ ಮುನ್ನಡೆ

ಶಿವಸೇನೆಯ ನಾಯಕ, ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಲ್ಲಿ 7020 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮಹಾರಾಷ್ಟ್ರ: 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ

ಮಹಾರಾಷ್ಟ್ರದಲ್ಲಿ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.

ಹರಿಯಾಣ: ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ

ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಮುನ್ನಡೆ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಹೆಚ್ಚು ಕಡಿಮೆಗೆ ಸಮಬಲದೊಂದಿಗೆ ಸಾಗುತ್ತಿದ್ದರೆ, ಹರಿಯಾಣದಲ್ಲಿ ಬಿಜೆಪಿ ಅತಿದೊಡ್ಡ ಗೆಲುವಿನತ್ತ ದಾಪುಗಾಲಿಟ್ಟಿದೆ. 

ಮಹಾರಾಷ್ಟ್ರ, ಹರಿಯಾಣಗಳಲ್ಲಿ ಮತ ಎಣಿಕೆ ಆರಂಭ: ಎರಡೂ ರಾಜ್ಯಗಳಲ್ಲೂ ಬಿಜೆಪಿ ಮುನ್ನಡೆ

ಮಹಾರಾಷ್ಟ್ರ–ಹರಿಯಾಣ ಮತ ಎಣಿಕೆ ಆರಂಭ

ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಪಾಳಯದಲ್ಲಿ ಸಂಭ್ರಮಾಚಾರಣೆಗೆ ಸಿದ್ಧತೆ

ಬಿಜೆಪಿ ಮುಂಬೈ ಕಚೇರಿಯಲ್ಲಿ ಸಿದ್ಧವಾಗಿದೆ ಸಿಹಿ ತಿನಿಸು

ಮುಂಬೈ ಬಿಜೆಪಿ ಕಚೇರಿಯನ್ನು ಅಲಂಕರಿಸಲಾಗಿದೆ

ಹರಿಯಾಣ ವಿಧಾನಸಭೆ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 5 ಅಂಶಗಳು ಇಲ್ಲಿವೆ

1) ಹರಿಯಾಣದ ಒಟ್ಟು ಮತದಾರರ ಸಂಖ್ಯೆ 1.82 ಕೋಟಿ. ಈ ಪೈಕಿ 97 ಲಕ್ಷ ಪುರುಷರು ಮತ್ತು 85 ಲಕ್ಷ ಮಹಿಳೆಯರು.

2) ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 17 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲು.

3) ಹರಿಯಾಣದ ಭೌಗೋಳಿಕ ವ್ಯಾಪ್ತಿ 44,212 ಚದರ ಕಿ.ಮೀ. ಈ ಬಾರಿ ರಾಜ್ಯದಲ್ಲಿ ಒಟ್ಟು 19,578 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

4) ಹರಿಯಾಣದಲ್ಲಿ ಈ ಬಾರಿ ಶೇ 68.47 ಪ್ರಮಾಣದ ಮತದಾನ ದಾಖಲಾಯಿತು. ಕಳೆದ ಬಾರಿಯ ಚುನಾವಣೆಯಲ್ಲಿ ಶೇ 76.54ರ ಪ್ರಮಾಣದಲ್ಲಿ ಮತದಾನವಾಗಿತ್ತು.

5) ಹರಿಯಾಣದಲ್ಲಿ ರಾಹುಲ್ ಗಾಂಧಿ ನಡೆಸಿದ ಪ್ರಚಾರ ಸಭೆಗಳಲ್ಲಿ ಹರಿಯಾಣದ ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ವೇದಿಕೆ ಹಂಚಿಕೊಳ್ಳಲಿಲ್ಲ. ಇದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿತು.

ಮಹಾರಾಷ್ಟ್ರ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 5 ಸಂಗತಿಗಳು

ದೇಶದ ಎರಡು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಲಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 5 ಪ್ರಮುಖ ಅಂಶಗಳು ಇಲ್ಲಿವೆ.

1) ಮಹಾರಾಷ್ಟ್ರದಲ್ಲಿಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 29 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮತ್ತು 25 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲು.

2) ಮಹಾರಾಷ್ಟ್ರದಲ್ಲಿ ಈ ಬಾರಿ ಒಟ್ಟು 96,661 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 235 ಮಹಿಳೆಯರೂ ಸೇರಿದಂತೆ ಒಟ್ಟು 3,237 ಉಮೇದುವಾರರು ಕಣದಲ್ಲಿದ್ದರು.

3) ಮಹಾರಾಷ್ಟ್ರದ ಒಟ್ಟು ಮತದಾರರ ಸಂಖ್ಯೆ 8.9 ಕೋಟಿ. ಈ ಪೈಕಿ ಪುರುಷರು 4.69 ಕೋಟಿ, ಮಹಿಳೆಯರು 4.28 ಕೋಟಿ. 2,634 ಮಂದಿ ತೃತೀಯ ಲಿಂಗಿಗಳು.

4) ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ, ಕಾಂಗ್ರೆಸ್‌ ಮತ್ತು ನ್ಯಾಷಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಕಣದಲ್ಲಿದ್ದ ಪ್ರಮುಖ ಪಕ್ಷಗಳು.

5) ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್‌ 147, ಎನ್‌ಸಿಪಿ 121 ಮತ್ತು ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ ವಂಚಿತ್ ಬಹುಜನ್ ಅಘಾದಿ ಪಕ್ಷವು 235 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಮಹಾರಾಷ್ಟ್ರ: ಬಿಜೆಪಿ ಸಂಭ್ರಮಾಚರಣೆಗೆ ಮುಂಬೈನಲ್ಲಿ 5000 ಲಾಡು

ಮುಂಬೈ: ಮಹಾರಾಷ್ಟ್ರದಲ್ಲಿ ಫಲಿತಾಂಶ ಘೋಷಣೆಗೆ ಮೊದಲೇ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಬಿಜೆಪಿ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. 

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ–ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತ ಸಾಧಿಸಲಿದೆ ಮತ್ತು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು.

ಮುಂಬೈನ ವಿವಿಧ ಬಡಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಬೃಹತ್‌ ಕಟೌಟ್‌, ಪೋಸ್ಟರ್‌ಗಳು ರಾರಾಜಿಸುವ ಬಣ್ಣಬಣ್ಣದ ಪೆಂಡಾಲ್‌ಗಳು ಕಂಡುಬರುತ್ತಿವೆ. ಈ ಪೆಂಡಾಲ್‌ಗಳಲ್ಲಿ ಬೃಹತ್‌ ಟಿವಿಗಳನ್ನೂ ಅಳವಡಿಸಲಾಗಿದ್ದು, ಫಲಿತಾಂಶದ ಲೈವ್‌ ಪ್ರಸಾರ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಫಲಿತಾಂಶ ಘೋಷಣೆಯ ನಂತರ ಹಂಚಲೆಂದು ಬಿಜೆಪಿ 5000 ಲಾಡು ಸಿದ್ಧಪಡಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆಗೆ ಬಹುಮತದ ವಿಶ್ವಾಸ

ಮತ ಎಣಿಕೆಗೆ ಕೊನೆಯ ಕ್ಷಣದ ಸಿದ್ಧತೆ

ಮಹಾರಾಷ್ಟ್ರದ ನಾಗಪುರದಲ್ಲಿ ಮತ ಎಣಿಕೆಗೆ ಕೊನೆಯ ಕ್ಷಣದ ಸಿದ್ಧತೆಗಳು ನಡೆದಿವೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಬ್ಬರದ ಪ್ರಚಾರ

ಸಮೀಕ್ಷೆಗಳು ಕೊಟ್ಟ ಅಂಕಿಅಂಶಗಳ ಸಮಗ್ರ ಮಾಹಿತಿ

ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ

ಫಲಿತಾಂಶಕ್ಕೆ ಕ್ಷಣಗಣನೆ

ನವದೆಹಲಿ: ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟಚಿತ್ರಣ ದೊರೆಯುವ ನಿರೀಕ್ಷೆ ಇದೆ. ಎರಡೂ ಕಡೆ ಸೋಮವಾರ ಮತದಾನ ನಡೆದಿತ್ತು. ಮಹಾರಾಷ್ಟ್ರದಲ್ಲಿ ಶೇ 61.1ರಷ್ಟು, ಹರಿಯಾಣದಲ್ಲಿ ಶೇ 62.64ರಷ್ಟು ಮತದಾನ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.